ಇರಾನ್-ಅಮೆರಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ; ತೋರಿಕೆಗೆ ಪಾಕಿಸ್ತಾನ, ಚೀನಾ ಅಸಲಿ ಕಿಂಗ್ ಮೇಕರ್? ಆದ್ರೂ ಅಮೆರಿಕ ಚೀನಾ ಹೆಸರು ಕೈಬಿಟ್ಟಿದ್ದೇಕೆ ?

ವಾಷಿಂಗ್ಟನ್/ಬೀಜಿಂಗ್: ಅಮೆರಿಕ ಮತ್ತು ಇರಾನ್ ನಡುವೆ ಉಂಟಾಗಿದ್ದ ಯುದ್ಧದ ಭೀತಿ ಸದ್ಯಕ್ಕೆ ತಿಳಿಯಾಗಿದೆ. ಇಡೀ ಜಗತ್ತು ಮತ್ತೊಂದು ಮಹಾಯುದ್ಧಕ್ಕೆ ಸಾಕ್ಷಿಯಾಗಲಿದೆ ಎನ್ನುವಷ್ಟರಲ್ಲಿ, ಕೊನೆಯ ಕ್ಷಣದಲ್ಲಿ ಏರ್ಪಟ್ಟ ಕದನ ವಿರಾಮ ಒಪ್ಪಂದವು ಜಾಗತಿಕ ನಿಟ್ಟುಸಿರಿಗೆ ಕಾರಣವಾಗಿದೆ. ಆದರೆ, ಈ ಸಂಧಾನದ ಹಿಂದೆ ಪ್ರಬಲ ಶಕ್ತಿಯಾಗಿ ನಿಂತಿದ್ದು ಯಾರು ಎಂಬ ಚರ್ಚೆ ಈಗ ಜಾಗತಿಕ ಮಟ್ಟದಲ್ಲಿ ಶುರುವಾಗಿದೆ.
“ಒಪ್ಪಂದವಾಗದಿದ್ದರೆ ಇಂದೇ ಇಡೀ ನಾಗರಿಕತೆಯೇ ಅಂತ್ಯವಾಗಲಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದರು. ಇತ್ತ ಇರಾನ್ ಕೂಡ ಅಮೆರಿಕದೊಂದಿಗೆ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಘೋಷಿಸಿತ್ತು.
ಯುದ್ಧ ಸ್ಫೋಟಗೊಳ್ಳುವ ಕೇವಲ 10 ಗಂಟೆಗಳ ಮೊದಲು ಹಠಾತ್ ಕದನ ವಿರಾಮ ಘೋಷಣೆಯಾಯಿತು. ಅತಿ ಮುಖ್ಯ ತೈಲ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ ಮುಕ್ತ ಹಾಗೂ ಸುಗಮ ಹಡಗು ಸಂಚಾರಕ್ಕೆ ಇರಾನ್ ಒಪ್ಪಿಕೊಂಡಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಕಾರ, ಇರಾನ್‌ ಅನ್ನು ಮಾತುಕತೆ ಮೇಜಿಗೆ ತರಲು ಚೀನಾ ಪಾತ್ರ ವಹಿಸಿದೆ. “ಹೌದು ಎಂದು ನಾನು ಕೇಳುತ್ತೇನೆ” ಎಂದು ಅಮೆರಿಕ ಅಧ್ಯಕ್ಷರು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.
 ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ಮಧ್ಯವರ್ತಿಗಳೊಂದಿಗೆ ಕೆಲಸ ಮಾಡುವ ಮೂಲಕ ಇರಾನ್ ಅನ್ನು ಶಾಂತಿಯ ಮಾರ್ಗಕ್ಕೆ ದೂಡುವ  ಮೂಲಕ ಚೀನಾ ಈ ಕದನ ವಿರಮಾನದಲ್ಲಿ ಪ್ರಭಾವಶಾಲಿ ಪಾತ್ರವನ್ನು ವಹಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ದಿ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಚೀನಾದ ಕೊನೆಯ ಕ್ಷಣದ ಮಧ್ಯಸ್ಥಿಕೆಯು ಇರಾನ್ ತಾತ್ಕಾಲಿಕ ಕದನ ವಿರಾಮಕ್ಕಾಗಿ ಪಾಕಿಸ್ತಾನದ ಪ್ರಸ್ತಾಪವನ್ನು ಸ್ವೀಕರಿಸಲು ನೆರವಾಯಿತು ಎಂದು ಮೂವರು ಇರಾನಿನ ಅಧಿಕಾರಿಗಳು ಹೇಳಿದ್ದಾರೆ.
ಚೀನಾದ ನಿರ್ಣಾಯಕ ಪಾತ್ರ: 
ಅಮೆರಿಕವು ಅಧಿಕೃತವಾಗಿ ಪಾಕಿಸ್ತಾನದ ಮಧ್ಯಸ್ಥಿಕೆಯನ್ನು ಶ್ಲಾಘಿಸಿದೆಯಾದರೂ, ಅಸಲಿಗೆ ಇರಾನ್ ಮೇಲೆ ಒತ್ತಡ ಹೇರಿ ಒಪ್ಪಂದಕ್ಕೆ ತಂದಿದ್ದು ಚೀನಾ ಎನ್ನಲಾಗುತ್ತಿದೆ. ಇರಾನ್‌ನ ಪ್ರಮುಖ ಮಿತ್ರರಾಷ್ಟ್ರವಾಗಿರುವ ಚೀನಾ, ತೆರೆಯ ಮರೆಯಲ್ಲಿ ಸಂಧಾನದ ಸೂತ್ರಕ್ಕೆ  ಮುಂದಾಯಿತು.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಕದನ ವಿರಾಮಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸಂದೇಶವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವರ ಪೋಸ್ಟ್‌ನಲ್ಲಿ “Draft – Pakistan’s PM message” ಎಂಬ ಸಾಲುಗಳಿದ್ದವು. ಇದು ಪಾಕಿಸ್ತಾನವು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ, ಬದಲಿಗೆ ಅಮೆರಿಕ ಹೇಳಿದಂತೆ ಕೇಳುತ್ತಿದೆ ಅಥವಾ ಕೇವಲ ‘ಸಂದೇಶ ವಾಹಕ’ನಾಗಿ ಕೆಲಸ ಮಾಡುತ್ತಿದೆ ಎಂಬ ಅನುಮಾನಗಳನ್ನು ದೃಢಪಡಿಸಿದೆ.
ಚೀನಾ ಯಾಕೆ  ಮುಂದಾಯಿತು..?
ಚೀನಾ ಈ ಯುದ್ಧವನ್ನು ತಡೆಯಲು ತನ್ನದೇ ಆದ ಆರ್ಥಿಕ ಹಿತಾಸಕ್ತಿಗಳನ್ನು ಹೊಂದಿತ್ತು. ಯುದ್ಧ ತೀವ್ರಗೊಂಡರೆ ಇರಾನ್‌ನಿಂದ ಚೀನಾಕ್ಕೆ ಸರಬರಾಜಾಗುವ ಅಗ್ಗದ ತೈಲ ಸ್ಥಗಿತಗೊಳ್ಳುವ ಭೀತಿ ಇತ್ತು. ಯುದ್ಧದಿಂದ ಜಾಗತಿಕ ಆರ್ಥಿಕತೆ ಕುಸಿದರೆ, ಚೀನಾದ ಉತ್ಪಾದನಾ ವಲಯಕ್ಕೆ ದೊಡ್ಡ ಹೊಡೆತ ಬೀಳುತ್ತಿತ್ತು.
ಅಮೆರಿಕ ಸೃಷ್ಟಿಸಿದ ಈ ಬಿಕ್ಕಟ್ಟನ್ನು ಬಗೆಹರಿಸುವ ಮೂಲಕ ಚೀನಾ ತಾನು ಜಾಗತಿಕ ಮಟ್ಟದ ದೊಡ್ಡ ಶಕ್ತಿ ಎಂದು ಸಾಬೀತುಪಡಿಸುವುದು ಅದಕ್ಕೆ ಅನಿವಾರ್ಯವಾಗಿತ್ತು.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಲು ಟ್ರಂಪ್ ಮೇ ಮಧ್ಯದಲ್ಲಿ ಚೀನಾಕ್ಕೆ ಪ್ರಯಾಣಿಸುವ ಮೊದಲು ಯುದ್ಧ ಕಡಿಮೆಯಾಗುವುದು ಚೀನಾಕ್ಕೆ ಅಗತ್ಯವಾಗಿದೆ. ಯಾಕೆಂದರೆ ಯುದ್ಧವನ್ನು ಉಲ್ಲೇಖಿಸಿ, ಟ್ರಂಪ್ ಮಾರ್ಚ್ ಅಂತ್ಯಕ್ಕೆ ನಿಗದಿಪಡಿಸಲಾಗಿದ್ದ ತಮ್ಮ ಚೀನಾ ಪ್ರವಾಸವನ್ನು ಮುಂದೂಡುತ್ತಿದ್ದಾರೆ.
ಅಮೆರಿಕ ಚೀನಾದ ಹೆಸರನ್ನು ಯಾಕೆ ಕೈಬಿಟ್ಟಿತು?
ಕದನ ವಿರಾಮದ ಅಧಿಕೃತ ಹೇಳಿಕೆಯಲ್ಲಿ ಟ್ರಂಪ್ ಅವರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಶರೀಫ್‌ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಹೊಗಳಿದ್ದಾರೆ. ಆದರೆ ಚೀನಾದ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ತಜ್ಞರ ಪ್ರಕಾರ, ಚೀನಾದ ಪ್ರಭಾವವನ್ನು ಒಪ್ಪಿಕೊಂಡರೆ ಅಮೆರಿಕವು ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕವಾಗಿ ದುರ್ಬಲವಾಗಿ ಕಾಣಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಟ್ರಂಪ್ ಈ ತಂತ್ರ ಅನುಸರಿಸಿದ್ದಾರೆ. ಒಟ್ಟಾರೆಯಾಗಿ ಪಾಕಿಸ್ತಾನ ಕೇವಲ ಮುಖವಾಡವಾಗಿ ಕೆಲಸ ಮಾಡಿದರೆ, ಚೀನಾ ಇರಾನ್ ಮೇಲೆ ತನ್ನ ಹಿಡಿತ ಬಳಸಿ ಯುದ್ಧವನ್ನು ತಪ್ಪಿಸುವಲ್ಲಿ ಪ್ರಯತ್ನಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement