ವಿಶ್ವಸಂಸ್ಥೆ : ಇತ್ತೀಚೆಗೆ ಕತಾರ್ ಮೇಲೆ ಇಸ್ರೇಲ್ ನಡೆಸಿದ ದಾಳಿಗಳ ಬಗ್ಗೆ ಚರ್ಚಿಸಲು ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವಕೀಲರು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಟೀಕಿಸಿದ ನಂತರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವು ಮುಜುಗರಕ್ಕೊಳಗಾದ ಪ್ರಸಂಗ ನಡೆಯಿತು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ, ಮಾನವ ಹಕ್ಕುಗಳ ವಕೀಲ ಮತ್ತು ಯುಎನ್ ವಾಚ್ನ ಕಾರ್ಯನಿರ್ವಾಹಕ ನಿರ್ದೇಶಕ ಹಿಲ್ಲೆಲ್ ನ್ಯೂಯರ್ ಎಂಬವರು, ಇಸ್ರೇಲಿ ದಾಳಿಗಳ ವಿರುದ್ಧ ಪಾಕಿಸ್ತಾನಕ್ಕೆ ಕತಾರ್ಗೆ ಬೆಂಬಲ ನೀಡಿದ ನಂತರ ಪಾಕಿಸ್ತಾನದ ಬೂಟಾಟಿಕೆಯನ್ನು ಜಾಲಾಡಿದರು ಹಾಗೂ “ಭಯೋತ್ಪಾದನೆಯ ಮತ್ತೊಂದು ದೇಶ” ಎಂದು ಕರೆದರು.
ಇಸ್ರೇಲಿ ದಾಳಿಗಳ ವಿರುದ್ಧ ಕತಾರ್ಗೆ ಬೆಂಬಲ ನೀಡಿದ ಹಲವಾರು ದೇಶಗಳಲ್ಲಿ ಪಾಕಿಸ್ತಾನವೂ ಒಂದು. “ಕತಾರ್ನಲ್ಲಿ ಇಸ್ರೇಲ್ನ ಕಾನೂನುಬಾಹಿರ ಮತ್ತು ಘೋರ ಬಾಂಬ್ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ಹೇಳಿದ ಹಿಲ್ಲೆಲ್ ನ್ಯೂಯರ್ ಆದಾಗ್ಯೂ, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವುದಕ್ಕಾಗಿ ಕತಾರ್ ನಿಲುವನ್ನೂ ಟೀಕಿಸಿದರು. ಹಮಾಸ್ನ ರಾಜಕೀಯ ಕಚೇರಿಗೆ ಅವಕಾಶ ನೀಡಿದ್ದಕ್ಕಾಗಿ ಕತಾರ್ ಅನ್ನು ಸಹ “ಭಯೋತ್ಪಾದನೆಯ ಸರ್ಕಾರಿ ಪ್ರಾಯೋಜಕ” ಎಂದು ಆರೋಪಿಸಿದರು.
“ವಿಶ್ವದ ಕೆಟ್ಟ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸುವವರಿಂದ ನಾವು ಅಂತಾರಾಷ್ಟ್ರೀಯ ಕಾನೂನಿನ ಬಗ್ಗೆ ಬಹಳಷ್ಟು ಮಾತು ಕೇಳಿದ್ದೇವೆ. ಅಪರಾಧಿಗಳನ್ನು ಸವಾಲು ಮಾಡುವ ಸಮಯ ಇದು” ಎಂದು ಅವರು ಹೇಳಿದರು. ಕತಾರ್ ನಿಯೋಗದೊಂದಿಗೆ ಮಾತನಾಡಿದ ನ್ಯೂಯರ್, “ನಿಮ್ಮ ರಾಜಧಾನಿಯಲ್ಲಿ ಭಯೋತ್ಪಾದಕರ ಮೇಲೆ ಗುರಿಯಾಗಿ ಬಾಂಬ್ ದಾಳಿ ನಡೆಯುವುದನ್ನು ನೀವು ಬಯಸದಿದ್ದರೆ, ನಿಮ್ಮ ರಾಜಧಾನಿಯಲ್ಲಿ ನೀವು ಭಯೋತ್ಪಾದಕರಿಗೆ ಆಶ್ರಯ ನೀಡುವುದೇಕೆ? ಇನ್ನೂ ಒತ್ತೆಯಾಳುಗಳನ್ನು ಇಟ್ಟುಕೊಂಡು, ಅವರನ್ನು ಹಿಂಸಿಸುತ್ತಾ ಮತ್ತು ಶಾಂತಿ ಒಪ್ಪಂದಗಳನ್ನು ತಿರಸ್ಕರಿಸುತ್ತಿರುವ ಭಯೋತ್ಪಾದಕರು?” ಎಂದು ಹೇಳಿದರು.
ಭಯೋತ್ಪಾದಕರು ಐಷಾರಾಮಿ ಹೋಟೆಲ್ಗಳಲ್ಲಿ ಏಕೆ ಆಶ್ರಯ ಪಡೆದಿದ್ದಾರೆ. ಅವರು ಅಲ್ಲಿಂದಲೇ ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ಯೋಜಿಸಿದ್ದಾರೆ ಮತ್ತು 2007 ರಲ್ಲಿ ಹಮಾಸ್ ಗುಂಪು ಗಾಜಾವನ್ನು ವಶಪಡಿಸಿಕೊಳ್ಳಲು ಕತಾರ್ ಏಕೆ ಬೆಂಬಲ ನೀಡಿತು ಎಂದು ಅವರು ಪ್ರಶ್ನಿಸಿದರು. ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲಿನ ದಾಳಿ ನಡೆಸಿದ್ದಕ್ಕೆ ಹಮಾಸ್ ಗುಂಪನ್ನು ಕತಾರ್ ಆರೋಪ ಮುಕ್ತಗೊಳಿಸಿದೆ ಎಂದು ಅದು ಆರೋಪಿಸಿದರು.
“ನೀವು ಹಗಲಿನಲ್ಲಿ ಮಧ್ಯಸ್ಥಿಕೆ ವಹಿಸುತ್ತೀರಿ ಮತ್ತು ರಾತ್ರಿಯಲ್ಲಿ ಭಯೋತ್ಪಾದನಾ ಪ್ರಾಯೋಜಕರಾಗಿ ಏಕೆ ವರ್ತಿಸುತ್ತೀರಿ?” ಎಂದು ಅವರು ಪ್ರಶ್ನಿಸಿದರು. “ದಾಖಲೆ ತೋರಿಸಲಿ, ಕತಾರ್ ಭಯೋತ್ಪಾದನೆಯ ಸರ್ಕಾರಿ ಪ್ರಾಯೋಜಕ. 2017 ರಲ್ಲಿ ಕತಾರ್ ಜೊತೆಗಿನ ಸಂಬಂಧವನ್ನು ಸ್ಥಗಿತಗೊಳಿಸಿದಾಗ ಗಲ್ಫ್ ರಾಷ್ಟ್ರಗಳು ಹಾಗೆ ಹೇಳಿದವು ಎಂದು ನ್ಯೂಯರ್ ಹೇಳಿದರು.
ನಂತರ ಕತಾರ್ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಟೀಕಿಸಿದ್ದಕ್ಕಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನು ಸಹ ನ್ಯೂಯರ್ ಟೀಕಿಸಿದರು, ಅಮೆರಿಕವು ಪಾಕಿಸ್ತಾನದಲ್ಲಿ ಒಸಾಮಾ ಬಿನ್ ಲಾಡೆನ್ ಅನ್ನು ಕೊಂದಾಗ, “ಅಂತಾರಾಷ್ಟ್ರೀಯ ಭಯೋತ್ಪಾದನೆಯ ಮಾಸ್ಟರ್ ಮೈಂಡ್ ಸಾವಿನಿಂದ ನ್ಯಾಯ ಸಿಕ್ಕಿದೆ” ಎಂದು ಅವರು ಆಗ ಹೇಳಿದ್ದರು ಎಂದು ಗಮನಸೆಳೆದರು.
ಈ ಹಂತದಲ್ಲಿ, ಪಾಕಿಸ್ತಾನದ ನಿಯೋಗವು ನ್ಯೂಯರ್ ಅವರ ಭಾಷಣಕ್ಕೆ ಅಡ್ಡಿಪಡಿಸಿತು. ಪಾಕಿಸ್ತಾನವು ಒಸಾಮಾ ಬಿನ್ ಲಾಡೆನ್ ಮತ್ತು ಪಾಕಿಸ್ತಾನದ ಬಗ್ಗೆ ನ್ಯೂಯರ್ ಪ್ರಸ್ತಾಪ ಮಾಡಿದ್ದರಿಂದ ನಿರಾಶೆಗೊಂಡಂತೆ ತೋರುತ್ತಿತ್ತು. “ನಾವು ಆಧಾರರಹಿತ ಆರೋಪಗಳನ್ನು ತಿರಸ್ಕರಿಸುತ್ತೇವೆ” ಎಂದು ಪಾಕಿಸ್ತಾನದ ರಾಜತಾಂತ್ರಿಕರೊಬ್ಬರು ಹೇಳಿದರು ಹಾಗೂ ವಿಶ್ವಸಂಸ್ಥೆಯ ಚಾರ್ಟರ್ನ ತತ್ವಗಳು ಮತ್ತು ಸಾರ್ವಭೌಮ ಸದಸ್ಯ ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆಯನ್ನು ಒತ್ತಿ ಹೇಳಿದರು.
ಆಗ ಸಭಾಧ್ಯಕ್ಷರು ನ್ಯೂಯರ್ಗೆ ತಮ್ಮ ಭಾಷಣವನ್ನು ಪೂರ್ಣಗೊಳಿಸಲು ನಾಲ್ಕು ಸೆಕೆಂಡುಗಳ ಕಾಲಾವಕಾಶ ನೀಡಿದರು, ನಂತರ ಅವರು ಒಂದೇ ವಾಕ್ಯದೊಂದಿಗೆ, ” ಅಧ್ಯಕ್ಷರೇ, ಪಾಕಿಸ್ತಾನ ಭಯೋತ್ಪಾದನೆಯ ಮತ್ತೊಂದು ಸರ್ಕಾರಿ ಪ್ರಾಯೋಜಕ” ಎಂದು ಹೇಳಿ ತಮ್ಮ ಮಾತು ಮುಕ್ತಾಯಗೊಳಿಸಿದರು.
ಸೆಪ್ಟೆಂಬರ್ 9 ರಂದು (ಮಂಗಳವಾರ), ಕತಾರ್ ರಾಜಧಾನಿಯಲ್ಲಿ ತಂಗಿದ್ದಾರೆಂದು ಹೇಳಲಾದ ಹಮಾಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದೋಹಾದಲ್ಲಿ ವೈಮಾನಿಕ ದಾಳಿ ನಡೆಸಿತು. ಈ ದಾಳಿಯಲ್ಲಿ ಐದು ಹಮಾಸ್ ಸದಸ್ಯರು ಮತ್ತು ಒಬ್ಬ ಕತಾರ್ ಭದ್ರತಾ ಅಧಿಕಾರಿ ಸಾವಿಗೀಡಾದರು. ಹಮಾಸ್ ತನ್ನ ಉನ್ನತ ನಾಯಕರು ದಾಳಿಯಿಂದ ಪಾರಾಗಿದ್ದಾರೆ ಎಂದು ಹೇಳಿದೆ. ಇಸ್ರೇಲ್-ಹಮಾಸ್ ಮಾತುಕತೆಗಳಲ್ಲಿ ಕತಾರ್ ಮಧ್ಯವರ್ತಿಯಾಗಿ ಪ್ರಮುಖ ಪಾತ್ರ ವಹಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ