ನ್ಯೂಯಾರ್ಕ್: ಬಿಲಿಯನೇರ್ ಎಲಾನ್ ಮಸ್ಕ್ ಒಡೆತನದ ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ಎಕ್ಸ್ (SpaceX)ನ ಸುಮಾರು 4 ಮೆಟ್ರಿಕ್ ಟನ್ (4,000 ಕೆ.ಜಿ.) ತೂಕದ ಫಾಲ್ಕನ್–9 ರಾಕೆಟ್ನ ಮೇಲಿನ ಹಂತದ (Upper Stage) ಭಾಗವು ಬುಧವಾರ ಅನಿರೀಕ್ಷಿತವಾಗಿ ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಭೂಮಿಗೆ ಯಾವುದೇ ಅಪಾಯವನ್ನು ಉಂಟುಮಾಡದಿದ್ದರೂ, ಚಂದ್ರನ ಮೇಲ್ಮೈಯಲ್ಲಿ ಹೊಸದೊಂದು ದೊಡ್ಡ ಕುಳಿ (Crater) ನಿರ್ಮಾಣವಾಗಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಗಂಟೆಗೆ ಸುಮಾರು 8,690 ಕಿ.ಮೀ. (5,400 ಮೈಲಿ) ವೇಗದಲ್ಲಿ ಚಲಿಸುತ್ತಿದ್ದ ಈ ರಾಕೆಟ್ನ ಭಾಗವು ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ ಸುಮಾರು 4.05 ಗಂಟೆಗೆ (2:35 a.m. ET / 0635 GMT) ಚಂದ್ರನಿಗೆ ಅಪ್ಪಳಿಸಿತು. ಆದರೆ ಆ ಕ್ಷಣವನ್ನು ನೇರ ಪ್ರಸಾರದಲ್ಲಿ ರೆಕಾರ್ಡ್ ಮಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ಆಗ ಚಂದ್ರನ ಸುತ್ತ ಕಕ್ಷೆಯಲ್ಲಿ ಸಂಚರಿಸುತ್ತಿರುವ ಯಾವುದೇ ಬಾಹ್ಯಾಕಾಶ ನೌಕೆ ಸೂಕ್ತ ಸ್ಥಾನದಲ್ಲಿರಲಿಲ್ಲ.
ಆದಾಗ್ಯೂ, ನಾಸಾದ ಲೂನರ್ ರಿಕಾನೈಸನ್ಸ್ ಆರ್ಬಿಟರ್ (Lunar Reconnaissance Orbiter – LRO) ಹಾಗೂ ದಕ್ಷಿಣ ಕೊರಿಯಾದ ಪಾಥ್ಫೈಂಡರ್ ಲೂನರ್ ಆರ್ಬಿಟರ್ ಈ ಡಿಕ್ಕಿ ಸಂಭವಿಸಿದ ಸ್ಥಳದ ಚಿತ್ರಗಳನ್ನು ಸೆರೆಹಿಡಿಯಲು ಸಿದ್ಧತೆ ನಡೆಸಿವೆ. ಆದರೆ ಆ ಚಿತ್ರಗಳು ಲಭ್ಯವಾಗಲು ಕೆಲವು ದಿನಗಳು ಬೇಕಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಅಪರೂಪದ ಘಟನೆಯನ್ನು ವೃತ್ತಿಪರ ವಿಜ್ಞಾನಿಗಳಷ್ಟೇ ಅಲ್ಲದೆ, ಹವ್ಯಾಸಿ ಖಗೋಳ ವೀಕ್ಷಕರೂ ಸಹ ಕಾತರದಿಂದ ಎದುರು ನೋಡುತ್ತಿದ್ದರು. ಡಿಕ್ಕಿಯ ಪರಿಣಾಮವಾಗಿ ಚಂದ್ರನ ಮೇಲ್ಮೈಯಿಂದ ಸೂರ್ಯನ ಬೆಳಕಿನಲ್ಲಿ ಹೊಳೆಯುವ ಧೂಳು, ಕಲ್ಲಿನ ಚೂರುಗಳು ಹಾಗೂ ಅವಶೇಷಗಳ ಮೋಡ (Ejecta Plume) ಉಂಟಾಗುವ ನಿರೀಕ್ಷೆ ಇತ್ತು. ಶಬ್ದಕ್ಕಿಂತ ಸುಮಾರು ಏಳು ಪಟ್ಟು ಹೆಚ್ಚಿನ ವೇಗದಲ್ಲಿ ರಾಕೆಟ್ನ ತುಂಡು ಚಂದ್ರನ ಮೇಲ್ಮೈಗೆ ಅಪ್ಪಳಿಸಿದ್ದರಿಂದ 100 ಅಗಲ,16 ಅಡಿ ಆಳದ ಕುಳಿ ನಿರ್ಮಾಣವಾಗಿರುವ ಸಾಧ್ಯತೆಯಿದೆ. ಸುಮಾರು ಮೂರು ಟನ್ ಟಿಎನ್ಟಿ (TNT) ಸ್ಫೋಟಕಕ್ಕೆ ಸಮಾನವಾದ ಶಕ್ತಿ ಬಿಡುಗಡೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಈ ಡಿಕ್ಕಿಯಿಂದ ಉಂಟಾದ ಕುಳಿ (ಕ್ರೇಟರ್) ತುಂಬಾ ಚಿಕ್ಕದಾಗಿರುವುದರಿಂದ ಅದನ್ನು ಭೂಮಿಯಿಂದ ಬರಿಗಣ್ಣಿನಿಂದ ನೋಡುವುದು ಸಾಧ್ಯವಿಲ್ಲ.
ಈ ಕುರಿತು ನ್ಯೂ ಮೆಕ್ಸಿಕೋದ ಲಾಸ್ ಅಲಾಮೋಸ್ ನ್ಯಾಷನಲ್ ಲ್ಯಾಬೊರೇಟರಿಯ ವಿಜ್ಞಾನಿ ಹಾಗೂ ಈ ಕುರಿತು ಪ್ರಕಟವಾದ ಸಂಶೋಧನಾ ಲೇಖನದ ಪ್ರಮುಖ ಲೇಖಕ ಬೆಂಜಮಿನ್ ಫರ್ನಾಂಡೋ ಮಾತನಾಡಿ, “ಟೆಲಿಸ್ಕೋಪ್ಗಳ ಮೂಲಕ ಡಿಕ್ಕಿಯಿಂದ ಹೊರಚಿಮ್ಮುವ ಧೂಳು ಮತ್ತು ಕಲ್ಲಿನ ಅವಶೇಷಗಳ ಮೋಡವನ್ನು ವೀಕ್ಷಿಸಲು ಸಾಧ್ಯವಾಗಬಹುದು. ಆದರೆ ಅದು ಎಷ್ಟು ಪ್ರಕಾಶಮಾನವಾಗಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದೇ ಕಾರಣಕ್ಕೆ ಈ ಘಟನೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ನಾವು ಉತ್ಸುಕರಾಗಿದ್ದೇವೆ” ಎಂದು ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸಂಶೋಧಕರ ಲೆಕ್ಕಾಚಾರದ ಪ್ರಕಾರ, ರಾಕೆಟ್ನಲ್ಲಿದ್ದ ಎಲ್ಲಾ ಇಂಧನ ಸಂಪೂರ್ಣವಾಗಿ ಖಾಲಿಯಾಗಿರುವುದಾಗಿ ಪರಿಗಣಿಸಿದರೆ, ಅದರ ತೂಕ ಸುಮಾರು 8,800 ಪೌಂಡ್ (4,000 ಕಿಲೋಗ್ರಾಂ) ಆಗಿತ್ತು.
ಈ ರಾಕೆಟ್ನ ಮೇಲಿನ ಹಂತವು ಚಂದ್ರನ ಉತ್ತರಾರ್ಧಗೋಳದಲ್ಲಿರುವ ಐನ್ಸ್ಟೈನ್ ಕ್ರೇಟರ್ (Einstein Crater) ಸಮೀಪ ಅಪ್ಪಳಿಸಿದೆ ಎಂದು ಅಂದಾಜಿಸಲಾಗಿದೆ.
“ಭೂಮಿಗೆ ಯಾವುದೇ ಅಪಾಯವಿಲ್ಲ”
ಈ ಕುರಿತು ಪ್ರತಿಕ್ರಿಯಿಸಿದ ನಾಸಾ ವಕ್ತಾರ ಜಿಮಿ ರಸ್ಸೆಲ್, “ಈ ಡಿಕ್ಕಿಯಿಂದ ಭೂಮಿಗೆ ಯಾವುದೇ ರೀತಿಯ ಅಪಾಯವಿಲ್ಲ. ನಾಸಾ ಈ ರಾಕೆಟ್ ಹಂತದ ಪಥವನ್ನು ತರಬೇತಿ ಉದ್ದೇಶಗಳಿಗಾಗಿ ನಿರಂತರವಾಗಿ ಗಮನಿಸುತ್ತಿದ್ದು, ಡಿಕ್ಕಿಯ ನಂತರ ವೈಜ್ಞಾನಿಕ ಅಧ್ಯಯನಕ್ಕಾಗಿ ಅದರ ಸ್ಥಳವನ್ನು ಪರಿಶೀಲಿಸಲಿದೆ” ಎಂದು ತಿಳಿಸಿದ್ದಾರೆ.
ಈ ಫಾಲ್ಕನ್–9 ರಾಕೆಟ್ ಅನ್ನು 2025ರ ಜನವರಿಯಲ್ಲಿ ಉಡಾವಣೆ ಮಾಡಲಾಗಿತ್ತು. ಇದರ ಮೂಲಕ ಎರಡು ಚಂದ್ರ ಲ್ಯಾಂಡರ್ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಉಡಾವಣೆಯ ಬಳಿಕ ರಾಕೆಟ್ನ ಮೊದಲ ಹಂತ ಯಶಸ್ವಿಯಾಗಿ ಭೂಮಿಗೆ ಮರಳಿದರೆ, ಮೇಲಿನ ಹಂತವು ಲ್ಯಾಂಡರ್ಗಳನ್ನು ಚಂದ್ರನತ್ತ ಮುಂದೂಡಿದ ನಂತರ ಬಾಹ್ಯಾಕಾಶದಲ್ಲೇ ಉಳಿದುಕೊಂಡಿತ್ತು.
ಈ ಕುರಿತು ಸ್ಪೇಸ್ಎಕ್ಸ್ನ ನಾಸಾ ಸೈನ್ಸ್ ಮತ್ತು ಡ್ರ್ಯಾಗನ್ ಕಾರ್ಯಕ್ರಮಗಳ ನಿರ್ದೇಶಕಿ ಜೂಲಿಯಾನಾ ಶೈಮನ್ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಇಂತಹ ಹೆಚ್ಚಿನ ಶಕ್ತಿಯ (High-Energy) ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ನಿಯಮಾನುಸಾರ ಎರಡನೇ ಹಂತವನ್ನು ಸುರಕ್ಷಿತ ಕಕ್ಷೆಗೆ ಕಳುಹಿಸುವ ಕ್ರಮವನ್ನು ನಾವು ಅನುಸರಿಸುತ್ತೇವೆ. ಈ ಸಂದರ್ಭದಲ್ಲೂ ಅದನ್ನು ಮಾಡಿದ್ದೇವೆ. ಆದರೆ ನಂತರ ಸೌರ ಚಟುವಟಿಕೆಗಳು ಮತ್ತು ಗುರುತ್ವಾಕರ್ಷಣ ಬಲಗಳ ಸಂಯುಕ್ತ ಪರಿಣಾಮದಿಂದ ಅದು ನಿಧಾನವಾಗಿ ಚಂದ್ರನತ್ತ ತಿರುಗಿತು” ಎಂದು ವಿವರಿಸಿದರು.
ಅವರು ಸಹ, “ಈ ಡಿಕ್ಕಿಯ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಲು ನಾನೂ ಸಹ ಅತ್ಯಂತ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.
ವೈಜ್ಞಾನಿಕ ಅಧ್ಯಯನಕ್ಕೆ ಅಪೂರ್ವ ಅವಕಾಶ
ಸಂಶೋಧಕರು ವೃತ್ತಿಪರ ಹಾಗೂ ಹವ್ಯಾಸಿ ಖಗೋಳ ವೀಕ್ಷಕರಿಗೆ ಈ ಡಿಕ್ಕಿಯನ್ನು ದಾಖಲಿಸಲು ಹಾಗೂ ಅಧ್ಯಯನ ಮಾಡಲು ಕರೆ ನೀಡಿದ್ದಾರೆ.
ಸಂಶೋಧನಾ ತಂಡದ ಪ್ರಕಾರ, ಈ ಘಟನೆ ಹಲವು ಮಹತ್ವದ ವೈಜ್ಞಾನಿಕ ಅಧ್ಯಯನಗಳಿಗೆ ನೆರವಾಗಲಿದೆ. ಅವುಗಳಲ್ಲಿ:
ಚಂದ್ರನ ಮೇಲ್ಮೈಯಲ್ಲಿ ಸಂಭವಿಸುವ ಡಿಕ್ಕಿಗಳ ನಿಖರ ಸ್ಥಳವನ್ನು ಗುರುತಿಸುವ ತಂತ್ರಜ್ಞಾನವನ್ನು ಪರೀಕ್ಷಿಸುವುದು.
ಭವಿಷ್ಯದ ಚಂದ್ರ ಭೂಕಂಪ (Lunar Seismic) ಅಧ್ಯಯನಗಳಿಗೆ ಅಗತ್ಯವಾದ ವಿಧಾನಗಳನ್ನು ಅಭಿವೃದ್ಧಿಪಡಿಸುವುದು.
ಡಿಕ್ಕಿಯಿಂದ ಉಂಟಾಗುವ ಧೂಳು ಹಾಗೂ ಅವಶೇಷಗಳ ಚಲನವಲನವನ್ನು ಅಧ್ಯಯನ ಮಾಡುವುದು.
ಕೃತಕ ಬಾಹ್ಯಾಕಾಶ ಕಸದ ವಸ್ತುಗಳು ಚಂದ್ರನಿಗೆ ಉಂಟುಮಾಡುವ ಅಪಾಯವನ್ನು ಮೌಲ್ಯಮಾಪನ ಮಾಡುವುದು ಸೇರಿದೆ.
ಚಂದ್ರನಲ್ಲಿ ಮಾನವನ ವಾಸದ ಯೋಜನೆಗೆ ಮಹತ್ವದ ಅಧ್ಯಯನ
ನಾಸಾ ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಶಾಶ್ವತವಾಗಿ ಮಾನವ ವಾಸ್ತವ್ಯ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಹೊಂದಿರುವುದರಿಂದ, ಚಂದ್ರನ ಕಕ್ಷೆಯಲ್ಲಿನ ಬಾಹ್ಯಾಕಾಶ ತ್ಯಾಜ್ಯ ಹಾಗೂ ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ಯಾಕೆಂದರೆ ಉಲ್ಕೆಗಳು ಹಾಗೂ ಇತರ ಬಾಹ್ಯಾಕಾಶ ಕಲ್ಲುಗಳು ಆಗಾಗ್ಗೆ ಚಂದ್ರನಿಗೆ ನೈಸರ್ಗಿಕವಾಗಿ ಅಪ್ಪಳಿಸುತ್ತಲೇ ಇರುತ್ತವೆ. ಆದರೆ ಮಾನವ ನಿರ್ಮಿತ ವಸ್ತುಗಳು ಚಂದ್ರನಿಗೆ ಡಿಕ್ಕಿ ಹೊಡೆಯುವ ಘಟನೆಗಳು ಅಪರೂಪವಾಗಿವೆ.
1970ರ ದಶಕದಲ್ಲೇ ನಾಸಾ, ಅಪೊಲೊ ಕಾರ್ಯಕ್ರಮದ ವೇಳೆ, ಉದ್ದೇಶಪೂರ್ವಕವಾಗಿ ಕೆಲವು ರಾಕೆಟ್ ಭಾಗಗಳನ್ನು ಚಂದ್ರನಿಗೆ ಅಪ್ಪಳಿಸುವಂತೆ ಮಾಡಿ ಭೂಕಂಪೀಯ (Seismic) ಮಾಹಿತಿ ಸಂಗ್ರಹಿಸಿತ್ತು.
ಹೆಚ್ಚುತ್ತಿರುವ ಬಾಹ್ಯಾಕಾಶ ತ್ಯಾಜ್ಯದ ಆತಂಕ
ಚಂದ್ರನಿಗೆ ಅಪ್ಪಳಿಸಿದ ಈ ರಾಕೆಟ್ ಹಂತವೂ ಭೂಮಿಯ ಸುತ್ತ ಪರಿಭ್ರಮಿಸುತ್ತಿದ್ದ ಅನೇಕ ‘ಬಾಹ್ಯಾಕಾಶ ತ್ಯಾಜ್ಯ’ದ (Space Junk) ತುಣುಕುಗಳಲ್ಲಿ ಒಂದಾಗಿತ್ತು. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ಕಳೆದ ಜುಲೈ ಅಂತ್ಯದ ವೇಳೆಗೆ ನೀಡಿದ ಮಾಹಿತಿಯ ಪ್ರಕಾರ, ಭೂಮಿಯ ಕಕ್ಷೆಯಲ್ಲಿ ಒಟ್ಟು 17,000 ಟನ್ ತೂಕದ 46,000ಕ್ಕೂ ಹೆಚ್ಚು ಬಾಹ್ಯಾಕಾಶ ತ್ಯಾಜ್ಯದ ವಸ್ತುಗಳು ಸುತ್ತುತ್ತಿವೆ.
ಈ ಹಿನ್ನೆಲೆಯಲ್ಲಿ, ಬಾಹ್ಯಾಕಾಶದಲ್ಲಿ ತ್ಯಾಜ್ಯದ ಪ್ರಮಾಣ ನಿರಂತರವಾಗಿ ಹೆಚ್ಚಾದರೆ “ಕೆಸ್ಲರ್ ಸಿಂಡ್ರೋಮ್ (Kessler Syndrome)” ಎಂಬ ಅಪಾಯಕಾರಿ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಸ್ಥಿತಿಯಲ್ಲಿ ಒಂದು ಡಿಕ್ಕಿಯಿಂದ ಉಂಟಾಗುವ ಅವಶೇಷಗಳು ಮತ್ತಷ್ಟು ಡಿಕ್ಕಿಗಳಿಗೆ ಕಾರಣವಾಗಿ ಸರಣಿ ಪ್ರತಿಕ್ರಿಯೆ (Chain Reaction) ಉಂಟಾಗಬಹುದು. ಪರಿಣಾಮವಾಗಿ ಭೂಮಿಯ ಕಕ್ಷೆಯಾದ್ಯಂತ ಅಪಾರ ಪ್ರಮಾಣದ ಶಿಲಾಖಂಡಗಳು ಮತ್ತು ಕಸದ ವಸ್ತುಗಳು ಹರಡಿ, ಭವಿಷ್ಯದ ಉಪಗ್ರಹ ಉಡಾವಣೆಗಳು, ಬಾಹ್ಯಾಕಾಶ ಸಂಶೋಧನೆ ಹಾಗೂ ಮಾನವ ಬಾಹ್ಯಾಕಾಶ ಯಾನಗಳಿಗೆ ಗಂಭೀರ ಸವಾಲು ಎದುರಾಗುವ ಸಾಧ್ಯತೆ ಇದೆ.


ನಿಮ್ಮ ಕಾಮೆಂಟ್ ಬರೆಯಿರಿ