ಎಷ್ಟೇ ಆಫರ್‌ ನೀಡಿದ್ರೂ ಭಾರತವು ಅಮೆರಿಕದ ʼಸೂಪರ್ ಪವರ್ʼ ಯುದ್ಧ ವಿಮಾನಗಳನ್ನು ಯಾವತ್ತೂ ಖರೀದಿಸಿಲ್ಲ ಯಾಕೆ ಗೊತ್ತೆ ?

ನವದೆಹಲಿ: ಭಾರತದ ರಕ್ಷಣಾ ಪಡೆಯಲ್ಲಿ ಫ್ರಾನ್ಸ್‌ನ ರಾಫೆಲ್ ಇರಲಿ ಅಥವಾ ರಷ್ಯಾದ ಸುಖೋಯ್ ಇರಲಿ, ಅತ್ಯಾಧುನಿಕ ಯುದ್ಧ ವಿಮಾನಗಳ ದೊಡ್ಡ ಬತ್ತಳಿಕೆಯೇ ಇದೆ. ಆದರೆ  ಭಾರತದ ಬಳಿ ಒಂದೇ ಒಂದು ಅಮೆರಿಕದ  ಫೈಟರ್ ಜೆಟ್ ಇಲ್ಲ. ಹೌದು, ಭಾರತವು ರಷ್ಯಾ ಮತ್ತು ಫ್ರಾನ್ಸ್‌ನಿಂದ ಯುದ್ಧ ವಿಮಾನಗಳನ್ನು ಖರೀದಿಸುತ್ತದೆ, ಆದರೆ ಅಮೆರಿಕದಿಂದ ಖರೀದಿಸಿಲ್ಲ. ಭಾರತವು ಅಮೆರಿಕದಿಂದ ಅಪಾಚೆ ಹೆಲಿಕಾಪ್ಟರ್ ಮತ್ತು P-8I ವಿಚಕ್ಷಣ ವಿಮಾನಗಳನ್ನು ಖರೀದಿಸಿದೆ, ಆದರೆ ಇದುವರೆಗೆ ಒಂದೇ ಒಂದು ಅಮೆರಿಕನ್ ಫೈಟರ್ ಜೆಟ್ ಖರೀದಿಸಿಲ್ಲ. ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧಗಳು ಉತ್ತಮವಾಗಿದ್ದರೂ ಮತ್ತು ರಕ್ಷಣಾ ಸಂಬಂಧಗಳು ವೃದ್ಧಿಸುತ್ತಿದ್ದರೂ, ನವದೆಹಲಿ ಈ ನಿರ್ಧಾರಕ್ಕೆ ಬರಲು ಕಾರಣವೇನು? ಎನ್‌ಡಿಟಿವಿಯ ವರದಿಯಲ್ಲಿ ಇದರ ಅಸಲಿ ಕಾರಣಗಳು ಬಯಲಾಗಿವೆ.
ಅಮೆರಿಕ ನೀಡಿದ ಆಫರ್‌ಗಳು ಮತ್ತು ಭಾರತದ ನಿರಾಕರಣೆ
ಎನ್‌ಡಿಟಿವಿಯ ವರದಿಯ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಅಮೆರಿಕವು ತನ್ನ ಪ್ರಬಲ ಯುದ್ಧ ವಿಮಾನಗಳನ್ನು ಭಾರತಕ್ಕೆ ಹಲವು ಬಾರಿ ಆಫರ್ ಮಾಡಿದೆ. ಇವುಗಳಲ್ಲಿ ಇರಾನ್‌ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಪ್ರಸ್ತುತ ಅಮೆರಿಕವು ಕಾರ್ಯಾಚರಿಸುತ್ತಿರುವ ವಿಮಾನಗಳೂ ಸೇರಿವೆ.
F/A-18 ಸೂಪರ್ ಹಾರ್ನೆಟ್ (F/A-18 Super Hornet)
F-15E ಸ್ಟ್ರೈಕ್ ಈಗಲ್ (F-15E Strike Eagle)
F-16 ಫೈಟಿಂಗ್ ಫಾಲ್ಕನ್ (F-16 Fighting Falcon)
F-22 ರಾಪ್ಟರ್ (F-22 Raptor)
F-35 ಲೈಟ್ನಿಂಗ್ II (F-35 Lightning II)
B-2 ಸ್ಟೆಲ್ತ್ ಬಾಂಬರ್ (B-2 Stealth Bomber)
ಹೀಗೆ  ಭಾರತವು ಅಮೆರಿಕದ ಈ ಎಲ್ಲಾ ಯುದ್ಧ ವಿಮಾನಗಳ ಪ್ರಸ್ತಾವನೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಭಾರತವು ಅಮೆರಿಕದಿಂದ ಇತರ ಮಿಲಿಟರಿ ಉಪಕರಣಗಳನ್ನು ಖರೀದಿಸಿದರೂ ಯುದ್ಧ ವಿಮಾನವನ್ನು ಮಾತ್ರ ಖರೀದಿಸುತ್ತಿಲ್ಲ ಯಾಕೆ ಎಂಬುದು ಪ್ರಶ್ನೆ.
ಅಮೆರಿಕದ ಪ್ರಸ್ತುತ ಮಿಲಿಟರಿ ಸಾಮರ್ಥ್ಯ
ವರದಿಯ ಪ್ರಕಾರ, ಸದ್ಯ ಈ ಪ್ರದೇಶದಲ್ಲಿ ನಿಯೋಜಿಸಲಾದ ಅಮೆರಿಕದ ವಾಯು ಶಕ್ತಿಯು ಬೃಹತ್ ಪ್ರಮಾಣದ್ದಾಗಿದೆ. ಇದರಲ್ಲಿ ಕ್ಯಾರಿಯರ್-ಬೋರ್ನ್ F/A-18 ಸೂಪರ್ ಹಾರ್ನೆಟ್, ಮಧ್ಯಪ್ರಚಾಚ್ಯದ ವಾಯು ನೆಲೆಗಳಿಂದ ಕಾರ್ಯನಿರ್ವಹಿಸುವ F-15E ಸ್ಟ್ರೈಕ್ ಈಗಲ್, ನಿರಂತರ ವಾಯು ರಕ್ಷಣಾ ಗಸ್ತಿನಲ್ಲಿರುವ F-16, ಇಸ್ರೇಲ್‌ನಿಂದ ನಿಯೋಜಿಸಲಾದ ಶತ್ರುಗಳ ಕಣ್ಣಿಗೆ ಬೀಳದ F-22  ರಾಪ್ಟರ್ ಸ್ಟೆಲ್ತ್ ಫೈಟರ್, ದೀರ್ಘ ವ್ಯಾಪ್ತಿಯ ದಾಳಿ ನಡೆಸುವ B-2 ಸ್ಟೆಲ್ತ್ ಬಾಂಬರ್ ಮತ್ತು ಲೇಯರ್ಡ್ ಏರ್ ಡಿಫೆನ್ಸ್ ಸಿಸ್ಟಮ್ ವಿರುದ್ಧ ಹೋರಾಡುವ F-35 ಸ್ಟೆಲ್ತ್ ಫೈಟರ್‌ಗಳು ಸೇರಿವೆ. ಇದು ಇತ್ತೀಚಿನ ದಶಕಗಳಲ್ಲಿ ಅಮೆರಿಕದ ವಾಯುಪಡೆಯ ಅಪ್ರತಿಮ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಆದರೂ ಭಾರತವು ಈ ಭೀಕರ ಯುದ್ಧವಿಮಾನಗಳ ಸಮೂಹದಿಂದ ದೂರವೇ ಉಳಿಯಲು ನಿರ್ಧರಿಸಿರುವುದು ಜಾಗತಿಕ ರಕ್ಷಣಾ ವಲಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.
ಅಮೆರಿಕದಿಂದ ಭಾರತ ಖರೀದಿಸಿದ ಇತರ ವಿಮಾನಗಳು, ಹೆಲಿಕಾಪ್ಟರ್‌ಗಳು
ಫೈಟರ್ ಜೆಟ್‌ಗಳನ್ನು ಹೊರತುಪಡಿಸಿ, ಅಮೆರಿಕದಿಂದ ಭಾರತದ ರಕ್ಷಣಾ ಖರೀದಿ ಕಳೆದ 10 ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿದೆ. ಭಾರತವು ಮುಖ್ಯವಾಗಿ
C-17 ಗ್ಲೋಬ್‌ಮಾಸ್ಟರ್: ಕಾರ್ಯತಂತ್ರದ ಸಾರಿಗೆ ವಿಮಾನ.
C-130J ಸೂಪರ್ ಹರ್ಕ್ಯುಲಸ್: ಟ್ಯಾಕ್ಟಿಕಲ್ ಸಾರಿಗೆ ವಿಮಾನ.
P-8I ಪೋಸಿಡಾನ್: ಕಡಲ ಕಣ್ಗಾವಲು ವಿಮಾನ.
AH-64 ಅಪಾಚೆ: ಅಟ್ಯಾಕ್ ಹೆಲಿಕಾಪ್ಟರ್.
CH-47 ಚಿನೂಕ್: ಹೆವಿ-ಲಿಫ್ಟ್ ಹೆಲಿಕಾಪ್ಟರ್‌ಗಳು ಸೇರಿವೆ.
MQ-9B ಪ್ರಿಡೇಟರ್ ಡ್ರೋನ್: ಕಣ್ಗಾವಲು ಮತ್ತು ದಾಳಿಗಾಗಿ ಇದನ್ನು ಶೀಘ್ರದಲ್ಲೇ ಸೇರಿಸಿಕೊಳ್ಳುವ ನಿರೀಕ್ಷೆಯಿದೆ. ಈ ಶತಕೋಟಿ ಡಾಲರ್ ವ್ಯವಹಾರಗಳಿಂದಾಗಿ ಅಮೆರಿಕವು ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ.
ಅಮೆರಿಕನ್ ಯುದ್ಧ ವಿಮಾಗಳ ಖರೀದಿಯಿಂದ ಭಾರತ ದೂರವಿರಲು ಕಾರಣವೇನು?
1. ಇತಿಹಾಸದ ಕಹಿ ಮತ್ತು ವಿಶ್ವಾಸದ ಕೊರತೆ 
ಎನ್‌ಡಿಟಿವಿ ವರದಿ ಪ್ರಕಾರ, ಭಾರತದ ಹಿಂಜರಿಕೆಗೆ ಶೀತಲ ಸಮರದ ಇತಿಹಾಸವೇ ಕಾರಣ. ಭಾರತ ಮತ್ತು ಅಮೆರಿಕದ ನಡುವಿನ ಈ ‘ಯುದ್ಧವಿಮಾನದ ಅಂತರ’ಕ್ಕೆ ಮುಖ್ಯ ಕಾರಣ 1960 ಮತ್ತು 70ರ ದಶಕದ ರಾಜಕೀಯ. ಶೀತಲ ಸಮರದ ಸಮಯದಲ್ಲಿ ಅಮೆರಿಕವು ಪಾಕಿಸ್ತಾನವನ್ನು ತನ್ನ ಆಪ್ತ ಮಿತ್ರನನ್ನಾಗಿ ಮಾಡಿಕೊಂಡಿತ್ತು. ಕೇವಲ ರೈಫಲ್ ಅಥವಾ ಟ್ಯಾಂಕ್‌ಗಳನ್ನಷ್ಟೇ ಅಲ್ಲ, ಅಮೆರಿಕವು ಅಂದಿನ ಕಾಲದ ಅತ್ಯಾಧುನಿಕ ಯುದ್ಧ ವಿಮಾನಗಳಾದ F-86 ಸೇಬರ್, F-104 ಸ್ಟಾರ್‌ಫೈಟರ್, F-86D, A-37 ಮತ್ತು ನಂತರ F-16 ಫೈಟಿಂಗ್ ಫಾಲ್ಕನ್ ನಂತಹ ವಿಮಾನಗಳನ್ನು ಭಾರತದ ಪರಮ ಶತ್ರುವಾದ ಪಾಕಿಸ್ತಾನಕ್ಕೆ ನೀಡಿತ್ತು. ಪಾಕಿಸ್ತಾನವು ಇವುಗಳನ್ನು ಭಾರತದ ವಿರುದ್ಧದ ಯುದ್ಧಗಳಲ್ಲಿ ಬಳಸಿತ್ತು. ಇದರಿಂದಾಗಿ ಭಾರತವು ತನ್ನ ವಾಯುಪಡೆಗೆ ರಷ್ಯಾದ  MiG-21, MiG-23, MiG-29, ಮತ್ತು Su-30MKI ನಂತಹ ಯುದ್ಧ ವಿಮಾನಗಳನ್ನು ಖರೀದಿಸಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿತು. ಜಗುವಾರ್, ಮಿರಾಜ್ 2000 ಮತ್ತು ಹಾಕರ್ ಹಂಟರ್ ನಂತಹ ಪಾಶ್ಚಿಮಾತ್ಯ ವಿಮಾನಗಳೂ ಸೇರ್ಪಡೆಯಾದವು. ಇಂದಿಗೂ ಸುಖೋಯ್ (Su-30MKI) ಭಾರತದ ಬೆನ್ನೆಲುಬಾಗಿದೆ.  ಇದು ಕೇವಲ ಶಸ್ತ್ರಾಸ್ತ್ರ ಖರೀದಿಯಲ್ಲ, ಬದಲಿಗೆ ಅಮೆರಿಕದ ‘ಬದಲಾಗುವ ನಿಲುವು’ಗಳ ವಿರುದ್ಧ ಭಾರತ ಕಂಡುಕೊಂಡ ರಕ್ಷಣಾ ಕವಚವಾಗಿದೆ.
2. 1998ರ ಪರಮಾಣು ಪರೀಕ್ಷೆ ಮತ್ತು ನಿರ್ಬಂಧಗಳು:
ಮೇ 1998ರಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಿದಾಗ ಅಮೆರಿಕದ ಅಂದಿನ ಕ್ಲಿಂಟನ್ ಸರ್ಕಾರ ಭಾರತದ ಮೇಲೆ ತೀವ್ರ ನಿರ್ಬಂಧ ಹೇರಿತು. ರಾತ್ರೋರಾತ್ರಿ ತಾಂತ್ರಿಕ ನೆರವನ್ನು ಸ್ಥಗಿತಗೊಳಿಸಿತು. ಭಾರತವು ಕಷ್ಟದ ಸಮಯದಲ್ಲಿ ಅಮೆರಿಕವನ್ನು ನಂಬಲು ಸಾಧ್ಯವಿಲ್ಲ ಎಂಬ ಪಾಠವನ್ನು ಈ ಘಟನೆ ಮತ್ತೊಮ್ಮೆ ಪುನರುಚ್ಚರಿಸಿತು.  ಅಮೆರಿಕದ ಅಂದಿನ “ರಾಜತಾಂತ್ರಿಕ ನಿರ್ಧಾರಗಳು” ಭಾರತದ ರಕ್ಷಣಾ ನೀತಿಯಲ್ಲಿ ಶಾಶ್ವತವಾದ ಅನುಮಾನದ ಪದರವೊಂದನ್ನು ಸೃಷ್ಟಿಸಿತು.
3. ಕಾರ್ಯಾಚರಣೆಯ ಅವಲಂಬನೆಯ ಭಯ (Operational Dependence):
ಭಾರತವು ಅಮೆರಿಕದಿಂದ ಸಾರಿಗೆ ವಿಮಾನಗಳು (C-17), ಹೆಲಿಕಾಪ್ಟರ್‌ಗಳು (Apache, Chinook) ಮತ್ತು ಕಣ್ಗಾವಲು ವಿಮಾನಗಳನ್ನು (P-8I) ಖರೀದಿಸಿದೆ. ಆದರೆ ಯುದ್ಧವಿಮಾನಗಳ ವಿಷಯದಲ್ಲಿ ಮಾತ್ರ ಏಕೆ ಹಿಂಜರಿಯುತ್ತಿದೆ ಎಂಬುದಕ್ಕೆ ಕಾರಣವೆಂದರೆ ‘ಸಾರ್ವಭೌಮತ್ವ’. ಅಮೆರಿಕದ ಯುದ್ಧವಿಮಾನಗಳನ್ನು ಖರೀದಿಸುವುದೆಂದರೆ, ಅದರೊಂದಿಗೆ ಅಮೆರಿಕದ ನಿಯಮಗಳನ್ನೂ ಒಪ್ಪಿಕೊಳ್ಳುವುದು ಎಂದೇ ಅರ್ಥೈಸಲಾಗುತ್ತದೆ. ಯುದ್ಧದ ಸಮಯದಲ್ಲಿ ಅಮೆರಿಕಕ್ಕೆ ಭಾರತದ ನಿಲುವು ಇಷ್ಟವಾಗದಿದ್ದರೆ, ತಕ್ಷಣವೇ ಬಿಡಿಭಾಗಗಳ ಪೂರೈಕೆ ಅಥವಾ ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳನ್ನು ನಿಲ್ಲಿಸುವ ಅಧಿಕಾರ ಅಮೆರಿಕದ ಕೈಲಿರುತ್ತದೆ.
ಯುದ್ಧ ವಿಮಾನಗಳು ದೇಶದ ವಾಯು ಯುದ್ಧ ಸಾಮರ್ಥ್ಯದ ‘ಕೋರ್’ ಆಗಿರುತ್ತವೆ. ಅಮೆರಿಕದಿಂದ ಇವುಗಳನ್ನು ಖರೀದಿಸಿದರೆ ಬಿಡಿಭಾಗಗಳ ಪೂರೈಕೆ, ಸಾಫ್ಟ್‌ವೇರ್ ಅಪ್‌ಡೇಟ್ ಮತ್ತು ರಫ್ತು ಅನುಮೋದನೆಗಳಿಗಾಗಿ ಅವರ ಮೇಲೆ ಭಾರತವು ಅವಲಂಬಿತವಾಗಬೇಕಾಗುತ್ತದೆ. ಅಂದರೆ ಪಾಕಿಸ್ತಾನದ ಜೊತೆ ಅಮೆರಿಕದ ಸಂಬಂಧ ಹಳಸಿದ ಸಂದರ್ಭದಲ್ಲಿ ಅದು ಅಮೆರಿಕದ F-16 ಯುದ್ಧ ವಿಮಾನದ ಬಿಡಿಭಾಗಗಳಿಗಾಗಿ ನಿರ್ಬಂಧ ಎದುರಿಸಿದ್ದು ಮತ್ತು ಟರ್ಕಿ ದೇಶವು ಅಮೆರಿಕದಿಂದ ಅನುಭವಿಸಿದ ಒತ್ತಡವನ್ನು ಭಾರತ ಉದಾಹರಣೆಯಾಗಿ ನೋಡಿದೆ. ಹೀಗಾಗಿ ಭಾರತವು ತನ್ನ ಆಕಾಶವನ್ನು ರಕ್ಷಿಸುವ ವಿಮಾನದ ಕೀಲಿ ಕೈಯನ್ನು ಮತ್ತೊಂದು ದೇಶದ ಕೈಗೆ ನೀಡಲು ಸಿದ್ಧವಿಲ್ಲ.
ಅಮೆರಿಕವು 2000ದ ಸಮಯದಲ್ಲಿ ಭಾರತಕ್ಕೆ F-16 ಮತ್ತು F/A-18 ಸೂಪರ್ ಹಾರ್ನೆಟ್ ಯುದ್ಧ ವಿಮಾನಗಳನ್ನು ಆಫರ್ ಮಾಡಿತ್ತು. ನಂತರ ಭಾರತಕ್ಕಾಗಿ ವಿಶೇಷವಾಗಿ F-21 ಎಂಬ ಸುಧಾರಿತ ಆವೃತ್ತಿಯನ್ನು ಮತ್ತು F-15EX ಈಗಲ್ II ಯುದ್ಧ ವಿಮಾನ ನೀಡುವುದನ್ನು ಕೂಡ ಪ್ರಸ್ತಾಪಿಸಿತು. ಆದರೆ ಭಾರತವು ಫ್ರಾನ್ಸ್‌ನ ಡಸಾಲ್ಟ್ ರಫೆಲ್ ಯುದ್ಧ ವಿಮಾನವನ್ನು ಆಯ್ಕೆ ಮಾಡಿಕೊಂಡಿತು. ಭಾರತೀಯ ನೌಕಾಪಡೆಯು ಸೂಪರ್ ಹಾರ್ನೆಟ್ ಯುದ್ಧ ವಿಮಾನವನ್ನು ಮೌಲ್ಯಮಾಪನ ಮಾಡಿದರೂ, ಅಂತಿಮವಾಗಿ ರಫೆಲ್ ಖರೀದಿಗೆ ಒಲವು ತೋರಿತು.  ಫ್ರಾನ್ಸ್‌ನ ವಿಶೇಷತೆಯೆಂದರೆ, ಅದು ಯುದ್ಧ ವಿಮಾನ ವ್ಯಾಪಾರ ಮಾಡುತ್ತದೆ. ಆದರೆ ಭಾರತದ ಇತರ ರಾಜತಾಂತ್ರಿಕ ನಿರ್ಧಾರಗಳು ಹಾಗೂ ಬಗ್ಗೆ ಶಸ್ತ್ರಾಸ್ತ್ರ ಖರೀದಿ ಇತ್ಯಾದಿಗಳ ಪ್ರಶ್ನಿಸುವುದಿಲ್ಲ. ಫ್ರಾನ್ಸ್ ತನ್ನ ಶಸ್ತ್ರಾಸ್ತ್ರಗಳ ಮೇಲೆ ರಾಜಕೀಯ ಷರತ್ತುಗಳನ್ನು ಹೇರುವುದಿಲ್ಲ.
ಬಾಲಾಕೋಟ್‌ ಸಂದೇಶ
2019ರ ಬಾಲಾಕೋಟ್ ವಾಯುದಾಳಿಯ ನಂತರದ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷದ ವೇಳೆ ಪಾಕಿಸ್ತಾನ F-16 ಬಳಸಿದಾಗ ಭಾರತ ಮಿಗ್-21 ಬೈಸನ್ ಯುದ್ಧ ವಿಮಾನ ಬಳಸಿತು. ಭಾರತದ 40 ವರ್ಷ ಹಳೆಯ ಮಿಗ್-21 ಬೈಸನ್ ಯುದ್ಧ ವಿಮನವು, ಪಾಕಿಸ್ತಾನದ ಅತ್ಯಾಧುನಿಕ F-16 ಯುದ್ಧ ವಿಮಾನವನ್ನು ಹೊಡೆದುರುಳಿಸಿತು. ಈ ಘಟನೆಯು ಅಮೆರಿಕದ ಯುದ್ಧವಿಮಾನಗಳ ಮೇಲಿದ್ದ ‘ಅಜೇಯ’ ಎಂಬ ಪಟ್ಟಕ್ಕೆ ಧಕ್ಕೆ ತಂದಿತು.
 ಈ ಘಟನೆಯು ಕಾರ್ಯತಂತ್ರದ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿತು. ಭಾರತಕ್ಕೆ ತನ್ನಲ್ಲಿರುವ ರಷ್ಯಾ ಮೂಲದ ವಿಮಾನಗಳ ಮೇಲೆ ಹೆಚ್ಚಿನ ಆತ್ಮವಿಶ್ವಾಸ ಮೂಡಿತು.
ಸದ್ಯ ಅಮೆರಿಕವು ಭಾರತಕ್ಕೆ F-35 ಸ್ಟೆಲ್ತ್ ಫೈಟರ್ ನೀಡುವ ಸುಳಿವು ನೀಡಿದ್ದರೂ, ಭಾರತವು ರಷ್ಯಾದ Su-57 ಸ್ಟೆಲ್ತ್ ಫೈಟರ್ ಅಥವಾ ಸ್ವದೇಶಿ ತೇಜಸ್ ತಯಾರಿಕೆಯತ್ತ ಒಲವು ತೋರುತ್ತಿದೆ.
ಸತತವಾಗಿ ಬಂದ ಭಾರತೀಯ ಸರ್ಕಾರಗಳು ಯುದ್ಧ ವಿಮಾನಗಳ ವಿಷಯದಲ್ಲಿ ರಷ್ಯಾ, ಫ್ರಾನ್ಸ್ ಮತ್ತು ಸ್ವದೇಶಿ ತಂತ್ರಜ್ಞಾನಕ್ಕೇ ಆದ್ಯತೆ ನೀಡುವ ಮೂಲಕ ಒಂದು ಸ್ಥಿರವಾದ ಖರೀದಿ ಮಾದರಿಯನ್ನು ಅನುಸರಿಸುತ್ತಾ ಬಂದಿವೆ. ಭಾರತವು ಅಮೆರಿಕದೊಂದಿಗೆ ಮಿಲಿಟರಿ ಸಹಕಾರವನ್ನು ಮುಂದುವರಿಸುತ್ತದೆ, ಜಂಟಿ ಸಮರಾಭ್ಯಾಸಗಳನ್ನು ಮಾಡುತ್ತದೆ, ಆದರೆ ತನ್ನ ಆತ್ಯಂತಿಕ ರಕ್ಷಣಾ ಶಕ್ತಿಯಾದ ‘ಯುದ್ಧವಿಮಾನ’ಗಳ ವಿಷಯದಲ್ಲಿ ಮಾತ್ರ ಸ್ವಾವಲಂಬನೆಯನ್ನು ಬಯಸುತ್ತದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement