ವಿಡಿಯೋ | ಕಾರವಾರದಿಂದ ಹೊರಟಿದ್ದ ತೈಲ ಸಾಗಣೆ ಹಡಗಿಗೆ ಒಮಾನ್‌ ಕರಾವಳಿಯಲ್ಲಿ ಹೊತ್ತಿಕೊಂಡ ಬೆಂಕಿ

YouTube: please specify correct url

ಮಸ್ಕತ್ (ಓಮನ್): ಕಾರವಾರದಿಂದ ಹೊರಟಿದ್ದ ಓಮನ್ ಕರಾವಳಿಯ ಸಮುದ್ರ ಪ್ರದೇಶದಲ್ಲಿ ಹೋಗುತ್ತಿದ್ದ  ‘ಮಾರಿವೆಕ್ಸ್’ (Marivex) ಎಂಬ ತೈಲ ಸಾಗಣೆ ಹಡಗಿನಲ್ಲಿ (ಆಯಿಲ್ ಟ್ಯಾಂಕರ್) ಸೋಮವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದುವರದಿಯಾಗಿದೆ.  ಅದೃಷ್ಟವಶಾತ್, ಹಡಗಿನಲ್ಲಿದ್ದ ಎಲ್ಲಾ 24 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.
ಇರಾನ್ ಮತ್ತು ಇಸ್ರೇಲ್ ಗಳು ಕದನ ವಿರಾಮವನ್ನು ಉಲ್ಲಂಘಿಸಿ ಮತ್ತೆ ಪರಸ್ಪರ ಕ್ಷಿಪಣಿ ದಾಳಿಗಳನ್ನು ನಡೆಸಿದ ಪಶ್ಚಿಮ ಏಷ್ಯಾದಾದ್ಯಂತ ಮತ್ತೆ ಯುದ್ಧದ ಭೀತಿ ಹೆಚ್ಚುತ್ತಿರುವ ಸನ್ನಿವೇಶದಲ್ಲಿ ಈ ಘಟನೆ ನಡೆದಿದೆ. ಮಡಗಾಸ್ಕರ್ ದೇಶದ ಧ್ವಜ ಹೊಂದಿದ್ದ ಮಾರಿವೆಕ್ಸ್‌ (MARIVEX) ಹೆಸರಿನ ಈ ತೈಲ  ಹಡಗು ಒಮಾನಿ ಕರಾವಳಿಯಲ್ಲಿ ಇದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ, ಸಿಬ್ಬಂದಿ ತುರ್ತು ಸಹಾಯವನ್ನು ಕೋರಿದರು, ಹಡಗಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ ಮತ್ತು ಮುಳುಗುವ ಅಪಾಯದಲ್ಲಿದೆ ಎಂದು ಎಚ್ಚರಿಸಿದರು. ಹಡಗಿನಲ್ಲಿ ಯಾವುದೇ ಸರಕು (ಕಾರ್ಗೋ) ಇರಲಿಲ್ಲ ಎಂದು ತಿಳಿದುಬಂದಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 1:30 ರ ಸುಮಾರಿಗೆ ಈ ಬೆಂಕಿ ಕಾಣಿಸಿಕೊಂಡಿದ್ದು, ಅಪಘಾತಕ್ಕೆ ನಿಖರವಾದ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
‘ಮೆರೈನ್ ಟ್ರಾಫಿಕ್’ (MarineTraffic) ಟ್ರ್ಯಾಕಿಂಗ್ ದತ್ತಾಂಶಗಳ ಪ್ರಕಾರ, ಈ ಹಡಗು ಭಾರತದ ಕರ್ನಾಟಕದ ಕಾರವಾರದಿಂದ ಓಮನ್ ದೇಶದ ದುಕ್ಮ್ (Duqm) ಬಂದರಿನ ಕಡೆಗೆ ಪ್ರಯಾಣಿಸುತ್ತಿತ್ತು.
 ರಕ್ಷಣೆಗಾಗಿ ತುರ್ತು ಸಂದೇಶ ಕಳುಹಿಸಿದ ಸಿಬ್ಬಂದಿ
“ಸರ್, ಇದು ಮೋಟಾರ್ ಟ್ಯಾಂಕರ್ ಮಾರಿವೆಕ್ಸ್… ಇದು ಮೋಟಾರ್ ಟ್ಯಾಂಕರ್ ಮಾರಿವೆಕ್ಸ್. ನಮ್ಮ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಹಡಗಿನ ಒಳಗೆಲ್ಲಾ ಬೆಂಕಿ ವ್ಯಾಪಿಸುತ್ತಿದ್ದು, ಹಡಗು ಸಮುದ್ರದಲ್ಲಿ ಮುಳುಗುತ್ತಿದೆ” ಎಂದು ಹಡಗಿನ ಸಿಬ್ಬಂದಿಯೊಬ್ಬರು ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ.
ಅಪಾಯದ ಸಮಯದಲ್ಲಿ ಪ್ರಾಣ ಉಳಿಸಿಕೊಳ್ಳಲು ಬಳಸುವ ತುರ್ತು ರಕ್ಷಣಾ ಸಲಕರಣೆಗಳೂ ಸಹ ಬೆಂಕಿಗೆ ಆಹುತಿಯಾಗಿರುವುದನ್ನು ನಾವಿಕ ಬಿಚ್ಚಿಟ್ಟಿದ್ದಾನೆ. “ನಮ್ಮ ಲೈಫ್‌ಬೋಟ್ (ಜೀವ ರಕ್ಷಕ ದೋಣಿ) ಕೂಡ ಬೆಂಕಿಗೆ ಆಹುತಿಯಾಗಿದೆ. ನಮಗೆ ಲೈಫ್‌ಬೋಟ್ ಅನ್ನು ಕೆಳಗೆ ಇಳಿಸಲು ಸಾಧ್ಯವಾಗುತ್ತಿಲ್ಲ. ಒಂದು ಲೈಫ್‌ಬೋಟ್ ಈಗಾಗಲೇ ನಾಪತ್ತೆಯಾಗಿದೆ ಮತ್ತು ಅದು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಬೋಟ್ ಕಟ್ಟಿದ್ದ ಹಗ್ಗಕ್ಕೆ ಬೆಂಕಿ ಹೊತ್ತಿಕೊಂಡಿದೆ. ನಮಗೆ ಲೈಫ್‌ಬೋಟ್ ಆಗಲಿ ಅಥವಾ ಲೈಫ್‌ರಾಫ್ಟ್ (ತುರ್ತು ತೇಲು ದೋಣಿ) ಆಗಲಿ, ಯಾವುದನ್ನೂ ಕೆಳಕ್ಕೆ ಇಳಿಸಲು ಸಾಧ್ಯವಾಗುತ್ತಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾನೆ.
“ಹಡಗಿನ ಒಳಭಾಗ (ಹಲ್) ತೀವ್ರವಾಗಿ ಹಾನಿಗೊಳಗಾಗಿದೆ ಮತ್ತು ಅದಕ್ಕೂ ಬೆಂಕಿ ಬಿದ್ದಿದೆ. ದಯವಿಟ್ಟು ನಮಗೆ ಸಹಾಯ ಮಾಡಿ… ದಯವಿಟ್ಟು ನಮ್ಮನ್ನು ರಕ್ಷಿಸಿ” ಎಂದು ನಾವಿಕ ಪದೇ ಪದೇ ಹಡಗಿನ ಹೆಸರನ್ನು ಉಲ್ಲೇಖಿಸುತ್ತಾ ಜೀವ ಉಳಿಸುವಂತೆ ಗೋಳಾಡಿದ್ದಾನೆ. ಹಡಗಿನ ಒಳಗಿನ ಪರಿಸ್ಥಿತಿ ಕ್ಷಣಕ್ಷಣಕ್ಕೂ ಅತ್ಯಂತ ಗಂಭೀರವಾಗುತ್ತಿದ್ದು, ನಾವಿಕರು ತೀವ್ರ ಆತಂಕದಲ್ಲಿ ದಿನದೂಡುತ್ತಿದ್ದಾರೆ ಎಂಬುದು ಈ ಸಂದೇಶದಿಂದ ಸ್ಪಷ್ಟವಾಗಿದೆ. ಇಂತಹ ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲೂ ಭಾರತೀಯ ನೌಕಾಪಡೆ ಮತ್ತು ಓಮನ್ ಅಧಿಕಾರಿಗಳು ನಾವಿಕರನ್ನು ಸುರಕ್ಷಿತವಾಗಿ ಹೊರತರಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಹಡಗಿಗೆ ಕ್ಷಿಪಣಿ ಡಿಕ್ಕಿ ಹೊಡೆದಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. “ನಮ್ಮ ಭಾರತೀಯ ರೂಮ್‌ ಮೇಲೆ ಅಮೆರಿಕ ನೌಕಾಪಡೆ ಕ್ಷಿಪಣಿ ದಾಳಿ ಮಾಡಿದೆ. ನಮ್ಮ ಕೆಳಭಾಗದಲ್ಲಿ ರಂಧ್ರಗಳು ಉಂಟಾಗಿವೆ. ನಮ್ಮ ಹಡಗಿನಲ್ಲಿ ಬೆಂಕಿ ಬಿದ್ದಿದೆ. ದಯವಿಟ್ಟು ಸಹಾಯ ಮಾಡಿ” ಎಂದು ಆಡಿಯೋದಲ್ಲಿ ಹೇಳಲಾಗಿದೆ.

ಟ್ಯಾಂಕರ್ ಅನ್ನು ಪತ್ತೆಹಚ್ಚಲು ಹಡಗಿನ ಎಐಎಸ್‌ (AIS) ಡೇಟಾವನ್ನು ಬಳಸುವಂತೆ ಸಂದೇಶವು ಅಧಿಕಾರಿಗಳಿಗೆ ಹೇಳಿದೆ.
ಹಡಗಿನಲ್ಲಿರುವ ಎಲ್ಲಾ 24 ಸಿಬ್ಬಂದಿಗಳು ಭಾರತೀಯ ನಾಗರಿಕರು ಮತ್ತು ತಕ್ಷಣದ ಸಹಾಯದ ಅಗತ್ಯವಿದೆ ಎಂದು ವಿಪತ್ತು ಕರೆಯಲ್ಲಿ ತಿಳಿಸಲಾಗಿದೆ.
ಭಾರತೀಯ ರಾಯಭಾರ ಕಚೇರಿ ಸ್ಪಂದನೆ:
ಈ ಘಟನೆ ತಿಳಿಯುತ್ತಿದ್ದಂತೆ ಓಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತ್ವರಿತವಾಗಿ ಸ್ಪಂದಿಸಿದೆ. “ಭಾರತೀಯ ನಾವಿಕರಿರುವ ಹಡಗಿನ ದುರಂತದ ಬಗ್ಗೆ ರಾಯಭಾರ ಕಚೇರಿಗೆ ಮಾಹಿತಿ ಲಭ್ಯವಾಗಿದೆ. ನಾವಿಕರ ರಕ್ಷಣೆ ಮತ್ತು ಸುರಕ್ಷತೆಗಾಗಿ ನಾವು ಓಮನ್ ದೇಶದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ಭಾರತೀಯ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದೆ.

YouTube: please specify correct url

ಪ್ರಮುಖ ಸುದ್ದಿ :-   ವಿಚಿತ್ರ ಮದುವೆ...: ಹೆಂಡತಿಯನ್ನು ಕೈಬಿಟ್ಟು ಅತ್ತೆಯನ್ನೇ ವರಿಸಿದ ಅಳಿಯ ! ವಿಲಕ್ಷಣ ಮದುವೆಯ ವಿಡಿಯೋ ವೈರಲ್
ಸಚಿವಾಲಯಗಳ ಜಂಟಿ ಕಾರ್ಯಾಚರಣೆ:
ಈ ಕುರಿತು ಮಾಹಿತಿ ನೀಡಿರುವ ನೌಕಾಯಾನ ಸಚಿವಾಲಯದ ನಿರ್ದೇಶಕ ಒಪೇಶಕುಮಾರ ಶರ್ಮಾ ಅವರು, “ಹಡಗಿನಲ್ಲಿದ್ದ ಎಲ್ಲಾ ಭಾರತೀಯ ನಾವಿಕರು ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ. ಅವರ ಸಂಪೂರ್ಣ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು, ಭಾರತೀಯ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಅಲ್ಲದೆ, ನೌಕಾಯಾನ ಸಚಿವಾಲಯವು ‘ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್’ ಮೂಲಕ ಇದುವರೆಗೆ ಒಟ್ಟು 3,506 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆತಂದಿದೆ. ಇದರಲ್ಲಿ ಕಳೆದ 96 ಗಂಟೆಗಳಲ್ಲಿ ರಕ್ಷಿಸಲಾದ 32 ನಾವಿಕರು ಸಹ ಸೇರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಾವಿಕರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement