ತಂದೆ-ತಾಯಿ ಕೊಂದಿದ್ದ ಆನೆಯಿಂದ ಪಾರಾಗಲು 2 ನದಿ ದಾಟಿ ಬಂದಿದ್ದ ಕುಟುಂಬ; 14 ವರ್ಷದ ಬಳಿಕ ಅಲ್ಲಿಗೂ ಬಂದು ಮತ್ತಿಬ್ಬರನ್ನು ಸಾಯಿಸಿದ ಅದೇ ಆನೆ !

ಕಠ್ಮಂಡು: ತಂದೆ-ತಾಯಿಯನ್ನು ಬಲಿ ಪಡೆದಿದ್ದ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಮನೆ ಮಾರಾಟ ಮಾಡಿ, ಅದು ಜಾಡು ಹಿಡಿದು ಬರಬಾರದೆಂದು ಎರಡು ದೊಡ್ಡ ನದಿಗಳನ್ನು ದಾಟಿ ಕುಟುಂಬ ಸಮೇತ ವಲಸೆ ಹೋಗಿ ಬೇರೆ ಪ್ರದೇಶದಲ್ಲಿ ಹೊಸ ಜೀವನ ಆರಂಭಿಸಿದ್ದ ವ್ಯಕ್ತಿಗೆ ವಿಧಿ ಮತ್ತೊಮ್ಮೆ ಕ್ರೂರ ಮುಖ ತೋರಿಸಿದೆ. ಬರೋಬ್ಬರಿ 14 ವರ್ಷಗಳ ಬಳಿಕ ಅದೇ ಆನೆ ಇವರ ಹೊಸ ಮನೆಗೂ ನುಗ್ಗಿ ಅವರ ಸೊಸೆ ಮತ್ತು ನಾಲ್ಕು ವರ್ಷದ ಮೊಮ್ಮಗನನ್ನು ಬಲಿ ಪಡೆದಿರುವ ಹೃದಯವಿದ್ರಾವಕ ಘಟನೆ ನೇಪಾಳದಲ್ಲಿ ನಡೆದಿದೆ.
ಈ ಆನೆಯ ಹೆಸರು ಧುರ್ಬೆ (Dhurbe). ಮಾನವರ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಕುಖ್ಯಾತಿಯ ಕಾರಣ ಈ ಆನೆಗೆ ಸ್ವಂತ ವಿಕಿಪೀಡಿಯಾ ಪುಟವೂ ಇದೆ. ನೇಪಾಳದ ಚಿತ್ವಾನ್ ರಾಷ್ಟ್ರೀಯ ಉದ್ಯಾನದ ಮಾಹಿತಿ ಅಧಿಕಾರಿ ಅಬಿನಾಶ್ ಥಾಪಾ ಮಗರ್ ಅವರ ಪ್ರಕಾರ, 2010ರಿಂದ ಈವರೆಗೆ ಧುರ್ಬೆ ಕನಿಷ್ಠ 25 ಜನರನ್ನು ಕೊಂದಿದ್ದು, ಜಗತ್ತಿನಲ್ಲೇ ಅತ್ಯಂತ ಹೆಚ್ಚು ದಾಖಲಾಗಿರುವ “ಸಮಸ್ಯಾತ್ಮಕ ಆನೆ”ಗಳಲ್ಲಿ ಒಂದಾಗಿದೆ.

2012ರಲ್ಲಿ ಚಿತ್ವಾನ್ ರಾಷ್ಟ್ರೀಯ ಉದ್ಯಾನವನದ ಬಳಿಯ ಮಡಿ ಎಂಬ ಊರಿನಲ್ಲಿ ಧುರ್ಬೆಯ ದಾಳಿಯಲ್ಲಿ ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಶನಿಚರ ಬೋಟೆ, ಈ ಆನೆಯ ಕಾಟದಿಂದ ದೂರವಿರಲು ಮನೆ ಮಾರಾಟ ಮಾಡಿ, ಎರಡು ನದಿಗಳನ್ನು ದಾಟಿ ಸುಮಾರು ಒಂಬತ್ತು ಮೈಲು ದೂರದ ಜಗತ್ಪುರ ಪ್ರದೇಶಕ್ಕೆ ಕುಟುಂಬ ಸಮೇತ ಬಂದು ನೆಲೆಸಿದ್ದರು. ಆದರೂ ಆನೆ ಇವರು ಜಾಡು ಹಿಡಿದುಕೊಂಡು ಬಂದಿದೆ ಎಂದು ಹೇಳಲಾಗಿದೆ. ಆನೆ ದಾಳಿಯಿಂದ ಬೋಟೆ ಅವರ ಸೊಸೆ ಮತ್ತು ಮೊಮ್ಮಗನನ್ನು ಸಾಯಿಸಿದ್ದು, ಈ ಘಟನೆ ನಡೆದ ರಾತ್ರಿ ಧುರ್ಬೆ ಬೋಟೆ ಕುಟುಂಬದ ಮನೆಯ ಸುತ್ತಮುತ್ತಲೇ ಇತ್ತು ಎಂಬುದು ಅದರ ಕುತ್ತಿಗೆಗೆ ಅಳವಡಿಸಿದ್ದ ಉಪಗ್ರಹ ಆಧಾರಿತ ಟ್ರ್ಯಾಕಿಂಗ್ ಕಾಲರ್ ಮೂಲಕ ದೃಢಪಟ್ಟಿದೆ.

ಹುಲ್ಲಿಗೆ ಬೆಂಕಿ ಹಚ್ಚಿ ಕುಟುಂಬವನ್ನು ರಕ್ಷಿಸಿದ ಪತ್ನಿ
ಧುರ್ಬೆ ಮನೆಗೆ ನುಗ್ಗಿದಾಗ ಶನಿಚರ ಬೋಟೆ ಅವರ ಪತ್ನಿ ಮನೆಯ ಮುಂಭಾಗದಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ಹಚ್ಚಿ ಆನೆಯನ್ನು ಹಿಂದಕ್ಕೆ ಸರಿಯುವಂತೆ ಮಾಡಿದರು. ಇದರಿಂದ ಮನೆಯೊಳಗಿದ್ದ ಉಳಿದ ಕುಟುಂಬ ಸದಸ್ಯರ ಪ್ರಾಣ ಉಳಿಯಿತು.
ಆದರೆ ಬೆಂಕಿಯಿಂದ ಮನೆಯ ಉಳಿದ ಭಾಗವೂ ಸಂಪೂರ್ಣ ಸುಟ್ಟುಹೋಯಿತು. ಪ್ರಸ್ತುತ ಆ ಮನೆಯಲ್ಲಿ ಒಂಬತ್ತು ಮಂದಿ ವಾಸಿಸುತ್ತಿದ್ದು, ಅವರಿಗೆ ಈಗ ನೆಲೆಸಲು ಬೇರೆ ಯಾವುದೇ ಆಶ್ರಯವಿಲ್ಲ.
“ಎರಡು ನದಿಗಳನ್ನು ದಾಟಿದರೆ ಸುರಕ್ಷಿತ ಎಂದು ಭಾವಿಸಿದ್ದೆವು”
ಈ ದುರಂತದ ಬಗ್ಗೆ ಕಾಠ್ಮಂಡು ಪೋಸ್ಟ್ ಪತ್ರಿಕೆಗೆ ಪ್ರತಿಕ್ರಿಯಿಸಿದ ಶನಿಚರ ಬೋಟೆ, “ಎರಡು ದೊಡ್ಡ ನದಿಗಳನ್ನು ದಾಟಿದರೆ ಆನೆ ನಮ್ಮನ್ನು ಹುಡುಕಿ ಬರುವುದಿಲ್ಲ ಎಂದು ನಂಬಿದ್ದೆವು. ಆದರೆ ಇಷ್ಟು ವರ್ಷಗಳ ಬಳಿಕ ಅದೇ ಆನೆ ನಮ್ಮ ಹೊಸ ಮನೆಯನ್ನೂ ಪತ್ತೆಹಚ್ಚಿ ದಾಳಿ ನಡೆಸಿ ನನ್ನ ಸೊಸೆ ಮತ್ತು ಪುಟ್ಟ ಮೊಮ್ಮಗನನ್ನು ಕಸಿದುಕೊಂಡಿದೆ. ಈಗ ನಾವು ಓಡಿಹೋಗಲು ಎಲ್ಲಿಯೂ ಜಾಗ ಉಳಿದಿಲ್ಲ,” ಎಂದು ಕಣ್ಣೀರಿಟ್ಟಿದ್ದಾರೆ.

ಪ್ರಮುಖ ಸುದ್ದಿ :-   ತಂದೆ-ಮಗನ ಖಾತೆಗಳಿಗೆ ₹1500 ಕೋಟಿ ಜಮೆ: ಇಬ್ಬರು ದಿಢೀರ್‌ ಕೋಟ್ಯಧಿಪತಿಗಳು, ನಂತರ ನಡೆದದ್ದೇ ಬೇರೆ !

ಧುರ್ಬೆ ಏಕೆ ಇಷ್ಟು ಆಕ್ರಮಣಕಾರಿ?
ತಜ್ಞರ ಪ್ರಕಾರ, ಧುರ್ಬೆಯಂತಹ ಗಂಡು ಆನೆಗಳ ಆಕ್ರಮಣಕಾರಿ ವರ್ತನೆಗೆ ವೈಜ್ಞಾನಿಕ ಕಾರಣವಿದೆ. ಗಂಡು ಆನೆಗಳು ಪ್ರೌಢಾವಸ್ಥೆಗೆ ಬಂದಾಗ ಹಿಂಡಿನಲ್ಲಿರುವ ಪ್ರಬಲ ಗಂಡು ಆನೆಗಳು ಅವುಗಳನ್ನು ಹೊರಹಾಕುತ್ತವೆ. ಬಳಿಕ ಅವು ಏಕಾಂಗಿಯಾಗಿ ಬದುಕಬೇಕಾಗುತ್ತದೆ.
ಇಂತಹ ಒಂಟಿ ಗಂಡು ಆನೆಗಳು ಆಹಾರಕ್ಕಾಗಿ ಮಾನವ ವಸತಿ ಪ್ರದೇಶಗಳ ಅಂಚಿಗೆ ಬರುವುದರಿಂದ ಮನುಷ್ಯರು ಮತ್ತು ಆನೆಗಳ ನಡುವಿನ ಘರ್ಷಣೆ ಹೆಚ್ಚಾಗುತ್ತದೆ. ಕೆಲವೊಮ್ಮೆ ಅದು ಮಾರಣಾಂತಿಕ ದಾಳಿಗಳಿಗೂ ಕಾರಣವಾಗುತ್ತದೆ. ಧುರ್ಬೆಯೂ ಕನಿಷ್ಠ 2009ರಿಂದ ಇದೇ ರೀತಿಯ ಜೀವನ ನಡೆಸುತ್ತಿದೆ.
ನೇಪಾಳದಲ್ಲಿ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷ
ಈ ಘಟನೆ ಒಂದೇ ಒಂದು ಅಪರೂಪದ ಪ್ರಕರಣವಲ್ಲ. ಚಿತ್ವನ್ ಪ್ರದೇಶದ ಉದ್ಯಾನವನದ ಅಂಕಿಅಂಶಗಳ ಪ್ರಕಾರ, ಕಳೆದ 11.5 ವರ್ಷಗಳಲ್ಲಿ ವನ್ಯಜೀವಿಗಳ ದಾಳಿಗೆ 127 ಮಂದಿ ಮೃತಪಟ್ಟಿದ್ದಾರೆ.
ನೇಪಾಳದ 2025–2035ರ ಆನೆ ಸಂರಕ್ಷಣಾ ಕಾರ್ಯಯೋಜನೆ ಪ್ರಕಾರ, ಚುರೆ-ತರಾಯಿ ಪ್ರದೇಶದಲ್ಲಿರುವ ಆನೆಗಳ ಸಂಭಾವ್ಯ ವಾಸಸ್ಥಳದ ಶೇ.50ಕ್ಕೂ ಹೆಚ್ಚು ಭಾಗ ಸಂರಕ್ಷಿತ ಪ್ರದೇಶಗಳ ಹೊರಗಿದೆ. ಇದರ ಪರಿಣಾಮವಾಗಿ ಆನೆಗಳು ಮತ್ತು ಮನುಷ್ಯರು ಒಂದೇ ಪ್ರದೇಶದಲ್ಲಿ ಬದುಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಘರ್ಷಗಳು ಹೆಚ್ಚುತ್ತಿವೆ.

ಪ್ರಮುಖ ಸುದ್ದಿ :-   2020ರ ದೆಹಲಿ ಗಲಭೆ : ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿ ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ದೋಷಿ

ಎರಡು ಗುಂಡು ಹೊಡೆದರೂ ತಪ್ಪಿಸಿಕೊಂಡಿದ್ದ  ಧುರ್ಬೆ
2012ರಲ್ಲಿ ಶನಿಚರ ಬೋಟೆ ಅವರ ತಂದೆ-ತಾಯಿಯನ್ನು ಧುರ್ಬೆ ಬಲಿ ಪಡೆದ ಬಳಿಕ ಅಧಿಕಾರಿಗಳು ಅದನ್ನು ಹೊಡೆದುರುಳಿಸಲು ಆದೇಶಿಸಿದ್ದರು.
ಈ ಕಾರ್ಯಾಚರಣೆಗೆ 93 ಯೋಧರನ್ನು ನಿಯೋಜಿಸಲಾಗಿತ್ತು. ಧುರ್ಬೆಗೆ ಎರಡು ಬಾರಿ ಗುಂಡು ಹೊಡೆಯಲಾಗಿತ್ತು. ಅಧಿಕಾರಿಗಳ ಪ್ರಕಾರ ಅದು ಗಾಯಗೊಂಡಿದ್ದರೂ, ಬಳಿಕ ಅದರ ಸುಳಿವು ಸಿಕ್ಕಿರಲಿಲ್ಲ.
ಆದರೆ 2016ರಲ್ಲಿ ಧುರ್ಬೆ ಮತ್ತೆ ಕಾಣಿಸಿಕೊಂಡಿತು. ಮೊದಲ ಟ್ರ್ಯಾಕಿಂಗ್ ಕಾಲರ್ ಕಾರ್ಯನಿರ್ವಹಿಸದ ಕಾರಣ 2020ರಲ್ಲಿ ಎರಡನೇ ಕಾಲರ್ ಹಾಗೂ 2023ರಲ್ಲಿ ಮೂರನೇ ಕಾಲರ್ ಅಳವಡಿಸಲಾಯಿತು. ಇದು ಪ್ರತಿ ಒಂದು ಗಂಟೆಗೊಮ್ಮೆ ಧುರ್ಬೆಯ ಸ್ಥಳದ ಮಾಹಿತಿಯನ್ನು ದಾಖಲಿಸುತ್ತದೆ.

“ಒಂಬತ್ತು-ಹತ್ತು ದಿನಗಳಿಂದ ಗ್ರಾಮದ ಸುತ್ತಲೇ ತಿರುಗಾಡುತ್ತಿತ್ತು”
ಸ್ಥಳೀಯ ನಿವಾಸಿಗಳ ಪ್ರಕಾರ, ದಾಳಿ ನಡೆಸುವ ಮೊದಲು ಧುರ್ಬೆ 9ರಿಂದ 10 ದಿನಗಳ ಕಾಲ ಗ್ರಾಮದ ಸುತ್ತಮುತ್ತಲೇ ಓಡಾಡುತ್ತಿತ್ತು.
ಘೈಲಾಗ್ಘಾರಿ ಬಫರ್ ಝೋನ್ ಗ್ರಾಹಕರ ಸಮಿತಿಯ ಅಧ್ಯಕ್ಷ ಲಾಲ್ ಬಹಾದೂರ್ ದವಾಡಿ ಮಾತನಾಡಿ, “ಈ ಆನೆ ಪ್ರತಿವರ್ಷ ಒಂದೇ ದಾರಿಯಲ್ಲಿ ಗ್ರಾಮಗಳಿಗೆ ಬರುತ್ತದೆ. ಅದರ ಚಲನವಲನವನ್ನು ಮುಂಚಿತವಾಗಿಯೇ ಊಹಿಸಬಹುದಾಗಿತ್ತು. ಹೀಗಾಗಿ ಉದ್ಯಾನವನದ ಅಧಿಕಾರಿಗಳಿಗೆ ಅದರ ಬಗ್ಗೆ ಮೊದಲೇ ಮಾಹಿತಿ ಇತ್ತು” ಎಂದು ಆರೋಪಿಸಿದ್ದಾರೆ.
ಈ ಘಟನೆಯ ಬಳಿಕ ಧುರ್ಬೆಯನ್ನು ಶಾಶ್ವತವಾಗಿ ನಿಯಂತ್ರಣದಲ್ಲಿಡುವುದಾಗಿ ಹಾಗೂ ಈಗಿರುವ ಒಂದು ಗಂಟೆಯ ಅಂತರದ ಟ್ರ್ಯಾಕಿಂಗ್ ಬದಲಿಗೆ ನೈಜ-ಸಮಯ (ರಿಯಲ್-ಟೈಮ್) ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೊಳಿಸುವುದಾಗಿ ಚಿತ್ವಾನ್ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ಭರವಸೆ ನೀಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement