ದುಬೈ/ಟೆಲ್ ಅವೀವ್: “ ನನ್ನನ್ನು ಬದುಕಿಸಿ… ನಾನು ಬದುಕಬೇಕು… ಇಲ್ಲಿ ಸಾಯಲು ಬಯಸುವುದಿಲ್ಲ…”
ಫ್ಲೈದುಬೈ ವಿಮಾನದ ಕಾಕ್ಪಿಟ್ನಲ್ಲಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಇಸ್ರೇಲ್ನ ದಂತವೈದ್ಯ ಡಾ. ಶೋಟಾ ಮುಸಾಯೆವ್ ಅವರಿಗೆ ಹೇಳಿದ ಮಾತುಗಳಿವು. ಫ್ಲೈದುಬೈ ವಿಮಾನ ಎಫ್ಝಡ್1073ರಲ್ಲಿ ನಡೆದ ಭೀಕರ ದಾಳಿಯ ನಂತರದ ಆ 45 ನಿಮಿಷಗಳ ಜೀವ ಉಳಿಸುವ ಹೋರಾಟದ ಘಟನೆಯನ್ನು ಡಾ. ಶೋಟಾ ಮುಸಾಯೆವ್ ಅವರು ‘ದಿ ನ್ಯಾಷನಲ್’ ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.
ಕೇವಲ ಒಬ್ಬ ಪೈಲಟ್ನ ಜೀವ ಉಳಿಸುವ ಹೋರಾಟವಾಗಿರಲಿಲ್ಲ; ಅದು ಬದುಕಬೇಕೆಂಬ ಮಾನವೀಯ ಇಚ್ಛಾಶಕ್ತಿಯ, ಅಪರಿಚಿತರ ನೆರವಿನ ಮತ್ತು ಸಾವಿನ ದವಡೆಯಿಂದ ಜೀವವನ್ನು ಎಳೆದು ತರುವ ಸಮೂಹ ಪ್ರಯತ್ನದ ಕಥೆಯಾಗಿತ್ತು.
ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ 174 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಎಲ್ಲವೂ ಸಾಮಾನ್ಯವಾಗಿಯೇ ಸಾಗುತ್ತಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ವಿಮಾನದೊಳಗೆ ಯಾರೂ ಊಹಿಸದ ದುರಂತದ ವಾತಾವರಣ ನಿರ್ಮಾಣವಾಯಿತು.
ಸಹ ಪೈಲಟ್ ಆಗಿದ್ದ ಒಮಾನ್ ಪ್ರಜೆ ಹಮಾಮ್ ಅಲ್-ಹಮ್ಮಾಮಿ ಕಾಕ್ಪಿಟ್ನಲ್ಲೇ ಕ್ರ್ಯಾಶ್ ಕೊಡಲಿಯಿಂದ ಪೈಲಟ್ ಸ್ಮಿತ್ ಮಚ್ಚಾರ್ ಅವರ ಮೇಲೆ ಹಲ್ಲೆ ನಡೆಸಿ ವಿಮಾನದ ನಿಯಂತ್ರಣ ವಶಪಡಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯನ್ನು ಯುಎಇ ಅಧಿಕಾರಿಗಳು “ಭಯೋತ್ಪಾದಕ ದಾಳಿಯ ಪ್ರಯತ್ನ” ಎಂದು ಬಣ್ಣಿಸಿದ್ದಾರೆ.
ಆ ಕ್ಷಣದಲ್ಲಿ ಗಾಯಗೊಂಡಿದ್ದ ಪೈಲಟ್ ಸ್ಮಿತ್ ಮಚ್ಚಾರ್, ವಿಮಾನದ ಸಿಬ್ಬಂದಿ, ಎಚ್ಚೆತ್ತ ಪ್ರಯಾಣಿಕರು ಹಾಗೂ ಕರ್ತವ್ಯದಲ್ಲಿರದ ಇಬ್ಬರು ಪೈಲಟ್ಗಳು ತೋರಿದ ಧೈರ್ಯದಿಂದ ಸಂಭವಿಸಬಹುದಾಗಿದ್ದ ಭೀಕರ ವಿಮಾನ ದುರಂತ ತಪ್ಪಿತು ಎಂದು ವರದಿಗಳು ಹೇಳಿವೆ.
ಈ ಘಟನೆಯ ವೇಳೆ 47 ವರ್ಷದ ಇಸ್ರೇಲಿ ದಂತವೈದ್ಯ ಡಾ. ಶೋಟಾ ಮುಸಾಯೆವ್ ತಮ್ಮ ಪತ್ನಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅವರು ಚೀನಾದಿಂದ ಸಂಪರ್ಕ ವಿಮಾನದ ಮೂಲಕ ದುಬೈಗೆ ಬಂದು ಅಲ್ಲಿಂದ ಟೆಲ್ ಅವೀವ್ಗೆ ತೆರಳುತ್ತಿದ್ದರು. ಏಕಾಏಕಿ ವಿಮಾನದೊಳಗೆ ಕಿರುಚಾಟ ಕೇಳಿಬಂತು. ಕೆಲವೇ ಕ್ಷಣಗಳಲ್ಲಿ “ವೈದ್ಯರಿದ್ದರೆ ತಕ್ಷಣ ಸಹಾಯ ಮಾಡಿ” ಎಂಬ ಪ್ರಕಟಣೆ ಮೊಳಗಿತು. ಆ ಪ್ರಕಟಣೆ ಕೇಳುತ್ತಿದ್ದಂತೆಯೇ ಡಾ. ಮುಸಾಯೆವ್ ಕಾಕ್ಪಿಟ್ ಕಡೆಗೆ ಧಾವಿಸಿದರು.
ಅವರು ಕಂಡ ದೃಶ್ಯ ಬೆಚ್ಚಿಬೀಳಿಸುವಂತಿತ್ತು.
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಲೆ ಮತ್ತು ಎಡಗೈಯಿಂದ ಅಪಾರ ಪ್ರಮಾಣದಲ್ಲಿ ರಕ್ತ ಹರಿಯುತ್ತಿತ್ತು. ಸಮಯ ಕೈ ಮೀರುತ್ತಿದೆ ಎಂಬುದು ಅವರಿಗೆ ಅರ್ಥವಾಯಿತು. ಹತ್ತಿರದಲ್ಲಿದ್ದ ಟಿ-ಶರ್ಟ್ಗಳನ್ನು ಬಳಸಿಕೊಂಡು ಗಾಯದ ಮೇಲೆ ಒತ್ತಿಹಿಡಿದರು. ಆದರೆ ರಕ್ತಸ್ರಾವ ಮಾತ್ರ ನಿಲ್ಲುತ್ತಿರಲಿಲ್ಲ.
ಬಳಿಕ ಸಿಬ್ಬಂದಿಗೆ ಐಸ್ ತರಲು ಹೇಳಿದರು. ಗಾಯದ ಮೇಲೆ ಒತ್ತಡ ಹೇರುತ್ತಾ, ಐಸ್ ಇಡುತ್ತಾ ರಕ್ತಸ್ರಾವ ನಿಯಂತ್ರಿಸಲು ಪ್ರಯತ್ನಿಸಿದರು.
“ಗಾಯಗಳು ಅತ್ಯಂತ ಆಳವಾಗಿದ್ದವು. ನಾನು ಗಾಯದ ಮೇಲೆ ಒತ್ತಿ, ಪದೇಪದೇ ಐಸ್ ಇಡುತ್ತಿದ್ದೆ. ಆದರೆ ಪ್ರತೀ ಬಾರಿ ಗಾಯವನ್ನು ಪರಿಶೀಲಿಸಲು ಬಟ್ಟೆ ತೆಗೆದಾಗ ಮತ್ತೆ ರಕ್ತಸ್ರಾವ ಹೆಚ್ಚಾಗುತ್ತಿತ್ತು” ಎಂದು ಅವರು ‘ದಿ ನ್ಯಾಷನಲ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆದರೆ ಅವರ ಮುಂದೆ ಇದ್ದ ಸವಾಲು ಕೇವಲ ರಕ್ತಸ್ರಾವ ನಿಲ್ಲಿಸುವುದಷ್ಟೇ ಆಗಿರಲಿಲ್ಲ. ತೀವ್ರವಾಗಿ ಗಾಯಗೊಂಡಿದ್ದ ಮಚ್ಚಾರ್ ಪ್ರಜ್ಞೆ ತಪ್ಪಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂಬುದು ಅವರಿಗೆ ಗೊತ್ತಿತ್ತು. ಹೀಗಾಗಿ ಅವರು ನಿರಂತರವಾಗಿ ಪೈಲಟ್ ಜೊತೆ ಮಾತನಾಡುತ್ತಿದ್ದರು. ಯಾವುದೇ ಕಾರಣಕ್ಕೂ ಮಚ್ಚಾರ್ ಕಣ್ಣು ಮುಚ್ಚಬಾರದು, ನಿದ್ರೆಗೆ ಜಾರಬಾರದು ಎಂಬುದು ಅವರ ಪ್ರಯತ್ನವಾಗಿತ್ತು. “ದಯವಿಟ್ಟು ಮಲಗಬೇಡಿ… ನಮಗೆ ನೀವು ಬೇಕು…” ಎಂದು ನಾನು ಅವರಿಗೆ ಹೇಳುತ್ತಿದ್ದೆ. ನಿಮ್ಮ ಮಕ್ಕಳ ಹೆಸರೇನು? ಅವರು ಎಷ್ಟು ವರ್ಷದವರು? ಮನೆಯವರು ಯಾರು? ಎಂಬ ಪ್ರಶ್ನೆಗಳನ್ನು ಕೇಳುತ್ತಾ ಅವರನ್ನು ಮಾತನಾಡಿಸುತ್ತಿದ್ದೆ. ನೀವು ಮತ್ತೆ ನಿಮ್ಮ ಕುಟುಂಬವನ್ನು ನೋಡುತ್ತೀರಿ ಎಂದು ಧೈರ್ಯ ತುಂಬುತ್ತಿದ್ದೆ ಎಂದು ಡಾ.ಮುಸಾಯೆವ್ ಹೇಳಿದ್ದಾರೆ.
ಆ ಕ್ಷಣದಲ್ಲಿ ಬದುಕಬೇಕೆಂಬ ತೀವ್ರ ಆಸೆ ಮಚ್ಚಾರ್ ಅವರ ಪ್ರತಿಯೊಂದು ಮಾತಿನಲ್ಲೂ ಕಾಣಿಸುತ್ತಿತ್ತು. “ದಯವಿಟ್ಟು ನನಗೆ ಸಹಾಯ ಮಾಡಿ. ನನ್ನ ದೇವರು ನನ್ನೊಂದಿಗಿದ್ದಾನೆ. ನಾನು ಬದುಕಬೇಕು. ಇಲ್ಲಿ ಸಾಯಲು ಬಯಸುವುದಿಲ್ಲ…” ಎಂದು ಅವರು ಪದೇಪದೇ ಹೇಳುತ್ತಿದ್ದರು ಎಂದು ಮುಸಾಯೆವ್ ತಿಳಿಸಿದ್ದಾರೆ.
ತಲೆಯಲ್ಲಿನ ಅಸಹನೀಯ ನೋವು, ಕೈಗಳಲ್ಲಿ ಉರಿಯುವಂತಹ ವೇದನೆ ಅವರನ್ನು ಕಾಡುತ್ತಿತ್ತು. ಆದರೂ ಅವರು ಹೋರಾಟ ಬಿಡಲಿಲ್ಲ. ಆದರೆ, ಸ್ವಲ್ಪ ಸಮಯದ ಬಳಿಕ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಮಚ್ಚಾರ್ ಅವರ ನಾಡಿ ಮಿಡಿತ ಅಪಾಯಕಾರಿಯಾಗಿ ಕುಸಿಯತೊಡಗಿತು. ಆಗ ಮುಸಾಯೆವ್ ಅವರ ಕಾಲುಗಳನ್ನು ಮೇಲಕ್ಕೆತ್ತಿ ರಕ್ತಸಂಚಾರ ಸುಧಾರಿಸುವ ಪ್ರಯತ್ನ ಮಾಡಿದರು. ಕೆಲ ಕ್ಷಣಗಳ ಆತಂಕದ ಬಳಿಕ ನಾಡಿ ಮಿಡಿತ ಮತ್ತೆ ಸಹಜ ಸ್ಥಿತಿಗೆ ಮರಳಿತು ಎಂದು ದಂತವೈದ್ಯರು ಹೇಳಿದ್ದಾರೆ.
https://x.com/IndembAbuDhabi/status/2107475443045839060?ref_src=twsrc%5Etfw%7Ctwcamp%5Etweetembed%7Ctwterm%5E2107475443045839060%7Ctwgr%5E9b231851fe2e9c12340809c1b145b58a2f56031e%7Ctwcon%5Es1_&ref_url=https%3A%2F%2Fwww.indiatvnews.com%2Fnews%2Fworld%2Fisraeli-dentist-reveals-how-he-saved-smit-machchhar-s-life-aboard-flydubai-flight-don-t-want-to-die-here-2026-10-07-1056270
ಆದರೆ ಅಪಾಯ ಇನ್ನೂ ದೂರವಾಗಿರಲಿಲ್ಲ. ಮತ್ತೊಂದು ಹಂತದಲ್ಲಿ ಮಚ್ಚಾರ್ ಅವರ ತುಟಿಗಳು ನೀಲಿ ಬಣ್ಣಕ್ಕೆ ತಿರುಗತೊಡಗಿದವು. ಇದನ್ನು ಕಂಡ ಮುಸಾಯೆವ್ ಅವರ ಮನಸ್ಸಿನಲ್ಲಿ ಅಪಾಯದ ಮುನ್ಸೂಚನೆಯ ಗಂಟೆ ಬಾರಿತು.
“ನಾವು ಕೂಡಲೇ ವಿಮಾನವನ್ನು ಲ್ಯಾಂಡ್ ಮಾಡಬೇಕು. ಸಮಯ ಮೀರುತ್ತಿದೆ. ಮಚ್ಚಾರ್ ಅವರಿಗೆ ಹೆಚ್ಚು ಸಮಯ ಉಳಿದಿಲ್ಲ…” ಎಂದು ಅವರು ವಿಮಾನ ಸಿಬ್ಬಂದಿಗೆ ತುರ್ತು ಸೂಚನೆ ನೀಡಿದರು.
ಈ ಮಧ್ಯೆ ಕೆಲವರು ನೋವು ನಿವಾರಕ ಔಷಧಿ ನೀಡುವ ಸಲಹೆ ನೀಡಿದರೂ ಮುಸಾಯೆವ್ ಅದನ್ನು ವಿರೋಧಿಸಿದರು. ಅತಿಯಾಗಿ ರಕ್ತ ಕಳೆದುಕೊಂಡಿದ್ದ ಮಚ್ಚಾರ್ ಅವರಿಗೆ ಔಷಧಿ ನೀಡುವುದು ಅಥವಾ ಅನಗತ್ಯವಾಗಿ ಚಲಿಸುವಂತೆ ಮಾಡುವುದು ಅಪಾಯಕಾರಿಯಾಗಬಹುದು ಎಂಬ ಆತಂಕ ಅವರಿಗೆ ಇತ್ತು.
ಅತ್ತ ಕಾಕ್ಪಿಟ್ನಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಇತ್ತು. ಕೆಲವು ಪ್ರಯಾಣಿಕರು ಅಪಾರ ಧೈರ್ಯ ತೋರಿಸಿ ಹೆಡ್ಫೋನ್ ತಂತಿಗಳನ್ನು ಬಳಸಿ ಸಹ ಪೈಲಟ್ನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಕರ್ತವ್ಯದಲ್ಲಿರದ ಇಬ್ಬರು ಪೈಲಟ್ಗಳು ಮತ್ತೊಬ್ಬ ಪ್ರಯಾಣಿಕರ ಜೊತೆ ಕಾಕ್ಪಿಟ್ ಪ್ರವೇಶಿಸಿ ವಿಮಾನದ ನಿಯಂತ್ರಣ ಸ್ಥಿರಗೊಳಿಸಲು ನೆರವಾದರು. ವಿಮಾನದಲ್ಲಿ ಇನ್ನೂ ಯಾರಾದರೂ ದಾಳಿಕೋರರು ಇರಬಹುದೇ ಎಂಬ ಆತಂಕದಿಂದ ಉಳಿದ ಪ್ರಯಾಣಿಕರು ಎಚ್ಚರಿಕೆಯಿಂದಲೇ ಇದ್ದರು.
ಕೊನೆಗೆ ಎಲ್ಲರ ಹೋರಾಟ ಫಲಿಸಿತು. ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಅಲ್ಲಿದ್ದ ವೈದ್ಯಕೀಯ ತಂಡಗಳು ಮಚ್ಚಾರ್ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಕರೆದೊಯ್ದವು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಯುಎಇಗೆ ಸ್ಥಳಾಂತರಿಸಲಾಯಿತು.
ಈ ನಡುವೆ ಮಚ್ಚಾರ್ ಅವರ ಗಾಯಗಳ ತೀವ್ರತೆಯ ಬಗ್ಗೆ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ಮಚ್ಚಾರ್ ಅವರಿಗೆ ತಲೆಬುರುಡೆ ಮುರಿತವಾಗಿದ್ದು, ತಲೆ ಮತ್ತು ಕೈಗೆ ಗಂಭೀರ ಗಾಯಗಳಾಗಿವೆ. ಅವರ ದೃಷ್ಟಿಗೂ ಹಾನಿಯಾಗಿದ್ದು, ಈಗಲೂ ಮಸುಕಾಗಿ ಕಾಣುತ್ತಿದೆ ಎಂದು ವರದಿಗಳು ತಿಳಿಸಿವೆ.
ಅಷ್ಟೇ ಅಲ್ಲ, ಘಟನೆಯ ಹಲವಷ್ಟನ್ನು ನೆನಪಿಸಿಕೊಳ್ಳುವುದಕ್ಕೂ ಅವರು ಕಷ್ಟಪಡುತ್ತಿದ್ದಾರೆ. “ಕೆಲವು ನೆನಪುಗಳು ತುಣುಕು-ತುಣುಕಾಗಿ ಮಾತ್ರ ನೆನಪಾಗುತ್ತಿವೆ” ಎಂದು ಅವರು ಹೇಳಿರುವುದಾಗಿ ವರದಿಗಳು ಉಲ್ಲೇಖಿಸಿವೆ.
ತಬುಕ್ನಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಅವರನ್ನು ಯುಎಇಯಲ್ಲಿನ ವಿಶೇಷ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅಲ್ಲಿ ವೈದ್ಯರು ಅವರ ದೃಷ್ಟಿ ಹಾಗೂ ನರಮಂಡಲದ ಆರೋಗ್ಯವನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಇಷ್ಟೆಲ್ಲ ಸಂಕಷ್ಟ ಅನುಭವಿಸಿದ ಬಳಿಕವೂ ಮತ್ತೆ ಕಾಕ್ಪಿಟ್ಗೆ ಮರಳಿ ವಿಮಾನ ಹಾರಿಸುವ ಆಸೆಯನ್ನು ಮಚ್ಚಾರ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಡಾ. ಮುಸಾಯೆವ್ ಅವರ ಮನಸ್ಸಿನ ಮೇಲೂ ತೀವ್ರವಾದ ಪರಿಣಾಮ ಬೀರಿದೆ. ಘಟನೆಯ ನಂತರ ತಮಗೆ ಮತ್ತು ತಮ್ಮ ಪತ್ನಿಗೆ ಹಲವು ದಿನ ನಿದ್ರೆ ಬರಲಿಲ್ಲ. ಆ ಭಯಾನಕ ಕ್ಷಣಗಳು ಮತ್ತೆ ಮತ್ತೆ ನೆನಪಾಗುತ್ತಿದ್ದವು. ಕೆಲವೇ ದಿನಗಳಲ್ಲಿ ತಮ್ಮ ತೂಕವೂ ಕಡಿಮೆಯಾಯಿತು ಎಂದು ಅವರು ಹೇಳಿದ್ದಾರೆ.
ಆದರೆ ಈ ಎಲ್ಲ ಪ್ರಶಂಸೆಗಳನ್ನು ತಮ್ಮದಾಗಿಸಿಕೊಳ್ಳಲು ಅವರು ಸಿದ್ಧರಿಲ್ಲ. “ಸ್ಮಿತ್ ನಮ್ಮೆಲ್ಲರ ಜೀವ ಉಳಿಸಿದರು. ನಿಜವಾದ ಹೀರೋ ಸ್ಮಿತ್ ಮಚ್ಚಾರ್ ಅವರೇ. ಅವರು ನಮ್ಮೆಲ್ಲರ ಜೀವ ಉಳಿಸಿದರು, ನಾವೆಲ್ಲ ಸೇರಿ ಅವರ ಜೀವ ಉಳಿಸಿದ್ದೇವೆ” ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
ದುಬೈಯಿಂದ ತಬುಕ್ ತಲುಪುವ ನಡುವಿನ ಆ ಉದ್ವಿಗ್ನ 45 ನಿಮಿಷಗಳಲ್ಲಿ ಒಂದು ಕಡೆ ಗಾಯಗೊಂಡ ಪೈಲಟ್ ಬದುಕಿಗಾಗಿ ಹೋರಾಡುತ್ತಿದ್ದರೆ, ಮತ್ತೊಂದು ಕಡೆ ಪ್ರಯಾಣಿಕರು ವಿಮಾನದ ನಿಯಂತ್ರಣ ಮರಳಿ ಪಡೆಯಲು ಪ್ರಾಣ ಪಣ ಇಟ್ಟಿದ್ದರು. ಆ ಕ್ಷಣದಲ್ಲಿ ಯಾವುದೇ ನಿರೀಕ್ಷೆಯಿಲ್ಲದೆ ನೆರವಿಗೆ ಧಾವಿಸಿದ ಒಬ್ಬ ದಂತವೈದ್ಯ ತನ್ನ ಕೈಯಲ್ಲಿದ್ದ ಸೀಮಿತ ಸಂಪನ್ಮೂಲಗಳು, ತನ್ನ ವೈದ್ಯಕೀಯ ಜ್ಞಾನ ಮತ್ತು ಮಾನವೀಯತೆಯ ನೆರವಿನಿಂದ ಒಬ್ಬ ಅಪರಿಚಿತನ ಜೀವ ಉಳಿಸಲು ಶ್ರಮಿಸಿದ್ದ.
ಆ 45 ನಿಮಿಷಗಳ ಕಥೆ ಇಂದು ಕೇವಲ ವಿಮಾನದಲ್ಲಿನ ಘಟನೆಯಾಗಿ ಉಳಿದಿಲ್ಲ. ಸಂಕಷ್ಟದ ಸಮಯದಲ್ಲಿ ಮಾನವೀಯತೆ, ಧೈರ್ಯ ಮತ್ತು ಬದುಕಿನ ಮೇಲಿನ ಭರವಸೆ ಹೇಗೆ ಅದ್ಭುತಗಳನ್ನು ಸೃಷ್ಟಿಸಬಲ್ಲವು ಎಂಬುದಕ್ಕೆ ಅದು ಜೀವಂತ ಸಾಕ್ಷಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ