ಪಾಕಿಸ್ತಾನದಲ್ಲಿ ಆರ್ಥಿಕ ದಿವಾಳಿತನ : ಈಗ ಅಲ್ಲಿ ಎಮ್ಮೆ-ಆಕಳ ಸಗಣಿಗೂ ಕೊಡಬೇಕು ‘ತೆರಿಗೆ’…!

ಲಾಹೋರ್: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಪಂಜಾಬ್ ಪ್ರಾಂತ್ಯದ ಸರ್ಕಾರವು ಆದಾಯ ಹೆಚ್ಚಿಸಿಕೊಳ್ಳಲು ವಿಚಿತ್ರ ಹಾಗೂ ವಿವಾದಾತ್ಮಕ ನಿರ್ಧಾರ ಕೈಗೊಂಡಿದೆ.
ಮರ್ಯಮ್ ನವಾಜ್ ನೇತೃತ್ವದ ಆಡಳಿತವು ಪಂಜಾಬ್‌ ರಾಜ್ಯದ ಪ್ರತಿಯೊಂದು ಎಮ್ಮೆ ಹಾಗೂ ಆಕಳ ಮೇಲೆ ದಿನಕ್ಕೆ 30 ರೂಪಾಯಿ ‘ಗೊಬ್ಬರ ತೆರಿಗೆ’ (Gobar Tax) ವಿಧಿಸಲು ನಿರ್ಧರಿಸಿದೆ. ಸರ್ಕಾರದ ಈ ಕ್ರಮವು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, “ಇದು ಆರ್ಥಿಕ ಪತನದ ಪರಮಾವಧಿ” ಎಂದು ಟೀಕಿಸಲಾಗುತ್ತಿದೆ.
ಪಂಜಾಬ್ ಸರ್ಕಾರದ ‘ಸುತ್ರಾ ಪಂಜಾಬ್’ (ಸ್ವಚ್ಛ ಪಂಜಾಬ್) ಬಯೋಗ್ಯಾಸ್ ಯೋಜನೆಯಡಿ ಈ ತೆರಿಗೆಯನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರದ ಯೋಜನೆಯ ಪ್ರಕಾರ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ 168 ಜಾನುವಾರು ವಸಾಹತುಗಳನ್ನು (Cattle Colonies) ತೆರಿಗೆ ವ್ಯಾಪ್ತಿಗೆ ತರಲಾಗುತ್ತದೆ.
ಪ್ರತಿಯೊಂದು ಎಮ್ಮೆಗೆ ದಿನಕ್ಕೆ 30 ರೂಪಾಯಿಗಳಂತೆ ಮಾಲೀಕರು ತೆರಿಗೆ ಪಾವತಿಸಬೇಕಾಗುತ್ತದೆ. ಸಂಗ್ರಹವಾದ ಸಗಣಿಯನ್ನು ಸರ್ಕಾರಿ ಸ್ವಾಮ್ಯದ ಬಯೋಗ್ಯಾಸ್ ಪ್ಲಾಂಟ್‌ಗಳಿಗೆ ಬಳಸಿ ಇಂಧನ ಉತ್ಪಾದಿಸುವ ಗುರಿ ಹೊಂದಲಾಗಿದೆ.

ರೈತರಿಗೆ ಗಾಯದ ಮೇಲೆ ಬರೆ
ಈಗಾಗಲೇ ಮೇವಿನ ಬೆಲೆ ಏರಿಕೆ ಮತ್ತು ದುಬಾರಿ ವಿದ್ಯುತ್ ದರದಿಂದ ಕಂಗೆಟ್ಟಿರುವ ಹೈನುಗಾರರಿಗೆ ಈ ತೆರಿಗೆ ನುಂಗಲಾರದ ತುತ್ತಾಗಿದೆ. ಲೆಕ್ಕಾಚಾರದ ಪ್ರಕಾರ, ಒಂದು ಎಮ್ಮೆ ಅಥವಾ ಆಕಳಿಗೆ ರೈತನು ವರ್ಷಕ್ಕೆ ಸುಮಾರು 11,000 ರೂಪಾಯಿ ತೆರಿಗೆ ಕಟ್ಟಬೇಕಾಗುತ್ತದೆ. “ಒಂದೆಡೆ ರಾಜಕಾರಣಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರೆ, ಇನ್ನೊಂದೆಡೆ ಸಗಣಿಯ ಮೇಲೆ ತೆರಿಗೆ ವಿಧಿಸಿ ಬಡ ರೈತರ ಹೊಟ್ಟೆ ಹೊಡೆಯಲಾಗುತ್ತಿದೆ” ಎಂದು ಕೃಷಿ ವಿಶ್ಲೇಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಸಮರ್ಥನೆ ಮತ್ತು ವಿಪಕ್ಷಗಳ ಟೀಕೆ
ಸರ್ಕಾರವು ಇದನ್ನು ‘ಹಸಿರು ಇಂಧನ’ ಮತ್ತು ‘ನಗರ ಸ್ವಚ್ಛತೆ’ಯ ದೃಷ್ಟಿಯಿಂದ ಕೈಗೊಂಡಿರುವ ಕ್ರಾಂತಿಕಾರಿ ಹೆಜ್ಜೆ ಎಂದು ಬಣ್ಣಿಸಿದೆ. ಆದರೆ, ವಿಪಕ್ಷಗಳು ಇದನ್ನು “ಆರ್ಥಿಕ ಹತಾಶೆಯ ಸಂಕೇತ” ಎಂದು ಕರೆದಿವೆ. “ಸರ್ಕಾರದ ಬೊಕ್ಕಸ ಎಷ್ಟು ಖಾಲಿಯಾಗಿದೆ ಎಂದರೆ, ಈಗ ಎಮ್ಮೆ ಹಾಕುವ ಸಗಣಿಯನ್ನು ಅಳೆದು ಹಣ ವಸೂಲಿ ಮಾಡುವ ಸ್ಥಿತಿಗೆ ಪಾಕಿಸ್ತಾನ ತಲುಪಿದೆ” ಎಂದು ವಿಪಕ್ಷ ನಾಯಕರು ಲೇವಡಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಬೆಂಕಿ ಉಂಡೆಯಾದ ಟರ್ಮಿನಲ್, ವಿನಾಶದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನಗರ ಪ್ರದೇಶಗಳ ಚರಂಡಿ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ನವೀಕರಿಸಬಹುದಾದ ಇಂಧನ ತಯಾರಿಸಲು ಈ ಕ್ರಮ ಅನಿವಾರ್ಯ ಎಂಬುದು ಸರ್ಕಾರದ ವಾದವಾಗಿದೆ. ಆದರೆ, ಪ್ರಾಯೋಗಿಕವಾಗಿ ಕೋಟ್ಯಂತರ ಎಮ್ಮೆಗಳ ಸಗಣಿಯನ್ನು ಅಳೆದು ತೆರಿಗೆ ವಸೂಲಿ ಮಾಡುವುದು ಹೇಗೆ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ.
ಇದು ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದನ್ನು ಬಿಂಬಿಸುತ್ತದೆ. ಸಾಮಾನ್ಯ ಜನಜೀವನದ ಮೇಲೆ ಇದು ಬೀರುವ ಪರಿಣಾಮ ಹಾಗೂ ಸರ್ಕಾರದ ಹಸಿರು ಇಂಧನ ನೀತಿಗಳ ನಡುವಿನ ಸಂಘರ್ಷವನ್ನು ಇದು ಎತ್ತಿ ತೋರಿಸುತ್ತದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement