ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ನ.13ರಂದು ಬೆಂಗಳೂರು–ಗೋವಾ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ; ಯಾವೆಲ್ಲ ನಿಲ್ದಾಣಗಳಲ್ಲಿ ನಿಲುಗಡೆ ?

ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದ ರೈಲು ಸಂಪರ್ಕ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು (SWR) ಬೆಂಗಳೂರು ಮತ್ತು ಗೋವಾ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13 ಮತ್ತು 14ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಬೆಂಗಳೂರು–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಉದ್ಘಾಟನಾ ವಿಶೇಷ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಮೊದಲ ಉದ್ಘಾಟನಾ ವಿಶೇಷ ರೈಲು (06512) ಮಧ್ಯಾಹ್ನ 1:30ಕ್ಕೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಗಿನ ಜಾವ 2:55ಕ್ಕೆ ಗೋವಾದ ಮಡಗಾಂವ್ ತಲುಪಲಿದೆ. ಮತ್ತೊಂದು ಉದ್ಘಾಟನಾ ವಿಶೇಷ ರೈಲು (06213) ಮಧ್ಯಾಹ್ನ 1:30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು, ಅದೇ ದಿನ ರಾತ್ರಿ 9 ಗಂಟೆಗೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣ ತಲುಪಲಿದೆ ಎಂದು ತಿಳಿಸಲಾಗಿದೆ. ಬಳಿಕ ನವೆಂಬರ್ 15ರ ಭಾನುವಾರದಿಂದ ರೈಲಿನ ನಿಯಮಿತ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಬೆಂಗಳೂರಿನ ಯಶವಂತಪುರ ಜಂಕ್ಷನ್‌ನಿಂದ ಗೋವಾದ ಮಡಗಾಂವ್ ನಿಲ್ದಾಣದವರೆಗೆ ಈ ರೈಲು ಸಂಚರಿಸಲಿದೆ.
13 ಗಂಟೆ ಪ್ರಯಾಣ: ಕರಾವಳಿಯ ಹಲವು ನಿಲ್ದಾಣಗಳಲ್ಲಿ ನಿಲುಗಡೆ
ಬೆಂಗಳೂರು–ಗೋವಾ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಒಟ್ಟು ಪ್ರಯಾಣದ ಅವಧಿ ಸುಮಾರು 13 ಗಂಟೆಗಳಾಗಿರಲಿದೆ. ರೈಲು ಸಂಖ್ಯೆ 26655 ಯಶವಂತಪುರದಿಂದ ಮಡಗಾಂವ್‌ಗೆ ತೆರಳಲಿದ್ದು, ಸುಮಾರು 13 ಗಂಟೆ 20 ನಿಮಿಷಗಳಲ್ಲಿ ಗಮ್ಯಸ್ಥಾನ ತಲುಪಲಿದೆ. ರೈಲು ಸಂಖ್ಯೆ 26656 ಮಡಗಾಂವ್‌ನಿಂದ ಯಶವಂತಪುರಕ್ಕೆ ಮರಳಲಿದ್ದು, ಈ ಪ್ರಯಾಣಕ್ಕೆ ಸುಮಾರು 12 ಗಂಟೆ 55 ನಿಮಿಷಗಳು ಬೇಕಾಗಲಿವೆ.
ಈ ರೈಲು ಪಶ್ಚಿಮ ಘಟ್ಟದ ಪ್ರಮುಖ ಪ್ರದೇಶಗಳ ಮೂಲಕ ಹಾದುಹೋಗುವುದರ ಜತೆಗೆ ಕರ್ನಾಟಕದ ಕರಾವಳಿ ಭಾಗದ ಹಲವು ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸಲಿದೆ.
ರೈಲಿನ ನಿಲುಗಡೆಗಳು ಮತ್ತು ವೇಳಾಪಟ್ಟಿ ಈ ಕೆಳಗಿನಂತಿದೆ.
ಯಶವಂತಪುರದಿಂದ ಮಡಗಾಂವ್‌ಗೆ (ರೈಲು ಸಂಖ್ಯೆ 26655)
ನಿಲ್ದಾಣ ಆಗಮನ / ನಿರ್ಗಮನ
ಯಶವಂತಪುರ ಜಂಕ್ಷನ್ ಬೆಳಗ್ಗೆ 7:35ಕ್ಕೆ ನಿರ್ಗಮನ
ಶ್ರವಣಬೆಳಗೊಳ ಬೆಳಗ್ಗೆ 9:03 / 9:05
ಹಾಸನ ಬೆಳಗ್ಗೆ 9:38 / 9:40
ಸಕಲೇಶಪುರ ಬೆಳಗ್ಗೆ 10:20 / 10:22
ಸುಬ್ರಹ್ಮಣ್ಯ ರಸ್ತೆ ಮಧ್ಯಾಹ್ನ 12:40 / 12:42
ಕಬಕ ಪುತ್ತೂರು ಮಧ್ಯಾಹ್ನ 1:25 / 1:27
ಮಂಗಳೂರು ಜಂಕ್ಷನ್ ಮಧ್ಯಾಹ್ನ 3:05 / 3:15
ಉಡುಪಿ ಸಂಜೆ 4:20 / 4:22
ಕುಂದಾಪುರ ಸಂಜೆ 4:38 / 4:40
ಮೂಕಾಂಬಿಕಾ ರೋಡ್ ಬೈಂದೂರು ಸಂಜೆ 5:20 / 5:22
ಮುರ್ಡೇಶ್ವರ ಸಂಜೆ 6:00 / 6:02
ಗೋಕರ್ಣ ರಸ್ತೆ ಸಂಜೆ 7:00 / 7:02
ಕಾರವಾರ ಸಂಜೆ 7:45 / 7:47
ಮಡಗಾಂವ್ ರಾತ್ರಿ 8:55ಕ್ಕೆ ಆಗಮನ
ಮಡಗಾಂವ್‌ನಿಂದ ಯಶವಂತಪುರಕ್ಕೆ (ರೈಲು ಸಂಖ್ಯೆ 26656)
ನಿಲ್ದಾಣಕ್ಕೆ ಆಗಮನ / ನಿರ್ಗಮನ
ಮಡಗಾಂವ್ ಬೆಳಗ್ಗೆ 8:20ಕ್ಕೆ ನಿರ್ಗಮನ
ಕಾರವಾರ ಬೆಳಗ್ಗೆ 9:03 / 9:05
ಗೋಕರ್ಣ ರಸ್ತೆ ಬೆಳಗ್ಗೆ 9:48 / 9:50
ಮುರ್ಡೇಶ್ವರ ಬೆಳಗ್ಗೆ 11:00 / 11:02
ಮೂಕಾಂಬಿಕಾ ರೋಡ್ ಬೈಂದೂರು ಬೆಳಗ್ಗೆ 11:20 / 11:22
ಕುಂದಾಪುರ ಬೆಳಗ್ಗೆ 11:48 / 11:50
ಉಡುಪಿ ಮಧ್ಯಾಹ್ನ 12:18 / 12:20
ಮಂಗಳೂರು ಜಂಕ್ಷನ್ ಮಧ್ಯಾಹ್ನ 1:50 / 2:00
ಕಬಕಪುತ್ತೂರು ಮಧ್ಯಾಹ್ನ 2:43 / 2:45
ಸುಬ್ರಹ್ಮಣ್ಯ ರಸ್ತೆ ಮಧ್ಯಾಹ್ನ 3:28 / 3:30
ಸಕಲೇಶಪುರ ಸಂಜೆ 5:30 / 5:32
ಹಾಸನ ಸಂಜೆ 6:13 / 6:15
ಶ್ರವಣಬೆಳಗೊಳ ಸಂಜೆ 6:43 / 6:45
ಯಶವಂತಪುರ ಜಂಕ್ಷನ್ ರಾತ್ರಿ 9:15ಕ್ಕೆ ಆಗಮನ
55 ಕಿ.ಮೀ. ಘಟ್ಟ ಪ್ರದೇಶದ ರೈಲು ಮಾರ್ಗ ವಿದ್ಯುದೀಕರಣ ಪೂರ್ಣ
ಹೊಸ ವಂದೇ ಭಾರತ್ ರೈಲು ಸೇವೆಯ ಆರಂಭದೊಂದಿಗೆ ಬೆಂಗಳೂರಿನಿಂದ ಮಂಗಳೂರಿಗೆ ರೈಲು ಸಂಪರ್ಕ ಮತ್ತಷ್ಟು ಸುಧಾರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಾಗಿ ವಿದ್ಯುದೀಕರಣಗೊಂಡಿರುವ 55 ಕಿ.ಮೀ. ಉದ್ದದ ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ಘಟ್ಟ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಭಾರತದ ಅತ್ಯಂತ ಸವಾಲಿನ ರೈಲು ಮಾರ್ಗಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟದ ಈ ಪ್ರದೇಶದಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಇದರೊಂದಿಗೆ ಬೆಂಗಳೂರು–ಮಂಗಳೂರು ನಡುವಿನ ಸಂಪೂರ್ಣ ರೈಲು ಮಾರ್ಗ ವಿದ್ಯುದೀಕರಣಗೊಂಡಂತಾಗಿದೆ.
ಹೊಸ ವಂದೇ ಭಾರತ್ ರೈಲು ಸೇವೆಯಿಂದ ಕರಾವಳಿ ಭಾಗದ ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಸಾರಿಗೆ ಸಂಪರ್ಕಕ್ಕೂ ಈ ರೈಲು ಸೇವೆ ಉತ್ತೇಜನ ನೀಡುವ ನಿರೀಕ್ಷೆಯಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement