ವೀಡಿಯೊ..| ಕಳೆದ ವರ್ಷ ಅಕ್ಟೋಬರ್ 7ರ ದಾಳಿ ಮೊದಲು ಹಮಾಸ್ ಮುಖ್ಯಸ್ಥ ಸಿನ್ವಾರ್ ಗಾಜಾದ ಭೂಗತ ಸುರಂಗಕ್ಕೆ ಹೋದ ವೀಡಿಯೊ ಹಂಚಿಕೊಂಡ ಇಸ್ರೇಲ್

ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಸಾಮೂಹಿಕವಾಗಿ ಜನರನ್ನು ಹತ್ಯೆ ನಡೆಸಿದ ಹಮಾಸ್‌ ಗುಂಪಿನ ದಾಳಿಯ ಸಂಚಿನ ರೂವಾರಿ ಎಂದೇ ಇಸ್ರೇಲಿನಿಂದ ಬಿಂಬಿತವಾಗಿರುವ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಈ ದಾಳಿ ನಡೆಸುವ ಕೆಲವೇ ಗಂಟೆಗಳ ಮುನ್ನ ಗಾಜಾದ ಭೂಗತ ಸುರಂಗಕ್ಕೆ ತನ್ನ ಕುಟುಂಬ ಹಾಗೂ ವಸ್ತುಗಳನ್ನು ಸಾಗಿಸುತ್ತಿರುವ ದೃಶ್ಯವನ್ನು ಇಸ್ರೇಲ್ ಶನಿವಾರ ಬಿಡುಗಡೆ ಮಾಡಿದೆ.
ದಕ್ಷಿಣ ಗಾಜಾ ನಗರವಾದ ರಫಾದಲ್ಲಿ ಸಿನ್ವಾರ್‌ನ ಇಸ್ರೇಲ್‌ ದಾಳಿಯಲ್ಲಿ ಸಾವಿಗೀಡಾದ ನಂತರ ಇಸ್ರೇಲ್‌ ಈ ವೀಡಿಯೊ ತುಣುಕನ್ನು ಬಿಡುಗಡೆ ಮಾಡಿದೆ. ಈ ವೀಡಿಯೊದಲ್ಲಿ ಹಮಾಸ್‌ ನಾಯಕ ಸಿನ್ವಾರ್, ಆತನ ಪತ್ನಿ ಮತ್ತು ಮಕ್ಕಳು ಟಿವಿ, ನೀರು, ದಿಂಬುಗಳು ಮತ್ತು ಹಾಸಿಗೆಗಳು ಸೇರಿದಂತೆ ಸಾಮಾನುಗಳನ್ನು ಸುರಂಗದೊಳಗೆ ಸಾಗಿಸುತ್ತಿರುವುದು ಕಂಡುಬಂದಿದೆ.

ಇಸ್ರೇಲಿ ಸೇನಾ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ಈ ಸುರಂಗವು ಖಾನ್ ಯೂನಿಸ್‌ ಪ್ರದೇಶಲ್ಲಿರುವ ಸಿನ್ವಾರ್‌ ಕುಟುಂಬದ ಮನೆಯ ಕೆಳಗೆ ಇದೆ ಎಂದು ಹೇಳಿದ್ದಾರೆ. ಹಗರಿ ಅವರು ಭೂಗತ ಸುರಂಗದ ಫೋಟೋಗಳನ್ನು ತೋರಿಸಿದ್ದಾರೆ. ಅದರಲ್ಲಿ ಶೌಚಾಲಯಗಳು, ಸ್ನಾನಗೃಹಗಳು ಮತ್ತು ಅಡುಗೆಮನೆ ಇದೆ. ಅಲ್ಲಿ ಆಹಾರ, ನಗದು ಹಣ ಹಾಗೂ ದಾಖಲೆ ಪತ್ರಗಳು ಪತ್ತೆಯಾಗಿವೆ. ಹಮಾಸ್ ನಾಯಕ ಸಿನ್ವಾರ್‌, ಇಸ್ರೇಲ್ ಮೇಲೆ ಹಮಾಸ್‌ ಗುಂಪಿನ ದಾಳಿಗೆ ಮುಂಚಿತವಾಗಿ ತನಗೆ ಬೇಕಾದ ವಸ್ತುಗಳನ್ನು ಸಂಗ್ರಹಿಸುತ್ತಿರುವಂತೆ ತೋರುತ್ತಿದೆ ಎಂದು ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. ಹಮಾಸ್ ತನ್ನ ಮುಖ್ಯಸ್ಥ ಸಿನ್ವಾರ್ ಅವರು ಯುದ್ಧದಲ್ಲಿ ವೀರೋಚಿತವಾಗಿ ಮರಣಹೊಂದಿದ್ದಾರೆ ಎಂದು ಹೇಳಿದರೆ ಹಗರ್ ಅವರು ಇದನ್ನು “ಕಟ್ಟಾ ಸುಳ್ಳು” ಎಂದು ಹೇಳಿದ್ದಾರೆ.

ಈ ವಾರದ ಆರಂಭದ ಡ್ರೋನ್ ದೃಶ್ಯಗಳು ಸಿನ್ವಾರ್ ತನ್ನ ಕೊನೆಯ ಕ್ಷಣಗಳಲ್ಲಿ ತೀವ್ರವಾಗಿ ಗಾಯಗೊಂಡಿರುವುದನ್ನು ತೋರಿಸಿದೆ. ಹಾಗೂ ಇಸ್ರೇಲಿ ಡ್ರೋನ್‌ಗೆ ಕೋಲೊಂದನ್ನು ಎಸೆಯುವುದನ್ನು ತೋರಿಸಿದೆ. ಶವಪರೀಕ್ಷೆಯಲ್ಲಿ ಸಿನ್ವಾರ್ ತಲೆಗೆ ಗುಂಡೇಟು ತಗುಲಿ ಮೃತಪಟ್ಟಿದ್ದಾರೆ ಮತ್ತು ಅವರ ಒಂದು ಬೆರಳು ಕತ್ತರಿಸಲ್ಪಟ್ಟಿದೆ ಎಂದು ಕಂಡುಬಂದಿದೆ.
ಇಸ್ರೇಲ್-ಹಮಾಸ್ ಸಂಘರ್ಷದ ಒಂದು ವರ್ಷದಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳು ಸಿನ್ವಾರ್‌ ಮೇಲೆ ಆಗಾಗ್ಗೆ ದಾಳಿ ಮಾಡಿತ್ತು, ಆದರೆ ಸಿನ್ವಾರ್‌ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ನಂತರ ಇಸ್ರೇಲ್‌ ಸಿನ್ವಾರ್‌ನ ಅಂತಿಮ ಅಡಗುತಾಣವನ್ನು ಗುರುತಿಸಿದ್ದು, ನಂತರದ ಇಸ್ರೇಲಿ ದಾಳಿಯಲ್ಲಿ ಸಾವಿಗೀಡಾದರು. ಮಿಲಿಟರಿಯು “ಅವರ ಡಿಎನ್‌ಎ ಪರೀಕ್ಷೆ ನಡೆಸಿ ಸತ್ತಿದ್ದು ಸಿನ್ವಾರ್‌ ಎಂದು ಖಚಿತಪಡಿಸಿಕೊಂಡಿತು.

ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್‌ ಮೇಲೆ ನಡೆದ ಹಮಾಸ್‌ ಗುಂಪಿನ ದಾಳಿಯಲ್ಲಿ ಸುಮಾರು 1,200 ಜನರು ಸಾವಿಗೀಡಾಗಿದ್ದರು. ನಂತರ ಹಮಾಸ್‌ 235 ಜನರನ್ನು ಒತ್ತೆಯಾಳಾಗಿ ಗಾಜಾಕ್ಕೆ ಕೊಂಡೊಯ್ದಿತ್ತು. ನಂತರ ಹಮಾಸ್‌ ವಿರುದ್ಧದ ಗಾಜಾಲದಲ್ಲಿ ನಡೆದ ಇಸ್ರೇಲ್‌ ಕಾರ್ಯಾಚರಣೆಯಲ್ಲಿ ಒಂದು ವರ್ಷದಲ್ಲಿ 40,000 ಕ್ಕೂ ಹೆಚ್ಚು ಸಾವಿಗೀಡಾಗಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಕೊಲ್ಲಲ್ಪಟ್ಟ ಹಿಂದಿನ ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ನಂತರ ಸಿನ್ವಾರ್ ಹಮಾಸ್‌ ಮುಖ್ಯಸ್ಥರಾಗಿದ್ದರು. ಈಗ ಅವರ ಸಾವಿನ ನಂತರ ಹಮಾಸ್ ಅನ್ನು ಯಾರು ಮುನ್ನಡೆಸುತ್ತಾರೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಲೆಬನಾನ್‌ನ ಮೇಲಿನ ಇಸ್ರೇಲಿ ದಾಳಿಗಳು ಕಳೆದ ವರ್ಷದಲ್ಲಿ ಕನಿಷ್ಠ 2,350 ಜನರನ್ನು ಕೊಂದವು, ಲೆಬನಾನಿನ ಆರೋಗ್ಯ ಸಚಿವಾಲಯದ ಪ್ರಕಾರ, 12 ಲಕ್ಷಕ್ಕಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಇಸ್ರೇಲ್ ಪ್ರಕಾರ, ಹಿಜ್ಬುಲ್ಲಾ ದಾಳಿಯಲ್ಲಿ 50 ಇಸ್ರೇಲಿ ಸೈನಿಕರು ಮತ್ತು ನಾಗರಿಕರು ಮೃತಪಟ್ಟಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement