ಮಸ್ಕತ್ : ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಉನ್ನತ ಮಟ್ಟದ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಓಮನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ “ಕೆಲವು ಒಪ್ಪಂದಗಳಿಗೆ ಬರಲಾಗಿದೆ” ಎಂದು ಸೋಮವಾರ ತಿಳಿಸಿದ್ದಾರೆ.
ವಾರದ ಕೊನೆಯಲ್ಲಿ ಪಾಕಿಸ್ತಾನ ಮತ್ತು ಓಮನ್‌ನಂತಹ ಪ್ರಮುಖ ಮಧ್ಯಸ್ಥಿಕೆ ರಾಷ್ಟ್ರಗಳ ಅಧಿಕಾರಿಗಳನ್ನು ಭೇಟಿ ಮಾಡಿದ ಅರಾಘ್ಚಿ, ಅಮೆರಿಕ ಜೊತೆಗಿನ ಮಾತುಕತೆಯ ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ರಷ್ಯಾ ತಲುಪಿದ್ದಾರೆ.
ಓಮನ್‌ನಲ್ಲಿ ನಡೆದ ಸಭೆಯ ಕುರಿತು ಮಾತನಾಡಿದ ಅಬ್ಬಾಸ್ ಅರಾಘ್ಚಿ, “ಇರಾನ್ ಮತ್ತು ಓಮನ್ ಎರಡೂ ಹಾರ್ಮುಜ್ ಜಲಸಂಧಿಯ ಕರಾವಳಿ ದೇಶಗಳಾಗಿವೆ. ಹೀಗಾಗಿ ಈ ವಿಷಯದ ಬಗ್ಗೆ ಸಮಾಲೋಚನೆ ನಡೆಸುವುದು ಅತ್ಯಗತ್ಯವಾಗಿತ್ತು. ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಸಂಚಾರವು ಜಾಗತಿಕವಾಗಿ ಪ್ರಮುಖ ವಿಷಯವಾಗಿದೆ. ಈ ಜಲಸಂಧಿಯ ಮೇಲೆ ಕಣ್ಣಿಟ್ಟಿರುವ ಎರಡು ದೇಶಗಳಾಗಿ, ಪರಸ್ಪರ ಹಿತಾಸಕ್ತಿಗಳನ್ನು ಕಾಪಾಡಲು ನಮಗೆ ನಿಕಟ ಸಮನ್ವಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ಯಾವುದೇ ಕ್ರಮದಲ್ಲಿ ಇರಾನ್ ಮತ್ತು ಓಮನ್ ಹಿತಾಸಕ್ತಿಗಳು ನೇರವಾಗಿ ಒಳಗೊಂಡಿರುತ್ತವೆ ” ಎಂದು ಹೇಳಿದ್ದಾರೆ.
ತಜ್ಞರ ಮಟ್ಟದಲ್ಲಿ ಈ ಸಮಾಲೋಚನೆಗಳನ್ನು ಮುಂದುವರಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು. ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನಕ್ಕೆ ನೀಡಿದ ಭೇಟಿಯು “ಅತ್ಯಂತ ಯಶಸ್ವಿ”ಯಾಗಿದೆ ಎಂದು ಅವರು ಬಣ್ಣಿಸಿದರು.
ನೆರೆಹೊರೆಯವರಿಗೆ ಮೊದಲ ಆದ್ಯತೆ: ಅರಾಘ್ಚಿ
ಈ ಕುರಿತು ‘X’ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಅರಾಘ್ಚಿ, “ಓಮನ್‌ನಲ್ಲಿನ ನನ್ನ ಆತಿಥೇಯರಿಗೆ ಧನ್ಯವಾದಗಳು. ದ್ವಿಪಕ್ಷೀಯ ವಿಷಯಗಳು ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ಪ್ರಮುಖ ಚರ್ಚೆಗಳು ನಡೆದಿವೆ. ಹೊರ್ಮುಜ್ ಕರಾವಳಿಯ ರಾಷ್ಟ್ರಗಳಾಗಿ, ಎಲ್ಲಾ ನೆರೆಹೊರೆಯವರಿಗೆ ಮತ್ತು ಜಗತ್ತಿಗೆ ಪ್ರಯೋಜನವಾಗುವಂತೆ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಮಾರ್ಗಗಳ ಬಗ್ಗೆ ನಾವು ಗಮನಹರಿಸಿದ್ದೇವೆ. ನಮ್ಮ ನೆರೆಹೊರೆಯವರೇ ನಮ್ಮ ಆದ್ಯತೆ,” ಎಂದು ಬರೆದುಕೊಂಡಿದ್ದಾರೆ.
ಇತ್ತ ಓಮನ್ ವಿದೇಶಾಂಗ ಸಚಿವ ಬದ್ರ್ ಅಲ್ಬುಸೈದಿ ಅವರು ಸಹ ‘X’ ನಲ್ಲಿ ಪ್ರತಿಕ್ರಿಯಿಸಿದ್ದು, ಹಾರ್ಮುಜ್ ಜಲಸಂಧಿಯ ಬಗ್ಗೆ ಇರಾನ್ ಜೊತೆ “ಉತ್ತಮ ಚರ್ಚೆ” ನಡೆದಿದೆ ಎಂದಿದ್ದಾರೆ. ಜಲಮಾರ್ಗದಲ್ಲಿ ಸಂಚರಿಸುವ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು “ಹೆಚ್ಚಿನ ರಾಜತಾಂತ್ರಿಕತೆ” ಮತ್ತು “ಪ್ರಾಯೋಗಿಕ ಪರಿಹಾರಗಳ” ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಯಾವುದೇ ಅಧಿಕೃತ ಒಪ್ಪಂದಗಳಿಗೆ ಸಹಿ ಹಾಕುವ ಬಗ್ಗೆ ಅಲ್ಬುಸೈದಿ ಪ್ರಸ್ತಾಪಿಸಿಲ್ಲ ಎಂದು ಸಿಎನ್‌ಎನ್ (CNN) ವರದಿ ಮಾಡಿದೆ.
ಅಮೆರಿಕದ ಮುಂದಿನ ನಡೆ ಏನು?
ಪಾಕಿಸ್ತಾನ ಮತ್ತು ಓಮನ್ ಭೇಟಿಯ ನಂತರ ಇರಾನ್ ವಿದೇಶಾಂಗ ಸಚಿವರ ರಷ್ಯಾ ಭೇಟಿಯು ಅತ್ಯಂತ ಮಹತ್ವ ಪಡೆದುಕೊಂಡಿದೆ. ಏಕೆಂದರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಮ್ಮ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜ್ಯಾರೆಡ್ ಕುಶ್ನರ್ ಅವರು ವೀಕೆಂಡ್‌ನಲ್ಲಿ ಪಾಕಿಸ್ತಾನಕ್ಕೆ ಕೈಗೊಳ್ಳಬೇಕಿದ್ದ ಭೇಟಿಯನ್ನು ಹಠಾತ್ತನೆ ರದ್ದುಗೊಳಿಸಿದ್ದರು.
ಸೋಮವಾರದಂದು ಅಧ್ಯಕ್ಷ ಟ್ರಂಪ್ ತಮ್ಮ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ತಂಡದೊಂದಿಗೆ ‘ಸಿಚುವೇಶನ್ ರೂಮ್’ನಲ್ಲಿ (Situation Room) ಮಹತ್ವದ ಸಭೆ ನಡೆಸುವುದಾಗಿ ವರದಿಯಾಗಿದೆ. ಈ ಸಭೆಯಲ್ಲಿ ಟ್ರಂಪ್ ಅವರ ಮುಂದಿನ ಆಯ್ಕೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ CNN ವರದಿ ಮಾಡಿದೆ. ಕಳೆದ ವಾರ ಘೋಷಿಸಲಾದ ಕದನ ವಿರಾಮದ ಅವಧಿಯನ್ನು ವಿಸ್ತರಿಸಬೇಕೇ ಅಥವಾ ಇರಾನ್ ಮೇಲೆ ಸ್ಥಗಿತಗೊಂಡಿರುವ ಬಾಂಬ್ ದಾಳಿಯನ್ನು ಪುನಃ ಆರಂಭಿಸಬೇಕೇ ಎಂಬ ನಿರ್ಣಾಯಕ ವಿಷಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ