ʼಪುರುಷ ಸೂಕ್ತʼ ಮಂತ್ರವು ವಿಜ್ಞಾನದ ʼಸೃಷ್ಟಿ ತತ್ವʼದ ಬಗ್ಗೆ ಹೇಳುತ್ತವೆ ; ಇದರ ಮಂತ್ರಗಳಲ್ಲಿದೆ ಖಗೋಳ ಭೌತ ವಿಜ್ಞಾನ : ನನ್ನ ಪುಸ್ತಕದಲ್ಲಿ ಇದರ ಬಗ್ಗೆ ಹೇಳಿದ್ದೇನೆ | ಆರ್‌.ಎಸ್‌.ಹೆಗಡೆ ಬೆಳ್ಳೆಕೇರಿ

ರಘುಪತಿ ಯಾಜಿ
ಪುರುಷ ಸೂಕ್ತದ ಹಲವು ಮಂತ್ರಗಳು ವಿಶ್ವದ ಎಲ್ಲ ಭೌತಿಕ ಚೈತನ್ಯದ ಸೃಷ್ಟಿಗಳ ಕುರಿತಾಗಿ ವರ್ಣಿಸುತ್ತವೆ. ನಂತರ ಭೂಮಿಯ ಮೇಲಿನ ರಸೋತ್ಪತ್ತಿ -ಜೀವೋತ್ಪತ್ತಿಗಳ ವರ್ಣನೆ, ಉಪಾಸನೆ ಹಾಗೂ ಕರ್ಮಗಳ ಬಗ್ಗೆ ವಿವರಿಸುತ್ತವೆ. ಅಂತಿಮವಾಗಿ ‘ಮೋಕ್ಷ’ ಮಾರ್ಗದ ಬಗ್ಗೆ ಹೇಳುತ್ತದೆ. ಈ ಸೂಕ್ತದ ಮಂತ್ರಗಳಲ್ಲಿರುವ ವರ್ಣನೆಗಳು ಇಂದಿನ ಖಗೋಳ ಭೌತ ವಿಜ್ಞಾನ ಹಾಗೂ ಜೀವ ವಿಜ್ಞಾನ ಸಂಶೋಧನೆಗಳ ವಿಚಾರಗಳಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತವೆ. ಪುರುಷ ಸೂಕ್ತವು ಈ ಬ್ರಹ್ಮಾಂಡದ ಸೃಷ್ಟಿ ತತ್ವವನ್ನು ಹೇಳುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ನಿವೃತ್ತ ಪ್ರಾಂಶುಪಾಲ ೯೨ ವರ್ಷದ ರಘುಪತಿ ಹೆಗಡೆ (ಆರ್‌.ಎಸ್‌.ಹೆಗಡೆ) ಬೆಳ್ಳೆಕೇರಿ ಹೇಳಿದ್ದಾರೆ.
ಖಗೋಳ ಭೌತಶಾಸ್ತ್ರದ ಹಿನ್ನೆಲೆ ಇಟ್ಟುಕೊಂಡು ತಾವು ಬರೆದ ʼಪುರುಷ ಸೂಕ್ತʼ ಪುಸ್ತಕದ ಬಗ್ಗೆ ಕನ್ನಡಿ. ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಪುರುಷ ಸೂಕ್ತದ ಮಂತ್ರಗಳ ಬಗ್ಗೆ ತಮ್ಮ ಗ್ರಹಿಕೆ ಹಾಗೂ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘
ಪುರುಷ ಸೂಕ್ತವು’ ಪ್ರಧಾನವಾಗಿ, ಮಹಾ ‘ಚೈತನ್ಯ’(ಎನರ್ಜಿ)ವೊಂದು ಬ್ರಹ್ಮಾಂಡದಲ್ಲಿನ ಎಲ್ಲ ಸೃಷ್ಟಿ ಹಾಗೂ ಸೃಷ್ಟಿ ಕ್ರಿಯೆಗಳಲ್ಲಿ ತೊಡಗಿಕೊಂಡಿರುವ ಬಗೆಯನ್ನು ವರ್ಣಿಸುತ್ತದೆ. ಬ್ರಹ್ಮಾಂಡ ವ್ಯಾಪಿಯಾದ ಆ ಚೈತನ್ಯವು ಮೊದಲು ‘ಒಂದೇ’ ಆಗಿ, ಅದು ‘ನಿರಾಕಾರ’ ರೂಪದಲ್ಲಿತ್ತು. ಆ ನಿರಾಕಾರ ರೂಪದ ‘ಬ್ರಹ್ಮಾಂಡ’ವನ್ನೇ ಪುರುಷ ಸೂಕ್ತದಲ್ಲಿ ‘ಪುರುಷ’ ಎಂದು ಹೆಸರಿಸಲಾಗಿದೆ. ತದನಂತರದಲ್ಲಿ ʼಬ್ರಹ್ಮಾಂಡʼ ಸ್ವರೂಪದ ಈ ಮಹಾ ಮಹಾಚೈತನ್ಯಕ್ಕೆ ಚಲನೆ ಉಂಟಾಗಿ ಕ್ರಮೇಣ ಅದು ‘ಆಕಾರ’ ತಾಳಿತು. ಹೀಗೆ ಏಕವಾಗಿ ಇದ್ದಿದ್ದು ‘ಅನೇಕವಾಗಿ’ ಸೃಷ್ಟಿಗಳು ನಿರ್ಮಾಣಗೊಂಡ ರೀತಿಯನ್ನು ಈ ಪುರುಷ ಸೂಕ್ತವು ವಿವರಿಸುತ್ತದೆ. ಸಕಲ ಜೀವ-ಜಂತುಗಳು ಪರಮ ಪುರುಷ(ಬ್ರಹ್ಮಾಂಡ)ನಿಂದಲೇ ಜನ್ಮತಾಳಿ ‘ಜನನ-ಮರಣ’ ತತ್ವಗಳಿಗೆ ಅನುಗುಣವಾಗಿ ಸೃಷ್ಟಿ-ಲಯ ಕ್ರಿಯೆಯನ್ನು ಹೇಳುತ್ತದೆ. ಪುರುಷ ಸೂಕ್ತದ ೧ರಿಂದ ೫ರ ವರೆಗಿನ ಮಂತ್ರಗಳು ಬಹಳ ಪ್ರಧಾನ ಅಂಶ ಗಳನ್ನೊಳಗೊಂಡಿವೆ. ಅವು ವಿಶ್ವದಲ್ಲಿಯ ಸಮಸ್ತ ಸೃಷ್ಟಿ ನಿರ್ಮಾಣ, ಸೃಷ್ಟಿ ತತ್ತ್ವಗಳು ಹಾಗೂ ಅವುಗಳಲ್ಲಿ ಅಡಕವಾಗಿರುವ ಸೂತ್ರಗಳ ಬಗ್ಗೆ ವಿವರಿಸುತ್ತವೆ ಎಂಬುದು ನನ್ನ ಗ್ರಹಿಕೆ ಎಂದು ಆರ್‌.ಎಸ್‌.ಹೆಗಡೆ ಬೆಳ್ಳೆಕೇರಿ ಹೇಳುತ್ತಾರೆ.

ಪುರುಷ ಸೂಕ್ತವನ್ನು ಖಗೋಳ ಭೌತಶಾಸ್ತ್ರ (Astrophysics)ದ ದೃಷ್ಟಿಕೋನದಲ್ಲಿ ನೋಡಬೇಕು ಎಂದು ಹೊಳೆದದ್ದು ಹೇಗೆ..?
ನಾನು ಚಿಕ್ಕವನಿರುವಾಗ ನನ್ನ ಸಹೋದರ ರಾಮಣ್ಣನು ಮುಂಡಿಗೇಸರ ಗ್ರಾಮ ದೇವಸ್ಥಾನದಲ್ಲಿ ಪಂಡಿತರೊಬ್ಬರಿಂದ ‘ದೇವರ ಪೂಜಾಮಂತ್ರ ಪಾಠ’ ಕಲಿಯುತ್ತಿದ್ದ. ನಾನೂ ಅವನೊಡನೆ ಹೋಗಿ ಕುಳಿತು ಕೇಳುತ್ತಿದ್ದೆ. ಕೆಲ ಮಂತ್ರಗಳು ಅಂದರೆ ಗಣಪತಿ ಉಪನಿಷತ್, ‘ಪುರುಷಸೂಕ್ತ’, ಶ್ರೀಸೂಕ್ತ, ದುರ್ಗಾಸೂಕ್ತ, ದೇವೀಸೂಕ್ತ ಹಾಗು ಮಂತ್ರಪುಷ್ಪ ಬಾಯಿಪಾಠವಾಗಿತ್ತು. ನಂತರ, ನಿತ್ಯಪೂಜೆಗಳಲ್ಲಿ ತೊಡಗಿಕೊಂಡಂತೆ, ಕೆಲ ಮಂತ್ರ ಹಾಗೂ ಪ್ರಯೋಗ-ವಿಧಿಗಳನ್ನು ಕಲಿತುಕೊಂಡೆ. ಆಗ ಅವುಗಳ ತಾತ್ಪರ್ಯ ಗೊತ್ತಿರಲಿಲ್ಲ ; ಆದರೆ ದಿನನಿತ್ಯ ಹೇಳಿ ಪೂಜೆ ಮಾಡುತ್ತಿದ್ದೆ.
ನಾನು ಹೈಸ್ಕೂಲ್ ಕಲಿಯುತ್ತಿದ್ದಾಗ ಸಂಸ್ಕೃತ ಆಯ್ಕೆ ಮಾಡಿಕೊಂಡಿದ್ದೆ. ಆಗ ನಮ್ಮ ಜೊತೆ ಮನೆಯಲ್ಲಿ ಗಣಪತಿ ಶಾಸ್ತ್ರಿ ಸ್ವಾದಿ ಎನ್ನುವ ಸಾಧು ಇದ್ದರು. ಅವರು ಚೆನ್ನಾಗಿ ಸಂಸ್ಕೃತ ಬಲ್ಲವರು. ಹಿಮಾಲಯದ ಬದರಿ, ಕೇದಾರಗಳನ್ನೆಲ್ಲ ಸುತ್ತಿ ಬಂದಿದ್ದ ಅವರು ಆಯುರ್ವೇದ ವೈದ್ಯರಾಗಿದ್ದರು. ಅವರೊಬ್ಬ ‘ವಿಚಾರವಾದಿ’ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಗೊಡ್ಡು ಸಂಪ್ರದಾಯಗಳನ್ನು ತಿರಸ್ಕರಿಸುತ್ತಿದ್ದರು. ಇವರ ಪ್ರಭಾವ ನನ್ನ ಮೇಲೆ ಆಯಿತು. ಅವರು ನನಗೆ ಕೆಲವು ಉಪನಿಷತ್ ಪುಸ್ತಕಗಳನ್ನೂ ನೀಡಿದ್ದರು. ಸಂಪ್ರದಾಯ ಹಾಗು ವೈಜ್ಞಾನಿಕತೆ, ವೇದೋಪನಿಷತ್‌ಗಳ ತಾತ್ಪರ್ಯ ಮೊದಲಾದ ಕೆಲವು ವಿಚಾರಗಳ ಕುರಿತಾಗಿ ನನ್ನೊಡನೆ ಚರ್ಚಿಸುತ್ತಲೂ ಇದ್ದರು. ಹೀಗಾಗಿ, ನನ್ನಲ್ಲಿ ಒಂದು ರೀತಿಯ ‘ಭಾವನಾತ್ಮಕ ವೈಚಾರಿಕತೆ’ ಮನೆಮಾಡಿಕೊಂಡಿತ್ತು. ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಮೊದಲೆರಡು ವರ್ಷ ಸಂಸ್ಕೃತವನ್ನು ಅಧ್ಯಯನ ಮಾಡಿದ್ದೆ. ಉಪನಿಷತ್ ಹಾಗು ಕಾವ್ಯಗಳಲ್ಲಿ ಕೆಲವನ್ನು ಅಭ್ಯಸಿಸಿದ್ದೆ. ಆದರೆ ಆಗ ನನಗೆ ಈ ವಿಚಾರ ಬಂದಿರಲಿಲ್ಲ.
೨೦೦೫ರಲ್ಲಿ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸ್ವಾಮೀಜಿಯವರ ‘ಗಾಯತ್ರೀ’ ಪುರಶ್ಚರಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ನನ್ನಲ್ಲಿ ಈ ವಿಚಾರ ಸ್ಫುರಣವಾಯ್ತು. ನಿತ್ಯ ಪೂಜಾ ಸಮಯದಲ್ಲಿ ಪಠಿಸುತ್ತಿರುವ ಮಂತ್ರಗಳಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಅರಸಲು ಆರಂಭಿಸಿದೆ.
ನನಗೆ ಆಕಾಶ ವೀಕ್ಷಣೆ ಮಾಡುವ ಹವ್ಯಾಸವೂ ಇದ್ದಿದ್ದರಿಂದ ವಿಶ್ವ ಸೃಷ್ಟಿತತ್ತ್ವಗಳೆಲ್ಲ ವೈಜ್ಞಾನಿಕ ಸೂತ್ರಗಳನ್ನು ಆಧರಿಸಿವೆ ಎನ್ನುವ ವಿಚಾರ ನನ್ನ ಈವರೆಗಿನ ಅಧ್ಯಯನಗಳಿಂದ ದೃಢಪಟ್ಟಿತ್ತು. ಪುರುಷಸೂಕ್ತವು ವಿಶ್ವ ಸೃಷ್ಟಿ ತತ್ತ್ವವನ್ನು ವರ್ಣಿಸುತ್ತದೆಂದು ನನ್ನ ಆಕಾಶ ವೀಕ್ಷಣೆ ಕಾರ್ಯಕ್ರಮಗಳ ಸಂದರ್ಭದಲ್ಲಿ ‘ಪಾದೋsಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾsಮೃತಂ ದಿವಿ | ತ್ರಿಪಾದೂರ್ಧ್ವ ಉದೈತ್ಪುರುಷಃ’ ಎನ್ನುವುದೇ ಮೊದಲಾದ ‘ಪುರುಷಸೂಕ್ತ’ದ ಮಂತ್ರೋಕ್ತಿಗಳಿಂದ ಗೋಚರವಾಯಿತು. ಆದರೂ ಈ ಬಗ್ಗೆ ಗೊಂದಲ ಮುಂದುವರಿದಿತ್ತು.
ಇತ್ತೀಚೆಗೆ, ಆಚಾರ್ಯ ದಯಾನಂದ ಸರಸ್ವತಿಯವರು ಬರೆದ, ‘ಋಗ್ವೇದಾದಿ ಚತುರ್ವೇದ ಭಾಷ್ಯ ಭೂಮಿಕಾ’ ಇದರ ಕನ್ನಡ ಆವೃತ್ತಿಯೊಂದು ಓದಲು ದೊರಕಿತು. ಅದರಲ್ಲಿಯ ‘ಪುರುಷಸೂಕ್ತ’ ಕುರಿತಾದ ಭಾಷ್ಯವು ನನ್ನನ್ನು ಸೆಳೆಯಿತು. ಅದನ್ನು ಈ ನನಗೆ ತಲೆಗೆ ಹೊಳೆದ ದೃಷ್ಟಿಕೋನದ ಕಣ್ಣಿನಿಂದ ಅಧ್ಯಯನ ಮಾಡಿದೆ. ಪರಿಣಾಮವೇ ಈ ಪುಸ್ತಕ.

ನಿಮ್ಮ ದೃಷ್ಟಿಕೋನದಲ್ಲಿ ಪುರುಷ ಸೂಕ್ತ ಮಂತ್ರಗಳು ಏನನ್ನು ಸೂಚಿಸುತ್ತವೆ..? ಅದು ಯಾಕೆ ಖಗೋಳ ಭೌತಶಾಸ್ತ್ರಕ್ಕೆ ಹೊಂದಿಕೆಯಾಗುತ್ತದೆ..?
ಪುರುಷ ಸೂಕ್ತ ಸೃಷ್ಟಿತತ್ತ್ವವನ್ನು ಸಂಕೇತಿಸುವ ಮಂತ್ರ. ನಾಲ್ಕೂ ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಇದು ವೇದಗಳಲ್ಲಿನ ಅತ್ಯಂತ ಶ್ರೇಷ್ಠ ಮಂತ್ರಗಳಲ್ಲಿ ಒಂದು ಎಂಬುದು ನನ್ನ ಭಾವನೆ. ಇದರಲ್ಲಿ ಜ್ಞಾನವಿದೆ, ವಿಜ್ಞಾನವಿದೆ, ʼಧರ್ಮʼವಿದೆ ಹಾಗೂ ʼಕರ್ಮʼಗಳಿವೆ. ಇದು ಪರಮ ಪುರುಷ(ಬ್ರಹ್ಮಾಂಡ)ನ ಸ್ವರೂಪದ ಬಗ್ಗೆ ಅರಿಯುವ ಪ್ರಯತ್ನವನ್ನು ಸಾಧ್ಯವಾಗಿಸುತ್ತದೆ. ಆತನಿಂದಲೇ ಸೃಷ್ಟಿಯಾದ ಈ ಸರ್ವಸೃಷ್ಟಿಯ ಸ್ವರೂಪ, ಸೃಷ್ಟಿಯಲ್ಲಿ ಅಡಕವಾಗಿರುವ ತತ್ತ್ವಗಳು ಹಾಗೂ ಅವನದೇ ಸೃಷ್ಟಿ ಸೂತ್ರ ಗಳನ್ವಯ ಆ ಸೃಷ್ಟಿ ʼಕಾಯʼಗಳಿಗೆ ಇರುವ ಸೃಷ್ಟಿ-ಲಯಗಳ ಅನಿವಾರ್ಯತೆ ಬಗ್ಗೆ ವಿವರಿಸುತ್ತದೆ. ಈ ಸಮಸ್ತ ಸೃಷ್ಟಿ ಚೈತನ್ಯಪೂರ್ಣವಾಗಿದ್ದು ತನ್ನಿಂದ ತಾನೇ ವೃದ್ಧಿಸಿಕೊಳ್ಳುತ್ತಿದೆ ಎನ್ನುವ ‘ಸೃಷ್ಟಿ ತತ್ತ್ವ’ವನ್ನು ಈ ಮಂತ್ರಗಳು ನಿರೂಪಿಸುತ್ತವೆ. ಹೀಗಾಗಿ ಪುರುಷ ಸೂಕ್ತದ ಬಹುತೇಕ ಮಂತ್ರಗಳು ನಿಚ್ಚಳವಾಗಿ ಈ ಬ್ರಹಾಂಡದ ಜ್ಞಾನ-ವಿಜ್ಞಾನ ಸ್ವರೂಪದ ವರ್ಣನೆಗಳಾಗಿವೆ ಎಂಬುದು ನನ್ನ ಭಾವನೆ.

ಪುರುಷ ಸೂಕ್ತವು ಆರಂಭದಲ್ಲೇ ಸೃಷ್ಟಿ ತತ್ವದ ಬಗ್ಗೆ ಬಗ್ಗೆ ಹೇಳುತ್ತದೆ ಎಂದು ಹೇಳಿದ್ದೀರಿ. ಅದು ಹೇಗೆ..?
ಮಂತ್ರ ೧ : ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ |
ಸ ಭೂಮಿಂ ಸರ್ವತಸ್ಪೃತ್ವಾ | ಅತ್ಯತಿಷ್ಠದ್ದಶಾಂಗುಲಮ್ ||
ಇದರ ಮಂತ್ರಾರ್ಥ: ಪುರುಷನು ಅಸಂಖ್ಯ ಶಿರವುಳ್ಳವನೂ, ಅಸಂಖ್ಯ ನೇತ್ರವಳ್ಳವನೂ, ಅಸಂಖ್ಯ ಪಾದವುಳ್ಳವನೂ ಆಗಿದ್ದಾನೆ. ಅವನು ಭೂಮಿಸಹಿತ ಎಲ್ಲ ಸೃಷ್ಟಿಯನ್ನೂ ವ್ಯಾಪಿಸಿಕೊಂಡು ಅವೆಲ್ಲವುಗಳ ಮೇಲೆ ದಶಾಂಗುಲ ಸ್ಥಿತನಾಗಿದ್ದಾನೆ.
ಇದರ ತಾತ್ಪರ್ಯ ಏನೆಂದರೆ ‘ಸಹಸ್ರ ಶೀರ್ಷಾ ಪುರುಷಃ’ ಎಂಬುದರಲ್ಲಿ ಇಡೀ ಬ್ರಹ್ಮಾಂಡದ ಪರಿಕಲ್ಪನೆಯೇ ಅಡಗಿದೆ. ಇಲ್ಲಿ ಸಕಲ ಸೃಷ್ಟಿಗಳಿಗಿಂತಲೂ ದೊಡ್ಡದಾಗಿ ವ್ಯಾಪಿಸಿರುವ ಆ ಬ್ರಹ್ಮಾಂಡವನ್ನು ‘ಪುರುಷ’ ಎಂದು ಮನುಷ್ಯನ ರೂಪದಲ್ಲಿ ಸಾಂಕೇತಿಕವಾಗಿ ವರ್ಣಿಸಲಾಗಿದೆ. ಇಲ್ಲಿ ‘ನಿರಾಕಾರ’ ಚೈತನ್ಯ (ಎನರ್ಜಿ) ರೂಪವಾದ ಬ್ರಹ್ಮಾಂಡಕ್ಕೆ, ‘ಪುರುಷ’ ಎಂಬುದು ಸಾಕಾರ ರೂಪದ ಹೆಸರು.
ನಿರಾಕಾರ ಅಥವಾ ‘ಅಮೂರ್ತ’ವಾದವನು (ವಾದದ್ದು) ಎಂದು ಭಾವಿಸಿರುವ, ಜ್ಯೋತಿರೂಪಿ ಅಥವಾ ಚೈನ್ಯರೂಪಿ ‘ಪರಬ್ರಹ್ಮ’ದ ಕಲ್ಪನೆ ಮಾಡುವುದು ಅಸಾಧ್ಯವಾಗಿದ್ದರಿಂದ ನಮ್ಮ ಗ್ರಹಿಕೆಗೆ ಸುಲಭವಾಗಲೆಂದು ಆ ಪರಬ್ರಹ್ಮ ಅಥವಾ ಬ್ರಹ್ಮಾಂಡದ ಅಮೂರ್ತ ಸ್ವರೂಪಕ್ಕೆ ‘ಪುರುಷ’ ಎನ್ನುವ ‘ಮೂರ್ತ ಸ್ವರೂಪ’ದ ಹೆಸರು ನೀಡಿ ವರ್ಣಿಸಲಾಗಿದೆ. ವೈಜ್ಞಾನಿಕವಾಗಿಯೂ ವಿಶ್ವಕ್ಕೆ ಒಂದು ‘ಮೂರ್ತರೂಪ’ ಇದ್ದಿರಬಹುದಾದ ಸಾಧ್ಯತೆಯನ್ನು ವಿಜ್ಞಾನಿಗಳೂ ಅನುಮಾನಿಸಿದ್ದರು. ಪ್ರಸಿದ್ಧ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್‌ವಿಶ್ವಕ್ಕೆ (ಸ್ಪೇಸ್ ಎಂಡ್ ಮ್ಯಾಟರ್) ಒಂದು ಆಕಾರವಿದೆ’ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಅದನ್ನು ‘ಕಾಸ್ಮಿಕ್ ಎಗ್’ (ವಿಶ್ವಾಂಡ ಅಥವಾ ಬ್ರಹ್ಮಾಂಡ), ‘ಪ್ರೆೈಮ್‌ವಲ್ ಫಾಯರ್‌ಬಾಲ್’ ಅಂದರೆ ‘ಆದಿ ಅಗ್ನಿಗೋಲ’ ಎಂದೂ ಕರೆದಿದ್ದಾರೆ. ಆದ್ದರಿಂದ ಆ ಮಹಾ ‘ಬ್ರಹ್ಮಾಂಡರೂಪಿ’ ಚೈತನ್ಯವನ್ನು ಮೂರ್ತ ರೂಪದ ‘ಪುರುಷ’ ಎಂದು ಸಂಕೇತಿಸಿ ಸಂಬೋಧಿಸಿರುವುದು ಸಮಂಜಸ ಎನಿಸುತ್ತದೆ.
ಉಪನಿಷತ್ತಿನಲ್ಲಿ ʼಪುರುಷʼನನ್ನು ‘ಸೂರ್ಯನ’ ಸಂಕೇತವಾಗಿ ‘ಪ್ರಾಣ’ (ಎನರ್ಜಿ) ಎಂದು ಗುರುತಿಸಲಾಗಿದೆ. ‘ಸ್ತ್ರೀ’ಯನ್ನು ‘ರಯಿ’ (ಪ್ರಕೃತಿ) ಎಂದು ಗುರುತಿಸಲಾಗಿದೆ. ಭೂಮಿಯ ಮೇಲಣ ಜೀವಸೃಷ್ಟಿಗಳ ʼಕಾಯʼಗಳಿಗೆಲ್ಲ ಜೀವ ಅಥವಾ ಪ್ರಾಣ(ಚೈತನ್ಯ)ವೇ ಪ್ರಧಾನವಾದುದು. ಅದರಂತೆ, ‘ವಿಶ್ವ-ಪ್ರಾಣ ಸ್ವರೂಪಿ’ಯಾದ ಆ ಪರಬ್ರಹ್ಮವನ್ನು ‘ಪುರುಷ’ ಎಂದು ಸಂಬೋಧಿಸಲಾಗಿದೆ.
ಪುರುಷನಿಗೆ ಹುಟ್ಟು-ಸಾವುಗಳಿಲ್ಲ. ಅವನು ವಿಶ್ವವ್ಯಾಪಿ. ಅಂತಹ ಮೂಲ ಚೈತನ್ಯದ ಸ್ವರೂಪವನ್ನು ಹಾಗೂ ಸಕಲ ಸೃಷ್ಟಿಗಳ ತತ್ವವನ್ನು ‘ಪುರುಷಸೂಕ್ತ’ ಸಂಕೇತಿಸುತ್ತದೆ ಎಂಬುದು ನನ್ನ ಭಾವನೆ.

ಪುರುಷ ಸೂಕ್ತದ ಮೊದಲನೇ ಮಂತ್ರದಲ್ಲಿ ವೈಜ್ಞಾನಿಕವಾದ ಸೃಷ್ಟಿ ತತ್ವ ಅಡಗಿದೆ ಎಂದು ಹೇಗೆ ಪುಷ್ಟೀಕರಿಸುತ್ತೀರಿ..?
‘ಸಹಸ್ರ ಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್’ ಎಂಬ ಉಕ್ತಿಯಲ್ಲಿ ಸಹಸ್ರ ಎಂದರೆ ಸಾವಿರವಲ್ಲ; ಅದನ್ನು ‘ಅಸಂಖ್ಯ’ ಎಂದು ಅರ್ಥೈಸಬೇಕಾಗುತ್ತದೆ. ಅದರಂತೆ ‘ಹತ್ತಂಗುಲ’ ಅವುಗಳ ಮೇಲಿದ್ದಾನೆಂದರೆ ಪುರುಷ (ಬ್ರಹ್ಮಾಂಡ) ಸಮಸ್ತ ಸೃಷ್ಟಿಗಳನ್ನೊಳಗೊಂಡು ‘ಇನ್ನೂ ದೊಡ್ಡದಾಗಿದ್ದಾನೆ’ ಎಂದು ಅರ್ಥೈಸಬೇಕಾಗುತ್ತದೆ. ಅಂದರೆ ಪುರುಷ (ಪರಬ್ರಹ್ಮ)ನು ವಿಶ್ವದ ಸಮಸ್ತ ಸೃಷ್ಟಿಗಿಂತಲೂ ಅಗಾಧವಾಗಿ ದೊಡ್ಡದಾಗಿದ್ದಾನೆ. ಅವನೇ ಸೃಷ್ಟಿಕರ್ತ. ಅವನ ಸೃಷ್ಟಿಯೆಂದರೆ ಅದು ಅಗಣಿತ ಗೋಚರ ಹಾಗೂ ಅಗೋಚರ ವಸ್ತು(ಆಕಾಶ ಕಾಯಗಳು)ಗಳಾದ ಕೋಟ್ಯನುಕೋಟಿ ನೆಬ್ಯೂಲಾ, ಗೆಲೆಕ್ಸಿ, ನಕ್ಷತ್ರಗಳು, ನಾವು ವಾಸಿಸುವ ‘ಭೂಮಿ’ಸೇರಿದಂತೆ ಗ್ರಹಗಳು, ಉಪಗ್ರಹಗಳು ಹಾಗೂ ಅದರ ಮೇಲೆ ನಿರ್ಮಾಣಗೊಂಡ ನೆಲ, ಜಲ, ಸಸ್ಯ ಹಾಗೂ ಸಕಲ ಜೀವ ಸಂಕುಲವನ್ನೂ ಒಳಗೊಂಡಿರುವುದು ಎಂದೂ ಗ್ರಹಿಸಬೇಕಾಗುತ್ತದೆ.
‘ಅತ್ಯತಿಷ್ಠತ್ ದಶಾಂಗುಲಂ’ ಎಂಬುದು ಈ ‘ಪರಮ ಪುರುಷನು’ ಈ ಎಲ್ಲವುಗಳನ್ನು ವ್ಯಾಪಿಸಿ ಇನ್ನೂ ದೊಡ್ಡದಾಗಿದ್ದಾನೆ. ಅಂದರೆ ಮೂರ್ತರೂಪದ ಸಮಸ್ತ ಸೃಷ್ಟಿಗಳ ಸಹಿತ ʼಅಂತರಿಕ್ಷʼವನ್ನೂ ವ್ಯಾಪಿಸಿಕೊಂಡಿದ್ದಾನೆ ಎಂದರ್ಥ. ವಿಶ್ವದ ʼಸೃಷ್ಟಿ ಕಾಯʼಗಳನ್ನು ಹೊರತುಪಡಿಸಿ ಅಂತರಿಕ್ಷದ ಉಳಿದ ಭಾಗದಲ್ಲಿ ಅಗಾಧ ಕತ್ತಲು ವ್ಯಾಪಿಸಿರುತ್ತದೆ. ‘ಪರಮ ಪುರುಷನು’ ಈ ಎಲ್ಲವುಗಳ ಮೇಲೆ ‘ಹತ್ತಂಗುಲ’ ಹೆಚ್ಚೇ ವ್ಯಾಪಿಸಿದ್ದಾನೆ ಅಂದರೆ ಇದಕ್ಕಿಂತ ದೊಡ್ಡದಾಗಿದ್ದಾನೆ ಎಂಬುದು ಮಂತ್ರದ ಈ ಚರಣದ ತಾತ್ಪರ್ಯ ಎಂಬುದು ನನ್ನ ಅಭಿಪ್ರಾಯ.
ವಿಶ್ವದ ಸಮಸ್ತ ಸೃಷ್ಟಿಗಳ ಸಂಖ್ಯೆಗಳನ್ನಾಗಲಿ, ವಿಶ್ವದ ವಿಸ್ತಾರ ಹಾಗೂ ಅದು ವ್ಯಾಪಿಸಿರುವ ಕ್ಷೇತ್ರಗಳನ್ನಾಗಲಿ ಕಲ್ಪಿಸುವುದು ಅಸಾಧ್ಯವಾದ ಸಂಗತಿ. ಇಂದಿನ ವಿಜ್ಞಾನಿಗಳಿಗೂ ಅದು ಬಗೆಹರಿದಿಲ್ಲ. ರಾತ್ರಿಯ ಹೊತ್ತಿನಲ್ಲಿ ಆಕಾಶ ವೀಕ್ಷಣೆಯನ್ನು ಚಿಕ್ಕ ದೂರದರ್ಶಕ ಒಂದರಲ್ಲಿ ವೀಕ್ಷಿಸಿದರೆ, ಅಂತರಿಕ್ಷದಲ್ಲಿ ನೆಬ್ಯೂಲಾಗಳು ಬೆಳಕಿನ ಮೋಡಗಳಂತೆ ಗೋಚರಿಸುತ್ತವೆ. ಗೆಲೆಕ್ಸಿಗಳು ಅಲ್ಲಲ್ಲಿ ಬೆಳಕಿನ ಗೋಲಗಳಂತೆ ಕಾಣುತ್ತವೆ. ನಕ್ಷತ್ರಗಳು ಚುಕ್ಕಿಗಳಾಗಿ ಹೊಳೆಯುತ್ತಿರುವಂತೆ ಕಾಣುತ್ತದೆ. ಆ ಪರಮ ಪುರುಷನು ಈ ಎಲ್ಲ ದೃಗ್ಗೋಚರ ಮತ್ತು ಅಗೋಚರ ಆಕಾಶ ಕಾಯಗಳಿಗಿಂತಲೂ ಬಹಳ ದೊಡ್ಡದಾಗಿದ್ದಾನೆ ಮತ್ತು ಅವುಗಳನ್ನೆಲ್ಲ ವ್ಯಾಪಿಸಿಕೊಂಡು ಬ್ರಹ್ಮಾಂಡ ವ್ಯಾಪ್ತಿಯಾಗಿದ್ದಾನೆ ಎನ್ನುವುದು ಈ ಮಂತ್ರದ ತಾತ್ಪರ್ಯ.
ನನ್ನ ಗ್ರಹಿಕೆಯಲ್ಲಿ ಪುರುಷಸೂಕ್ತದಲ್ಲಿ ಉಲ್ಲೇಖಿಸಲ್ಪಟ್ಟ ಮಾಪನದ ಅಂಕಿ-ಅಂಶಗಳು ಕೇವಲ ಸಾಂಕೇತಿಕವಾದವುಗಳು. ಪರಮ ಪುರುಷನನ್ನು ‘ವಿಶ್ವವ್ಯಾಪಿ’ ಎಂದು ವರ್ಣಿಸುವಾಗ ನಮಗೆ ಆ ವಿಶ್ವದ ವಿಸ್ತಾರ, ವ್ಯಾಪ್ತಿಗಳ ಪರಿಚಯ ಅಗತ್ಯವಾಗುತ್ತದೆ. ಅವನು ಈ ಸಮಗ್ರ ಸೃಷ್ಟಿಗಳನ್ನು ವ್ಯಾಪಿಸಿಕೊಂಡಿರುವ ರೀತಿಯನ್ನು ತಿಳಿಯಲು ಯಾವುದಾದರೂ ಒಂದು ಮಾಪನ ಬೇಕಾಗುತ್ತದೆ ‘ಪುರುಷ’ ಸೂಕ್ತದಲ್ಲಿ ಇದನ್ನು ಈ ಕಾರಣಕ್ಕಾಗಿಯೇ ಬಳಕೆ ಮಾಡಿದ್ದಾರೆ ಎಂದು ತೋರುತ್ತದೆ.
ಈ ಮಂತ್ರದಲ್ಲಿ ಆ ಪರಮ ಪುರುಷನನ್ನು ಸಹಸ್ರ ಶಿರ, ಸಹಸ್ರ ಪಾದ ಹಾಗೂ ಸಹಸ್ರ ಕಣ್ಣುಳ್ಳವನೆಂದೂ ವರ್ಣಿಸಲಾಗಿರುವುದರಿಂದ, ಸಹಜವಾಗಿ, ಪೃಥ್ವಿಸಹಿತವಾದ ನೆಬ್ಯೂಲಾಗಳು, ಗೆಲೆಕ್ಸಿಗಳು, ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳು ಸಮಸ್ತ ‘ಆಕಾಶ ಕಾಯಗಳೆಲ್ಲವನ್ನೂ’ ಅವನ ಅಂಗಾಂಗಗಳು ಎಂದೇ ಅರ್ಥೈಸಬೇಕಾಗುತ್ತದೆ. ಅಂದರೆ, ಅವೆಲ್ಲವನ್ನೂ ಆ ‘ಪುರುಷ’ (ಬ್ರಹ್ಮಾಂಡ)ನ ಒಂದು ಭಾಗವೆಂದೇ ಪರಿಗಣಿಸಿರುವುದು ವೈಜ್ಞಾನಿಕವೂ ಆಗಿದೆ.

…..ಯದನ್ನೇನಾತಿರೋಹತಿ ಎಂಬ ಉಕ್ತಿಯ ಬಗ್ಗೆಯೂ ವಿಭಿನ್ನವಾಗಿ ವ್ಯಾಖ್ಯಾನಿಸಿದ್ದೀರಲ್ಲ..?
ಪುರುಷ ಏವೇದಂ ಸರ್ವಂ | ಯತ್ ಭೂತಂ ಯಚ್ಚ ಭಾವ್ಯಂ |
ಉತಾಮೃತತ್ವಸ್ಯೇಶಾನಃ | ಯದನ್ನೇನಾತಿರೋಹತಿ ||
ಇದರ ತಾತ್ಪರ್ಯವೆಂದರೆ ‘ಪುರುಷ ಏವೇದಂ ಸರ್ವಂ’ -ಈ ಎಲ್ಲವೂ (ಬ್ರಹ್ಮಾಂಡದಲ್ಲಿ ಅಸ್ತಿತ್ವದಲ್ಲಿರುವ ಎಲ್ಲವೂ) ಅವನೇ. ‘ಯದ್ಭೂತಂ ಯಚ್ಚ ಭಾವ್ಯಂ’ ಅವೆಲ್ಲವುಗಳ ಭೂತ-ಭವಿಷ್ಯಗಳಿಗೆ ಅವನೇ ಕಾರಣ. ‘ಉತಾಮೃತತ್ವಸ್ಯೇಶಾನಃ’ -ಅವುಗಳ ಅಮೃತತ್ವಕ್ಕೆ ಅವನೇ ಒಡೆಯ. ‘ಯದನ್ನೇನಾತಿರೋಹತಿ’ -ಎಲ್ಲವೂ ಅನ್ನದಿಂದಲೇ ‘ವೃದ್ಧಿ’ ಹೊಂದುತ್ತವೆ ಎಂಬುದಾಗಿದೆ. ನಾವು ಇವುಗಳನ್ನು ಪರಮ ಪುರುಷನ ‘ಸೃಷ್ಟಿಸೂತ್ರ’ಗಳೆಂದೇ ಪರಿಗಣಿಸಬಹುದು. ‘ಪುರುಷ ಏವೇದಂ ಸರ್ವಂ | ಯದ್ಭೂತಂ ಯಚ್ಚ ಭಾವ್ಯಂ’
ಪುರುಷ’(ಪರಬ್ರಹ್ಮ)ನು ‘ಅವೆಲ್ಲವುಗಳ (ಅಂದರೆ ಸಮಸ್ತ ಸೃಷ್ಟಿಗಳ) ಭೂತ-ಭವಿಷ್ಯಗಳಿಗೆ ಕಾರಣನೂ ಆಗಿದ್ದಾನೆ’ ಎಂದು. ‘ಪುರುಷ ಏವೇದಂ ಸರ್ವಂ | ಯದ್ಭೂತಂ ಯಚ್ಚ ಭಾವ್ಯಂ | (‘ಭವ್ಯಂ’ ಎನ್ನುವುದೂ ಪ್ರಚಲಿತವಿದೆ)’ ಎಂಬುದನ್ನು ಒಂದೇ ವಾಕ್ಯವಾಗಿ ಗ್ರಹಿಸಿದರೆ ಸಮಸ್ತ ಸೃಷ್ಟಿಗಳ ಅಸ್ತಿತ್ವ ಹಾಗೂ ಅವುಗಳಲ್ಲಿ ಹಿಂದೆ ಆಗಿ ಹೋದ ಹಾಗೂ ಮುಂದೆ ಆಗಬಹುದಾದ ಎಲ್ಲವುಗಳಿಗೂ ಅವನೇ ಕಾರಣ ಎಂದಾಗುತ್ತದೆ..
‘ಪುರುಷ ಏವೇದಂ ಸರ್ವಂ’ ಎಂಬುದನ್ನು ಪ್ರತ್ಯೇಕ ವಾಕ್ಯವಾಗಿ ತೆಗೆದುಕೊಂಡರೆ ‘ಪುರುಷ+ಏವ+ ಇದಂ+ಸರ್ವಂ’ ಎಂದು ಅರ್ಥೈಸಿದರೆ ಆಗ ‘ಈ ಎಲ್ಲವೂ (ಅಸ್ತಿತ್ವದಲ್ಲಿರುವ ಈ ಎಲ್ಲವೂ) ‘ಪುರುಷನೇ’ ಆಗಿದ್ದಾನೆ’ ಎನ್ನುವ ಅರ್ಥವನ್ನು ನೀಡುತ್ತದೆ.
‘ಯದ್ಭೂತಂ ಯಚ್ಚ ಭವ್ಯಂ’ ಎನ್ನುವುದನ್ನು ಮತ್ತೊಂದು ವಾಕ್ಯವಾಗಿ ತೆಗೆದುಕೊಂಡರೆ ಅವೆಲ್ಲವುಗಳ (ವಿಶ್ವದ) ‘ಭೂತ-ಭವಿಷ್ಯ’ಗಳಿಗೂ ಅವನೇ ಕಾರಣ ಎಂದು ಅರ್ಥೈಸಬಹುದು. ಅಂದರೆ ಸಕಲ ಸೃಷ್ಟಿಗಳ ಉಗಮಕ್ಕೂ, ಅವುಗಳ ವೃದ್ಧಿಗೂ ಹಾಗೂ ಭವಿಷ್ಯಕ್ಕೂ ಅವನೇ ಕಾರಣ ಎಂದು ತಿಳಿಯಬೇಕಾಗುತ್ತದೆ.
‘ಉತಾಮೃತತ್ವಸ್ಯೇಶಾನಃ’ ಈ ಮಂತ್ರದ ಎರಡನೇ ಚರಣದ ವಾಕ್ಯದಲ್ಲಿ (ಉತ+ಅಮೃತತ್ವಸ್ಯ+ಈಶಾನಃ) ಅಂದರೆ ‘ಪುರುಷ’ನು ಅಮೃತತ್ವಕ್ಕೆ ಒಡೆಯನಾಗಿದ್ದಾನೆಂಬ ಅರ್ಥ ನೀಡುತ್ತದೆ. ಅಂದರೆ ಅವನು ಜನನ-ಮರಣಗಳು ಇಲ್ಲದವನು ಎಂದು ಹೇಳುತ್ತದೆ. ಅಂದರೆ ಪುರುಷನು ‘ಅವಿನಾಶಿ, ಚೈತನ್ಯ ಸ್ವರೂಪಿ’ (ಎನರ್ಜಿ) ಎಂದು ಅರ್ಥೈಸಬಹುದು.
ಇದನ್ನು ಇನ್ನೊಂದು ದೃಷ್ಟಿಕೋನದಿಂದಲೂ ಪರಿಶೀಲಿಸಬಹುದು. ಸೃಷ್ಟಿಯಾದ ಎಲ್ಲ ದ್ರವ್ಯಗಳೂ (ಮ್ಯಾಟರ್) ‘ಅವನ’ ಚೈತನ್ಯ (ಎನರ್ಜಿ)ದಿಂದಲೇ ಸೃಷ್ಟಿಯಾಗಿದ್ದರಿಂದ ಅವನೂ ಅವಿನಾಶಿ ಮತ್ತು ಅವನ ಸಮಸ್ತ ಸೃಷ್ಟಿಯೂ ಅವಿನಾಶಿ (ನಾಶವಿಲ್ಲದ್ದು) ಎಂದು ತಿಳಿಯಬೇಕಾಗುತ್ತದೆ. ಈವರೆಗಿನ ವೈಜ್ಞಾನಿಕ ವಿವರಗಳೂ ‘ಮ್ಯಾಟರ್’ ಮತ್ತು ‘ಎನರ್ಜಿ’ ಸೃಷ್ಟಿಯ ಮೂಲ ಮತ್ತು ಅವು ‘ಅವಿನಾಶಿ’ ಎಂದು ಪರಿಗಣಿಸುತ್ತವೆ. ಅಂದರೆ, ಅವೆಲ್ಲ ʼಕಾಯʼಗಳಲ್ಲಿ ಅಡಕವಾಗಿರುವ ಚೈತನ್ಯದಿಂದಾಗಿಯೇ ಅವುಗಳಲ್ಲಿ ನಿರಂತರವಾದ ‘ಚಲನೆ’ ಹಾಗೂ ‘ಪರಿವರ್ತನೆ’ಗಳು (ಜನನ-ವೃದ್ಧಿ-ಮರಣ ಅಥವಾ ಸೃಷ್ಟಿ, ಸ್ಥಿತಿ, ಲಯಗಳ ಅವಸ್ಥೆ) ಅವು ನಡೆಯುತ್ತಲೇ ಇರುತ್ತವೆ. ಈ ನಿರಂತರತೆಯೇ ‘ಅಮೃತತ್ವ’ ಅಥವಾ ಅವಿನಾಶಿತ್ವ ಎಂದು ತಿಳಿಯ ಬೇಕಾಗುತ್ತದೆ.
ಅಂದರೆ, ಸೃಷ್ಟಿಯಲ್ಲಿಯ ಸಮಸ್ತ ದ್ರವ್ಯಗಳು (ಮ್ಯಾಟರ್) ಹಾಗೂ ಚೈತನ್ಯ (ಎನರ್ಜಿ) ಎರಡೂ ಅವಿನಾಶಿಗಳು. ಅವುಗಳ ‘ಸಮಾಗಮವೇ’ ಸೃಷ್ಟಿಗೆ ಮೂಲ. ತಾತ್ವಿಕವಾಗಿ ಅವುಗಳನ್ನು ‘ಪ್ರಕೃತಿ ಮತ್ತು ಪುರುಷ’ ಎಂದು ಪರಿಗಣಿಸಲಾಗುತ್ತದೆ. ವಿಶ್ವದಲ್ಲಿ ಅವುಗಳ ‘ಸಮಾಗಮವು’ ನಿರಂತರವಾಗಿ ನಡೆಯುತ್ತಿರುವುದರಿಂದ ಆತನಿಂದಾದ ಈ ಸೃಷ್ಟಿ ಹಾಗೂ ಅವನ ಸೃಷ್ಟಿ ಕ್ರಿಯೆಗಳು ಕೂಡ ಅಮೃತತ್ವ ಹೊಂದಿದವುಗಳು ಅಥವಾ ಅವಿನಾಶಿ ಎಂದು ಗ್ರಹಿಸಬೇಕಾಗುತ್ತದೆ.
ವ್ಯಷ್ಟಿಯಲ್ಲಿ ಸಮಸ್ತ ವಿಶ್ವಕಾಯಗಳು ತಮ್ಮ ಜನನ-ಮರಣಗಳಿಂದಾಗಿ ಶಾಶ್ವತವಲ್ಲ ಎಂದು ತೋರಿದರೂ ಸಮಷ್ಟಿಯಲ್ಲಿ ಒಟ್ಟಾರೆಯಾಗಿ ಇವು ನಿರಂತರವಾಗಿ ನಡೆಯುತ್ತಿರುತ್ತವೆ. ಈ ನಿರಂತರತೆಯೇ ಅವಿನಾಶಿ ಎಂದು ಅರ್ಥೈಸಬೇಕಾಗುತ್ತದೆ.
ಭೂಮಿಯ ಮೇಲೆ ಜೀವಿಗಳನ್ನೇ ತೆಗೆದುಕೊಂಡರೆ ಚೈತನ್ಯ ಸ್ವರೂಪವು (ಎನರ್ಜಿ) ಎಲ್ಲಿಯ ವರೆಗೆ ಆ ಜೀವಿಯಲ್ಲಿ ‘ಉಪಸ್ಥಿತ’ ಇರುತ್ತದೆಯೋ ಅಲ್ಲಿಯವರೆಗೆ ಆ ಜೀವಿ ‘ಬದುಕಿದೆ’ ಎಂದು ತಿಳಿಯಲಾಗುತ್ತದೆ. ಅದು ಚೈತನ್ಯರಹಿತವಾದಾಗ ʼಮರಣʼ ಎನ್ನುತ್ತೇವೆ. ಆದರೆ ಅದೇ ಸಮಯದಲ್ಲಿ ಚೈತನ್ಯವು ಇತರ ಜೀವಿಗಳಲ್ಲಿ ʼಉಪಸ್ಥಿತʼ ಇರುತ್ತದೆ. ಅದರಂತೆಯೇ ದ್ಯು-ಲೋಕದ ʼಕಾಯʼಗಳಲ್ಲಿಯೂ (ನೆಬ್ಯೂಲಾ-ಗೆಲೆಕ್ಸಿ, ನಕ್ಷತ್ರ, ಗ್ರಹ, ಉಪಗ್ರಹ ಮೊದಲಾದವುಗಳು ಎಂದರ್ಥ) ಆ ಚೈತನ್ಯವು ಅವುಗಳಲ್ಲಿ ‘ಉಪಸ್ಥಿತ’ ಇರುವ ವರೆಗೆ ಅವು ಕ್ರಿಯಾಶೀಲವಾಗಿರುತ್ತವೆ. ನಂತರ ಚೈತನ್ಯರಹಿತವಾಗುತ್ತವೆ. ಆಗಲೂ ಆ ಚೈತನ್ಯವು ಇತರ ಕಾಯಗಳಲ್ಲಿ ಉಪಸ್ಥಿತ ಇದ್ದೇ ಇರುತ್ತದೆ. ಹಾಗಾಗಿ ವ್ಯಷ್ಟಿಯಲ್ಲಿ ಅವಿನಾಶಿತ್ವ ಇರದಿದ್ದರೂ ಸಮಷ್ಟಿಯಲ್ಲಿ ಚೈತನ್ಯ ಇದ್ದೇ ಇರುವುದರಿಂದ ಅವು ಅವಿನಾಶಿ. ಪುರುಷಸೂಕ್ತದ ‘ಅವಿನಾಶಿತ್ವ’ ಇದನ್ನೇ ಸೂಚಿಸುತ್ತದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

‘….ಯದನ್ನೇನಾತಿರೋಹತಿ’ ಎಂಬುದರಲ್ಲಿರುವ ಸೃಷ್ಟಿ ತತ್ವದ ಬಗ್ಗೆ ಇನ್ನಷ್ಟು ಪುಷ್ಟೀಕರಿಸುವ ಪ್ರಯತ್ನ ಮಾಡಿದ್ದೀರಿ. ಅದರ ಬಗ್ಗೆ ಒಂದಷ್ಟು ಹೇಳಬಹುದೇ..?
‘ಯದನ್ನೇನಾತಿರೋಹತಿ’ ಎಂಬುದರ ಅರ್ಥವನ್ನು ‘ಅವೆಲ್ಲವುಗಳೊಡನಿದ್ದೂ ಬೇರೆಯಾಗಿದ್ದಾನೆ’ ಎಂದು ಆಕರ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಯತ್+ಅನ್ನೇನ+ಅತಿರೋಹತಿ ಎಂಬ ಉಕ್ತಿಯು ಮತ್ತೊಂದು ಅರ್ಥವನ್ನೂ ನೀಡುತ್ತದೆ ಎಂದು ಅನಿಸುತ್ತದೆ. ‘ಅದು ಅನ್ನದಿಂದ ದೊಡ್ಡದಾಗುತ್ತದೆ ಅಥವಾ ಅಧಿಕವಾಗುತ್ತದೆ’ ಎಂಬ ಅರ್ಥ ನೀಡುತ್ತದೆ. ‘ಡಿವಿಜಿ’ ಅವರೂ ಇದೇ ಅರ್ಥವನ್ನು ಅನುಮೋದಿಸಿದ್ದಾರೆ. ಅಲ್ಲದೆ, ಈ ಅರ್ಥವು ಇಂದಿನ ವೈಜ್ಞಾನಿಕ ತಿಳುವಳಿಕೆಗೂ ಸರಿಯಾಗಿ ಅನ್ವಯಿಸುತ್ತದೆ.
ವೈಜ್ಞಾನಿಕವಾಗಿ, (‘ಹಬ್ಬಲ್ಸ್‌ಲಾ’ದ ಪ್ರಕಾರ) ವಿಶ್ವವು ದೊಡ್ಡದಾಗುತ್ತಲೇ ಇದೆ ಎಂದು ವಿಜ್ಞಾನಿಗಳಲ್ಲಿ ಅನೇಕರು ಹೇಳುತ್ತಾರೆ. Expanding Universe ಎಂದು ಕರೆಯುತ್ತಾರೆ. ಇತ್ತೀಚೆಗೆ ನೆಬ್ಯೂಲಾ, ಗೆಲೆಕ್ಸಿಗಳು ಪರಸ್ಪರ ದೂರ ಸರಿಯುತ್ತಿರುವುದನ್ನು ಗುರುತಿಸಿ, ಆ ಕಾರಣದಿಂದ ವಿಶ್ವವು ಹಿಗ್ಗುತ್ತಲಿದೆ ಎಂದು ಪರಿಗಣಿಸಲಾಗಿದೆ. ‘ಯದನ್ನೇನಾತಿರೋಹತಿ’ ಎನ್ನುವ ಉಕ್ತಿಯಲ್ಲಿ ‘ಅನ್ನ’ ಎಂಬ ಪದವನ್ನು ‘ಮ್ಯಾಟರ್’ ಅಥವಾ ದ್ರವ್ಯ ಎಂದು ಅರ್ಥೈಸಬೇಕು. ಈ ಅರ್ಥದಲ್ಲಿ ಆಕಾಶಕಾಯಗಳೆಲ್ಲ ‘ಪುರುಷ(ಪರಬ್ರಹ್ಮ)ನ’ ದ್ರವ್ಯಗಳೇ. ಅವನ ‘ಚೈತನ್ಯ’(ಎನರ್ಜಿ)ವನ್ನೇ ಹೊಂದಿವೆ. ಆಕಾಶಕಾಯಗಳ ಸೃಷ್ಟಿ ಕ್ರಿಯೆಗಳಲ್ಲಿ ಈ ‘ಅನ್ನ’ (ದ್ರವ್ಯ = ಮ್ಯಾಟರ್) ಹಾಗೂ ‘ಚೈತನ್ಯ’ಗಳು (ಎನರ್ಜಿ) ಪರಸ್ಪರ ರೂಪಾಂತರ ಹೊಂದುತ್ತಲೇ ಇರುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಈ ಸಂದರ್ಭದಲ್ಲಿ ‘ವೃದ್ಧಿ’ ಕ್ರಿಯೆಯೂ ನಡೆಯುತ್ತದೆ. ಈ ಅರ್ಥದಲ್ಲಿ ‘ಆ ಪರಮ ಪುರುಷ (ಪರಬ್ರಹ್ಮ)ನು ತನ್ನ ದ್ರವ್ಯಗಳಿಂದ (ಸರ್ವ ಸೃಷ್ಟಿಗಳನ್ನೊಳಗೊಂಡು) ಹಿಗ್ಗುತ್ತಲೇ ಇದ್ದಾನೆ’ ಎಂದು ಅರ್ಥೈಸುವುದು ಸೂಕ್ತ ಎನಿಸುತ್ತದೆ.
ಹೀಗಾಗಿ ‘ಯದನ್ನೇನ ಅತಿರೋಹತಿ’ ಎನ್ನುವ ಉಕ್ತಿಯು ಸೃಷ್ಟಿತತ್ತ್ವದ ಒಂದು ಪ್ರಧಾನ ಆಯಾಮವನ್ನೂ ಸಂಕೇತಿಸುತ್ತದೆ ಎಂದು ಅನಿಸುತ್ತದೆ. ದ್ರವ್ಯಗಳು ಸಾಮಾನ್ಯವಾಗಿ ಅನಿಲ, ರಸ (ದ್ರವ) ಹಾಗೂ ಘನ ಈ ಮೂರೂ ರೂಪಗಳನ್ನು ಹೊಂದಿರಬಹುದು. ವೈಜ್ಞಾನಿಕವಾಗಿಯೂ ಇದು ಸತ್ಯವಾಗಿಯೇ ಕಂಡುಬರುತ್ತದೆ. ಇಲ್ಲಿ ‘ಅನ್ನೇನ ಅತಿರೋಹತಿ’ ಎನ್ನುವುದು ಒಂದು ವಿಶ್ವತತ್ತ್ವವನ್ನೇ ಸಂಕೇತಿಸುತ್ತದೆ ಎಂದು ತೋರುತ್ತದೆ.
ನಮ್ಮ ‘ಆಕಾಶ ಗಂಗೆ’ ಎನ್ನುವ ನೆಬ್ಯೂಲರ್ ಗೆಲೆಕ್ಸಿಯಲ್ಲಿ ಉದ್ಭವವಾದ ಸೂರ್ಯ ಅದರದೇ ದ್ರವ್ಯವಾದ ಹೈಡ್ರೋಜನ್ ಅನ್ನವನ್ನು ಬಳಸಿಕೊಂಡು ವೃದ್ಧಿ ಹೊಂದುತ್ತಲಿದೆ. ವೈಜ್ಞಾನಿಕ ಶೋಧಗಳ ಪ್ರಕಾರ ಬೃಹತ್ ನಕ್ಷತ್ರಗಳು ತಮ್ಮ ದ್ರವ್ಯಗಳಲ್ಲಿಯ ಪರಿವರ್ತನ ಕ್ರಿಯೆಗಳಿಂದಾಗಿ ‘ಹಿಗ್ಗುತ್ತಲಿರುತ್ತವೆ’ ಮತ್ತು ಕೊನೆಯಲ್ಲಿ ‘ಸುಪರ್ನೋವಾ’ (ಆಸ್ಫೋಟ) ಹೊಂದಿ ಕೊನೆಯಾಗುತ್ತವೆ ಎಂಬ ಅಭಿಪ್ರಾಯವಿದೆ. ಆಕಾಶಕಾಯಗಳಲ್ಲಿಯ ‘ಹಿಗ್ಗುವಿಕೆ-ಕುಗ್ಗುವಿಕೆಗಳು’ ಅವುಗಳಲ್ಲಿಯ ಗುರುತ್ವಾಕರ್ಷಣ ಶಕ್ತಿಯ ವ್ಯತ್ಯಾಸಗಳಿಂದ ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಅವುಗಳ ಕುಗ್ಗುವಿಕೆ ಯಿಂದಾಗಿ ‘ಕಪ್ಪುರಂಧ್ರ’ಗಳ (ಬ್ಲಾಕ್‌ಹೋಲ್) ಉಪಸ್ಥಿತಿಯನ್ನೂ ಗುರುತಿಸಲಾಗಿದೆ. ಈ ‘ಕಪ್ಪುರಂಧ್ರ’ಗಳು ನಕ್ಷತ್ರಗಳನ್ನೇ ನುಂಗುತ್ತವೆ! ‘ಯದನ್ನೇನಾತಿರೋಹತಿ’ ಎನ್ನುವ ಉಕ್ತಿಯು ಈ ವೈಜ್ಞಾನಿಕ ವಿವರಣೆಯನ್ನು ಸರಿಯಾಗಿ ಹೋಲುತ್ತದೆ.
ಆದ್ದರಿಂದ, ‘ಅನ್ನೇನ ಅತಿರೋಹತಿ’ ಎನ್ನುವುದೊಂದು ಸೃಷ್ಟಿ ತತ್ತ್ವವೇ ಆಗಿದೆ. ಅದರಂತೆ, ವೃದ್ಧಿ-ಕ್ಷಯಗಳ ಈ ಚಕ್ರೀಯ ಕ್ರಿಯೆಯು ಕೂಡ ‘ಬ್ರಹ್ಮಾಂಡ(ಪುರುಷ)ದ ಒಂದು ಸೃಷ್ಟಿ ನಿಯಮ ಎಂದೇ ಪರಿಗಣಿಸಬೇಕಾಗುತ್ತದೆ.

ಪಾದೋsಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾsಮೃತಂ ದಿವಿ || ಎಂಬ ಮಂತ್ರವು ಬ್ರಹ್ಮಾಂಡದ ಗಾತ್ರ ಹಾಗೂ ವ್ಯಾಪಕತೆಯ ಬಗ್ಗೆ ಹೇಳುತ್ತದೆ ಎಂದು ಹೇಳಿದ್ದೀರಿ. ಅದು ಹೇಗೆ..?
ಏತಾವಾನಸ್ಯ ಮಹಿಮಾ | ಅತೋ ಜ್ಯಾಯಾಂಶ್ಚ ಪೂರುಷಃ |
ಪಾದೋsಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾsಮೃತಂ ದಿವಿ ||
ಇದರ ಮಂತ್ರಾರ್ಥ ಅವನ ಮಹಿಮೆಯು ಅಷ್ಟೊಂದಿದೆ. ಆದರೆ ಅದಕ್ಕಿಂತ ಹೆಚ್ಚಾಗಿಯೇ ಆ ಪುರುಷನಿದ್ದಾನೆ. ಈ ಸಮಸ್ತ ಸೃಷ್ಟಿ ಅವನ ಒಂದು ಚತುರ್ಥಾಂಶವಾಗಿದೆ. ಇವನ ಅಮೃತಸ್ವರೂಪವು ಪ್ರಕಾಶಮಾನವಾಗಿ (ಇನ್ನೂ) ಮೂರರಷ್ಟಿದೆ.
ನನ್ನ ದೃಷ್ಟಿಯಲ್ಲಿ ಇದರ ತಾತ್ಪರ್ಯವೆಂದರೆ ‘ಪಾದೋsಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾsಮೃತಂ ದಿವಿ’ ಎಂಬ ೩ನೇ ಮಂತ್ರವು ವಿಶ್ವದ ಸಮಸ್ತ ಸೃಷ್ಟಿಗಳನ್ನು ಆ ಪುರುಷ (ಬ್ರಹ್ಮಾಂಡ)ನ ೧/೪ನೇ ಭಾಗವಾಗಿ ಪರಿಗಣಿಸುತ್ತದೆ (ವಿಶ್ವಾ ಭೂತಾನಿ ಅಸ್ಯ ಪಾದಃ) ಎಂಬುದಾಗಿದೆ. ಮತ್ತು ಅವುಗಳ ಮೇಲೆ, ಉಳಿದ ೩/೪ನೇ ಭಾಗದಲ್ಲಿ ‘ಪುರುಷ’ನು (ಈ ಸೃಷ್ಟಿಗಳ ಮೇಲೆ) ‘ಅಮೃತ’ ಸ್ವರೂಪನಾಗಿ ಪ್ರಕಾಶಿಸುತ್ತಲಿದ್ದಾನೆ ಎಂದು ಉಕ್ತಿ ಹೇಳುತ್ತದೆ.
ಒಂದನೇ ಮಂತ್ರದಲ್ಲಿ ‘ಸ ಭೂಮಿಂ ವಿಶ್ವತೋಸ್ಪೃತ್ವಾ ಅತ್ಯತಿಷ್ಠತ್ ದಶಾಂಗುಲಂ’ ಎಂದು ವರ್ಣಿಸಲಾಗಿದೆ. ಈ ಮಂತ್ರದಲ್ಲಿಯೂ ಸಮಸ್ತ ಸೃಷ್ಟಿಗಿಂತಲೂ ಅಗಾಧ ದೊಡ್ಡದಾಗಿ ಆ ಪರಮ ಪುರುಷ(ಪರಬ್ರಹ್ಮ)ನು ವ್ಯಾಪಿಸಿದ್ದಾನೆ ಎಂದು ಹೇಳಿರುವುದನ್ನು ಈ ಮಂತ್ರವು ಮತ್ತೊಮ್ಮೆ ಪುಷ್ಟೀಕರಿಸುತ್ತದೆ ಎಂದು ಹೇಳಬಹುದು.
ಸಮಸ್ತ ವಿಶ್ವವನ್ನು ‘ಅಖಿಲಾಂಡ’ ಎಂದು ಭಾವಿಸಿದಾಗ ಅದರಲ್ಲಿ ಅಸ್ತಿತ್ವದಲ್ಲಿರುವ ಎಲ್ಲವನ್ನೂ ವ್ಯಾಪಿಸಿಕೊಂಡು ಅದಕ್ಕಿಂತ ಮೂರು ಪಟ್ಟು ದೊಡ್ಡದಾಗಿ ‘ಆ ಪರಮ ಪುರುಷನು(ಪರಬ್ರಹ್ಮನು)’ ವ್ಯಾಪಿಸಿದ್ದಾನೆ ಎಂದು ಅರ್ಥೈಸಬೇಕಾಗುತ್ತದೆ. ಭೂಮಿಯನ್ನೂ ಒಳಗೊಂಡು, ಸಮಸ್ತ ಗೋಚರ ಆಕಾಶ ಕಾಯಗಳು ಹಾಗೂ ಅಗಾಧ ಕತ್ತಲ(ಅಗೋಚರ)ನ್ನು ಆವರಿಸಿರುವ ಅಂತರಿಕ್ಷ (ಆಕಾಶ) ಎಲ್ಲವೂ, ಆ ಪುರುಷ (‘ಬ್ರಹ್ಮಾಂಡ)ನ ದ ಕಾಲು ಭಾಗ ಮಾತ್ರ ಎಂಬುದನ್ನು ಈ ಮಂತ್ರವು ಸೂಚಿಸುತ್ತದೆ. ಉಳಿದ ೩/೪ನೇ ಭಾಗದಲ್ಲಿ ವ್ಯಾಪಿಸಿರುವ ಆ ‘ಪುರುಷ’ನು ಕೇವಲ ಚೈತನ್ಯ ರೂಪನಾಗಿಯೂ, ‘ಅಮೃತ’ ಸ್ವರೂಪನಾಗಿಯೂ (ಅವಿನಾಶಿಯಾಗಿ) ಪ್ರಕಾಶಿಸುತ್ತಲಿದ್ದಾನೆ ಎಂದು ಮಂತ್ರವು ವರ್ಣಿಸುತ್ತದೆ.
ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು, ವೀಕ್ಷಣೆಗಳೂ ಈ ಬ್ರಹ್ಮಾಂಡವು ಸಮಸ್ತ ಗೋಚರ ಸೃಷ್ಟಿಗಿಂತಲೂ ದೊಡ್ಡದಾಗಿ ಅಸ್ತಿತ್ವದಲ್ಲಿರುವುದನ್ನು ದೃಢೀಕರಿಸಿವೆ. ಸಮಾನಾಂತರವಾದ ಇನ್ನೊಂದು ವಿಶ್ವವಿರಬಹುದು ಎಂದು ಕೆಲ ವಿಜ್ಞಾನಿಗಳು ಊಹಿಸಿದ್ದಾರ ! ‘ಪಾದೋsಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾsಮೃತಂ ದಿವಿ |’ ಎನ್ನುವ ಮಂತ್ರಚರಣವನ್ನು ಈ ವೈಜ್ಞಾನಿಕ ಹಿನ್ನೆಲೆಯಲ್ಲಿ ಅರ್ಥೈಸಬಹುದು.
ಅಂದರೆ ಪರಮ ಪುರುಷನು ಸಮಸ್ತ ಸೃಷ್ಟಿಗಳಿಗಿಂತ ೪ ಪಟ್ಟು ದೊಡ್ಡದಾಗಿದ್ದಾನೆ ಎಂದು ಅರ್ಥೈಸಬಹುದು.

ನಾಲ್ಕನೇ ಮಂತ್ರವಾದ ಪಾದೋsಸ್ಯೇಹಾಭವಾತ್ಪುನಃ…ಎಂಬುದು ೩ನೇ ಮಂತ್ರದ ಉಕ್ತಿಗೆ ಹೆಚ್ಚಿನ ವಿವರಣೆಗಳನ್ನು ನೀಡುತ್ತದೆ ಎಂದು ನಿಮ್ಮ ಪುಸ್ತಕದಲ್ಲಿ ಹೇಳಿದ್ದೀರಲ್ಲ..? ಅದು ಹೇಗೆ..?
ಮಂತ್ರ ೪ರ
ತ್ರಿಪಾದೂರ್ಧ್ವ ಉದೈತ್ ಪುರುಷಃ | ಪಾದೋsಸ್ಯೇಹಾಭವಾತ್ಪುನಃ |
ತತೋ ವಿಶ್ವಂ ವ್ಯಕ್ರಾಮತ್ | ಸಾಶನಾನಶನೇ ಅಭಿ ||
ಈ ಮಂತ್ರಾರ್ಥ ಮೂರರಷ್ಟಿರುವ ಪುರುಷನು ಮೇಲೆ ಇದ್ದಾನೆ. ಅವನ ಒಂದು ಚತುರ್ಥಾಂಶವು ಪುನಃ ಇಲ್ಲೇ ಇದೆ. ಚೇತನ ಹಾಗೂ ಅಚೇತನ (ರೂಪದಲ್ಲಿರುವ) ಆ ವಸ್ತುಗಳನ್ನೆಲ್ಲ ಅವನು ವ್ಯಾಪಿಸಿಕೊಂಡಿದ್ದಾನೆ.
ಇದರ ತಾತ್ಪರ್ಯವೇನೆಂದರೆ ‘ಪಾದೋsಸ್ಯೇಹಾಭವಾತ್ಪುನಃ’ ೪ನೇ ಮಂತ್ರವು, ‘ಪಾದೋsಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾsಮೃತಂ ದಿವಿ’ ಎನ್ನುವ ೩ನೇ ಮಂತ್ರದ ಉಕ್ತಿಗೆ ಹೆಚ್ಚಿನ ವಿವರಣೆಗಳನ್ನು ಒದಗಿಸುತ್ತದೆ. ಸಮಸ್ತ ಸೃಷ್ಟಿಯು ಪುರುಷನ ೧/೪ನೇ ಭಾಗವಾಗಿ ನಿರ್ಮಾಣಗೊಂಡು ಪುನಃ ಉಳಿದ ೩/೪ ಭಾಗದಲ್ಲಿಯೇ ಅದು ಸೇರಿಕೊಂಡಿದೆ ಎಂಬುದನ್ನು ಸೂಚಿಸುತ್ತದೆ. ಅಂದರೆ, ಆ ‘ವಿಶ್ವ ಪುರುಷ’ನಿಂದ ಸಮಗ್ರ ಸೃಷ್ಟಿಗಳು ಅವನ ಕಾಲು ಭಾಗವಾಗಿ ಬೇರ್ಪಟ್ಟವು ಮತ್ತು ಬೇರ್ಪಟ್ಟ ಸೃಷ್ಟಿಗಳು ಪುನಃ ಅವನಲ್ಲಿಯೇ ಸೇರಿಕೊಂಡಿತು ಎಂಬ ತಾತ್ಪರ್ಯ ನೀಡುತ್ತದೆ. ಅದಕ್ಕಾಗಿಯೇ ಇಲ್ಲಿ ‘ಪಾದೋsಸ್ಯೇಹಾಭವಾತ್ಪುನಃ’ ಎಂದು ವರ್ಣಿಸಲಾಗಿದೆ.
ಇದನ್ನು ಇನ್ನೊಂದು ದೃಷ್ಟಿಕೋನದಿಂದ ಪರಿಶೀಲಿಸಿದರೆ ‘ಪಾದಃ+ಅಸ್ಯ+ಇಹ+ಅಭವಾತ್+ಪುನಃ’ ಎಂದು ವಿಶ್ಲೇಷಿಸಿದಾಗ ಸಮಸ್ತ ಸೃಷ್ಟಿಗಳು ಒಂದೇ ಸಮಯದಲ್ಲಿ ಉತ್ಪನ್ನವಾದವುಗಳಲ್ಲ ಎಂದು ಈ ಮಂತ್ರವು ಸೂಚಿಸುವಂತೆ ಕಾಣುತ್ತದೆ. ಅಂದರೆ, ಸೃಷ್ಟಿಯಾದ ೧/೪ ಭಾಗದಲ್ಲಿ ಪುನಃ ಸೃಷ್ಟಿ ನಿರ್ಮಾಣವಾದುದರ ಸಂಕೇತವನ್ನು ಇದು ನೀಡುತ್ತದೆ. ‘ಪುನಃ ಅಭವಾತ್ ಅಥವಾ ಭವಾತ್ ಪುನಃ’ ಎನ್ನುವ ಉಕ್ತಿಯು ಇದನ್ನು ಸ್ಪಷ್ಟಪಡಿಸುತ್ತದೆ. ‘ಅವನ’ ೩/೪ ಭಾಗವು ಅಲ್ಲೇ ಇದೆ. ‘ತ್ರಿಪಾದೂರ್ಧ್ವ ಉದೈತ್ಪುರುಷಃ’. ೧/೪ನೇ ಭಾಗದಲ್ಲಿ ಪುನಃ ಸೃಷ್ಟಿಯಾಯಿತು ಮತ್ತು ‘ತತೋ ವಿಶ್ವಂ ವ್ಯಕ್ರಾಮತು’ ಅಂದರೆ ವಿಶ್ವದಲ್ಲಿ ವ್ಯಾಪಿಸಿತು ಎನ್ನುವ ಅರ್ಥ ವ್ಯಕ್ತವಾಗುತ್ತದೆ. ಇಷ್ಟೇ ಅಲ್ಲ, ಈ ಕಾಲುಭಾಗದಲ್ಲಿಯ ಸೃಷ್ಟಿ ಕಾರ್ಯಗಳು ಪುನಃ ಪುನಃ ನಡೆಯುತ್ತಲೇ ಇವೆ ಎನ್ನುವುದನ್ನೂ ಈ ಮಂತ್ರವು ಸೂಚಿಸುತ್ತದೆ. ಇದು ವೈಜ್ಞಾನಿಕವಾಗಿ ಸತ್ಯವೂ ಆಗಿದೆ.
ಸೃಷ್ಟಿಯಾದ ಈ ೧/೪ ಭಾಗದಲ್ಲಿ ಪುನಃ ಪುನಃ ಸೃಷ್ಟಿಯು ವಿವಿಧ ರೂಪಗಳಲ್ಲಿ ನಿರ್ಮಾಣವಾಯಿತು (ಅಂದರೆ ನೆಬ್ಯೂಲಾ, ಗೆಲೆಕ್ಸಿಗಳಲ್ಲಿ ‘ನಕ್ಷತ್ರಗಳು ಸೃಷ್ಟಿಯಾದವು’ ಎಂದರ್ಥ). ವೈಜ್ಞಾನಿಕವಾಗಿ ಹೇಳುವುದಾದರೆ ಇದು ಸೃಷ್ಟಿಯ ‘ಚಕ್ರೀಯ ಪ್ರಕ್ರಿಯೆ. ಯಾಕೆಂದರೆ, ಈವರೆಗಿನ ವೈಜ್ಞಾನಿಕ ಸಂಶೋಧನೆಗಳ ಅಭಿಪ್ರಾಯದ ಪ್ರಕಾರ, ಸೃಷ್ಟಿಯ ಆದಿಯು ಒಂದು ‘ಮಹಾ ಸ್ಫೋಟ’ದಿಂದುಂಟಾಗಿದೆ (ಬಿಗ್ ಬ್ಯಾಂಗ್) ಎಂದು ತಿಳಿಯಲಾಗಿದೆ. ಇಂತಹ ‘ಸ್ಫೋಟ’ಗಳು ಅನೇಕ ಸಂಭವಿಸಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ‘ಬಿಗ್ ಬ್ಯಾಂಗ್’ ಸಮಯದಲ್ಲಿ, ಸೃಷ್ಟಿಯ ಪ್ರಥಮ ಹಂತವಾಗಿ, ನೆಬ್ಯೂಲಾ ಹಾಗೂ ಗೆಲೆಕ್ಸಿಗಳು ಉತ್ಪನ್ನ ವಾದವು. ನಂತರ, ನೆಬ್ಯೂಲಾಗಳಲ್ಲಿ, ನಮ್ಮ ಸೂರ್ಯನಂತೆ, ನಕ್ಷತ್ರಗಳು ಉದ್ಭವವಾದವು ಮತ್ತು ನಕ್ಷತ್ರಗಳ ಜನನ-ವೃದ್ಧಿ-ಮರಣಗಳು (ನಕ್ಷತ್ರಗಳ ಸಾವು ಎಂದರೆ ಇಲ್ಲಿ ‘ವಿಸ್ಫೋಟ ಅಥವಾ ಸುಪರ್ನೋವಾ’ ಎಂದು) ಚಕ್ರೀಯ ಪ್ರಕ್ರಿಯೆಯಂತೆ ನಿರಂತರವಾಗಿ ನಡೆಯುತ್ತಲೇ ಇವೆ. ನಂತರದಲ್ಲಿ ನಮ್ಮ ಭೂಮಿಯಂತೆ ನಕ್ಷತ್ರಗಳಿಗೆ ಗ್ರಹಗಳು ಸೃಷ್ಟಿಯಾದವು. ಭೂಮಿಯ ಮೇಲೆಯೂ ಪುನಃ ಪುನಃ, ಸೃಷ್ಟಿಕ್ರಿಯೆಗಳು, ಬೆಳವಣಿಗೆ ಹಾಗೂ ಮರಣಗಳ ಚಕ್ರೀಯ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಲೇ ಇವೆ.
ಅಂದರೆ, ಮೊದಲು ಚೈತನ್ಯರೂಪದಲ್ಲಿ (ಎನರ್ಜಿ) ‘ಉಷ್ಣ ಮೋಡವಾಗಿ’ ಇದ್ದ ವಿಶ್ವವು ದಟ್ಟೆೈಸಿ, ಸ್ಫೋಟಗೊಂಡು, ನೆಬ್ಯೂಲಾ, ಗೆಲೆಕ್ಸಿಗಳು ನಿರ್ಮಾಣವಾಗಿ, ನಂತರ ನಕ್ಷತ್ರ ಮೊದಲಾದ ಸೃಷ್ಟಿಗಳು, ನಂತರ, ಭೂಮಿಯ ರಚನೆಯಾಗಿ ಅದರ ಮೇಲಿರುವ ಜೀವರಾಶಿಗಳು ಸಹ ‘ಸೃಷ್ಟಿ-ಸ್ಥಿತಿ-ಲಯಗಳಿಗೆ ಅನುಗುಣವಾಗಿ ನಡೆಯುತ್ತಲೇ ಇವೆ ಎಂಬುದನ್ನು ಇದು ಸಂಕೇತಿಸುತ್ತದೆ.

ನೇ ಮಂತ್ರದಲ್ಲಿಯ ‘ವಿಶ್ವಂ ವ್ಯಕ್ರಾಮತು’ ಎನ್ನುವ ಪದಗಳು ವಿಶ್ವವು ಗುರುತ್ವಾಕರ್ಷಣೆ ಶಕ್ತಿಯ ಮೇಲೆ ಸ್ಥಿರವಾಗಿದೆ ಎಂಬದನ್ನು ಸಂಕೇತಿಸುತ್ತದೆ ಎಂದು ನೀವು ಅರ್ಥೈಸಿದ್ದು ಹೇಗೆ..?
ತ್ರಿಪಾದೂರ್ಧ್ವ ಉದೈತ್ ಪುರುಷಃ | ಪಾದೋsಸ್ಯೇಹಾಭವಾತ್ಪುನಃ |
ತತೋ ವಿಶ್ವಂ ವ್ಯಕ್ರಾಮತ್ | ಸಾಶನಾನಶನೇ ಅಭಿ ||೪||
೪ನೇ ಮಂತ್ರದಲ್ಲಿಯ ‘ವಿಶ್ವಂ ವ್ಯಕ್ರಾಮತು’ ಎನ್ನುವ ಪದಗಳು ಈ ಸಮಸ್ತ ಸೃಷ್ಟಿಯನ್ನು(ವಿಶ್ವ) ಆ ಪುರುಷ ‘ಶಕ್ತಿ’ಯು ವ್ಯಾಪಿಸಿಕೊಂಡಿರುವುದೆಂದು ಅಥವಾ ಆಕ್ರಮಿಸಿ ಕೊಂಡಿರುವುದೆಂದು ವರ್ಣಿಸುತ್ತದೆ. ಇದನ್ನೇ ನಾವಿಂದು ‘ಗುರುತ್ವಾಕರ್ಷಣ ಶಕ್ತಿ’ ಎಂದು ಹೇಳಬಹುದು. ಪುರುಷ ಸೂಕ್ತದ ಮೊದಲನೇ ಮಂತ್ರದಲ್ಲಿಯೂ ‘ಸ ಭೂಮಿಂ ವಿಶ್ವತೋ ವೃತ್ವಾ (ಆವೃತ್ವಾ)’ ಎಂದೇ ಇದೆ ಮತ್ತು ಅದು ಈ ಅರ್ಥವನ್ನೇ ಸೂಚಿಸುತ್ತದೆ.
ವೈಜ್ಞಾನಿಕ ದೃಷ್ಟಿಕೋನದಿಂದ ಇಲ್ಲಿ, ಪ್ರಥಮವಾಗಿ, ಸಮಸ್ತ ಆಕಾಶಕಾಯಗಳು (ಸಕಲ ಸೃಷ್ಟಿಗಳು) ಒಂದರಿಂದೊಂದು ನಿರ್ಮಾಣಗೊಂಡು ವಿಸ್ತರಿಸತೊಡಗಿದ ಸನ್ನಿವೇಶವನ್ನು ಊಹಿಸಿಕೊಳ್ಳಬೇಕು. ಅಲ್ಲದೆ, ನಿರ್ಮಾಣಗೊಂಡ ಅವೆಲ್ಲವೂ ಗುರುತ್ವಾಕರ್ಷಣೆ ಶಕ್ತಿಯ ಕಾರಣಕ್ಕೆ ತಮ್ಮ ತಮ್ಮ ಕಕ್ಷೆಯಲ್ಲಿ ಸ್ಥಿರವಾಗಿವೆ ಹಾಗೂ ಚಲನಶೀಲವಾಗಿವೆ.
ಸೂರ್ಯನ ಒಂದು ಭಾಗ ಹೊರಬಂದು ಸೃಷ್ಟಿಯಾದ ಭೂಮಿಯೂ ಸೂರ್ಯನ ಗುರುತ್ವಾಕರ್ಷಣೆಯ ಕಕ್ಷೆಯಲ್ಲಿಯೇ ಸುತ್ತುತ್ತಿದೆ ಎಂಬುದು ವೈಜ್ಞಾನಿಕ ಸಂಗತಿ. (ಪೃಥ್ವಿಯ ಮೇಲ್ಮೆೈ ಪದರಿನಲ್ಲಿ ಜಲ, ಸಸ್ಯ ಹಾಗು ಸಮಸ್ತ ಜೀವಿಗಳು ಅಂತರಿಕ್ಷಕ್ಕೆ ತಲೆಯೊಡ್ಡಿ ಭೂಮಿಗೆ ಅಂಟಿಕೊಂಡಿರುವ ಸ್ಥಿತಿಯೂ ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಕಾರಣಕ್ಕೆ). ಅಲ್ಲದೆ, ‘ಆಕಾಶ ಗಂಗೆ’ಯ (ಗೆಲೆಕ್ಸಿ) ಕೇಂದ್ರದ ಸುತ್ತ ಅದರ ಗುರುತ್ವಾಕರ್ಷಣೆಯಿಂದಾಗಿ ಸೂರ್ಯನೂ, ಇನ್ನಿತರ ನಕ್ಷತ್ರಗಳೂ ಸುತ್ತುತ್ತವೆ ಎಂಬುದನ್ನು ಪರಿಗಣಿಸಬೇಕು. ಆ ವಿಶ್ವವ್ಯಾಪೀ ಪರಮ ಪುರುಷನ ಅಂತಹ ‘ಶಕ್ತಿಯೊಂದು’ ವಿಶ್ವದ ಸಮಸ್ತ ಕಾಯಗಳು, ‘ಅಂತರಿಕ್ಷ’ವನ್ನೊಳಗೊಂಡ ಸಮಸ್ತ ವಿಶ್ವವನ್ನೂ ವ್ಯಾಪಿಸಿಕೊಂಡಿದೆ. ಅಂದರೆ ಗುರುತ್ವಾಕರ್ಷಣೆ ಶಕ್ತಿ ಸಮಸ್ತ ವಿಶ್ವವನ್ನೂ ವ್ಯಾಪಿಸಿಕೊಂಡಿದೆ ಎಂದು ಅರ್ಥೈಸಬೇಕು.
ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಕೂಡ ಎರಡು ಗೆಲೆಕ್ಸಿಗಳ ಮಧ್ಯದಲ್ಲಿಯೂ ‘ಗುರುತ್ವಾಕರ್ಷಣ ಶಕ್ತಿ’ ಅಸ್ತಿತ್ವದಲ್ಲಿರುವುದನ್ನು ಸೂಚಿಸುತ್ತದೆ. ಅಂದರೆ ಬ್ರಹ್ಮಾಂಡ (ಪರಮ ಪುರುಷನ)ದ ೩/೪ ಭಾಗವು ಉಳಿದ ೧/೪ ಭಾಗವನ್ನು, ಅಂದರೆ ‘ಸಮಸ್ತ ಸೃಷ್ಟಿʼ ಯನ್ನು, ತನ್ನ ಗುರುತ್ವಾಕರ್ಷಣ ಶಕ್ತಿಯ ಮೂಲಕ ಹಿಡಿದಿಟ್ಟುಕೊಂಡಿದೆ ಎಂದು ಹೇಳಬಹುದು.
‘ತತೋ ವಿಶ್ವಂ ವ್ಯಕ್ರಾಮತು’ ಎನ್ನುವ ಉಕ್ತಿಯನ್ನು ‘ಆ ಪರಮ ಪುರುಷನು’ ವಿಶ್ವದ ಎಲ್ಲವನ್ನೂ ಗುರುತ್ವಾಕರ್ಷಣ ಶಕ್ತಿಯೊಂದರಿಂದ ಹಿಡಿದಿಟ್ಟುಕೊಂಡಿದ್ದಾನೆ’. ಅವನಿಂದ ನಿರ್ಮಾಣಗೊಂಡ ಎಲ್ಲ ಆಕಾಶಕಾಯಗಳಲ್ಲಿಯೂ ‘ಆ ಶಕ್ತಿಯನ್ನು’ ಆತ ತುಂಬಿದ್ದಾನೆ’ ಎಂದು ಅರ್ಥೈಸಬೇಕಾಗುತ್ತದೆ.
‘ಪಾದೋsಸ್ಯೇಹಾಭವಾತ್ಪುನಃ | ಸಾಶನಾನಶನೇ ಅಭಿ | ತತೋ ವಿಶ್ವಂ ವ್ಯಕ್ರಾಮತು’ ಎನ್ನುವ ಉಕ್ತಿಗಳನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿದಾಗ, ಅದು ಎಷ್ಟು ವೈಜ್ಞಾನಿಕವಾಗಿದೆ ಎಂದು ಗೋಚರಿಸುತ್ತದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

‘ಸ ಜಾತೋ ಅತ್ಯರಿಚ್ಚತ’ ಎನ್ನುವ ಉಕ್ತಿ ‘ಪುರುಷ’ನ ವಿರಾಟಸೃಷ್ಟಿಯ ಸೂತ್ರಗಳು ಎಂದು ಹೇಳಿದ್ದೀರಿ ಹಾಗೂ ಇದನ್ನು ವಿಶ್ವಸೃಷ್ಟಿ ತತ್ತ್ವ’ ಎಂದು ಕರೆಯಬಹುದು ಯಾಕೆ ಹೇಳಿದ್ದೀರಿ..?
ಮಂತ್ರ ೫
ತತೋ (ತಸ್ಮಾತ್) ವಿರಾಡಜಾಯತ | ವಿರಾಜೋ ಅಧಿ ಪೂರುಷಃ |
ಸ ಜಾತೋ ಅತ್ಯರಿಚ್ಯತ | ಪಶ್ಚಾದ್ಭೂಮಿಮಥೋ ಪುರಃ ||
ಮಂತ್ರಾರ್ಥ: (ಹೀಗೆ) ಅವನಿಂದ ವಿರಾಟಸ್ವರೂಪದ ಕಾಯಗಳೆಲ್ಲ ಉತ್ಪನ್ನವಾದವು. (ವಿರಾಡಜಾಯತ). ಪುರುಷನು ಅವುಗಳ (ಆ ಕಾಯಗಳ) ಮೇಲೆ ಇದ್ದಾನೆ. ಅವು ಪ್ರಕಟವಾಗಿ (ತಮ್ಮಿಂದ ತಾವೇ) ವೃದ್ಧಿಸಿದವು (ಸ ಜಾತೋ ಅತ್ಯರಿಚ್ಯತ). ನಂತರ (ಪುರುಷನು) ಭೂಮಿಯನ್ನು ಸೃಷ್ಟಿ ಮಾಡಿ ಮತ್ತೆ ಧಾರಣ ಮಾಡಿಕೊಂಡನು.
ಇದರಲ್ಲಿ ‘ಸ ಜಾತೋ ಅತ್ಯರಿಚ್ಚತ’ ಎನ್ನುವ ಉಕ್ತಿ ವಿಶೇಷ ಅರ್ಥ ನೀಡುತ್ತದೆ. ಇದನ್ನು ‘ವಿಶ್ವ ಸೃಷ್ಟಿತತ್ತ್ವ’ ಎಂದು ಕರೆಯಬಹುದು. ಅಂದರೆ ನಿರ್ದಿಷ್ಟ ಸೂತ್ರಗಳನ್ವಯ, ನಿಹಾರಿಕೆ-ಗೆಲಾಕ್ಸಿಗಳಲ್ಲಿ ನಕ್ಷತ್ರಕಾಯಗಳು ಯಾವಾಗಲೂ ಉತ್ಪತ್ತಿಯಾಗುತ್ತಿರುತ್ತವೆ. ಅವುಗಳ ವೃದ್ಧಿ, ಪರಿಭ್ರಮಣ-ಪರಿವರ್ತನ ಹಾಗೂ ಅವು ಜನನ-ಮರಣಗಳನ್ನು ಒಳಗೊಂಡ ಕ್ರಿಯೆಗಳು ನಿರಂತರವಾಗಿಯೂ, ‘ಸುಸ್ಥಿರ’ವಾಗಿಯೂ ಇರುವ ಸಂಗತಿಗಳನ್ನು ಇದು ಸೂಚಿಸುತ್ತದೆ.
ಈ ವ್ಯವಸ್ಥೆಯನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ಮೊದಲನೆಯದಾಗಿ ದ್ಯು-ಲೋಕದ ಸೃಷ್ಟಿಗಳಿಗೆ (ಕಾಯಗಳಿಗೆ) ಚಲನೆ ಇದೆ. ಅವುಗಳಲ್ಲಿ, ಆಂತರಿಕವಾದ, ನಿರಂತರವಾದ ಪರಿವರ್ತನ ಕ್ರಿಯೆಗಳು ನಡೆಯುತ್ತಲೇ ಇವೆ. ತಮ್ಮೊಳಗಿನ ದ್ರವ್ಯ ಹಾಗೂ ಚೈತನ್ಯ (ಎನರ್ಜಿ) ಇವುಗಳ ಸಂಯೋಜನೆಗೆ ಒಳಪಟ್ಟು, ಬೆಳವಣಿಗೆ-ಕುಗ್ಗುವಿಕೆಯಂತಹ ಸ್ಥಿತಿಗಳನ್ನು ಪಡೆಯುತ್ತವೆ. ಅವು ಸೃಷ್ಟಿಯಾದ ಕ್ಷಣದಿಂದಲೇ ನಿರ್ದಿಷ್ಟ ಸೂತ್ರಗಳನ್ನು ಅನುಸರಿಸುತ್ತ ಬಂದಿವೆ. ತಮ್ಮ ತಮ್ಮ ಕಕ್ಷೆಯಲ್ಲಿ ವ್ಯವಸ್ಥಿತವಾಗಿ ಸುತ್ತುವ ಅವುಗಳು, ಸುಸ್ಥಿರ ಸ್ಥಿತಿಯಲ್ಲಿ, ತಮ್ಮ ಕೇಂದ್ರದ ಸುತ್ತ ಗುರುತ್ವಾಕರ್ಷಣೆ ಶಕ್ತಿಯಿಂದಾಗಿ ನಿರಂತರವಾಗಿ ಸುತ್ತತ್ತಲೇ ಇರುತ್ತವೆ.
ಈ ಎಲ್ಲ ಪ್ರಕ್ರಿಯೆಗಳು ನಾವು ವಾಸಿಸುವ ಭೂಮಿಗೂ ಅನ್ವಯಿಸುತ್ತವೆ. ಭೂಮಿ ಹಾಗೂ ಭೂಮಿಯ ಮೇಲಿನ ಎಲ್ಲ ಸೃಷ್ಟಿಗಳು ಚೈತನ್ಯ ಸ್ವರೂಪಗಳೇ. ಅವೆಲ್ಲವುಗಳಿಗೆ ಚಲನೆ, ವೃದ್ಧಿ-ಕ್ಷಯಗಳಿವೆ. ‘ಚಕ್ರೀಯ ಪರಿವರ್ತನ ಕ್ರಿಯೆ’ಗಳು ನಿರಂತರವಾಗಿವೆ. ಜೀವಿಗಳು ‘ಅನ್ನ’(ದ್ರವ್ಯ)ದಿಂದಲೇ ಜೀವಿಸುತ್ತವೆ ಹಾಗೂ ವೃದ್ಧಿ ಹೊಂದುತ್ತವೆ. ಜನನ-ಮರಣಗಳನ್ನು ಅನುಭವಿಸುತ್ತವೆ. ಪೃಥ್ವಿಗೆ ಗುರುತ್ವಾಕರ್ಷಣ ಶಕ್ತಿಯೂ ಇದೆ. ಸೂರ್ಯನ ಸುತ್ತಲೂ ‘ಕಕ್ಷೆಯಲ್ಲಿ’ ಸುತ್ತುತ್ತದೆ. ತನ್ನ ಸುತ್ತಲೂ ಸುತ್ತುತ್ತಿದೆ ಹಾಗೂ ನಿರಂತರವಾಗಿಯೂ ಇದೆ.
ಇಲ್ಲಿ ‘ಸ ಜಾತೋ ಅತ್ಯರಿಚ್ಚತ’ ಎನ್ನುವ ಉಕ್ತಿಯು ಸೃಷ್ಟಿಯ ಈ ಎಲ್ಲ ಸ್ಥಿತಿ-ಗತಿ, ಪ್ರಕ್ರಿಯೆಗಳನ್ನು ಸೂಚಿಸುತ್ತದೆ. ಆದ್ದರಿಂದ ಆ ಪ್ರಕ್ರಿಯೆಗಳನ್ನು ಆ ಪರಮ ಪುರುಷ(ಬ್ರಹ್ಮಾಂಡ)ನ ‘ಸೃಷ್ಟಿತತ್ತ್ವದ ಸೂತ್ರಗಳೆಂದು’ ಗ್ರಹಿಸಬೇಕಾಗುತ್ತದೆ. ಹುಟ್ಟು-ವೃದ್ಧಿ-ಸಾವುಗಳಂತಹ ಪ್ರಕ್ರಿಯೆಗಳು (ಸೃಷ್ಟಿ-ಸ್ಥಿತಿ-ಲಯಗಳು) ಅವನ ಎಲ್ಲ ಸೃಷ್ಟಿಗಳಲ್ಲಿ ಸೂತ್ರಬದ್ಧವಾಗಿ ಸ್ಥಿರವಾಗಿವೆ. ಹುಟ್ಟು-ಸಾವುಗಳು ಮೇಲ್ನೋಟಕ್ಕೆ, ವ್ಯಷ್ಟಿಯಲ್ಲಿ (ಪ್ರತ್ಯೇಕ ಅಥವಾ ಬಿಡಿಬಿಡಿ) ‘ಅಶಾಶ್ವತ’ವಾಗಿ (ನಶ್ವರ) ತೋರಿದರೂ, ಸಮಷ್ಟಿಯಲ್ಲಿ ಅವು ‘ಶಾಶ್ವತವಾಗಿಯೇ’ ನಡೆಯುವಂತಹವುಗಳಾಗಿವೆ.
ಈ ಕುರಿತು, ವೈಜ್ಞಾನಿಕವಾಗಿ ನೋಡುವುದಾದರೆ ಎರಡು ಸಂಗತಿಗಳು ಇಲ್ಲಿ ಪ್ರಸ್ತುತವೆನಿಸುತ್ತವೆ. ಮೊದಲನೆಯದಾಗಿ, ಸಮಸ್ತ ಸೃಷ್ಟಿಯು, ತಾನು ನಿರ್ಮಾಣವಾದ ಹಂತದಲ್ಲಿ ಹಾಗೂ ತದನಂತರದಲ್ಲಿ, ತನ್ನ ಶಕ್ತಿ ಹಾಗೂ ದ್ರವ್ಯಗಳೊಡನೆ ಪರಸ್ಪರ ಪರಿವರ್ತನೆ ಹೊಂದುತ್ತಲೇ ಇರುತ್ತದೆ ಎಂಬುದು. (Inter Convertibility of ‘Matter and Energy’ Takes Place. ಅಂದರೆ ದ್ರವ್ಯಗಳು (ಮ್ಯಾಟರ್‌) ಶಕ್ತಿ (ಎನರ್ಜಿ)ಯಾಗಿ ಹಾಗೂ ಶಕ್ತಿಯು ದ್ರವ್ಯವಾಗಿ ಪರಿವರ್ತನೆ ಹೊಂದುತ್ತಲೇ ಇರುತ್ತವೆ. ಉದಾಹರಣೆಗೆ, ನಮ್ಮ ಸೂರ್ಯನಲ್ಲಿ ಹೈಡ್ರೋಜನ್ ಉರಿದು ಹೀಲಿಯಂಗೆ ಪರಿವರ್ತನೆಯಾಗುತ್ತದೆ. ಅಂತೆಯೇ ಪೃಥ್ವಿಯ ಮೇಲೆ ಜೀವಿಗಳು, ಜೀವಿಗಳನ್ನೇ ತಿಂದು ವೃದ್ಧಿ ಹೊಂದುತ್ತಿರುವಂತೆ (ಯದನ್ನೇನಾತಿರೋಹತಿ). ಅಲ್ಲದೆ, ಇಂತಹ ಪರಿವರ್ತನೆಗಳು ಸಮಸ್ತ ಸೃಷ್ಟಿಯಲ್ಲಿಯೂ ನಿರಂತರವಾಗಿರುವುದನ್ನು ಗಮನಿಸಬಹುದು.
ಎರಡನೆಯದಾಗಿ, ಬಿಗ್ ಬ್ಯಾಂಗ್‌ದಿಂದ ಉಂಟಾದ ಕೆಲವು ನಿಹಾರಿಕೆ-ಗೆಲೆಕ್ಸಿಗಳಲ್ಲಿ, ನಿರಂತರವಾಗಿ ನಕ್ಷತ್ರಗಳು ಉತ್ಪನ್ನವಾಗುತ್ತಲಿರುತ್ತವೆ. ನಕ್ಷತ್ರಗಳಲ್ಲಿ ಕೆಲವು (ಬೃಹತ್ ಗಾತ್ರದವು) ಸ್ಫೋಟಗೊಂಡು (ಸುಪರ್‌ನೋವಾ) ಅವುಗಳ ಅವಶೇಷಗಳು ಅಂತರಿಕ್ಷವನ್ನು ಸೇರುತ್ತವೆ. ಆ ದ್ರವ್ಯಗಳು ಪುನಃ ನೆಬ್ಯೂಲಾ-ಗೆಲೆಕ್ಸಿಗಳಲ್ಲಿ ದಟ್ಟೆೈಸಿ ಇನ್ನೊಂದು ನೂತನ ನಕ್ಷತ್ರ ನಿರ್ಮಾಣದಲ್ಲಿ ಸೇರಿಕೊಳ್ಳುತ್ತವೆ. ಈ ಪ್ರಕ್ರಿಯೆಯನ್ನು ‘ಓರಿಯೋನ್’ ನೆಬ್ಯೂಲಾದಲ್ಲಿ ಗುರುತಿಸಲಾಗಿದೆ. ಡಾ. ಚಂದ್ರಶೇಖರ ಫಾರ್ಮ್ಯುಲಾದ ಪ್ರಕಾರ ನಮ್ಮ ಸೂರ್ಯನಿಗಿಂತ ‘ಒಂದೂವರೆ’ ಪಟ್ಟು ಹೆಚ್ಚು ಗಾತ್ರದ ನಕ್ಷತ್ರಗಳು ಹಿಗ್ಗುತ್ತ ಹಿಗ್ಗುತ್ತ ‘ಸುಪರ್‌ನೋವಾ’ (‘ವಿಸ್ಫೋಟ’) ಸ್ಥಿತಿಯನ್ನು ತಲುಪುತ್ತವೆ.
ಹುಟ್ಟು-ವೃದ್ಧಿ-ಸಾವು, ನಂತರ ಪುನಃ ಹುಟ್ಟು, ಹೀಗೆ ಈ ‘ಚಕ್ರೀಯ ಕ್ರಿಯೆಗಳು’ ನಿರಂತರವಾಗಿ ವಿಶ್ವದಲ್ಲಿ ನಡೆಯುತ್ತಲೇ ಇರುತ್ತವೆ. ಇಷ್ಟೇ ಅಲ್ಲ, ಇತ್ತೀಚಿನ ವೈಜ್ಞಾನಿಕ ವಿವರಣೆಗಳ ಪ್ರಕಾರ ಈ ವಿಶ್ವವೂ ಹಿಗ್ಗುತ್ತಲಿದ್ದು ಅದು ಮುಂದೆ ಯಾವುದೋ ಕಾಲದಲ್ಲಿ ಪನಃ ಆಕುಂಚನ ಹೊಂದಿ ಪುನಃ ಮರುಸೃಷ್ಟಿ ಪ್ರಕ್ರಿಯೆಗಳು ಉದ್ಭವಿಸಬಹುದೆಂದು ಅನುಮಾನಿಸಿದ್ದಾರೆ. ಅಂದರೆ ಈ ‘ಚಕ್ರೀಯ ಸೃಷ್ಟಿಕ್ರಿಯೆ’ಯು ನಿರಂತರವೂ (ಎಂದೂ ಮುಗಿಯದ) ‘ಅನಂತವೂ’ ಆಗಿದೆ ಎಂದು ಊಹಿಸಲಾಗಿದೆ.
‘ಪುರುಷಸೂಕ್ತ’ದ ೫ನೇ ಮಂತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಇನ್ನೊಂದು ಪ್ರಮುಖ ತಾತ್ಪರ್ಯ ವ್ಯಕ್ತವಾಗುವುದು. ‘ಸ ಜಾತೋ ಅತ್ಯರಿಚ್ಚತ’ ಎನ್ನುವ ಉಕ್ತಿಯು ಸೃಷ್ಟಿಯು ನಿರ್ಮಾಣಗೊಂಡು ಅದು ತನ್ನಿಂದ ತಾನೇ ವೃದ್ಧಿಯಾಯಿತು ಎಂದು ಸೂಚಿಸುತ್ತದೆ. ಅಂದರೆ, ಈ ವೃದ್ಧಿ ಕ್ರಿಯೆಗಳು ನಿರಂತರವಾಗಿ ಒಂದರಿಂದ ಇನ್ನೊಂದು ಆಗುತ್ತದೆ ಎಂದರ್ಥ. ಆದ್ದರಿಂದ ಈ ಎಲ್ಲ ಸೃಷ್ಟಿಗಳು ಏಕ ಕಾಲಕ್ಕೆ ನಿರ್ಮಾಣ ವಾದವುಗಳಲ್ಲ ಎನ್ನುವುದು ವೇದ್ಯವಾಗುತ್ತದೆ. ೫ನೇ ಮಂತ್ರದ ‘ಪಶ್ಚಾತ್ ಭೂಮಿಮಥೋ ಪುರಃ’ ಎನ್ನುವ ಉಕ್ತಿಯು ಸೃಷ್ಟಿಯ ಇನ್ನೊಂದು ಹಂತದ ನಿರ್ಮಾಣ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಇಷ್ಟೇ ಅಲ್ಲ, ಪೃಥ್ವಿಯ ಮೇಲಿನ ಜೀವೋತ್ಪತ್ತಿ ಪ್ರಕ್ರಿಯೆಗಳು (೬ನೇ ಮಂತ್ರ) ಮತ್ತೂ ಒಂದು ಹಂತದ ನಿರ್ಮಾಣ ಕ್ರಿಯೆಗಳನ್ನು ಸೂಚಿಸುತ್ತವೆ. ಈ ವಿಚಾರವು ವೈಜ್ಞಾನಿಕವಾಗಿಯೂ ಹೌದು ಎಂದು ಅನಿಸುತ್ತದೆ. ಮೊದಲನೆಯದಾಗಿ, ‘ಬಿಗ್ ಬ್ಯಾಂಗ್’ದ ಪರಿಣಾಮವಾಗಿ ನೆಬ್ಯೂಲಾ ಹಾಗೂ ಗೆಲೆಕ್ಸಿಗಳು ಉತ್ಪನ್ನವಾದವು. ಎರಡನೆಯದಾಗಿ, ಈ ಪ್ರಕ್ರಿಯೆ ಮುಂದುವರಿದು ನೆಬ್ಯೂಲಾಗಳಲ್ಲಿ ನಕ್ಷತ್ರಗಳು ಜನಿಸಿದವು. ನಂತರ ನಕ್ಷತ್ರಗಳಿಗೆ ಅದರದ್ದೇ ಗ್ರಹಗಳು ನಿರ್ಮಾಣಗೊಂಡವು. ಪುರುಷಸೂಕ್ತದ ಮಂತ್ರಗಳಲ್ಲಿ ಸೃಷ್ಟಿ ಪ್ರಕ್ರಿಯೆಯ ಈ ‘ಹಂತಗಳನ್ನು’ ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಪರಮ ಪುರುಷನಿಂದ ನಿರ್ಮಿತವಾದ ಸಮಸ್ತ ಸೃಷ್ಟಿಯಲ್ಲಿ ಚಲನೆಗಳಿವೆ. ದ್ಯು-ಲೋಕದಲ್ಲಿಯ ನೆಬ್ಯೂಲಾ-ಗೆಲೆಕ್ಸಿ-ನಕ್ಷತ್ರ ಇವೆಲ್ಲವುಗಳಿಗೆ ಬಾಹ್ಯ ಚಲನೆ ಹಾಗೂ ಆಂತರಿಕ ಪರಿವರ್ತನೆಗಳಿವೆ. ಅವು ನಿರಂತರವಾಗಿಯೂ, ಸೂತ್ರಬದ್ಧವಾಗಿಯೂ ಹಾಗೂ ಕರಾರು ವಾಕ್ಕಾಗಿಯೂ ಸಾಗುತ್ತಲಿವೆ.
ನಮ್ಮ ಭೂಮಿಗೂ ಕೂಡ ಬಾಹ್ಯ ಚಲನೆ ಹಾಗೂ ಆಂತರಿಕ ಪರಿವರ್ತನೆಗಳಿವೆ.. ಭೂಮಿಯ ಮೇಲಿನ ಸಮಸ್ತ ಜೀವಿಗಳಿಗೆ ಚಲನೆಗಳು ನಿರ್ದಿಷ್ಟವಾಗಿವೆ. ಆಂತರಿಕ ಪರಿವರ್ತನೆ ಕ್ರಿಯೆಗಳು ನಿರಂತರವಾಗಿವೆ. ಜೀವಿತದ ಅವಧಿಯೂ ನಿರ್ದಿಷ್ಟವಾಗಿಯೆ ಇರುತ್ತವೆ. ವಿಶ್ವದಲ್ಲಿನ ಎಲ್ಲ ವಿಭಿನ್ನ ಸೃಷ್ಟಿಗಳಿಗೆ ಭಿನ್ನ ಭಿನ್ನ ಜೀವಿತದ ಅವಧಿಗಳು ನಿರ್ಧರಿತವಾಗಿರುತ್ತವೆ. ಉದಾಹರಣೆಗೆ ಮನುಷ್ಯರು ಸುಮಾರು ನೂರು ವರುಷ ಬಾಳಬಲ್ಲವರಾಗಿದ್ದರೆ ನಕ್ಷತ್ರಗಳು ಕೋಟ್ಯನುಕೋಟಿ ವರ್ಷಗಳ ಅವಧಿ ವರೆಗೆ ಜೀವಿಸಬಹುದು. ಅಂತೆಯೇ ಪೃಥ್ವಿಯ ಮೇಲಿನ ನಾನಾ ವಿಧದ ಸಸ್ಯ-ಜೀವಿಗಳಿಗೆ, ಪಶು-ಪಕ್ಷಿ-ಪ್ರಾಣಿಗಳಿಗೆ ಭಿನ್ನ ಭಿನ್ನ ಜೀವಾವಧಿಯು ನಿರ್ದಿಷ್ಟವಾಗಿರುತ್ತದೆ. ಈ ಎಲ್ಲ ಸಂಗತಿಗಳನ್ನು ಗ್ರಹಿಸಿದಾಗ, ಎಲ್ಲ ಆಕಾಶಕಾಯಗಳ ಹಾಗೂ ಪೃಥ್ವಿಯ ಮೇಲಿನ ಜೀವಿಗಳ ಕ್ರಿಯೆ-ಪ್ರಕ್ರಿಯೆಗಳೆಲ್ಲ ‘ಸ ಜಾತೋ ಅತ್ಯರಿಚ್ಚತ’ ಎನ್ನುವ ‘ಸೃಷ್ಟಿ ತತ್ತ್ವಕ್ಕೆ’ ಅನುಸಾರವಾಗಿ ನಡೆಯುತ್ತಿದೆ ಎಂಬುದು ವೈಜ್ಞಾನಿಕವಾಗಿಯೇ ಕಂಡುಬರುತ್ತದೆ.

ಪಶ್ಚಾತ್ ಭೂಮಿಮಥೋ ಪುರಃ, ೫ನೇ ಮಂತ್ರದ ಕೊನೆಯ ವಾಕ್ಯದಲ್ಲಿ, ‘ಭೂಮಿಯು ನಂತರದಲ್ಲಿ ಉತ್ಪನ್ನವಾಗಿದೆ’ ಎಂದು ಉಲ್ಲೇಖಿಸಲಾಗಿದೆ. ‘ಪಶ್ಚಾತ್ ಭೂಮಿಮಥೋ ಪುರಃ’ ಎಂದರೆ ಭೂಮಿಯು ‘ನಂತರದಲ್ಲಿ ಮೈತಾಳಿತು’ (ಪುರಃ) ಎನ್ನುವ ತಾತ್ಪರ್ಯ ನೀಡುತ್ತದೆ. ಮತ್ತು ಆ ಪರಮ ಪುರುಷನು (ಮತ್ತೊಂದು ಸೃಷ್ಟಿಕ್ರಿಯೆಯಲ್ಲಿ) ಭೂಮಿಯನ್ನು ಕೂಡ ಇನ್ನುಳಿದ ಸೃಷ್ಟಿಗಳಂತೆ ‘ತ್ಯಜಿಸಿ’ ಪುನಃ ಧಾರಣ ಮಾಡಿಕೊಂಡಿದ್ದಾನೆ ಎಂದು ಆಕರ ಗ್ರಂಥದಲ್ಲಿ ಈ ಮಂತ್ರದ ಅರ್ಥವಿವರ ತಿಳಿಸಲಾಗಿದೆ. ಅಂದರೆ, ಸೂರ್ಯನಿಂದ (ಒಂದು ನಕ್ಷತ್ರಕಾಯ) ಭೂಮಿಯು ಬೇರ್ಪಟ್ಟು (ಜನಿಸಿರುವ), ಪುನಃ ಅವನ ಕಕ್ಷೆಯಲ್ಲಿಯೇ ನೆಲಸಿರುವ, ಸಂಗತಿಯನ್ನು ಈ ಸೂಕ್ತದಲ್ಲಿ ಪರ್ಯಾಯವಾಗಿ ಹೇಳುತ್ತಿರುವಂತಿದೆ. ಅಲ್ಲದೇ, ‘ಧಾರಣ’ದ ಕ್ರಮವು ಗ್ರಹಗಳ ಮೇಲಿನ ಸೂರ್ಯನ ‘ಗುರುತ್ವಾಕರ್ಷಣ’ ಶಕ್ತಿ ಬಗ್ಗೆ ಸೂಚಿಸುತ್ತದೆ. ಅಂದರೆ ‘ಪಶ್ಚಾತ್ ಭೂಮಿಮಥೋ ಪುರಃ’ ಎನ್ನುವ ಉಕ್ತಿಯು ವಿಶ್ವಸೃಷ್ಟಿ ಪ್ರಕ್ರಿಯೆಯ ಮತ್ತೊಂದು ಹಂತವನ್ನು ಸೂಚಿಸುತ್ತದೆ. ಅಂದರೆ, ಸೃಷ್ಟಿ ನಿರ್ಮಾಣದಲ್ಲಿ ಮೊದಲು ನೆಬ್ಯುಲಾ-ಗೆಲೆಕ್ಸಿಗಳು, ನಂತರ ಗೆಲೆಕ್ಸಿಗಳಲ್ಲಿ ನಕ್ಷತ್ರಗಳು, ತದನಂತರ ನಕ್ಷತ್ರಗಳಲ್ಲಿ ಪೃಥ್ವಿಯಂತಹ ‘ಗ್ರಹ’ಗಳು ಉತ್ಪನ್ನವಾದವು ಎನ್ನುವುದನ್ನು ಸೂಚಿಸುತ್ತದೆ. ಆದ್ದರಿಂದಲೇ, ತಸ್ಮಾತ್ ವಿರಾಡ ಜಾಯತ ಹಾಗೂ ಸ ಜಾತೋ ಅತ್ಯರಿಚ್ಚತ ಎನ್ನುವ ಉಕ್ತಿಗಳ ನಂತರ ‘ಪಶ್ಚಾತ್ ಭೂಮಿಮಥೋ ಪುರಃ’ ಎನ್ನುವುದು ಈ ಸೂಕ್ತದಲ್ಲಿ ಪ್ರಕಟವಾಗಿದೆ. ಈ ಕ್ರಮಾನುಗತಿಯು ವೈಜ್ಞಾನಿಕ ಸತ್ಯವೂ ಆಗಿದೆ.

ಭೂಮಿಗೆ ಏಳು ಪರಿಧಿಗಳಿವೆ ಎಂದು ಪುರುಷ ಸೂಕ್ತ ಹೇಳಿದೆ ಎಂಬುದನ್ನು ನೀವು ಗ್ರಹಿಸಿದ್ದೀರಿ. ಇದರ ಬಗ್ಗೆ ವಿವರಣೆ ಕೊಡಬಹುದೇ..?
ಸಪ್ತಾಸ್ಯಾಸನ್ ಪರಿಧಯಃ | ತ್ರಿ ಸಪ್ತ ಸಮಿಧಃ ಕೃತಾಃ |
ದೇವಾ ಯದ್ಯಜ್ಞಂ ತನ್ವಾನಾ | ಅಬಧ್ನನ್ ಪುರುಷಂ ಪಶುಮ್ ||
ಮಂತ್ರಾರ್ಥ: ಈ ಬ್ರಹ್ಮಾಂಡಕ್ಕೆ ಏಳು ಪರಿಧಿಗಳಿವೆ. (‘ಪರಿಧಿ’ ಎಂದರೆ ಗೋಲಾಕಾರದ ವಸ್ತುವಿನ ಮೇಲ್ಮೆೈ ಸುತ್ತಳತೆ) ಇಪ್ಪತ್ತೊಂದು ಸಾಮಗ್ರಿಗಳಾಗಿ (ಆಹುತಿಯ ದ್ರವ್ಯ) ರಚಿಸಲ್ಪಟ್ಟಿವೆ. ಯಜ್ಞವನ್ನು ವಿಸ್ತರಿಸುವ ವಿದ್ವಾಂಸರು ‘ಪಶು’ ರೂಪವಾದ ಪುರುಷನನ್ನು ಬಂಧಿಸಿದರು. (ಬಂಧಿಸಿ ಪೂಜಿಸಿದರು).
ಈ ಮಂತ್ರವನ್ನು ಅರ್ಥೈಸಿದರೆ ‘ಏಳು ಪರಿಧಿಗಳು’, (ಸಪ್ತಾಸ್ಯಾಸನ್ ಪರಿಧಯಃ), ‘೨೧ ಸಮಿಧಗಳು’ (ತ್ರಿಸಪ್ತ ಸಮಿಧಃ ಕೃತಾಃ) ಹಾಗೂ ‘ಪಶುವನ್ನು ಬಂಧಿಸುವುದು’ (ಅಭಧ್ನನ್ ಪುರುಷಂ ಪಶುಂ) ಈ ಮೂರು ವಿಚಾರಗಳು ‘ಯಜ್ಞ’ವನ್ನು ವಿಸ್ತರಿಸುವಾಗ ವಿದ್ವಾಂಸರ ಪರಿಶೀಲನೆಗೆ ಒಳಪಟ್ಟಿದ್ದವು ಎನ್ನುವ ಅರ್ಥವನ್ನು ಈ ಮಂತ್ರವು ಸೂಚಿಸುತ್ತದೆ.
ಸಪ್ತಾಸ್ಯಾಸನ್ ಪರಿಧಯಃ ಸಪ್ತ-ಪರಿಧಿಗಳು ಈ ಉಕ್ತಿಯನ್ನು ತೆಗೆದುಕೊಂಡರೆ ಈ ಮಂತ್ರದ ಪ್ರಥಮ ಚರಣದಲ್ಲಿಯ ಎರಡು ವಾಕ್ಯಗಳು ‘ಸಪ್ತಾಸ್ಯಾಸನ್ ಪರಿಧಯಃ ಮತ್ತು ತ್ರಿ-ಸಪ್ತ ಸಮಿಧಃ ಕೃತಾಃ’ ಎಂದಿದೆ. ಅಂದರೆ, ‘೭ ಪರಿಧಿಗಳಿವೆ. ೨೧ ‘ಆಹುತಿ ದ್ರವ್ಯ’ಗಳು (ವಿದ್ವಾಂಸರಿಂದ) ರಚಿಸಲ್ಪಟ್ಟವು’ ಎನ್ನುವ ಉಲ್ಲೇಖವಿದೆ. ಏಳು ಪರಿಧಿಗಳು ‘ಬ್ರಹ್ಮಾಂಡಕ್ಕೆ’ (ಬ್ರಹ್ಮಾಂಡ ವಿಶ್ವ) ಇವೆ ಎಂದು ಆಕರ ಗ್ರಂಥದಲ್ಲಿ ವಿವರಿಸಲಾಗಿದೆ. ಆದರೆ ಅದನ್ನು ‘ಈ ಪೃಥ್ವಿಗೆ’ ಎಂದು ಅರ್ಥೈಸುವುದು ಹೆಚ್ಚು ಸೂಕ್ತವಾಗಿ ಕಾಣುತ್ತದೆ ಯಾಕೆಂದರೆ, ವಿದ್ವಾಂಸರಿಂದ ‘ಯಜ್ಞೋಪಾಸನೆ’ಗೆ ಅಗತ್ಯವಾದ ತಂತ್ರಜ್ಞಾನಗಳು ‘ಈ ಭೂಮಿಯ ಮೇಲೆ’ ರಚಿಸಲ್ಪಟ್ಟವು ಎಂದು ಅರ್ಥೈಸಬೇಕಾಗುತ್ತದೆ. ಅಂತೆಯೇ, ‘ಸಮಿಧಃ ಕೃತಾಃ’ ಈ ಉಲ್ಲೇಖವು ಯಜ್ಞಕ್ಕೆ ಸಂಬಂಧಿಸಿದ್ದುದಾಗಿದೆ. ಇಲ್ಲಿ, ಸಪ್ತ ಪರಿಧಿಗಳ ವರ್ಣನೆಯು ಪೃಥ್ವಿಯ ಮೇಲಣ ‘ವಾತಾವರಣ’ವನ್ನು ಉದ್ದೇಶಿಸಿ ಉಲ್ಲೇಖಿಸಿದಂತಿದೆ. ಅವುಗಳಿಗೆ ಅನುಸಾರವಾಗಿ, ವಿದ್ವಾಂಸರು, ೨೧ ಸಮಿಧಗಳನ್ನು ರಚಿಸಿದರು ಎಂದಾಗುತ್ತದೆ.
ಆಕರ ಗ್ರಂಥದ ‘ಭಾಷ್ಯ’ದಲ್ಲಿ ಸಪ್ತಾಸ್ಯಾಸನ್ ಪರಿಧಯಃ | ತ್ರಿಸಪ್ತ ಸಮಿಧಃ ಕೃತಾಃ’ ಎನ್ನುವ
ಏಳು ಪರಿಧಿಗಳು: ೧. ಸಮುದ್ರ ೨. ತ್ರಸರೇಣುಗಳಿಂದ ಕೂಡಿದ ವಾಯು ೩. ಮೇಘಮಂಡಲ ೪. ವೃಷ್ಟಿ ಜಲ ೫. ವೃಷ್ಟಿಜಲದ ಮೇಲಿರುವ ವಾಯು ೬. ‘ಧನಂಜಯ’ ಎನ್ನುವ ವಾಯು ೭. ಸೂತ್ರಾತ್ಮಾ ಎನ್ನುವ ವಾಯು. ಹೀಗೆ ಒಂದರ ಮೇಲೆ ಒಂದರಂತೆ ಇರುವ ೭ ಪರಿಧಿಗಳ ಬಗ್ಗೆ ಹೇಳಿದೆ..
ಅದರಂತೆ ೨೧ ಸಮಿಧಗಳನ್ನು ಈ ರೀತಿ ಪರಿಗಣಿಸಲಾಗಿದೆ: ೧. ‘ಮಹತ್’ ಅಂದರೆ ಯಾವತ್ತೂ ಸೃಷ್ಟಿ (ಚೇತನಾಚೇತನ ಪ್ರಕೃತಿ). ೧೦ ಇಂದ್ರಿಯಗಳು (ಕಣ್ಣು, ಕಿವಿ, ಮೂಗು, ನಾಲಿಗೆ, ತ್ವಚೆ, ಕಾಲುಗಳು, ಕೈಗಳು, ಗುದದ್ವಾರ, ಜನನೇಂದ್ರಿಯ, ವಾಕ್). ೫ ತನ್ಮಾತ್ರಗಳು (ಶಬ್ದ, ಸ್ಪರ್ಶ, ರೂಪ, ರಸ, ಗಂಧ). ೫ ಪಂಚಮಹಾಭೂತಗಳು (ಪೃಥ್ವಿ, ಆಪ, ತೇಜ, ವಾಯು, ಆಕಾಶ).
‘೭ ಪರಿಧಿಗಳ’ ಉಲ್ಲೇಖವು ಭೂಮಿಯ ಮೇಲ್ಮೆೈ ಹಾಗು ಅದರ ಮೇಲಿನ ವಾತಾವರಣದ ಅಥವಾ ವಾಯುಮಂಡಲದ ವರ್ಣನೆಯೆಂದು ಹೇಳಬಹುದು. ಯಾಕೆಂದರೆ ಈವರೆಗಿನ ಭೌಗೋಲಿಕ ವಿಜ್ಞಾನ ಸಂಶೋಧನೆ ಗಳಿಂದಲೂ ೮ ವಿಭಿನ್ನ ಸ್ಥರಗಳನ್ನು ಭೂಮಿಯ ಮೇಲೆ ಒಂದರ ಮೇಲೊಂದರಂತೆ, ಗುರುತಿಸಲಾಗಿದೆ. ಅವು ಭೂಪೃಷ್ಠದ ಮೇಲೆ ಸುಮಾರು ೩೦೦ ಮೈಲುಗಳ (ಸುಮಾರು ೪೮೦ ಕಿಲೋಮೀಟರ್) ಎತ್ತರದ ವರೆಗೆ ವ್ಯಾಪಿಸಿವೆ. ಅದರಾಚೆ ಗಾಢ ಅಂಧಃಕಾರವಿದೆ. ನಿರ್ವಾತವಿದೆ. ಶೂನ್ಯಕ್ಕಿಂತಲೂ ನೂರಾರು ಡಿಗ್ರಿ ಸೆಂಟಿಗ್ರೇಡಿಗೂ ಕೆಳಗಿನ ಶೀತ ಪಸರಿಸಿದೆ.
ವೈಜ್ಞಾನಿಕವಾಗಿ ಭೂಮಿಯ ‘ವಾತಾವರಣ’ದ ೮ ವಿಭಾಗಗಳು ಹೀಗಿವೆ: ೧. ಟ್ರೋಪೋಸ್ಪಿಯರ್ ೨. ಸ್ಟ್ರಾಟೋಸ್ಪಿಯರ್ ೩. ಖೆಮೊಸ್ಪಿಯರ್ ೪. ಆಯೋನೋಸ್ಪಿಯರ್- ಇದರಲ್ಲಿ ಪುನಃ ಉಪ-ವಿಭಾಗಗಳನ್ನು ಗುರುತಿಸಲಾಗಿದೆ. ಡಿ, ಎಫ್-೧, ಹಾಗು ಎಫ್-೨ ಎಂದು. ನಂತರ ಕೊನೆಯ ಹಾಗೂ ೫ನೇ ಸ್ಥರವಾಗಿ ‘ಎಕ್ಸೋಸ್ಪಿಯರ್’ ಹೀಗೆ ಗುರುತಿಸಲಾಗಿದೆ. ಆಯೋನೋಸ್ಪಿಯರ್‌ದಲ್ಲಿಯ ಎಫ್-೧ ಹಾಗೂ ಎಫ್-೨ ಇವುಗಳನ್ನು ಒಟ್ಟಾಗಿ ‘ಎಫ್’ ಎಂದು ಒಂದೇ ವಿಭಾಗವಾಗಿ ಪರಿಗಣಿಸಿದಲ್ಲಿ ೭ ಸ್ಥರಗಳೇ ದೊರಕುತ್ತವೆ. ಆಗ ೭ ಪರಿಧಿಗಳ ಕುರಿತಾಗಿ ಆಕರಗ್ರಂಥದ ಟಿಪ್ಪಣಿಯಲ್ಲಿ ನೀಡಿದ ವ್ಯಾಖ್ಯಾನವು ವೈಜ್ಞಾನಿಕವಾಗಿಯೂ ಸಮಂಜಸವಾಗಿದೆ ಎಂದು ಹೋಲಿಕೆಯಾಗುತ್ತದೆ ಎಂದು ಅನಿಸುತ್ತದೆ.
ಗಮನಿಸಬೇಕಾದ ವಿಚಾರವೆಂದರೆ, ಪೃಥ್ವಿಯ ವಾತಾವರಣದ ಈ ಸ್ತರಗಳಲ್ಲಿ ನಮ್ಮ ಜೀವ ರಕ್ಷಣೆಯ ‘ಓಝೋನ್’ ಸ್ತರ, ‘ರೇಡಿಯೋ’ ತರಂಗಗಳ ಪ್ರತಿಫಲನ ಸ್ತರ, ನೀರು ಸಿದ್ಧಗೊಳ್ಳುತ್ತಿರುವ ‘ಹೈಡ್ರೋಕ್ಸಿಲ್’ ಎನ್ನುವ ಸ್ತರ, ಈ ಮೊದಲಾದ ಪ್ರಮುಖ ವಿಭಾಗಗಳು ಸಮಾವೇಶಗೊಳ್ಳುತ್ತವೆ. ಹೀಗಾಗಿ, ‘ಸಪ್ತಾಸ್ಯಾಸನ್ ಪರಿಧಯಃ’ ಎನ್ನುವ ಉಲ್ಲೇಖವನ್ನು ‘ಪೃಥ್ವಿಯ ಮೇಲ್ಮೆೈ ವಾತಾವರಣದ ಈ ‘೭ ಪರಿಧಿ’ಗಳೆಂದು ಸೂಕ್ತವಾಗಿಯೇ ಪರಿಗಣಿಸಬಹುದು.

 

 

5 / 5. 4

ಶೇರ್ ಮಾಡಿ :

3 Responses

  1. Rohini Hegde

    All the best. You are proving that age is a number for a person who wants to know the deep insights of our Sanatana knowledge. You are a great inspiration to the younger generations to be more inquisitive and inventive in this aspect. Salutes 🙏

  2. Sadananda Hegde

    It is very interesting and elaborative. We need to explore more about Veedas.

  3. G.T. Hegse

    Interesting!! Vedas are great gifts to mankind. We need to understand more!!
    Thamks to share R.S
    Hegde and also to shree Raghupati Yaaji.

ನಿಮ್ಮ ಕಾಮೆಂಟ್ ಬರೆಯಿರಿ

advertisement