ವಿಡಿಯೋ | 443 ಮೀಟರ್ ಎತ್ತರದ ಎಂಪೈರ್ ಸ್ಟೇಟ್ ಕಟ್ಟಡದ ತುತ್ತತುದಿಯ ಆ್ಯಂಟೆನಾ ಏರಿ ಪ್ರೇಮ ನಿವೇದನೆ ; ಬಂಧನ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರದ ಪ್ರಸಿದ್ಧ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಅತ್ಯುನ್ನತ ಟವರ್‌ ಏರಿ, ಅಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿರುವಂತೆ ಕಾಣಿಸಿಕೊಂಡ ರಷ್ಯಾ ಮೂಲದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
32 ವರ್ಷದ ಇವಾನ್ ಬೀರ್ಕಸ್ ಅವರು 33 ವರ್ಷದ ಆಂಜೆಲಾ ನಿಕೊಲಾವ್ ಅವರಿಗೆ ಮೊಣಕಾಲೂರಿ ಉಂಗುರ ನೀಡಿ ವಿವಾಹ ಪ್ರಸ್ತಾಪ ಮಾಡಿದ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಮಾರು 1,454 ಅಡಿ (443 ಮೀಟರ್) ಎತ್ತರದ ಕಟ್ಟಡದ ಟವರ್‌ ಮೇಲೆಯೇ ಕನಿಷ್ಠ 10 ನಿಮಿಷಗಳ ಕಾಲ ಉಳಿದು ಬಳಿಕ ಕೆಳಗಿಳಿದಿದ್ದಾರೆ.

ಇದೇ ವೇಳೆ, ಕಟ್ಟಡದ ಶಿಖರದ ಸೂಜಿಯಾಕಾರದ ಭಾಗದಲ್ಲಿ ಅವರು ದೊಡ್ಡ ಬ್ಯಾನರ್‌ವೊಂದನ್ನು ಬಿಚ್ಚಿದ್ದು, ಅದರಲ್ಲಿ “When the power of love beats the love of power the world knows peace” ಎಂಬ ಸಂದೇಶ ಬರೆಯಲಾಗಿತ್ತು.
ಕಪ್ಪು ಬಣ್ಣದ ಸ್ಟ್ರೀಟ್‌ವೇರ್ ಶೈಲಿಯ ಉಡುಪು ಧರಿಸಿದ್ದ ಈ ದಂಪತಿ ನೆಲಕ್ಕಿಳಿದ ತಕ್ಷಣವೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಬಿಬಿಸಿ ವರದಿ ಪ್ರಕಾರ, ಇವರ ವಿರುದ್ಧ ಕಳ್ಳತನದ ಉದ್ದೇಶದಿಂದ ಅಕ್ರಮ ಪ್ರವೇಶ (Burglary), ನಿರ್ಲಕ್ಷ್ಯದಿಂದ ಜೀವ ಅಪಾಯ ಉಂಟುಮಾಡಿದ ಆರೋಪ (Reckless Endangerment), ಆಸ್ತಿಗೆ ಹಾನಿ (Criminal Mischief), ಅಕ್ರಮ ಪ್ರವೇಶ (Trespass) ಹಾಗೂ ಸಾರ್ವಜನಿಕ ಶಾಂತಿ ಭಂಗ (Disorderly Conduct) ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ.

ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ವಕ್ತಾರರೊಬ್ಬರು, ಈ ಘಟನೆ ಕಟ್ಟಡದಲ್ಲಿದ್ದ ಬಾಡಿಗೆದಾರರು, ಪ್ರವಾಸಿಗರು ಅಥವಾ ಕೆಳಭಾಗದಲ್ಲಿರುವ ವೀಕ್ಷಣಾ ವೇದಿಕೆಯಲ್ಲಿದ್ದ ಅತಿಥಿಗಳಿಗೆ ಯಾವುದೇ ಅಪಾಯ ಉಂಟುಮಾಡಿಲ್ಲ ಎಂದು ತಿಳಿಸಿದ್ದಾರೆ.
ಮೂಲತಃ ರಷ್ಯಾದ ಮಾಸ್ಕೋ ನಿವಾಸಿಗಳಾದ ಇವಾನ್ ಬೀರ್ಕಸ್ ಮತ್ತು ಆಂಜೆಲಾ ನಿಕೊಲಾವ್, ಪ್ರಸ್ತುತ ಅಮೆರಿಕದ ನ್ಯೂಜೆರ್ಸಿಯ ಈಸ್ಟ್ ಆರೆಂಜ್ ನಗರದಲ್ಲಿ ವಾಸವಾಗಿದ್ದಾರೆ.
ಇವರ ಪ್ರೇಮ ಜೀವನ ಮತ್ತು ಅತ್ಯಂತ ಅಪಾಯಕಾರಿ ಎತ್ತರದ ಕಟ್ಟಡಗಳನ್ನು ಏರುವ ಸಾಹಸವನ್ನು ಆಧರಿಸಿದ “Skywalkers: A Love Story” ಎಂಬ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರವು 2024ರಲ್ಲಿ ಬಿಡುಗಡೆಯಾಗಿದ್ದು, 2024ರ ಜನವರಿಯಲ್ಲಿ ನಡೆದ ಸಂಡಾನ್ಸ್ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement