ನವದೆಹಲಿ: ಭಾರತೀಯ ಚಿತ್ರರಂಗದ ದಂತಕಥೆ, ಬಹುಮುಖ ಪ್ರತಿಭೆಯ ಗಾಯಕಿ ಆಶಾ ಭೋಂಸ್ಲೆ (92) ಅವರು ಅಂಗಾಂಗ ವೈಫಲ್ಯದಿಂದಾಗಿ ಭಾನುವಾರ (ಏಪ್ರಿಲ್ 12) ನಿಧನರಾದರು. ಈ ವಿಷಯವನ್ನು ಅವರ ಕುಟುಂಬ ಸದಸ್ಯರು ಮತ್ತು ವೈದ್ಯರು ಖಚಿತಪಡಿಸಿದ್ದಾರೆ.
ಆಶಾ ಅವರ ಪುತ್ರ ಆನಂದ ಭೋಂಸ್ಲೆ ಈ ಬಗ್ಗೆ ಮಾಹಿತಿ ನೀಡಿದ್ದು, “ನನ್ನ ತಾಯಿ ಇಂದು ನಮ್ಮನ್ನು ಅಗಲಿದ್ದಾರೆ. ಸಾರ್ವಜನಿಕರು ನಾಳೆ (ಸೋಮವಾರ) ಬೆಳಗ್ಗೆ 11 ಗಂಟೆಗೆ ಲೋವರ್ ಪರೇಲ್‌ನಲ್ಲಿರುವ ಅವರ ನಿವಾಸ ‘ಕಾಸಾ ಗ್ರಾಂಡೆ’ಯಲ್ಲಿ ಅಂತಿಮ ದರ್ಶನ ಪಡೆಯಬಹುದು. ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ,” ಎಂದು ತಿಳಿಸಿದ್ದಾರೆ.
ಎದೆ ಸೋಂಕು ಮತ್ತು ಅತಿಯಾದ ಸುಸ್ತಿನಿಂದಾಗಿ ಆಶಾ ಭೋಂಸ್ಲೆ ಅವರನ್ನು ಶನಿವಾರವಷ್ಟೇ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಎಂಟು ದಶಕಗಳ ಅಪ್ರತಿಮ ಗಾಯನ ಪಯಣ
ಲೆಜೆಂಡರಿ ಗಾಯಕಿ ದಿವಂಗತ ಲತಾ ಮಂಗೇಶ್ಕರ ಅವರ ಕಿರಿಯ ಸಹೋದರಿಯಾದ ಆಶಾ ಭೋಂಸ್ಲೆ, ಕಳೆದ 80 ವರ್ಷಗಳಿಂದ ಹಿನ್ನೆಲೆ ಸಂಗೀತ ಲೋಕವನ್ನು ಆಳಿದವರು. ಮೀನಾ ಕುಮಾರಿ, ಮಧುಬಾಲಾ ಅವರಿಂದ ಹಿಡಿದು ಕಾಜೋಲ್ ಮತ್ತು ಊರ್ಮಿಳಾ ಮಾತೋಂಡ್ಕರ್ ಅವರವರೆಗೆ ಹಲವು ತಲೆಮಾರಿನ ನಾಯಕಿಯರಿಗೆ ಅವರು ಧ್ವನಿಯಾಗಿದ್ದರು. ಅವರು ವಿವಿಧ ಭಾಷೆಗಳಲ್ಲಿ ಸುಮಾರು 12,000ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.
‘ಅಭಿ ನಾ ಜಾವೋ ಛೋಡ್ ಕರ್’, ‘ಇನ್ ಆಂಖೋ ಕಿ ಮಸ್ತಿ’, ‘ದಿಲ್ ಚೀಜ್ ಕ್ಯಾ ಹೈ’, ‘ಪಿಯಾ ತು ಅಬ್ ತೋ ಆಜಾ’, ‘ದುನಿಯಾ ಮೇ ಲೋಗೋ ಕೊ’ ಸೇರಿದಂತೆ ಸಾವಿರಾರು ಸೂಪರ್ ಹಿಟ್ ಹಾಡುಗಳು ಇಂದಿಗೂ ಮನೆಮಾತಾಗಿವೆ.
ಭಾರತ ಸರ್ಕಾರವು ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮವಿಭೂಷಣ’ ಮತ್ತು ಚಿತ್ರರಂಗದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಿದೆ. 2011ರಲ್ಲಿ ಅವರ ಸಾಧನೆಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಕೂಡ ಗುರುತಿಸಿತ್ತು.
ಆಶಾ ಭೋಂಸ್ಲೆ ಅವರ ನಿಧನಕ್ಕೆ ದೇಶಾದ್ಯಂತ ಕಂಬನಿ ಮಿಡಿಯಲಾಗುತ್ತಿದೆ. “ಆಶಾ ಭೋಂಸ್ಲೆ ಅವರು ದೇಶ ಕಂಡ ಅತ್ಯಂತ ಸಾಂಪ್ರದಾಯಿಕ ಮತ್ತು ಬಹುಮುಖ ಪ್ರತಿಭೆಯ ಧ್ವನಿಗಳಲ್ಲಿ ಒಬ್ಬರು. ಅವರ ನಿಧನದಿಂದ ನನಗೆ ತೀವ್ರ ನೋವಾಗಿದೆ. ಅವರ ಸುಮಧುರ ಹಾಡುಗಳು ತಲೆಮಾರುಗಳವರೆಗೆ ಸ್ಫೂರ್ತಿಯಾಗಿ ಉಳಿಯುತ್ತವೆ. ಅವರೊಂದಿಗೆ ನಾನು ಕಳೆದ ಕ್ಷಣಗಳನ್ನು ಸದಾ ನೆನಪಿಸಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಕಂಬಿ ಮಿಡಿದಿದ್ದಾರೆ.
“ಅವರು ತಲೆಮಾರುಗಳ ಕಾಲ ಜನರ ಹೃದಯ ಆಳಿದ ಸ್ಫೂರ್ತಿದಾಯಕ ಗಾಯಕಿ. 2018ರಲ್ಲಿ ನಾವು ಅವರಿಗೆ ಪಶ್ಚಿಮ ಬಂಗಾಳದ ಅತ್ಯುನ್ನತ ‘ಬಂಗಾ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದ್ದೆವು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ