ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ : 5 ರಾಜ್ಯಗಳಲ್ಲಿ ಎಬಿಪಿ-ಸಿವೋಟರ್ ಸಮೀಕ್ಷೆ- ತುರುಸಿನ ಸ್ಪರ್ಧೆಯಲ್ಲಿ ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಲ್ಪ ಮುಂದೆ, ರಾಜಸ್ಥಾನದಲ್ಲಿ ಬಿಜೆಪಿಗೆ ಬಹುಮತ ಸಾಧ್ಯತೆ

ನವದೆಹಲಿ : ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ಮತದಾನವು ನವೆಂಬರ್ 7 ರಂದು ಪ್ರಾರಂಭವಾಗಿ ನವೆಂಬರ್ 30 ರಂದು ಮುಕ್ತಾಯಗೊಳ್ಳಲಿದೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಒಂದೇ ಹಂತದಲ್ಲಿ ಮತ್ತು ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ವೇಳಾಪಟ್ಟಿಯ ಘೋಷಣೆ ನಂತರ, ಎಬಿಪಿ (ABP) ನ್ಯೂಸ್ ಸಿ ವೋಟರ್‌ (CVoter) ಸಹಯೋಗದಲ್ಲಿ ಚುನಾವಣೆಗೆ ಒಳಪಟ್ಟ ಈ ಐದು ರಾಜ್ಯಗಳಲ್ಲಿನ ಮತದಾರರ ಮನಸ್ಥಿತಿಯನ್ನು ಬಹಿರಂಗಪಡಿಸಲು ಅಭಿಪ್ರಾಯ ಸಂಗ್ರಹ(ಸಮೀಕ್ಷೆ)ದ ವರದಿಯನ್ನು ಬಿಡುಗಡೆ ಮಾಡಿದೆ.
ರಾಜಸ್ಥಾನದಲ್ಲಿ ಬಿಜೆಪಿ ಮುಂದೆ…
ರಾಜಸ್ಥಾನದಲ್ಲಿ ಬಿಜೆಪಿ ಬಹುಮತವನ್ನು ಪಡೆಯುವ ನಿರೀಕ್ಷೆಯಿದೆ. ಎಬಿಪಿ-ಸಿವೋಟರ್ ಅಭಿಪ್ರಾಯ ಸಂಗ್ರಹದ ಪ್ರಕಾರ, ಮುಂಬರುವ ರಾಜಸ್ಥಾನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗಮನಾರ್ಹ ಲಾಭ ಗಳಿಸಲು ಸಜ್ಜಾಗಿದೆ. 200 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 127 ರಿಂದ 137 ಸ್ಥಾನಗಳನ್ನು ಗಳಿಸಬಹುದು ಎಂದು ಸಮೀಕ್ಷೆಯು ಸೂಚಿಸುತ್ತದೆ, ಅಲ್ಲದೆ, 2018 ರ ಚುನಾವಣೆಯಲ್ಲಿ ಬಿಜೆಪಿಯು ತಾನುಗಳಿಸಿದ್ದ 38 ಮತಕ್ಕಿಂತ ಹೆಚ್ಚು ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಜೆಪಿ ಮತಗಳಿಕೆ ಪ್ರಮಾಣ ಶೇ.46ಕ್ಕೆ ಏರಿಕೆಯಾಗಲಿದೆ ಎಂದು ಸಮೀಕ್ಷೆ ಅಂದಾಜಿಸಲಾಗಿದೆ.
ಕಾಂಗ್ರೆಸ್ 59 ರಿಂದ 69 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಮತ್ತು ಶೇಕಡಾ 42 ರಷ್ಟು ಮತಗಳನ್ನು ಪಡೆಯಲಿದೆ ಎಂದು ಅದು ಹೇಳಿದೆ. ರಾಜಸ್ಥಾನದಲ್ಲಿ ಸರ್ಕಾರ ರಚನೆಗೆ ಬಹುಮತ 101 ಸ್ಥಾನಗಳು ಬೇಕು.

ಮಧ್ಯಪ್ರದೇಶದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಕಾಂಗ್ರೆಸ್‌ ಸ್ವಲ್ಪ ಮುಂದೆ...
ಮಧ್ಯಪ್ರದೇಶದಲ್ಲಿ, ಎಬಿಪಿ-ಸಿವೋಟರ್ ಅಭಿಪ್ರಾಯ ಸಂಗ್ರಹವು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತುರುಸಿನ ಹೋರಾಟವನ್ನು ಸೂಚಿಸುತ್ತದೆ. 230 ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 113 ರಿಂದ 125 ಸ್ಥಾನಗಳನ್ನು ಪಡೆದುಕೊಳ್ಳಬಹುದು ಮತ್ತು ಬಿಜೆಪಿ 104 ರಿಂದ 116 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ಎಬಿಪಿ-ಸಿವೋಟರ್ ಹೇಳಿದೆ. ಕಾಂಗ್ರೆಸ್‌ಗೆ ಹೋಲಿಸಿದರೆ ಆಡಳಿತಾರೂಢ ಬಿಜೆಪಿಯು ಶೇಕಡಾ 0.1 ರಷ್ಟು ಹೆಚ್ಚಿನ ಮತಗಳನ್ನು ಗಳಿಸಲಿದೆ. ಕಾಂಗ್ರೆಸ್ ಶೇಕಡಾ 44.6 ರಷ್ಟು ಮತಗಳನ್ನು ಗಳಿಸಲಿದೆ ಎಂದು ಅಂದಾಜಿಸಲಾಗಿದೆ, ಇದೇವೇಳೆ ಬಿಜೆಪಿ ಶೇಕಡಾ 44.7 ರಷ್ಟು ಮತಗಳನ್ನು ಪಡೆಯುತ್ತದೆ ಎಂದು ಅಂದಾಜಿಸಲಾಗಿದೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಶೇಕಡಾ 2.1 ಮತಗಳನ್ನು ಗಳಿಸಬಹುದು ಮತ್ತು ಶೇಕಡಾ 8.6 ಇತರ ಪಕ್ಷಗಳಿಗೆ ಹೋಗಬಹುದು. ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಮತಗಳಿಕೆಯ ಪ್ರಮಾಣದಲ್ಲಿನ ಅಲ್ಪ ವ್ಯತ್ಯಾಸವು ಬಿಜೆಪಿಗೆ ಸ್ವಲ್ಪಮಟ್ಟಿಗೆ ಲಾಭ ತರಬಹುದಾಗಿದೆ ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ದ್ವೇಷ ಭಾಷಣ : ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ ; ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ಛತ್ತೀಸ್‌ಗಢದಲ್ಲಿಯೂ ತುರುಸಿನ ಸ್ಪರ್ಧೆ…
ಛತ್ತೀಸ್‌ಗಢವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ರಾಜಕೀಯ ಹೋರಾಟಕ್ಕೆ ಸಜ್ಜಾಗಿದೆ. ಒಟ್ಟು 90 ಸ್ಥಾನಗಳಲ್ಲಿ ಬಿಜೆಪಿ 39 ರಿಂದ 45 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದ್ದರೆ, ಕಾಂಗ್ರೆಸ್ 45 ರಿಂದ 51 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇತರ ಪಕ್ಷಗಳು 0 ರಿಂದ 2 ಸ್ಥಾನಗಳನ್ನು ಮಾತ್ರ ಗೆಲ್ಲುವ ನಿರೀಕ್ಷೆಯಿದೆ ಎಂದು ಎಬಿಪಿ-ಸಿವೋಟರ್ ಹೇಳಿದೆ.
ಮತ ಹಂಚಿಕೆಗೆ ಸಂಬಂಧಿಸಿದಂತೆ, ಎಬಿಪಿ-ಸಿವೋಟರ್ ಅಭಿಪ್ರಾಯ ಸಂಗ್ರಹದ ಸಮೀಕ್ಷೆಯು ಕಾಂಗ್ರೆಸ್ ಶೇಕಡಾ 45 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಬಹುದು ಎಂದು ಸೂಚಿಸುತ್ತದೆ, ಇದು 2.2 ಶೇಕಡಾ ಹೆಚ್ಚಳವನ್ನು ಸೂಚಿಸುತ್ತದೆ. ಮತ್ತೊಂದೆಡೆ, ಬಿಜೆಪಿಯು ಶೇಕಡಾ 43 ರಷ್ಟು ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ, ಬಿಜೆಪಿಗೆ ಇದು ಶೇಕಡಾ 10 ಕ್ಕಿಂತ ಹೆಚ್ಚಿನ ಏರಿಕೆಯನ್ನು ತೋರಿಸುತ್ತದೆ. ಇತರ ಪಕ್ಷಗಳು ಶೇಕಡಾ 11 ರಷ್ಟು ಮತಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ. ಇದು ಸುಮಾರು ಶೇಕಡಾ 13 ರಷ್ಟು ಕುಸಿತವನ್ನು ಸೂಚಿಸುತ್ತದೆ. ಹೀಗಾಗಿ ಕೊನೆಯ ಕ್ಷಣದ ಸಣ್ಣ ಸ್ವಿಂಗ್‌ ಸಹ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ತೆಲಂಗಾಣದಲ್ಲಿ ಬಿ ಆರ್‌ ಎಸ್‌ಗೆ ಹಿನ್ನಡೆ ಸಾಧ್ಯತೆ…
ಕಾಂಗ್ರೆಸ್-ಟಿಆರ್‌ಎಸ್‌ನೊಂದಿಗೆ ತೀವ್ರ ಪೈಪೋಟಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗಲಿದೆ ಎಂದು ಎಬಿಪಿ-ಸಿವೋಟರ್ ಊಹಿಸಿದೆ.
ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) 43 ರಿಂದ 55 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಇದೇವೇಳೆ ಕಾಂಗ್ರೆಸ್ 48 ರಿಂದ 60 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.ಭಾರತೀಯ ಜನತಾ ಪಕ್ಷ (ಬಿಜೆಪಿ 5 ರಿಂದ 11 ಸ್ಥಾನಗಳನ್ನು ಗಳಿಸಲಿದೆ ಎಂದು ಅಂದಾಜಿಸಲಾಗಿದೆ. ಎಬಿಪಿ-ಸಿವೋಟರ್ ಅಭಿಪ್ರಾಯ ಸಂಗ್ರಹದ ಪ್ರಕಾರ, ಕಾಂಗ್ರೆಸ್ ಸುಮಾರು ಶೇಕಡಾ 39 ರಷ್ಟು ಮತಗಳನ್ನು ಗಳಿಸಬಹುದು, ಇದು ಕಳೆದ ಚುನಾಔಣೆಗೆ ಹೋಲಿಸಿದರೆ ಶೇಕಡಾ 10.5 ರಷ್ಟು ಗಮನಾರ್ಹ ಏರಿಕೆಯಾಗಿದೆ. ಆಡಳಿತಾರೂಢ ಬಿಆರ್‌ಎಸ್ ಶೇ.37ರಷ್ಟು ಮತಗಳಿಸಬಹುದು ಎಂದು ಅಂದಾಜಿಸಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ಶೇ.9.4ರಷ್ಟು ಕಡಿಮೆಯಾಗಲಿದೆ ಎಂದು ಹೇಳಿದೆ. ಬಿಜೆಪಿ ಕೂಡ ಶೇ.16ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದ್ದು, ಇದು ಕಳೆದ ಚುನಾವಣೆಗೆ ಹೋಲಿಸಿದರೆ ಶೇ.9.3ರಷ್ಟು ಹೆಚ್ಚಳವಾಗಿದೆ.

ಪ್ರಮುಖ ಸುದ್ದಿ :-   ವಿಶ್ವದಾದ್ಯಂತ ಕೋವಿಡ್ ಲಸಿಕೆ ಹಿಂತೆಗೆದುಕೊಂಡ ಆಸ್ಟ್ರಾಜೆನೆಕಾ : ವರದಿ

ಮಿಜೋರಾಂನಲ್ಲಿ ಅತಂತ್ರದ ಸಾಧ್ಯತೆ…
ಎಬಿಪಿ ನ್ಯೂಸ್-ಸಿವೋಟರ್ ಒಪಿನಿಯನ್ ಪೋಲ್ ಪ್ರಕಾರ, ಮಿಜೋರಾಂ ತುರುಸಿನ ಸ್ಪರ್ಧೆಗೆ ಸಿದ್ಧವಾಗಿದೆ, ಯಾವುದೇ ಪಕ್ಷವು ಸ್ಪಷ್ಟ ಬಹುಮತವನ್ನು ಗಳಿಸುವ ಸಾಧ್ಯತೆ ಕಂಡುಬಂದಿಲ್ಲ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF) 13 ರಿಂದ 17 ಸ್ಥಾನಗಳನ್ನು, ಕಾಂಗ್ರೆಸ್ (INC) 10 ರಿಂದ 14 ಸ್ಥಾನಗಳನ್ನು, ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) 9 ರಿಂದ 13 ಸ್ಥಾನಗಳನ್ನು ಮತ್ತು ಇತರರು 1 ರಿಂದ 3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಕಳೆದ ಚುನಾವಣೆಯಲ್ಲಿ ಶೇಕಡಾ 37.7 ರಷ್ಟಿದ್ದ ಮಿಜೋ ನ್ಯಾಷನಲ್ ಫ್ರಂಟ್ (MNF) ಶೇಕಡಾ 30.5 ರಷ್ಟು ಪಡೆಯುವ ನಿರೀಕ್ಷೆಯಿದೆ ಎಂದು ಮತ ಹಂಚಿಕೆಯ ಪ್ರಕ್ಷೇಪಗಳು ಸೂಚಿಸುತ್ತವೆ. ಈ ಹಿಂದೆ 29.9 ಶೇಕಡಾವನ್ನು ಹೊಂದಿದ್ದ ಕಾಂಗ್ರೆಸ್‌, 28.3 ಶೇಕಡಾವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ. ZPM, ಕಳೆದ ಚುನಾವಣೆಯಲ್ಲಿ ಪಡೆದಿದ್ದ 22.9 ಶೇಕಡಾ ಮತಗಳಿಂದ 27.1%ಕ್ಕೆ ಏರುವ ಸಾಧ್ಯತೆ ಕಂಡುಬರುತ್ತದೆ. ಇತರ ಪಕ್ಷಗಳು, ಹಿಂದೆ 9.5% ಪಡೆದಿದ್ದ ಇತರ ಪಕ್ಷಗಳು ಈ ಚುನಾವಣೆಯಲ್ಲಿ 14.2% ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಿದೆ.
ಎಲ್ಲಾ ಐದು ರಾಜ್ಯಗಳಿಗೆ ಡಿಸೆಂಬರ್ 3 ರಂದು ಮತಗಳ ಎಣಿಕೆ ನಡೆದು ಫಲಿತಾಂಶಗಳ ಘೋಷಣೆ ಆಗಲಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement