ತೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಜಯ ಸಿಕ್ಕಿದೆ. ಜಗತ್ತಿನ ಅತಿ ದೊಡ್ಡ ತೈಲ ಸಾಗಾಣಿಕಾ ಮಾರ್ಗದಲ್ಲಿ ಒಂದಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಭಾರತದ ಹಡಗುಗಳ ಸಂಚಾರಕ್ಕೆ ಇಡುವುದಾಗಿ ಇರಾನ್ ಪ್ರಕಟಿಸಿದೆ.
ಕಳೆದ ತಿಂಗಳು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಯುದ್ಧ ಸಾರಿದ ನಂತರ, ಇರಾನ್ ಈ ಆಯಕಟ್ಟಿನ ಜಲಮಾರ್ಗದ ಮೇಲೆ ನಿರ್ಬಂಧ ವಿಧಿಸಿತ್ತು. ಇದರಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು.
ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಇರಾಣಿನ ಸರ್ಕಾರಿ ದೂರದರ್ಶನದ ಜೊತೆ ಮಾತನಾಡಿ, ಪಾಶ್ಚಿಮಾತ್ಯ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿದ್ದಾರೆ. “ಹಾರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿಲ್ಲ. ಭಾರತ ಸೇರಿದಂತೆ ನಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿರುವ ಮಿತ್ರ ರಾಷ್ಟ್ರಗಳ ಹಡಗುಗಳ ಸುರಕ್ಷಿತ ಸಂಚಾರಕ್ಕೆ ನಮ್ಮ ಸಶಸ್ತ್ರ ಪಡೆಗಳು ಸಂಪೂರ್ಣ ಸಹಕಾರ ನೀಡುತ್ತಿವೆ,” ಎಂದು ಅವರು ತಿಳಿಸಿದ್ದಾರೆ.
ವರದಿಯ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ಭಾರತದ ಎರಡು ಬೃಹತ್ ಹಡಗುಗಳು ಈ ಮಾರ್ಗದ ಮೂಲಕ ಯಶಸ್ವಿಯಾಗಿ ಸಂಚರಿಸಿವೆ. ಭಾರತದ ಜೊತೆಗೆ ರಷ್ಯಾ, ಚೀನಾ, ಪಾಕಿಸ್ತಾನ ಮತ್ತು ಇರಾಕ್ ದೇಶಗಳಿಗೂ ಇರಾನ್ ಈ ವಿನಾಯಿತಿ ನೀಡಿದೆ.
ಶತ್ರು ರಾಷ್ಟ್ರಗಳಿಗೆ ರೆಡ್ ಅಲರ್ಟ್
ಒಂದೆಡೆ ಮಿತ್ರ ರಾಷ್ಟ್ರಗಳಿಗೆ ಅವಕಾಶ ನೀಡುತ್ತಿರುವ ಇರಾನ್, ತನ್ನ ಶತ್ರುಗಳ ವಿರುದ್ಧ ಕಠಿಣ ನಿಲುವು ತಳೆದಿದೆ. “ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ. ಹೀಗಾಗಿ ಅಮೆರಿಕ, ಇಸ್ರೇಲ್ ಮತ್ತು ಯುದ್ಧದಲ್ಲಿ ಅವರಿಗೆ ಸಾಥ್ ನೀಡುತ್ತಿರುವ ಕೆಲವು ಗಲ್ಫ್ ರಾಷ್ಟ್ರಗಳ ಹಡಗುಗಳಿಗೆ ಈ ಮಾರ್ಗದಲ್ಲಿ ಪ್ರವೇಶವಿಲ್ಲ,” ಎಂದು ಅರಾಗ್ಚಿ ಸ್ಪಷ್ಟಪಡಿಸಿದ್ದಾರೆ.
ಇದೇ ವಾರದ ಆರಂಭದಲ್ಲಿ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಯುಎಇಯ ಶಾರ್ಜಾದಿಂದ ಕರಾಚಿಗೆ ತೆರಳುತ್ತಿದ್ದ ‘ಸೆಲೆನ್’ (SELEN) ಎಂಬ ಪಾಕಿಸ್ತಾನಿ ಕಂಟೈನರ್ ಹಡಗನ್ನು ತಡೆದು ವಾಪಸ್ ಕಳುಹಿಸಿತ್ತು. ಸಂಚಾರಕ್ಕೆ ಅಗತ್ಯವಾದ ಅನುಮತಿ ಇಲ್ಲದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾನ್ ತಿಳಿಸಿದೆ.ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಮೂಲಕ ಇರಾನ್ ಈ ಜಲಸಂಧಿಯ ಮೇಲೆ ಬಿಗಿ ಹಿಡಿತ ಸಾಧಿಸಿದೆ.
ಸ್ತಬ್ದಗೊಂಡ ಜಾಗತಿಕ ವಾಣಿಜ್ಯ: ಶೇ. 95ರಷ್ಟು ಕುಸಿತ
ಯುದ್ಧದ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಅಕ್ಷರಶಃ ಕುಸಿದಿದೆ. ಈ ಹಿಂದೆ ದಿನಕ್ಕೆ ಸರಾಸರಿ 120 ಹಡಗುಗಳು ಸಂಚರಿಸುತ್ತಿದ್ದ ಜಾಗದಲ್ಲಿ, ಈಗ ಆ ಸಂಖ್ಯೆ ತೀರಾ ವಿರಳವಾಗಿದೆ. ಮಾರ್ಚ್ ತಿಂಗಳ ಮೊದಲ 25 ದಿನಗಳಲ್ಲಿ ಕೇವಲ 155 ಸರಕು ಹಡಗುಗಳು ಮಾತ್ರ ಈ ಮಾರ್ಗ ದಾಟಿವೆ. ಅಂದರೆ ಸಾಗಾಣಿಕೆಯಲ್ಲಿ ಶೇ. 95ರಷ್ಟು ಕುಸಿತ ಕಂಡಂತಾಗಿದೆ.
ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಮತ್ತು ನೈಸರ್ಗಿಕ ಅನಿಲ ಈ ಮಾರ್ಗದ ಮೂಲಕವೇ ಪೂರೈಕೆಯಾಗಬೇಕಿದೆ. ಇರಾನ್ ಈ ಮಾರ್ಗವನ್ನು ಬಹುತೇಕ ಬಂದ್ ಮಾಡಿರುವುದರಿಂದ ಜಾಗತಿಕವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದೆ. ಸೂಪರ್ ಮಾರ್ಕೆಟ್ಗಳಿಂದ ಹಿಡಿದು ವಿಮಾನಯಾನ ಸಂಸ್ಥೆಗಳವರೆಗೆ ಎಲ್ಲವೂ ಸಂಕಷ್ಟಕ್ಕೆ ಸಿಲುಕಿವೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಕೆಲವು ದೇಶಗಳು ಕೋವಿಡ್ ಕಾಲದ ತುರ್ತು ಆರ್ಥಿಕ ನೀತಿಗಳನ್ನು ಮತ್ತೆ ಜಾರಿಗೆ ತರಲು ಚಿಂತಿಸುತ್ತಿವೆ.
ಈ ಬಿಕ್ಕಟ್ಟಿನ ನಡುವೆಯೂ ಭಾರತದ ಹಡಗುಗಳಿಗೆ ಸುರಕ್ಷಿತ ಹಾದಿ ಸಿಕ್ಕಿರುವುದು ದೇಶದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಬೆಳವಣಿಗೆಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ