ದಾಳಿ ಮಾಡಿದ್ದಕ್ಕೆ ನೆರೆಯ ರಾಷ್ಟ್ರಗಳ ಕ್ಷಮೆ ಕೇಳಿದ ಇರಾನ್ ಅಧ್ಯಕ್ಷ ; ಆದರೆ ಒಂದು ಷರತ್ತು….

ಇಸ್ರೇಲ್ ಮತ್ತು ಅಮೆರಿಕದ ನಡುವಿನ ಯುದ್ಧದ ಸಮಯದಲ್ಲಿ ನಡೆಸಲಾದ ದಾಳಿಗಳಿಗಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ತಮ್ಮ ನೆರೆಹೊರೆಯ ರಾಷ್ಟ್ರಗಳ ಕ್ಷಮೆಯಾಚಿಸಿದ್ದಾರೆ. “ಅವರು ಮೊದಲು ದಾಳಿ ಮಾಡದ ಹೊರತು ಅಥವಾ ಅವರ ನೆಲದಿಂದ ದಾಳಿ ನಡೆಯದ ಹೊರತು ಇರಾನ್‌ ಯಾವುದೇ ದಾಳಿ ನಡೆಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇರಾನ್ ಸರ್ಕಾರಿ ಸ್ವಾಮ್ಯದ ಟಿವಿಯಲ್ಲಿ ಮಾತನಾಡಿದ ಅವರು, “ಇರಾನ್‌ನಿಂದ ದಾಳಿಗೊಳಗಾದ ನೆರೆಹೊರೆಯ ದೇಶಗಳಲ್ಲಿ ನಾನು ನನ್ನ ಪರವಾಗಿ ಮತ್ತು ಇರಾನ್ ಪರವಾಗಿ ಕ್ಷಮೆಯಾಚಿಸುತ್ತೇನೆ. ಆ ದೇಶಗಳಿಂದ ಇರಾನ್ ಮೇಲೆ ದಾಳಿ ನಡೆಯದ ಹೊರತು, ಇನ್ನು ಮುಂದೆ ಯಾವುದೇ ದಾಳಿ ಅಥವಾ ಕ್ಷಿಪಣಿ ಪ್ರಯೋಗ ಮಾಡದಿರಲು ಹಂಗಾಮಿ ನಾಯಕತ್ವ ಮಂಡಳಿ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಇರಾನ್ ವಿರುದ್ಧ ದಾಳಿ ನಡೆಸಲು ನೆರೆಯ ರಾಷ್ಟ್ರಗಳ ಪ್ರದೇಶಗಳನ್ನು ಬಳಸದ ಹೊರತು,  ಇರಾನ್‌ ಅವರ ಮೇಲೆ ದಾಳಿ ನಡೆಸುವುದಿಲ್ಲ ಎಂಬ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಇರಾನ್ ಅಧ್ಯಕ್ಷರು ಹೇಳಿದರು.
“ಇರಾನ್ ವಿರುದ್ಧದ ದಾಳಿಯು ಆ ದೇಶಗಳಿಂದ ಬಾರದ ಹೊರತು, ಇರಾನ್ ನೆರೆಯ ರಾಷ್ಟ್ರಗಳ ಮೇಲೆ ದಾಳಿ ಅಥವಾ ಕ್ಷಿಪಣಿ ದಾಳಿಗಳನ್ನು ನಡೆಸುವುದಿಲ್ಲ” ಎಂದು ಪೆಜೆಶ್ಕಿಯನ್ ಉಲ್ಲೇಖಿಸಿ  ಇರಾನ್ ಇಂಟರ್ನ್ಯಾಷನಲ್ ಶನಿವಾರ ವರದಿ ಮಾಡಿದೆ.
ಈ ನೀತಿಯನ್ನು ಇರಾನ್‌ನ ಮಧ್ಯಂತರ ನಾಯಕತ್ವ ಮಂಡಳಿಯು ಅನುಮೋದಿಸಿದೆ ಎಂದು ಪೆಜೆಶ್ಕಿಯನ್ ಹೇಳಿದ್ದಾರೆ. ಇದು ತಮ್ಮಪ್ರದೇಶದ ದೇಶಗಳ ಜೊತೆ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಪ್ಪಿಸುವ ಉದ್ದೇಶಿತ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕದ ಜೊತೆ ಉದ್ವಿಗ್ನತೆ ಮುಂದುವರಿದಿದ್ದರೂ ಸಹ, ಇಆರನ್‌ ನೆರೆಯ ದೇಶಗಳ ಬಗ್ಗೆ ಯಾವುದೇ ದ್ವೇಷವನ್ನು ಹೊಂದಿಲ್ಲ ಮತ್ತು ಪ್ರದೇಶದಾದ್ಯಂತ ಇರುವ ವಿವಿಧ ದೇಶಗಳ ಸರ್ಕಾರಗಳ ಜೊತೆ ಘರ್ಷಣೆಯನ್ನು ಬಯಸುವುದಿಲ್ಲ ಎಂದು ಅವರು ಹೇಳಿದರು.
ಆದರೆ, ಇರಾನ್ ಶರಣಾಗುವುದಿಲ್ಲ ಎಂದು ಪ್ರತಿಪಾದಿಸಿದ ಪೆಜೆಶ್ಕಿಯಾನ್, “ಇರಾನ್ ಜನರನ್ನು ಶರಣಾಗುವಂತೆ ಮಾಡುವ ಶತ್ರುಗಳ ಬಯಕೆಯನ್ನು ಅವರ ಸಮಾಧಿಗೆ ಕೊಂಡೊಯ್ಯಬೇಕು ಎಂದು ಹೇಳಿದ್ದಾರೆ.
ಇರಾನ್‌-ಅಮೆರಿಕ ಸಂಘರ್ಷ
ಪರಮಾಣು ಮಾತುಕತೆಗಳ ವೈಫಲ್ಯ ಮತ್ತು ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಪುನರಾರಂಭಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಸಂಘಟಿತವಾಗಿ ಇರಾನ್ ಮೇಲೆ ವಾಯುದಾಳಿ ನಡೆಸಿದ್ದವು. ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನ ಈ ದಾಳಿಯಲ್ಲಿ ಇರಾನ್ ರಾಜಧಾನಿ ತೆಹ್ರಾನ್ ಸೇರಿದಂತೆ ಪ್ರಮುಖ ನಗರಗಳನ್ನು ಗುರಿಯಾಗಿಸಲಾಗಿತ್ತು. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ಅವರ ಕುಟುಂಬದ ಐವರು ಮೃತಪಟ್ಟಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಾದ ದುಬೈ, ಅಬುಧಾಬಿ, ಕತಾರ್, ಕುವೈತ್, ಸೌದಿ ಅರೇಬಿಯಾ ಹಾಗೂ ಬಹ್ರೇನ್‌ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿತ್ತು.
ಸೌದಿ ಅರೇಬಿಯಾದ ಎಚ್ಚರಿಕೆ
ಸೌದಿ ಅರೇಬಿಯಾದ ರಕ್ಷಣಾ ಸಚಿವ ಪ್ರಿನ್ಸ್ ಖಾಲಿದ್ ಬಿನ್ ಸಲ್ಮಾನ್  ಅವರು ಇರಾನ್‌ಗೆ ಎಚ್ಚರಿಕೆ ನೀಡಿದ್ದು, “ತಪ್ಪು ಲೆಕ್ಕಾಚಾರಗಳನ್ನು ಮಾಡಬೇಡಿ” ಎಂದಿದ್ದಾರೆ. ಅಮೆರಿಕದ ಮಿಲಿಟರಿ ಸಿಬ್ಬಂದಿ ಇರುವ ವಾಯುನೆಲೆ ಮತ್ತು ಪ್ರಮುಖ ತೈಲ ಕ್ಷೇತ್ರಗಳ ಮೇಲೆ ಇರಾನ್ ನಡೆಸಿದ ದಾಳಿಗಳನ್ನು ತಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement