ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದ ಉಂಟಾದ ದುರಂತದ ನಡುವೆ ಆಶಾಕಿರಣವಾಗಿ ಮೂಡಿಬಂದ ಘಟನೆಯಲ್ಲಿ, ಮೂರು ದಿನಗಳ ಕಾಲ ಮಣ್ಣು ಮತ್ತು ಅವಶೇಷಗಳಡಿ ಸಿಲುಕಿದ್ದರೂ ಐದು ವರ್ಷದ ಬಾಲಕಿ ಜೀವಂತವಾಗಿ ಪತ್ತೆಯಾಗಿದ್ದಾಳೆ. ಶುಕ್ರವಾರ ರಸುವಾ ಜಿಲ್ಲೆಯ ಸ್ಯಾಬ್ರುಬೆಸಿ ಸಮೀಪದಲ್ಲಿ ರಕ್ಷಣಾ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದು, ಬಳಿಕ ಕಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆ ಆರೋಗ್ಯ ಸ್ಥಿರವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ.
ಇದನ್ನು ಭೀಕರ ಪ್ರವಾಹದಿಂದ ಉಂಟಾದ ವಿನಾಶದ ನಡುವೆ ನಡೆದ ಕಂಡುಬಂದ ಅಪರೂಪದ ಸಂತಸದ ಕ್ಷಣವೆಂದು ಪರಿಗಣಿಸಲಾಗಿದೆ.
ಸ್ಯಾಬ್ರುಬೆಸಿ ಪ್ರದೇಶದಲ್ಲಿ ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ರಕ್ಷಣಾ ತಂಡಕ್ಕೆ ಅವಶೇಷಗಳಡಿ ಸಿಲುಕಿದ್ದ ಬೆಕ್ಕು ಕೂಗಿದ ಶಬ್ದ ಕೇಳಿದಂತೆ ಅನುಮಾನ ಮೂಡಿತ್ತು. ಇದರಿಂದಾಗಿ ಸಿಬ್ಬಂದಿ ಆ ಭಾಗದಲ್ಲಿ ತೀವ್ರ ಶೋಧ ಆರಂಭಿಸಿದರು.
ನೇಪಾಳದ ಸಶಸ್ತ್ರ ಪೊಲೀಸ್ ಪಡೆಯ ಅಧಿಕಾರಿ ಸಂಜು ಖತ್ರಿ ಅವರ ಪ್ರಕಾರ, ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಲು ಆರಂಭಿಸಿದಾಗ ಮಣ್ಣು ಮತ್ತು ಕಲ್ಲುಗಳಡಿ ಸಿಲುಕಿದ್ದ ಬಾಲಕಿ ಮನೀಷಾ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಸುರಕ್ಷಿತವಾಗಿ ಹೊರತೆಗೆಯಲು ಸುಮಾರು ಎರಡು ಗಂಟೆಗಳ ಕಾಲ ಶ್ರಮಿಸಬೇಕಾಯಿತು. ವಿಡಿಯೊದಲ್ಲಿ ಬಾಲಕಿಯನ್ನು ಜೀವಂತವಾಗಿ ಅವಶೇಷಗಳಡಿಯಿಂದ ಹೊರತೆಗೆದ ಕ್ಷಣಗಳು ದಾಖಲಾಗಿವೆ. ಬಾಲಕಿ ಜೀವಂತವಾಗಿದ್ದರೂ ರಕ್ಷಣಾ ಸಿಬ್ಬಂದಿ ಆಕೆಯನ್ನು ಪತ್ತೆಹಚ್ಚಿದಾಗ ಬಹುತೇಕ ಪ್ರತಿಕ್ರಿಯೆ ನೀಡದ ಸ್ಥಿತಿಯಲ್ಲಿದ್ದಳು ಎಂದು ಬಿಬಿಸಿ ವರದಿ ತಿಳಿಸಿದೆ.
ಕೆಟ್ಟ ಹವಾಮಾನದಿಂದ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಕ್ಕೆ ಅಡಚಣೆ
ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ರಕ್ಷಣಾ ತಂಡ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಹಾರಾಟ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಮನೀಷಾಳನ್ನು ಸಶಸ್ತ್ರ ಪೊಲೀಸ್ ಪಡೆಯ ರಕ್ಷಣಾ ಶಿಬಿರಕ್ಕೆ ಕರೆದೊಯ್ಯಲಾಯಿತು.
ಅಲ್ಲಿ ಆಕೆಗೆ ಮೊದಲು ನೀರು ಕುಡಿಸಲಾಯಿತು. ಸ್ವಲ್ಪ ಸಮಯದ ಬಳಿಕ ಆಕೆ ಪ್ರಜ್ಞೆಗೆ ಮರಳಿದಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ದೇಹಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಕುದಿಸಿದ ಅಕ್ಕಿ ನೀರನ್ನು ನೀಡಲಾಯಿತು. ಮೂರು ದಿನಗಳ ಕಾಲ ಅವಶೇಷಗಳಡಿ ಸಿಲುಕಿದ್ದ ಪರಿಣಾಮ ಮನೀಷಾ ತೀವ್ರ ಆಘಾತಕ್ಕೊಳಗಾಗಿದ್ದಳು. ಆದರೂ ರಕ್ಷಣಾ ಸಿಬ್ಬಂದಿ ನಿರಂತರ ಆರೈಕೆ ನೀಡುತ್ತಾ ಆಕೆಯ ಆರೋಗ್ಯವನ್ನು ಕಾಪಾಡಿದರು.
ಶನಿವಾರ ಮಧ್ಯಾಹ್ನ ಮನೀಷಾಳನ್ನು ವಿಮಾನದ ಮೂಲಕ ಕಠ್ಮಂಡುವಿನ ಟೀಚಿಂಗ್ ಆಸ್ಪತ್ರೆಯ ಮಕ್ಕಳ ತುರ್ತು ಚಿಕಿತ್ಸಾ ವಿಭಾಗಕ್ಕೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯ ಅಧಿಕಾರಿಗಳು ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದು, ಭಾನುವಾರ ನೀಡಿದ ಆರೋಗ್ಯ ಮಾಹಿತಿಯಲ್ಲಿ ಬಾಲಕಿ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರವಾಹ ದುರಂತ: ಮೃತರ ಸಂಖ್ಯೆ 788ಕ್ಕೆ ಏರಿಕೆ
ಮನೀಷಾಳ ರಕ್ಷಣೆಯ ಸಂತಸದ ಸುದ್ದಿಯ ನಡುವೆಯೇ ನೇಪಾಳವು ಇನ್ನೂ ಭೀಕರ ಪ್ರವಾಹದ ಪರಿಣಾಮಗಳನ್ನು ಎದುರಿಸುತ್ತಿದೆ.
ಭಾನುವಾರ ನೇಪಾಳ ಸರ್ಕಾರವು, ದುರಂತದಲ್ಲಿ ಪತ್ತೆಯಾದ ನೂರಾರು ಮೃತದೇಹಗಳನ್ನು ತಾತ್ಕಾಲಿಕವಾಗಿ ಸಮಾಧಿ ಮಾಡಲು ಆರಂಭಿಸಿರುವುದಾಗಿ ತಿಳಿಸಿದೆ. ಮೃತರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ, ಬಳಿಕ ಕುಟುಂಬದವರು ಗುರುತಿಸಲು ಸಾಧ್ಯವಾಗುವಂತೆ ಪ್ರತಿಯೊಂದು ಮೃತದೇಹಕ್ಕೂ ಗುರುತು ಹಾಕಲಾಗಿದೆ.
ಹಿಂದೂ ಬಹುಸಂಖ್ಯಾತರಿರುವ ನೇಪಾಳದಲ್ಲಿ ಸಾಮಾನ್ಯವಾಗಿ ಮೃತದೇಹಗಳನ್ನು ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಆದ್ದರಿಂದ ಈ ತಾತ್ಕಾಲಿಕ ಸಮಾಧಿಗಳನ್ನು ಶಾಶ್ವತ ಅಂತ್ಯಸಂಸ್ಕಾರವೆಂದು ಪರಿಗಣಿಸದೆ, ಸಂಬಂಧಿಕರು ಮೃತದೇಹಗಳನ್ನು ಪಡೆದು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವವರೆಗೆ ದೀರ್ಘಕಾಲದ ಸಂಗ್ರಹ ವ್ಯವಸ್ಥೆಯಾಗಿ ಬಳಸಲಾಗುತ್ತಿದೆ.
ನೇಪಾಳದ ವಿದೇಶಾಂಗ ಕಾರ್ಯದರ್ಶಿ ಅಮೃತ ಬಹಾದ್ದೂರ್ ರಾಯ್ ಅವರು, ತಾತ್ಕಾಲಿಕವಾಗಿ ಸಮಾಧಿ ಮಾಡಲಾದ ಪ್ರತಿಯೊಬ್ಬರ ಮಾಹಿತಿಯನ್ನೂ ಅಧಿಕಾರಿಗಳು ಸೂಕ್ಷ್ಮವಾಗಿ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ, ಮೃತದೇಹಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲು ನೇಪಾಳಕ್ಕೆ “ಸಾವಿರಕ್ಕೂ ಹೆಚ್ಚು” ಫ್ರೀಜರ್ ಘಟಕಗಳ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಹಾಯವನ್ನು ಕೋರಿದ್ದಾರೆ.
ಇದೇ ವೇಳೆ, ನೇಪಾಳದ ವಿಪತ್ತು ನಿರ್ವಹಣಾ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರವಾಹ ದುರಂತದಲ್ಲಿ ಇದುವರೆಗೆ ಪತ್ತೆಯಾದ ಮೃತದೇಹಗಳ ಸಂಖ್ಯೆ 788ಕ್ಕೆ ಏರಿಕೆಯಾಗಿದೆ. ಇನ್ನೂ 2,502 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ನಾಪತ್ತೆಯಾದವರ ಪಟ್ಟಿಯಲ್ಲಿ 589 ವಿದೇಶಿ ಪ್ರಜೆಗಳೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ