ಭಾರತ–ಚೀನಾ ಸಂಬಂಧ ಸುಧಾರಣೆಗೆ ಗಡಿಯಲ್ಲಿ ಶಾಂತಿ ನೆಲೆಸುವುದು ಅತಿಮುಖ್ಯ : ಚೀನಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್‌ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಭಾರತ–ಚೀನಾ ಸಂಬಂಧಗಳ ಸಮಗ್ರ ಪ್ರಗತಿ, ಗಡಿ ವಿಚಾರ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದರು. ಪರಸ್ಪರರ ಸಾಮರ್ಥ್ಯಗಳಿಂದ ಸಂಪೂರ್ಣವಾಗಿ ಕಲಿತು, ಒಬ್ಬರಿಗೊಬ್ಬರು ಬೆಂಬಲ ನೀಡುವ ಮೂಲಕ ಎರಡೂ ದೇಶಗಳು ಸಾಮಾನ್ಯ ಅಭಿವೃದ್ಧಿಯತ್ತ ಸಾಗಬಹುದು ಎಂದು ಶೀ ಜಿನ್‌ಪಿಂಗ್‌ ಹೇಳಿದ್ದಾರೆ.
ಏಳು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿರುವ ಶೀ ಜಿನ್‌ಪಿಂಗ್‌, ಎರಡು ದಿನಗಳ ಪ್ರವಾಸದ ಭಾಗವಾಗಿ ದೆಹಲಿಗೆ ಆಗಮಿಸಿದ್ದಾರೆ. ಭಾರತ ಆತಿಥ್ಯ ವಹಿಸಿರುವ ಬ್ರಿಕ್ಸ್‌ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಮಾತುಕತೆಯ ವೇಳೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡುವುದು ಭಾರತ–ಚೀನಾ ಸಂಬಂಧಗಳ ನಿರಂತರತೆಗೆ ಅತ್ಯಗತ್ಯ ಆಧಾರ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳು ಮತ್ತು ಪರಸ್ಪರ ತಿಳುವಳಿಕೆಗಳನ್ನು ಎರಡೂ ದೇಶಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮೋದಿ ಒತ್ತಿ ಹೇಳಿದರು.

ಭಾರತದ ವಿದೇಶಾಂಗ ಸಚಿವಾಲಯದ ಹೇಳಿಕೆಯ ಪ್ರಕಾರ, ಉಭಯ ನಾಯಕರು ತಮ್ಮ ಸಮಗ್ರ ದ್ವಿಪಕ್ಷೀಯ ಸಂಬಂಧಗಳ ರಾಜಕೀಯ ದೃಷ್ಟಿಕೋನ ಮತ್ತು ಎರಡೂ ದೇಶಗಳ ಜನರ ದೀರ್ಘಕಾಲೀನ ಹಿತಾಸಕ್ತಿಗಳನ್ನು ಆಧಾರವಾಗಿಟ್ಟುಕೊಂಡು, ಗಡಿ ಸಮಸ್ಯೆಗೆ ನ್ಯಾಯಸಮ್ಮತ, ಸಮಂಜಸ ಹಾಗೂ ಪರಸ್ಪರ ಒಪ್ಪಿಗೆಯ ಪರಿಹಾರ ಕಂಡುಕೊಳ್ಳುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
2025ರ ಆಗಸ್ಟ್‌ನಲ್ಲಿ ಟಿಯಾಂಜಿನ್‌ನಲ್ಲಿ ನಡೆದ ಭೇಟಿಯ ಬಳಿಕ ಭಾರತ–ಚೀನಾ ದ್ವಿಪಕ್ಷೀಯ ಸಂಬಂಧಗಳಲ್ಲಿ ಕಂಡುಬಂದಿರುವ ಸ್ಥಿರ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದ್ದಾರೆ. “ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಪರಿವರ್ತನೆಯಾಗಬಾರದು. ಪರಸ್ಪರ ಗೌರವ, ಪರಸ್ಪರ ಸಂವೇದನಾಶೀಲತೆ ಹಾಗೂ ಪರಸ್ಪರ ಹಿತಾಸಕ್ತಿ ಎಂಬ ಮೂರು ‘ಪರಸ್ಪರ’ ತತ್ವಗಳ ಮೂಲಕ ಎರಡೂ ದೇಶಗಳು ಮಾರ್ಗದರ್ಶನ ಪಡೆಯಬೇಕು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ವೇಳೆ ಶೀ ಜಿನ್‌ಪಿಂಗ್‌ ಅವರು ತಮ್ಮ ಜನ್ಮದಿನವೇ ದಿನವೇ ಭಾರತಕ್ಕೆ ಭೇಟಿ ನೀಡುವ ಆಹ್ವಾನವನ್ನು ಸ್ವೀಕರಿಸಿದ್ದನ್ನು ನೆನಪಿಸಿಕೊಂಡರು. ಜೂನ್‌ 15ರಂದು ತಮ್ಮ ಜನ್ಮದಿನದಂದು ಭಾರತಕ್ಕೆ ಭೇಟಿ ನೀಡುವ ಆಹ್ವಾನ ಬಂದಿತ್ತು ಎಂದು ಹೇಳಿದ ಅವರು, ಕಳೆದ ಹಲವು ವರ್ಷಗಳಲ್ಲಿ ಪ್ರಧಾನಿ ಮೋದಿ ಹಾಗೂ ತಾವು 21 ಬಾರಿ ಭೇಟಿಯಾಗಿದ್ದು, ಈ ಭೇಟಿಗಳ ಮೂಲಕ ಭಾರತ–ಚೀನಾ ಸಂಬಂಧಗಳನ್ನು ಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಲು ಹಲವು ಪ್ರಮುಖ ಒಮ್ಮತಗಳನ್ನು ಸಾಧಿಸಲಾಗಿದೆ ಎಂದರು.

ಪ್ರಮುಖ ಸುದ್ದಿ :-   ಭಾರತ–ಚೀನಾ ಸಹಕಾರಕ್ಕೆ ಹೊಸ ಸಂದೇಶ : ‘ಒಬ್ಬರ ಶಕ್ತಿ-ಸಾಮರ್ಥ್ಯದಿಂದ ಮತ್ತೊಬ್ಬರು ಕಲಿಯಬಹುದು’ ಎಂದ ಚೀನಾ ಅಧ್ಯಕ್ಷ

ಭಾರತ–ಚೀನಾ ಸಂಬಂಧಗಳನ್ನು ಚೀನಾ ಯಾವಾಗಲೂ ದೀರ್ಘಕಾಲೀನ ಮತ್ತು ಕಾರ್ಯತಂತ್ರದ ದೃಷ್ಟಿಕೋನದಿಂದ ನೋಡುತ್ತದೆ ಎಂದು ಅವರು ಹೇಳಿದರು. ಎರಡೂ ದೇಶಗಳ ರಾಷ್ಟ್ರೀಯ ಪರಿಸ್ಥಿತಿಗಳು ವಿಭಿನ್ನವಾಗಿದ್ದರೂ, ಪರಸ್ಪರರ ಸಾಮರ್ಥ್ಯಗಳಿಂದ ಸಂಪೂರ್ಣವಾಗಿ ಕಲಿಯಬಹುದು, ಒಬ್ಬರಿಗೊಬ್ಬರು ಬೆಂಬಲ ನೀಡಬಹುದು, ಪರಸ್ಪರ ಯಶಸ್ಸಿಗೆ ಸಹಕರಿಸಬಹುದು ಹಾಗೂ ಸಾಮಾನ್ಯ ಅಭಿವೃದ್ಧಿಯನ್ನು ಸಾಧಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಮಾನವಕುಲದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ತಮ್ಮ ಜನರ ಕಲ್ಯಾಣವನ್ನು ಕಾಪಾಡುವ ನಿಟ್ಟಿನಲ್ಲಿ ಎರಡೂ ದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಪ್ರಮುಖ ರಾಷ್ಟ್ರಗಳಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಅವರು ಹೇಳಿದರು.
ಮಾತುಕತೆಯ ವೇಳೆ ಪ್ರಧಾನಿ ಮೋದಿ ಮತ್ತು ಶೀ ಜಿನ್‌ಪಿಂಗ್‌ ಅವರು ಭಾರತ–ಚೀನಾ ದ್ವಿಪಕ್ಷೀಯ ಸಂಬಂಧಗಳ ಸಮಗ್ರ ಪರಿಶೀಲನೆ ನಡೆಸಿದರು. ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ವಿಸ್ತರಿಸಲು ಹೊಸ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಚರ್ಚಿಸಿದರು.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್‌ ಮಾತನಾಡಿ, ಬ್ರಿಕ್ಸ್‌ ಶೃಂಗಸಭೆಯ ಹಿನ್ನೆಲೆಯಲ್ಲಿ ನಡೆದ ಈ ಭೇಟಿಯಲ್ಲಿ ಎರಡೂ ನಾಯಕರು ಭಾರತ–ಚೀನಾ ಸಂಬಂಧಗಳಲ್ಲಿ ಕಂಡುಬಂದಿರುವ ಸ್ಥಿರ ಪ್ರಗತಿಯನ್ನು ಪರಿಶೀಲಿಸಿದರು. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡುವ ಮಹತ್ವವನ್ನು ಒತ್ತಿ ಹೇಳಿದ ಅವರು, ಪರಸ್ಪರ ಗೌರವ, ಪರಸ್ಪರ ಹಿತಾಸಕ್ತಿ ಮತ್ತು ಪರಸ್ಪರ ಸಂವೇದನಾಶೀಲತೆ ಆಧಾರದ ಮೇಲೆ ಸಹಕಾರ ಮುಂದುವರಿಸುವ ಬದ್ಧತೆಯನ್ನು ಪುನರುಚ್ಚರಿಸಿದರು ಎಂದರು.
ಆದರೆ, ಗಡಿ ವಿವಾದವನ್ನು ಭಾರತ–ಚೀನಾ ಸಂಬಂಧಗಳ ಇತರ ಅಂಶಗಳಿಂದ ಪ್ರತ್ಯೇಕವಾಗಿ ಪರಿಹರಿಸಬೇಕು ಎಂಬುದು ಚೀನಾದ ಸಾಂಪ್ರದಾಯಿಕ ನಿಲುವಾಗಿದೆ.
ಮಾತುಕತೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ದೆಹಲಿಯ ಬ್ರಿಕ್ಸ್‌ ಶೃಂಗಸಭೆಯ ಹಿನ್ನೆಲೆಯಲ್ಲಿ ಅಧ್ಯಕ್ಷ ಶೀ ಜಿನ್‌ಪಿಂಗ್‌ ಅವರನ್ನು ಭೇಟಿಯಾದೆ. ಭಾರತ–ಚೀನಾ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ನಾವು ಪರಿಶೀಲಿಸಿದ್ದೇವೆ” ಎಂದು ತಿಳಿಸಿದ್ದಾರೆ. ಮುಂದಿನ ವರ್ಷ ಬ್ರಿಕ್ಸ್‌ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿರುವ ಚೀನಾಕ್ಕೆ ಪ್ರಧಾನಿ ಶುಭಾಶಯಗಳನ್ನೂ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪತ್ನಿ, ಮೂವರು ಪುತ್ರಿಯರನ್ನು ಕೊಂದ ಬಳಿಕವೂ ಸಹಜವಾಗಿದ್ದ ಆರೋಪಿ ; ಬೆಳಿಗ್ಗೆ ತಂದೆಗೆ ಚಹಾ ಮಾಡಿಕೊಟ್ಟು ಎಸ್ಕೇಪ್‌ !

ಮೋದಿ–ಶೀ ಜಿನ್‌ಪಿಂಗ್‌ ಅವರ ಈ ಭೇಟಿ, ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದಿರುವ ಹಲವು ಉನ್ನತ ಮಟ್ಟದ ರಾಜತಾಂತ್ರಿಕ ಸಂಪರ್ಕಗಳ ಮುಂದುವರಿಕೆಯಾಗಿದೆ. ಕಳೆದ ತಿಂಗಳ ಕೊನೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್‌ ದೋವಲ್‌ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರ ಜೊತೆ ಬೀಜಿಂಗ್‌ನಲ್ಲಿ ವಿಶೇಷ ಪ್ರತಿನಿಧಿಗಳ ಮಾತುಕತೆ ನಡೆಸಿದ್ದರು. ಆ ಮಾತುಕತೆಯಲ್ಲಿ ಗಡಿ ರೇಖೆಯ ನಿರ್ಣಯ, ಗಡಿ ದಾಟುವ ಸಹಕಾರ ಹಾಗೂ ವಾಸ್ತವ ನಿಯಂತ್ರಣ ರೇಖೆ (LAC) ಉದ್ದಕ್ಕೂ ಶಾಂತಿ ಕಾಪಾಡುವ ಅಗತ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿತ್ತು.
ಭಾರತ–ಚೀನಾ ಗಡಿ ಮಾತುಕತೆಗಳಿಗಾಗಿ ಅಜಿತ್‌ ದೋವಲ್‌ ಮತ್ತು ವಾಂಗ್‌ ಯಿ ಅವರನ್ನು ಎರಡೂ ದೇಶಗಳು ವಿಶೇಷ ಪ್ರತಿನಿಧಿಗಳಾಗಿ ನೇಮಕ ಮಾಡಿವೆ. 2003ರಲ್ಲಿ ಸ್ಥಾಪನೆಯಾದ ಈ ವ್ಯವಸ್ಥೆಯ ಪ್ರಮುಖ ಉದ್ದೇಶ, ಸುಮಾರು 3,488 ಕಿಲೋಮೀಟರ್‌ ಉದ್ದದ ಭಾರತ–ಚೀನಾ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವುದಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement