ವರ್ಷದ ಮೊದಲೇ ತೆಹ್ರಾನಿನ ಟ್ರಾಫಿಕ್ ಕ್ಯಾಮೆರಾ ಸಿಸ್ಟಂ ಹ್ಯಾಕ್‌ ಮಾಡಿದ್ದ ಇಸ್ರೇಲ್‌ ! ಖಮೇನಿ ಹತ್ಯೆಗೆ ಇಸ್ರೇಲ್-ಅಮೆರಿಕ ಹೆಣೆದಿದ್ದವು ‘ಮಹಾ ಸ್ಕೆಚ್‌’ !!

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಹಿಂದೆ ವರ್ಷಗಳ ಕಾಲ ನಡೆದ ಸುದೀರ್ಘ ಗುಪ್ತಚರ ಕಾರ್ಯಾಚರಣೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಕೈವಾಡವಿದೆ ಎಂಬ ಅಂಶ ‘ಫೈನಾನ್ಷಿಯಲ್ ಟೈಮ್ಸ್’ ವರದಿಯಿಂದ ಬೆಳಕಿಗೆ ಬಂದಿದೆ.
ವರದಿಯ ಪ್ರಕಾರ, ಇಸ್ರೇಲ್ ಕಳೆದ ಹಲವು ವರ್ಷಗಳಿಂದ ಇರಾನ್ ರಾಜಧಾನಿ ತೆಹ್ರಾನ್‌ನ ಬಹುತೇಕ ಎಲ್ಲಾ ಸಂಚಾರ ನಿಯಂತ್ರಣ (Traffic) ಕ್ಯಾಮೆರಾಗಳನ್ನು ಹ್ಯಾಕ್ ಮಾಡಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಶನಿವಾರ ಅಯತೊಲ್ಲಾ ಅಲಿ ಖಮೇನಿ ಹತರಾದ ಪಾಶ್ಚರ್ ಸ್ಟ್ರೀಟ್ ಬಳಿಯ ಕಚೇರಿಗೆ ಹಿರಿಯ ಅಧಿಕಾರಿಗಳು ಬರುವುದನ್ನು ಇಸ್ರೇಲ್ ಈ ಕ್ಯಾಮೆರಾಗಳ ಮೂಲಕವೇ ನೇರವಾಗಿ ವೀಕ್ಷಿಸುತ್ತಿತ್ತು. ಒಂದು ನಿರ್ದಿಷ್ಟ ಕ್ಯಾಮೆರಾ ಕೋನವು ಅತ್ಯಂತ ಭದ್ರತೆಯಿರುವ ಕಾಂಪೌಂಡ್‌ನ ಒಳಗಿನ ಚಟುವಟಿಕೆಗಳನ್ನು ಪತ್ತೆಹಚ್ಚಲು ಇಸ್ರೇಲ್‌ಗೆ ಕಿಟಕಿಯಂತೆ ಸಹಕಾರಿಯಾಯಿತು.

ಅಲ್ಗಾರಿದಮ್‌ಗಳ ಮೂಲಕ ಸಿದ್ಧವಾದ ‘ಜೀವನಶೈಲಿಯ ಮಾಡಲ್‌’
ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳು ಸಂಕೀರ್ಣ ಅಲ್ಗಾರಿದಮ್‌ಗಳನ್ನು ಬಳಸಿ ಖಮೇನಿಯ ಭದ್ರತಾ ಸಿಬ್ಬಂದಿಗಳ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದ್ದವು. ಅವರ ಮನೆ ವಿಳಾಸ, ಕೆಲಸದ ಸಮಯ, ಅವರು ಓಡಾಡುವ ಮಾರ್ಗ ಮತ್ತು ಅವರು ಯಾರಿಗೆ ರಕ್ಷಣೆ ನೀಡುತ್ತಿದ್ದಾರೆ. ಖಮೇನಿಗೆ ಯಾರು ರಕ್ಷಣೆ ನೀಡುತ್ತಾರೆ ಎಂಬಿತ್ಯಾದಿ ದತ್ತಾಂಶಗಳನ್ನು ವಿಶ್ಲೇಷಿಸಿ, ಅವರ ‘ಜೀವನಶೈಲಿಯ ಮಾದರಿ’ಯನ್ನು (Pattern of Life) ಸಿದ್ಧಪಡಿಸಲಾಗಿತ್ತು. ಇಸ್ರೇಲ್‌ನ ಅತ್ಯಾಧುನಿಕ ‘ಯೂನಿಟ್ 8200’ ಮತ್ತು ಮೊಸಾದ್ ಸಂಸ್ಥೆಗಳು ಶತಕೋಟಿ ದತ್ತಾಂಶಗಳನ್ನು ಗಣಿತದ ವಿಧಾನದ ಮೂಲಕ ವಿಶ್ಲೇಷಿಸಿ ಈ ದಾಳಿಗೆ ಸಿದ್ಧತೆ ನಡೆಸಿದ್ದವು. ಈ ಪ್ರಯತ್ನವು 86 ವರ್ಷದ ಅಯತೊಲ್ಲಾ ಅವರ ಹತ್ಯೆಗೆ ನಿಖರ ಮಾಹಿತಿ ಸಂಗ್ರಹಿಸಿದ ವರ್ಷಗಳ ಕಾಲದ ಗುಪ್ತಚರ ಅಭಿಯಾನದ ಒಂದು ಭಾಗವಾಗಿತ್ತು.

 ನಿಖರ ಮಾಹಿತಿ
ಇಸ್ರೇಲ್ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ (CIA), ಶನಿವಾರ ಬೆಳಿಗ್ಗೆ ಖಮೇನಿ ತಮ್ಮ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ ಎಂಬ ನಿಖರ ಮಾಹಿತಿಯನ್ನು ಪಡೆದಿದ್ದವು. ಶನಿವಾರ ಬೆಳಿಗ್ಗೆ ತೆಹ್ರಾನ್‌ನ ಹೃದಯಭಾಗದಲ್ಲಿರುವ ಆವರಣದಲ್ಲಿ ಖಮೇನಿ ನೇತೃತ್ವದಲ್ಲಿ ಸಭೆ ನಡೆಯುವುದನ್ನು ಇಸ್ರೇಲಿ ಗುಪ್ತಚರ ಇಲಾಖೆ ಪತ್ತೆಹಚ್ಚಿತ್ತು ಎಂದು ರಾಯಿಟರ್ಸ್ ಈ ಹಿಂದೆ ವರದಿ ಮಾಡಿತ್ತು. ಕೇವಲ ತಾಂತ್ರಿಕ ಮಾಹಿತಿ ಮಾತ್ರವಲ್ಲದೆ, ಅಮೆರಿಕದ ಬಳಿ ಇದ್ದ ಒಬ್ಬ ‘ಮಾನವ ಮೂಲ’ (Human Source) ನೀಡಿದ ಅತ್ಯಂತ ಖಚಿತ ಮಾಹಿತಿಯು ಈ ದಾಳಿಗೆ ಪ್ರಮುಖ ಪ್ರೇರಣೆಯಾಯಿತು. ಯುದ್ಧ ಪ್ರಾರಂಭವಾದ ನಂತರ ಅವರನ್ನು ಕೊಲ್ಲುವುದು ಹೆಚ್ಚು ಕಷ್ಟಕರವಾಗುತ್ತಿತ್ತು ಎಂದು ಅವರು ನಿರ್ಣಯಿಸಿದ್ದರು ಎಂದು ವರದಿ ಹೇಳಿದೆ,

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಏಕೆಂದರೆ ಇಸ್ರೇಲಿ ಬಾಂಬ್‌ಗಳಿಂದ ರಕ್ಷಿಸಲು ಬಾಂಬ್‌ ನಿರೋಧಕ ಬಂಕರ್‌ಗಳಿಗೆ ಭೂಗತವಾಗಿ ಅವರನ್ನು ಸ್ಥಳಾಂತರಿಸಿ ತಪ್ಪಿಸಿಕೊಳ್ಳುವುದನ್ನು ತಕ್ಷಣವೇ ಇರಾನ್‌ ಆಡಳಿತ ಮಾಡುತ್ತದೆ ಎಂಬುದು ಇಸ್ರೇಲ್‌ ಹಾಗೂ ಅಮೆರಿಕಕ್ಕೆ ತಿಳಿದಿತ್ತು. ಹೀಗಾಗಿ ತಕ್ಷಣವೇ ದಾಳಿ ನಡೆಸಲು ನಿರ್ಧರಿಸಲಾಯಿತು.  ದಾಳಿಯ ಸಮಯದಲ್ಲಿ ಖಮೇನಿಯ ರಕ್ಷಣಾ ತಂಡಕ್ಕೆ ಯಾವುದೇ ಎಚ್ಚರಿಕೆ ಸಂದೇಶಗಳು ಹೋಗದಂತೆ ತಡೆಯಲು ಇಸ್ರೇಲ್ ಸಮೀಪದ ಮೊಬೈಲ್ ಟವರ್‌ಗಳನ್ನು ಜಾಮ್ ಮಾಡಿತ್ತು…! ಪಾಶ್ಚರ್ ಸ್ಟ್ರೀಟ್ ಬಳಿಯ ಸರಿಸುಮಾರು ಒಂದು ಡಜನ್ ಅಥವಾ ಅದಕ್ಕಿಂತ ಹೆಚ್ಚು ಮೊಬೈಲ್ ಫೋನ್ ಟವರ್‌ಗಳನ್ನು ಇಸ್ರೇಲ್ ಜಾಮ್‌ ಮಾಡಿತ್ತು ಎಂದು ವರದಿ ಹೇಳುತ್ತದೆ, ಯಾರೇ ಕರೆ ಮಾಡಿದಾಗಲೂ ಫೋನ್‌ಗಳು ಕಾರ್ಯನಿರತವಾಗಿವೆ ಎಂದು ಹೇಳುವಂತೆ ಮಾಲಾಯಿತು. ಆ ಮೂಲಕ ಖಮೇನಿಯ ರಕ್ಷಣಾ ತಂಡಗಳು ಸಂಭವನೀಯ ಎಚ್ಚರಿಕೆಯ ಕರೆಗಳನ್ನು ಸ್ವೀಕರಿಸದಂತೆ ತಡೆಯಲಾಯಿತು.

200 ಯುದ್ಧ ವಿಮಾನಗಳ ಬೃಹತ್ ದಾಳಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿಗೆ ಆದೇಶ ನೀಡುತ್ತಿದ್ದಂತೆ, ಇಸ್ರೇಲ್‌ನ ಸುಮಾರು 200 ಯುದ್ಧ ವಿಮಾನಗಳು ಏಕಕಾಲಕ್ಕೆ ಇರಾನ್ ಮೇಲೆ ಮುಗಿಬಿದ್ದವು. ಇಸ್ರೇಲ್ ವಾಯುಪಡೆಯ ಇತಿಹಾಸದಲ್ಲೇ ಇದು ಅತಿದೊಡ್ಡ ವೈಮಾನಿಕ ದಾಳಿ ಎನ್ನಲಾಗಿದ್ದು, ಸುಮಾರು 500 ಟಾರ್ಗೆಟ್‌ಗಳನ್ನು ಧ್ವಂಸಗೊಳಿಸಲಾಗಿದೆ. ಅಮೆರಿಕದ ಸೇನೆಯು ಸೈಬರ್ ದಾಳಿ ನಡೆಸುವ ಮೂಲಕ ಇರಾನ್‌ನ ಸಂಪರ್ಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕುರುಡಾಗಿಸಿ ಇಸ್ರೇಲಿ ವಿಮಾನಗಳಿಗೆ ಹಾದಿ ಮಾಡಿಕೊಟ್ಟಿತು.
‘ಸ್ಪ್ಯಾರೋ’ ಕ್ಷಿಪಣಿಯ ಬಳಕೆ
ವರದಿಯ ಪ್ರಕಾರ, ಇಸ್ರೇಲಿ ಪೈಲಟ್‌ಗಳು ‘ಸ್ಪ್ಯಾರೋ’ (Sparrow) ಎಂಬ ವಿಶೇಷ ಕ್ಷಿಪಣಿಯನ್ನು ಬಳಸಿದ್ದಾರೆ. ಇದು 1,000 ಕಿ.ಮೀ ದೂರದಿಂದಲೇ ಒಂದು ಊಟದ ಮೇಜಿನಷ್ಟು ಸಣ್ಣ ಗುರಿಯನ್ನು ಕೂಡ ನಿಖರವಾಗಿ ನಾಶಪಡಿಸಬಲ್ಲದು. ಈ ಮೂಲಕ ಇರಾನ್‌ನ ಯಾವುದೇ ವೈಮಾನಿಕ ರಕ್ಷಣಾ ವ್ಯವಸ್ಥೆಗೆ ಸಿಗದಂತೆ ದೂರದಿಂದಲೇ ಈ ನಿಖರ ದಾಳಿ ನಡೆಸಲಾಗಿದೆ.
ಟ್ರಂಪ್ ಪ್ರತಿಕ್ರಿಯೆ
“ಖಮೇನಿ ಮತ್ತು ಅವರ ಜೊತೆಗಿದ್ದ ಹಿರಿಯ ನಾಯಕರು ಉಪಹಾರ ಸೇವಿಸುತ್ತಿದ್ದಾಗ ಈ ದಾಳಿ ನಡೆದಿದೆ. ನಮ್ಮ ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ” ಎಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇರಾನ್ ಸರ್ಕಾರಿ ದೂರದರ್ಶನವು ಈಗಾಗಲೇ ಖಮೇನಿ ಸಾವಿನ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಕಪ್ಪು ಬ್ಯಾನರ್‌ನೊಂದಿಗೆ ಹಳೆಯ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದೆ.
ಒಮಾನ್ ದೇಶವು ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿರುವಾಗಲೇ ಈ ಭೀಕರ ದಾಳಿ ನಡೆದಿದ್ದು, ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement