ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲಿ ಮಳೆಯಿಲ್ಲದೆ ಕಂಗಾಲಾಗಿಸಿದ ಜೂನ್ ತಿಂಗಳಿಗೆ ಈ ವರ್ಷದ ಜೂನ್‌ ತಿಂಗಳೂ ಸೇರ್ಪಡೆ…!

ನವದೆಹಲಿ: ಭಾರತದಲ್ಲಿ ಈ ವರ್ಷದ (2026) ಮುಂಗಾರು ಆರಂಭದಲ್ಲೇ ತೀವ್ರ ನಿರಾಸೆ ಮೂಡಿಸಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ವಾಯುವ್ಯ ಭಾರತದ ಹಲವು ಭಾಗಗಳಿಗೆ ಮುಂಗಾರು ಮಾರುತಗಳ ಆಗಮನ ಮತ್ತಷ್ಟು ವಿಳಂಬವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರಿನ ಪ್ರಗತಿ ತೀವ್ರ ಅಸಮತೋಲನದಿಂದ ಕೂಡಿದ್ದು, ದೇಶದ ಬಹುದೊಡ್ಡ ಭಾಗಗಳು ಇನ್ನೂ ಮಳೆಯ ನಿರೀಕ್ಷೆಯಲ್ಲೇ ಇವೆ…!
ಭಾರತದ ಒಂದು ಶತಮಾನಕ್ಕೂ ಹೆಚ್ಚು ಕಾಲದ ಅತ್ಯಂತ ಮಳೆ ಕೊರತೆಯ ಜೂನ್ ತಿಂಗಳುಗಳಲ್ಲಿ ಈ ವರ್ಷದ ಜೂನ್‌ ತಿಂಗಳು ಸೇರಿದೆ. 2026ರ ಜೂನ್ ತಿಂಗಳು 1901 ರಿಂದ ಈವರೆಗೆ ಅತ್ಯಂತ ಕಡಿಮೆ ಮಳೆಯಾದ ಜೂನ್‌ ತಿಂಗಳಲ್ಲಿ ಐದನೇ ಅತ್ಯಂತ ಕಡಿಮೆ ಮಳೆಯ ತಿಂಗಳಾಗಿ ಹೊರಹೊಮ್ಮಿದೆ.
1927 ರಿಂದ 2026 ರವರೆಗಿನ ಮಳೆ ದತ್ತಾಂಶಗಳನ್ನು ಪರಿಶೀಲಿಸಿದರೆ, ಕಳೆದ ಒಂದು ಶತಮಾನದ ಅವಧಿಯಲ್ಲಿ ಈ ವರ್ಷದ ಜೂನ್ ತಿಂಗಳು ದೇಶದ 3ನೇ ಅತ್ಯಂತ ಒಣಗಿದ (Driest) ಅಥವಾ ಮಳೆ ಕೊರತೆಯ ಜೂನ್ ತಿಂಗಳಾಗಿ ದಾಖಲಾಗಿದೆ.

ಮಂಗಳವಾರ ಭಾರತ ಹವಾಮಾನ ಇಲಾಖೆ (ಐಎಂಡಿ)ಯು, ಜೂನ್ 1 ರಿಂದ ಜೂನ್ 30 ರವರೆಗೆ ದೇಶದಲ್ಲಿ ವಾಡಿಕೆಯಂತೆ 165.3 ಮಿ.ಮೀ ಮಳೆಯಾಗಬೇಕಿತ್ತು, ಆದರೆ 99.5 ಮಿ.ಮೀ ಮಳೆಯಾಗಿದ್ದು, ಒಟ್ಟಾರೆ ಮಳೆಯ ಕೊರತೆ ಶೇ. 40 ರಷ್ಟು ಆಗಿದೆ ಎಂದು ತಿಳಿಸಿದೆ.
ಕಳೆದ 100 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಳೆಯಾದ ಜೂನ್ ತಿಂಗಳುಗಳ ಪಟ್ಟಿ ಹೀಗಿದೆ:
2009: 87.5 ಮಿ.ಮೀ
2014: 92.1 ಮಿ.ಮೀ
2026: 99.5 ಮಿ.ಮೀ (ಪ್ರಸಕ್ತ ವರ್ಷ)
2019: 113.6 ಮಿ.ಮೀ
1965: 115.5 ಮಿ.ಮೀ

ವಾಡಿಕೆ ಮಳೆಯಲ್ಲಿ ತೀವ್ರ ಕುಸಿತ
ದೀರ್ಘಾವಧಿ ಸರಾಸರಿ (LPA) ಅಥವಾ ವಾಡಿಕೆ ಮಳೆಗೆ ಹೋಲಿಸಿದರೆ ಈ ಬಾರಿಯ ಕೊರತೆ ಎದ್ದು ಕಾಣುತ್ತಿದೆ. 2025 ರ ಜೂನ್‌ನಲ್ಲಿ ವಾಡಿಕೆಗಿಂತ ಶೇ. 109 ರಷ್ಟು ಅತಿ ಹೆಚ್ಚು ಮಳೆಯಾಗಿದ್ದರೆ, ಈ ವರ್ಷ (2026) ಜೂನ್‌ನಲ್ಲಿ ಕೇವಲ ಶೇ. 60 ರಷ್ಟು ಮಾತ್ರ ಮಳೆಯಾಗಿದೆ. ಕಳೆದ ಕೆಲವು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಮುಂಗಾರು ಆರಂಭದ ಈ ಬಾರಿಯ ಕುಸಿತ ಆತಂಕಕಾರಿಯಾಗಿದೆ. 2021ರಿಂದ ಜೂನ್‌ ತಿಂಗಳಲ್ಲಿ ಆದ ಮಳೆಯ ಪ್ರಮಾಣ:
2021: ಶೇ. 110
2022: ಶೇ. 92
2023: ಶೇ. 91
2024: ಶೇ. 89
2025: ಶೇ. 109
2026: ಶೇ. 60 (ಪ್ರಸಕ್ತ ವರ್ಷ)

ಪ್ರಮುಖ ಸುದ್ದಿ :-   ವಿಡಿಯೊಗಳು...: ಭೀಕರ ಬಿಸಿಗಾಳಿಗೆ ಕರಗಿದ ರಸ್ತೆಗಳು, ಬಾಗಿದ ರೈಲು ಹಳಿಗಳು ; ನೂರಾರು ಸಾವು : ತತ್ತರಿಸಿದ ಯುರೋಪ್

ಹಿಂದಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಸಾಮಾನ್ಯ ಮಟ್ಟದಲ್ಲಿದ್ದರೆ, 2026 ರ ಈ ಹಠಾತ್ ಕುಸಿತವು ಮುಂಗಾರು ಆರಂಭದಲ್ಲೇ ದುರ್ಬಲಗೊಂಡಿರುವುದನ್ನು ಸ್ಪಷ್ಟಪಡಿಸುತ್ತದೆ. ಅತಿ ಹೆಚ್ಚು ಮಳೆ ಕೊರತೆಯಾದ ಪ್ರದೇಶವೆಂದರೆ ಮಧ್ಯ ಭಾರತ, ಈ ತಿಂಗಳ ಅಂತ್ಯದಲ್ಲಿ ಶೇ. 50 ರಷ್ಟು ಮಳೆ ಕೊರತೆಯಾಗಿದ್ದು, 170.3 ಮಿ.ಮೀ. ವಾಡಿಕೆ ಮಳೆಗೆ ಹೋಲಿಸಿದರೆ ಶೇ. 84.4 ಮಿ.ಮೀ. ಮಳೆ ಕೊರತೆಯಾಗಿದೆ. ವಾಯುವ್ಯ ಭಾರತ ಶೇ. 31 ರಷ್ಟು ಮಳೆ ಕೊರತೆಯನ್ನು ದಾಖಲಿಸಿದರೆ, ದಕ್ಷಿಣ ಭಾರತವು ಶೇ. 27 ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ.
ಜೂನ್‌ನಲ್ಲಿ ಹಲವಾರು ರಾಜ್ಯಗಳಲ್ಲಿ ಆತಂಕಕಾರಿ ಮಳೆ ಕೊರತೆಯಾಗಿದೆ. ಗುಜರಾತ್ ಶೇ. 82 ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ, ಛತ್ತೀಸ್‌ಗಢ ಶೇ. 65 ರಷ್ಟು ಕೊರತೆಯಾದರೆ, ಜಾರ್ಖಂಡ್ ಶೇ. 59 ರಷ್ಟು ಮಳೆ ಕೊರತೆಯನ್ನು ಕಂಡಿದೆ, ಉತ್ತರ ಪ್ರದೇಶ (-50%), ದೆಹಲಿ (-49%), ಬಿಹಾರ (-47%), ಪಂಜಾಬ್ (-47%), ಮಹಾರಾಷ್ಟ್ರ (-47%), ಕರ್ನಾಟಕ (-42%) ಮತ್ತು ಕೇರಳ(-34%) ಮಳೆ ಕೊರತೆ ಎದುರಾಗಿದೆ.
ಮುಂಗಾರು ಮಾರುತಗಳ ಮಂದಗತಿ
ದೇಶದಲ್ಲಿ ಮುಂಗಾರು ಪ್ರವೇಶ ಪಡೆದಿದ್ದರೂ ಅದರ ಹರಡುವಿಕೆ ಮಾತ್ರ ತೀರಾ ಅಸಮರ್ಪಕವಾಗಿದೆ. ಜೂನ್ 30 ಕಳೆದರೂ ವಾಯುವ್ಯ ಭಾರತದ ಪ್ರಮುಖ ರಾಜ್ಯಗಳಾದ ಹರಿಯಾಣ, ಪಂಜಾಬ್, ರಾಜಸ್ಥಾನದ ಬಹುಪ್ರದೇಶಗಳು ಮತ್ತು ದೇಶದ ರಾಜಧಾನಿ ದೆಹಲಿಗೆ ಮುಂಗಾರು ಮಳೆ ಪೂರ್ಣ ಪ್ರಮಾಣದಲ್ಲಿ ಲಗ್ಗೆ ಇಟ್ಟಿಲ್ಲ. ಈ ಭಾಗದ ಜನ ಇನ್ನೂ ನಿರಂತರ ಮಳೆಗಾಗಿ ಕಾಯುತ್ತಿದ್ದಾರೆ. ಆದರೆ, ಕಳೆದ ವರ್ಷ ಮುಂಗಾರು ಆರಂಭದಲ್ಲೇ ಇಡೀ ದೇಶವನ್ನು ಅತ್ಯಂತ ವೇಗವಾಗಿ ಆವರಿಸಿದ್ದ ಮುಂಗಾರು ಎಲ್ಲೆಡೆ ಸಮಾನವಾಗಿ ಮಳೆ ಸುರಿಸಿತ್ತು.

ಪ್ರಮುಖ ಸುದ್ದಿ :-   ಅಮೆರಿಕದ ಜನ್ಮಸಿದ್ಧ ಪೌರತ್ವ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ; ಅಧ್ಯಕ್ಷ ಟ್ರಂಪ್‌ಗೆ ಭಾರಿ ಹಿನ್ನಡೆ

ಮಳೆ ಕೈಕೊಡಲು ಕಾರಣಗಳೇನು?
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ವಿಶ್ಲೇಷಣೆಯ ಪ್ರಕಾರ, ಈ ಬಾರಿ ಮುಂಗಾರು ದುರ್ಬಲಗೊಳ್ಳಲು ಪ್ರಮುಖವಾಗಿ ವಾತಾವರಣ ಮತ್ತು ಸಾಗರ ಸ್ಥಿತ್ಯಂತರಗಳು ಕಾರಣವಾಗಿವೆ.
ಎಲ್ ನಿನೋ (El Nino) ಪ್ರಭಾವ: ಪ್ರಸ್ತುತ ವಾತಾವರಣದಲ್ಲಿ ಕಂಡುಬರುತ್ತಿರುವ ‘ಎಲ್ ನಿನೋ’ ಪರಿಸ್ಥಿತಿಯು ಮುಂಗಾರು ಮಾರುತಗಳನ್ನು ದುರ್ಬಲಗೊಳಿಸಿದ್ದು, ಮಳೆಯ ಪ್ರಮಾಣ ತಗ್ಗಲು ಮುಖ್ಯ ಕಾರಣವಾಗಿದೆ.
ವಿಳಂಬ ಮತ್ತು ನಿಧಾನಗತಿ: ದೇಶದ ಕೆಲವು ಭಾಗಗಳಿಗೆ ಮುಂಗಾರು ತಡವಾಗಿ ಪ್ರವೇಶಿಸಿದ್ದಲ್ಲದೆ, ಜೂನ್ ಆರಂಭದಲ್ಲೇ ಅದರ ವೇಗ ಮಂದಗತಿಯಾಯಿತು. ಇದು ಮಳೆ ದೇಶಾದ್ಯಂತ ಹರಡುವುದನ್ನು ತಡೆಯಿತು.
ವಾಯುಭಾರ ಕುಸಿತದ ಕೊರತೆ: ನಿರಂತರ ಮತ್ತು ವ್ಯಾಪಕ ಮಳೆಗೆ ವಾತಾವರಣದಲ್ಲಿ ವಾಯುಭಾರ ಕುಸಿತದ ವ್ಯವಸ್ಥೆಗಳು (Low-pressure systems) ಸೃಷ್ಟಿಯಾಗಬೇಕಾಗುತ್ತದೆ. ಆದರೆ ಈ ಬಾರಿ ಇಂತಹ ವ್ಯವಸ್ಥೆಗಳು ತೀರಾ ದುರ್ಬಲ ಹಾಗೂ ಅನಿಯಮಿತವಾಗಿದ್ದರಿಂದ ಸುದೀರ್ಘ ಮಳೆಯ ದಿನಗಳು ಕಾಣಿಸಲಿಲ್ಲ.
ಜೂನ್ ತಿಂಗಳ ಮಳೆ ವಾಡಿಕೆಗಿಂತ ಕಡಿಮೆ ಇರಲಿದೆ ಎಂದು ಐಎಂಡಿ ಮೊದಲೇ ಸೂಚಿಸಿತ್ತು. ಅದರಂತೆ ಆರಂಭಿಕ ಕೊರತೆ ಉಂಟಾಗಿದ್ದು ಜೂನ್‌ನಲ್ಲಿ ಮಳೆ ಕೊರತೆಯ ಹೊರತಾಗಿಯೂ, ಮಾನ್ಸೂನ್ ಮತ್ತೆ ವೇಗವನ್ನು ಪಡೆಯಲು ಪ್ರಾರಂಭಿಸಿದೆ ಎಂದು ಐಎಂಡಿ ಹೇಳಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement