ವಾಹನ ಚಲಾಯಿಸುತ್ತಿದ್ದಾಗಲೇ ಪ್ರಜ್ಞೆ ತಪ್ಪಿದ ಶಾಲಾ ಬಸ್‌ ಡ್ರೈವರ್‌: ಸಮಯಪ್ರಜ್ಞೆ ತೋರಿ ಹಲವರ ಪ್ರಾಣ ಉಳಿಸಿದ ವಿದ್ಯಾರ್ಥಿಗಳು…!

ಚಲಿಸುತ್ತಿದ್ದ ಶಾಲಾ ಬಸ್‌ನ ಚಾಲಕಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದರೂ, ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಸಮಯಪ್ರಜ್ಞೆ ಮೆರೆದು ಭಾರಿ ಅಪಘಾತವನ್ನು ತಪ್ಪಿಸಿರುವ ರೋಮಾಂಚನಕಾರಿ ಘಟನೆ ಅಮೆರಿಕದ ಮಿಸಿಸ್ಸಿಪ್ಪಿಯಲ್ಲಿ ನಡೆದಿದೆ.
ಬುಧವಾರ ಹ್ಯಾನ್‌ಕಾಕ್ ಕೌಂಟಿ ಶಾಲೆಯ ಬಸ್ ಚಾಲಕಿ ಲಿಯಾ ಟೇಲರ್ ಅವರಿಗೆ ಬಸ್ ಚಲಾಯಿಸುತ್ತಿದ್ದಾಗಲೇ ತೀವ್ರವಾದ ಆಸ್ತಮಾ ಅಟ್ಯಾಕ್ (Asthma Attack) ಉಂಟಾಗಿದೆ. ಇದರಿಂದ ಅವರು ಸ್ಟೀರಿಂಗ್ ಮೇಲೆಯೇ ಪ್ರಜ್ಞೆ ತಪ್ಪಿ ವಾಲಿ ಬಿದ್ದಿದ್ದಾರೆ. ಚಾಲಕಿಯ ನಿಯಂತ್ರಣವಿಲ್ಲದೆ ಬಸ್ ಮುನ್ನುಗ್ಗುತ್ತಲೇ ಇತ್ತು. ಬಸ್‌ನ ಮುಂಭಾಗದಲ್ಲಿದ್ದ ವಿದ್ಯಾರ್ಥಿಯೊಬ್ಬ ಚಾಲಕಿ ಕುಸಿದು ಬಿದ್ದಿರುವುದನ್ನು ಗಮನಿಸಿ ಕೂಡಲೇ ಸ್ಟೀರಿಂಗ್ ಹಿಡಿದು ನಿಯಂತ್ರಣಕ್ಕೆ ಯತ್ನಿಸಿದ್ದಾನೆ.
ಈ ನಡುವೆ ಚಾಲಕಿ ಲಿಯಾ ಅವರು ಎರಡನೇ ಬಾರಿಗೆ ಪ್ರಜ್ಞೆ ತಪ್ಪಿ ಸೀಟಿನಿಂದ ಹಿಂದೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಬಸ್‌ನಲ್ಲಿದ್ದ ಇತರ ವಿದ್ಯಾರ್ಥಿಗಳು ಗಾಬರಿಯಾಗದೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಒಬ್ಬ ವಿದ್ಯಾರ್ಥಿ ಕೂಡಲೇ ಓಡಿ ಬಂದು ಎಮರ್ಜೆನ್ಸಿ ಬ್ರೇಕ್ ಒತ್ತುವ ಮೂಲಕ ಚಲಿಸುತ್ತಿದ್ದ ಬಸ್ಸನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಚಾಲಕಿಯ ಕೈಯಲ್ಲಿದ್ದ ಔಷಧಿ (Inhaler) ಯನ್ನು ಗಮನಿಸಿದ ವಿದ್ಯಾರ್ಥಿನಿಯೊಬ್ಬಳು, ತಕ್ಷಣವೇ ಅದನ್ನು ಅವರಿಗೆ ನೀಡಿ ಪ್ರಥಮ ಚಿಕಿತ್ಸೆ ನೀಡಿದ್ದಾಳೆ. ಉಳಿದ ವಿದ್ಯಾರ್ಥಿಗಳು ತುರ್ತು ಸೇವೆಗೆ ಕರೆ ಮಾಡಿ ಸಹಾಯ ಕೋರಿದ್ದಾರೆ.
ಹೆಮ್ಮೆ ವ್ಯಕ್ತಪಡಿಸಿದ ಶಾಲಾ ಆಡಳಿತ:
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹ್ಯಾನ್‌ಕಾಕ್ ಮಿಡಲ್ ಸ್ಕೂಲ್ ಪ್ರಾಂಶುಪಾಲರಾದ ಮೆಲಿಸ್ಸಾ ಸಾಸಿಯರ್, “ನಮ್ಮ ವಿದ್ಯಾರ್ಥಿಗಳು ಇಂತಹ ತುರ್ತು ಪರಿಸ್ಥಿತಿಯಲ್ಲಿ ಶಾಂತವಾಗಿ ಮತ್ತು ಜವಾಬ್ದಾರಿಯುತವಾಗಿ ವರ್ತಿಸಿರುವುದನ್ನು ಕಂಡು ನಮಗೆ ಹೆಮ್ಮೆಯಾಗುತ್ತಿದೆ. ಅವರ ಈ ಕಾರ್ಯ ದೊಡ್ಡ ಅನಾಹುತವನ್ನೇ ತಪ್ಪಿಸಿದೆ,” ಎಂದು ಶ್ಲಾಘಿಸಿದ್ದಾರೆ. “ವಿದ್ಯಾರ್ಥಿಗಳು ನನ್ನ ಪ್ರಾಣ ಉಳಿಸಿದ್ದಾರೆ, ಅವರಿಗೆ ನಾನು ಚಿರಋಣಿ,” ಎಂದು ಚೇತರಿಸಿಕೊಳ್ಳುತ್ತಿರುವ ಚಾಲಕಿ ಲಿಯಾ ಟೇಲರ್ ಭಾವುಕರಾಗಿ ನುಡಿದಿದ್ದಾರೆ.
ಪ್ರಸ್ತುತ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿದ್ಯಾರ್ಥಿಗಳ ಧೈರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement