ಇರಾಕಿನ ಬಾಗ್ದಾದಿನಲ್ಲಿ ಅಮೆರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆಯ ಅಪಹರಣ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಅಮೆರಿಕದ ಖ್ಯಾತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ (Shelly Kittleson) ಅವರನ್ನು ಸಶಸ್ತ್ರ ದುಷ್ಕರ್ಮಿಗಳು ಹಾಡುಹಗಲೇ ಅಪಹರಿಸಿದ್ದಾರೆ. ಈ ಘಟನೆಯನ್ನು ಇರಾಕ್‌ನ ಆಂತರಿಕ ಸಚಿವಾಲಯ ಖಚಿತಪಡಿಸಿದ್ದು, ದೇಶಾದ್ಯಂತ ಬಿಗಿ ಭದ್ರತೆ ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ಬಾಗ್ದಾದ್‌ನ ಜನನಿಬಿಡ ರಸ್ತೆಯಲ್ಲಿ ಶೆಲ್ಲಿ ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಶಸ್ತ್ರಸಜ್ಜಿತ ವ್ಯಕ್ತಿಗಳು, ಅವರನ್ನು ಬಲವಂತವಾಗಿ ಕಾರಿನಿಂದ ಹೊರಗೆಳೆದು ಅಪಹರಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಸದ್ಯಕ್ಕೆ ಯಾವುದೇ ಉಗ್ರಗಾಮಿ ಸಂಘಟನೆಗಳು ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ.

ಆರೋಪಿಗಳಿಗಾಗಿ ಬಲೆ ಬೀಸಿದ ಭದ್ರತಾ ಪಡೆ
ಮಂಗಳವಾರ ಹೊರಡಿಸಲಾದ ಅಧಿಕೃತ ಹೇಳಿಕೆಯ ಪ್ರಕಾರ, ಅಪಹೃತ ಪತ್ರಕರ್ತೆಯನ್ನು ರಕ್ಷಿಸಲು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಕಾರ್ಯಾಚರಣೆ ವೇಳೆ ಅಪಹರಣಕ್ಕೆ ಬಳಸಲಾದ ವಾಹನವನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಈ ವೇಳೆ ಪರಾರಿಯಾಗಲು ಯತ್ನಿಸಿದ ವಾಹನ ಪಲ್ಟಿಯಾಗಿದ್ದು, ಒಬ್ಬ ಶಂಕಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಲು ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ವಕ್ತಾರರು ನಿರಾಕರಿಸಿದ್ದಾರೆ.

ಯಾರು ಈ ಶೆಲ್ಲಿ ಕಿಟಲ್ಸನ್?
ಶೆಲ್ಲಿ ಕಿಟಲ್ಸನ್ ಅವರು ಅಮೆರಿಕ ಮೂಲದ ಪ್ರಶಸ್ತಿ ಪುರಸ್ಕೃತ ಸ್ವತಂತ್ರ ಪತ್ರಕರ್ತೆಯಾಗಿದ್ದಾರೆ. ಇವರು ಕಳೆದ ಹಲವು ವರ್ಷಗಳಿಂದ ಮಧ್ಯಪ್ರಾಚ್ಯ ಮತ್ತು ಅಫ್ಘಾನಿಸ್ತಾನದ ಸಂಘರ್ಷ ಪೀಡಿತ ಪ್ರದೇಶಗಳಿಂದ ವರದಿ ಮಾಡುತ್ತಿದ್ದಾರೆ. ಪ್ರಾದೇಶಿಕ ಭದ್ರತೆ, ಬುಡಕಟ್ಟು ರಾಜಕೀಯ ಮತ್ತು ಯುದ್ಧ ಭೂಮಿಯ ವಾಸ್ತವ ಸ್ಥಿತಿಯ ಬಗ್ಗೆ ಇವರು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೆ ವಿಶ್ಲೇಷಣಾತ್ಮಕ ವರದಿಗಳನ್ನು ನೀಡುತ್ತಿದ್ದರು. ಈ ಹಿಂದೆ ಇಟಲಿಯ ‘ರಾಯ್’ (RAI) ಸಂಸ್ಥೆಗಾಗಿ ರೇಡಿಯೋ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದರು ಮತ್ತು ಇವರ ಯುದ್ಧ ಭೂಮಿಯ ವರದಿಗಾರಿಕೆಗಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ಇರಾಕ್ ಭದ್ರತಾ ಪಡೆಗಳು ಶೆಲ್ಲಿ ಕಿಟಲ್ಸನ್ ಅವರ ಸುರಕ್ಷಿತ ಬಿಡುಗಡೆಗಾಗಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement