ಯುದ್ಧ ಕೊನೆಗೊಳಿಸುವ ಅಮೆರಿಕದ ಪ್ರಸ್ತಾವನೆ ತಿರಸ್ಕರಿಸಿದ ಇರಾನ್ ; ಐದು ಕಠಿಣ ಷರತ್ತುಗಳನ್ನು ಮುಂದಿಟ್ಟ ತೆಹ್ರಾನ್‌ : ವರದಿ

ಅಮೆರಿಕವು ಯುದ್ಧವನ್ನು ಕೊನೆಗೊಳಿಸಲು ಮುಂದಿಟ್ಟಿರುವ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ. ಯುದ್ಧವನ್ನು ತನ್ನದೇ ಆದ ನಿಯಮಗಳು ಮತ್ತು ಷರತ್ತುಗಳ ಮೇಲೆ ಕೊನೆಗೊಳಿಸುವುದಾಗಿ ಇರಾನ್ ಹೇಳಿದೆ. ಅಮೆರಿಕದ ಈ ಪ್ರಸ್ತಾವನೆಯು “ಅತಿಯಾದ ಬೇಡಿಕೆಗಳಿಂದ ಕೂಡಿದೆ” ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ‘ಪ್ರೆಸ್ ಟಿವಿ’ಗೆ ತಿಳಿಸಿದ್ದಾರೆ.
“ಇರಾನ್ ಯಾವಾಗ ನಿರ್ಧರಿಸುತ್ತದೆಯೋ ಮತ್ತು ಅದರ ಷರತ್ತುಗಳು ಯಾವಾಗ ಈಡೇರುತ್ತವೆಯೋ ಆಗ ಮಾತ್ರ ಯುದ್ಧ ಕೊನೆಗೊಳ್ಳುತ್ತದೆ” ಎಂದು ಇರಾನ್ ಸ್ಪಷ್ಟಪಡಿಸಿದೆ. ಅಮೆರಿಕದ ವಿರುದ್ಧ ತನ್ನ ರಕ್ಷಣಾತ್ಮಕ ಹೋರಾಟವನ್ನು ಮುಂದುವರಿಸುವುದಾಗಿ ಮತ್ತು ತನ್ನ ಬೇಡಿಕೆಗಳು ಈಡೇರುವವರೆಗೂ “ಬಲವಾದ ಏಟು” ನೀಡುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ.
ಹಿಂದಿನ ಮಾತುಕತೆಗಳ ಸಂದರ್ಭದಲ್ಲಿ ಅಮೆರಿಕವು ಎರಡು ಬಾರಿ ಇರಾನ್‌ಗೆ ವಂಚನೆ ಮಾಡಿದೆ ಎಂದು ಅಧಿಕಾರಿ ನೆನಪಿಸಿದ್ದಾರೆ. ಅಮೆರಿಕವು ಯಾವುದೇ ಪ್ರಾಮಾಣಿಕ ಉದ್ದೇಶ ಹೊಂದಿಲ್ಲ ಎಂದು ಆರೋಪಿಸಿರುವ ಇರಾನ್‌, ಇತ್ತೀಚಿನ ಸಂಧಾನದ ಪ್ರಯತ್ನಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.
ಯುದ್ಧ ಕೊನೆಗೊಳಿಸಲು ಇರಾನ್ ವಿಧಿಸಿರುವ 5 ಷರತ್ತುಗಳು:
ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಆಕ್ರಮಣ ಹಾಗೂ ಹತ್ಯೆಗಳು (Assassinations) ಸಂಪೂರ್ಣವಾಗಿ ನಿಲ್ಲಬೇಕು.
ಭವಿಷ್ಯದಲ್ಲಿ ಇರಾನ್ ಮೇಲೆ ಯಾವುದೇ ಮಿಲಿಟರಿ ಕ್ರಮ ನಡೆಯದಂತೆ ಬಲವಾದ ಸುರಕ್ಷತಾ ಕ್ರಮಗಳು ಜಾರಿಗೆ ಬರಬೇಕು
ಯುದ್ಧದಿಂದ ಉಂಟಾದ ಹಾನಿ ಮತ್ತು ನಷ್ಟಗಳಿಗೆ ಸ್ಪಷ್ಟವಾದ ಮತ್ತು ಖಾತರಿಯಾದ ಪರಿಹಾರ ನೀಡಬೇಕು.
ಪ್ರದೇಶದಾದ್ಯಂತ ಸಕ್ರಿಯವಾಗಿರುವ ಎಲ್ಲಾ ಪ್ರತಿರೋಧ ಗುಂಪುಗಳ (Resistance Groups) ಸೇರಿದಂತೆ ಎಲ್ಲಾ ರಂಗಗಳಲ್ಲಿ ಯುದ್ಧ ಕೊನೆಗೊಳ್ಳಬೇಕು.
ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್‌ನ ಸಾರ್ವಭೌಮತ್ವವನ್ನು ಕಾನೂನುಬದ್ಧವಾಗಿ ಗುರುತಿಸಬೇಕು ಎಂಬುದು ಸೇರಿದಂತೆ ಯುದ್ಧ ಕೊನೆಗೊಳಿಸಲು ಇರಾನ್‌ ಐದು ಷರತ್ತುಗಳನ್ನು ವಿಧಿಸಿದೆ.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳು ಸಾವಿಗೀಡಾಗಿದ್ದಾರೆ. ಈ ದಾಳಿಗೂ ಕೆಲವು ದಿನಗಳ ಮೊದಲು ಜಿನೀವಾದಲ್ಲಿ ನಡೆದ ಮಾತುಕತೆಯಲ್ಲಿ ಪ್ರಸ್ತಾಪಿಸಲಾದ ಷರತ್ತುಗಳ ಜೊತೆಗೆ ಈಗ ಈ ಹೊಸ ಷರತ್ತುಗಳನ್ನು ಸೇರಿಸಲಾಗಿದೆ. “ಈ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಕದನ ವಿರಾಮ ಸಾಧ್ಯ, ಅದಕ್ಕೂ ಮೊದಲು ಯಾವುದೇ ಮಾತುಕತೆ ಇಲ್ಲ” ಎಂದು ಇರಾನ್ ಹೇಳಿದೆ.
ಅಮೆರಿಕದ ಪ್ರಸ್ತಾವನೆಯಲ್ಲಿ ಏನಿದೆ?
ಪಾಕಿಸ್ತಾನದ ಅಧಿಕಾರಿಗಳ ಪ್ರಕಾರ, ಅಮೆರಿಕವು 15 ಅಂಶಗಳ ಪ್ರಸ್ತಾವನೆಯನ್ನು ನೀಡಿದೆ. ಇದರಲ್ಲಿ ಮುಖ್ಯವಾಗಿ:
ಇರಾನ್ ಮೇಲಿನ ನಿರ್ಬಂಧಗಳ ಸಡಿಲಿಕೆ.
ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಕ್ಷಿಪಣಿ ಸಾಮರ್ಥ್ಯಕ್ಕೆ ಮಿತಿ ಹೇರುವುದು.
ವಿಶ್ವದ ತೈಲ ಸಾಗಣೆಯ ಐದನೇ ಒಂದು ಭಾಗ ಹಾದುಹೋಗುವ ಹಾರ್ಮುಜ್ ಜಲಸಂಧಿಯನ್ನು ಪುನಃ ಮುಕ್ತಗೊಳಿಸುವುದು.
ಸಶಸ್ತ್ರ ಗುಂಪುಗಳಿಗೆ ಇರಾನ್ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವುದು ಸೇರಿದೆ.
ಜಾಗತಿಕ ತೈಲ ಬಿಕ್ಕಟ್ಟು ಮತ್ತು ಸಾವು-ನೋವು:
ಇರಾನ್ ಹಾರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಿರುವುದರಿಂದ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರಿದೆ. ಅಮೆರಿಕ, ಇಸ್ರೇಲ್ ಅಥವಾ ಅವುಗಳ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಇರಾನ್ ಇಲ್ಲಿ ಪ್ರವೇಶ ನಿರಾಕರಿಸಿದೆ.
ಪ್ರಸ್ತುತ ನಡೆಯುತ್ತಿರುವ ಇರಾನ್‌ ಹಾಗೂ ಅಮೆರಿಕ-ಇಸ್ರೇಲ್‌ ನಡವಿನ ಯುದ್ಧದಲ್ಲಿ
ಇರಾನಿನ 1,500 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.ಇಸ್ರೇಲಿನ 20 ಜನರು ಸಾವನ್ನಪ್ಪಿದ್ದಾರೆ (ಲೆಬನಾನ್‌ನಲ್ಲಿ ಇಬ್ಬರು ಸೈನಿಕರು ಸೇರಿ). ಅಮೆರಿಕದ 13 ಮಿಲಿಟರಿ ಸಿಬ್ಬಂದಿ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಹತ್ತಾರು ನಾಗರಿಕರು ಮೃತಪಟ್ಟಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement