ಅಮೆರಿಕ-ಇರಾನ್ ಕದನ ವಿರಾಮಕ್ಕೆ ಹಿನ್ನಡೆ : ಲೆಬನಾನ್ ಮೇಲೆ ಇಸ್ರೇಲ್‌ ದಾಳಿ ; ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್

ವಾಷಿಂಗ್ಟನ್/ತೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಘೋಷಣೆಯಾಗಿದ್ದ ಐತಿಹಾಸಿಕ ಕದನ ವಿರಾಮವು 24 ಗಂಟೆಗಳು ಕಳೆಯುವಷ್ಟರಲ್ಲೇ ಹಳಿ ತಪ್ಪಿದೆ.
ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಯನ್ನು ವಿರೋಧಿಸಿ ಇರಾನ್ ಈಗ ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಮತ್ತೆ ಮುಚ್ಚಿದೆ ಎಂದು ಅಸೋಸಿಯೇಟೆಡ್ ಪ್ರೆಸ್ (AP) ವರದಿ ಮಾಡಿದೆ.
ಬುಧವಾರ ಮುಂಜಾನೆ ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಅವಧಿಯ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿತ್ತು. ಈ ಒಪ್ಪಂದದ ಭಾಗವಾಗಿ, ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಒಪ್ಪಿಕೊಂಡಿತ್ತು. ಇದರಿಂದಾಗಿ ಜಾಗತಿಕ ಇಂಧನ ಪೂರೈಕೆ ವ್ಯವಸ್ಥೆ ಮತ್ತೆ ಸುಸ್ಥಿತಿಗೆ ಬರುವ ನಿರೀಕ್ಷೆ ಇತ್ತು.
ಲೆಬನಾನ್ ಮೇಲೆ ಇಸ್ರೇಲ್‌ ದಾಳಿ:
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಈ ನಿರ್ಧಾರವನ್ನು ಬೆಂಬಲಿಸುವುದಾಗಿ ತಿಳಿಸಿದ್ದರೂ, ಅದರಲ್ಲಿ ಒಂದು ಪ್ರಮುಖ ಷರತ್ತನ್ನು ವಿಧಿಸಿದ್ದರು.
“ಇರಾನ್ ತಕ್ಷಣವೇ ಜಲಸಂಧಿಯನ್ನು ತೆರೆಯಬೇಕು ಮತ್ತು ಅಮೆರಿಕ ಹಾಗೂ ಇಸ್ರೇಲ್ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು. ಇದಕ್ಕೆ ಪ್ರತಿಯಾಗಿ ನಾವು ಎರಡು ವಾರಗಳ ಕಾಲ ಇರಾನ್ ಮೇಲಿನ ದಾಳಿಗಳನ್ನು ಅಮಾನತುಗೊಳಿಸುತ್ತೇವೆ,” ಎಂದು ಅವರು ‘X’ ನಲ್ಲಿ ಬರೆದುಕೊಂಡಿದ್ದರು. ಆದರೆ, “ಈ ಕದನ ವಿರಾಮವು ಲೆಬನಾನ್ ದೇಶಕ್ಕೆ ಅನ್ವಯಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದರು.
ಇದರ ಬೆನ್ನಲ್ಲೇ, ಇಸ್ರೇಲ್ ಸೇನೆಯು ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಗುಂಪುಗಳ ಮೇಲೆ ಭೀಕರ ದಾಳಿ ಮುಂದುವರಿಸಿದೆ. ಈ ದಾಳಿಯಲ್ಲಿ ಇದುವರೆಗೆ 89 ಮಂದಿ ಸಾವಿಗೀಡಾಗಿದ್ದು, 722 ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಈ ಕ್ರಮಕ್ಕೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಡೊನಾಲ್ಡ್ ಟ್ರಂಪ್ ಸಮರ್ಥನೆ:
ಲೆಬನಾನ್ ಮೇಲಿನ ಇಸ್ರೇಲ್ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ‘ಪಿಬಿಎಸ್ ನ್ಯೂಸ್’ (PBS News) ಜೊತೆ ಮಾತನಾಡಿದ ಅವರು,”ಲೆಬನಾನ್ ಈ ಒಪ್ಪಂದದ ಭಾಗವಾಗಿರಲಿಲ್ಲ. ಹಿಜ್ಬುಲ್ಲಾ ಉಗ್ರ ಸಂಘಟನೆಯ ಕಾರಣದಿಂದ ಅವರನ್ನು ಕದನ ವಿರಾಮದಿಂದ ಹೊರಗಿಡಲಾಗಿದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ. ಅದೊಂದು ಪ್ರತ್ಯೇಕ ಸಣ್ಣ ಕಾಳಗ (Skirmish), ಅದನ್ನು ಇಸ್ರೇಲ್ ನಿಭಾಯಿಸಲಿದೆ,” ಎಂದು ಹೇಳಿದ್ದಾರೆ.
ಜಾಗತಿಕ ಪರಿಣಾಮ:
ಇರಾನ್ ಈಗ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಇಸ್ರೇಲ್ ದಾಳಿ ನಿಲ್ಲಿಸದ ಹೊರತು ಜಲಸಂಧಿ ತೆರೆಯುವುದಿಲ್ಲ ಎಂಬ ಪರೋಕ್ಷ ಸಂದೇಶವನ್ನು ಇರಾನ್ ನೀಡಿದೆ. ಅಮೆರಿಕದ ಶಾಂತಿ ಪ್ರಯತ್ನಕ್ಕೆ ಇಸ್ರೇಲ್ ಮತ್ತು ಇರಾನ್ ನಡುವಿನ ಈ ಸಂಘರ್ಷ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement