ಅಮೆರಿಕ ಜೊತೆಗಿನ ಯುದ್ಧದ ಮಧ್ಯೆ ಬೃಹತ್‌ ಕ್ಷಿಪಣಿ-ಡ್ರೋನ್ ಸಂಗ್ರಹದ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್‌

ತೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಗೆ ಪ್ರತಿಯಾಗಿ ದಾಳಿ ನಡೆಸುತ್ತಿರುವ ಇರಾನ್ ತನ್ನ ಬೃಹತ್ ಭೂಗತ ಶಸ್ತ್ರಾಸ್ತ್ರ ಸಂಗ್ರಹದ ಸುರಂಗವನ್ನು ಜಗತ್ತಿಗೆ ಪರಿಚಯಿಸಿದೆ. ಸೋಮವಾರ (ಮಾರ್ಚ್ 2), ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸರ್ಕಾರಿ ಮಾಧ್ಯಮಗಳ ಮೂಲಕ ಸುದೀರ್ಘ ಸುರಂಗದ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಲು ಸಾಲಾಗಿ ಜೋಡಿಸಲಾದ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಕಂಡುಬಂದಿವೆ.
ವಿಡಿಯೋದಲ್ಲಿ ಇರಾನ್ ನಿರ್ಮಿತ ‘ಶಾಹೆದ್-136’ ಕಾಮಿಕೇಜಿ ಮಾದರಿಯ ತ್ರಿಕೋನಾಕಾರದ ಡ್ರೋನ್‌ಗಳನ್ನು ಮೊದಲು ಪ್ರದರ್ಶಿಸಲಾಗಿದೆ. ಇದರ ಬೆನ್ನಲ್ಲೇ, ಲಾಂಚರ್ ವಾಹನಗಳ ಮೇಲೆ ತಲಾ ನಾಲ್ಕರಂತೆ ಅಳವಡಿಸಲಾದ ಕ್ಷಿಪಣಿಗಳು ದಾಳಿಗೆ ಸನ್ನದ್ಧ ಸ್ಥಿತಿಯಲ್ಲಿರುವುದನ್ನು ತೋರಿಸಲಾಗಿದೆ.
ಸುರಂಗದ ಮೇಲ್ಛಾವಣಿಯಲ್ಲಿ ಇರಾನ್ ರಾಷ್ಟ್ರಧ್ವಜ ಹಾಗೂ ಗೋಡೆಯ ಮೇಲೆ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಭಾವಚಿತ್ರವನ್ನು ಹಾಕಲಾಗಿದೆ. ಅಲ್ಲದೆ, ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಉಡಾವಣೆ ಮಾಡುವ ದೃಶ್ಯಗಳನ್ನೂ ವಿಡಿಯೋ ಒಳಗೊಂಡಿದೆ.

500 ಅಮೆರಿಕ ಮತ್ತು ಇಸ್ರೇಲ್ ನೆಲೆಗಳ ಮೇಲೆ ದಾಳಿ
ಯುದ್ಧದ ಮೂರನೇ ದಿನವಾದ ಸೋಮವಾರ, ಮಧ್ಯಪ್ರಾಚ್ಯದಾದ್ಯಂತ ಹರಡಿರುವ ಅಮೆರಿಕ ಮತ್ತು ಇಸ್ರೇಲ್ ಸಂಬಂಧಿತ ಸುಮಾರು 500 ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ ಎಂದು ರೆವಲ್ಯೂಷನರಿ ಗಾರ್ಡ್ಸ್ ತಿಳಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇರಾನ್ ಸಶಸ್ತ್ರ ಪಡೆಗಳು, “ಸಂಘರ್ಷ ಆರಂಭವಾದಾಗಿನಿಂದ ನಮ್ಮ ವೀರ ಸೈನಿಕರು 60 ಆಯಕಟ್ಟಿನ ಗುರಿಗಳು ಹಾಗೂ ಜಿಯೋನಿಸ್ಟ್ ಆಡಳಿತದ (ಇಸ್ರೇಲ್) ಮತ್ತು ಅಮೆರಿಕದ ಒಟ್ಟು 500 ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆ,” ಎಂದು ಹೇಳಿಕೊಂಡಿವೆ. ಈ ದಾಳಿಗಾಗಿ ಇರಾನ್ 700ಕ್ಕೂ ಹೆಚ್ಚು ಡ್ರೋನ್ ಮತ್ತು ನೂರಾರು ಕ್ಷಿಪಣಿಗಳನ್ನು ಬಳಸಿದೆ ಎನ್ನಲಾಗಿದೆ.

‘ಆಪರೇಷನ್ ಎಪಿಕ್ ಫ್ಯೂರಿ’
ಕಳೆದ ಶನಿವಾರ (ಫೆಬ್ರವರಿ 28), ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ್ದವು. ಇದಕ್ಕೆ ಅಮೆರಿಕ ‘ಆಪರೇಷನ್ ಎಪಿಕ್ ಫ್ಯೂರಿ’ ಹಾಗೂ ಇಸ್ರೇಲ್ ‘ಆಪರೇಷನ್ ಲಯನ್ಸ್ ರೋರ್’ ಎಂದು ಹೆಸರಿಟ್ಟಿದ್ದವು. ಅಮೆರಿಕ ಮತ್ತು ಇರಾನ್‌ ನಡುವೆ ಪರಮಾಣು ಮಾತುಕತೆ ನಡೆಯುತ್ತಿರುವಾಗಲೇ ಈ ಪೂರ್ವಭಾವಿ (Pre-emptive) ದಾಳಿ ನಡೆದಿದೆ. ಸುಮಾರು ಎಂಟು ತಿಂಗಳ ಹಿಂದೆ ಇಸ್ರೇಲ್ ಮತ್ತು ಇರಾನ್ ನಡುವೆ ನಡೆದಿದ್ದ 12 ದಿನಗಳ ಸಂಘರ್ಷದ ಬಳಿಕ ನಡೆದ ಅತಿದೊಡ್ಡ ದಾಳಿ ಇದಾಗಿದೆ.

ಪ್ರಮುಖ ಸುದ್ದಿ :-   ಸ್ಪೇಸ್ ಎಕ್ಸ್ ಷೇರುಗಳ ದಾಖಲೆ ಜಿಗಿತ: ವಿಶ್ವದ ಮೊದಲ 'ಟ್ರಿಲಿಯನೇರ್' (ಲಕ್ಷ ಕೋಟಿ ಡಾಲರ್ ಒಡೆಯ)ಆದ ಎಲೋನ್ ಮಸ್ಕ್ !

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement