ಮಕ್ಕಳ ಹೆರುವಿಕೆ ತಡೆದ ಐಫೋನ್ ಕ್ರಾಂತಿ ! 2007ರ ನಂತರ ವಿಶ್ವದಾದ್ಯಂತ ಜನನ ಪ್ರಮಾಣ ಕುಸಿತದ ಬೆಚ್ಚಿಬೀಳಿಸುವ ಸತ್ಯ ಬಿಚ್ಚಿಟ್ಟ ಅಧ್ಯಯನ

ಸಾಮಾನ್ಯವಾಗಿ ಒಂದು ದೇಶ ಅಥವಾ ಸಮಾಜದಲ್ಲಿ ಜನರ ಜೀವನಮಟ್ಟ ಸುಧಾರಿಸಿದಂತೆ ಅಲ್ಲಿನ ಜನನ ಪ್ರಮಾಣ (ಬರ್ತ್ ರೇಟ್) ಕಡಿಮೆಯಾಗುತ್ತಾ ಹೋಗುವುದು ಇತಿಹಾಸದುದ್ದಕ್ಕೂ ಕಂಡುಬಂದಿರುವ ಸಾಮಾನ್ಯ ಪ್ರವೃತ್ತಿ. ಆದರೆ, ಕಳೆದ ಎರಡು ದಶಕಗಳಲ್ಲಿ ಸಂಶೋಧಕರು ತೀರಾ ಭಿನ್ನವಾದ ಮತ್ತು ವಿಚಿತ್ರವಾದ ವಿದ್ಯಮಾನವೊಂದನ್ನು ಗಮನಿಸಿದ್ದಾರೆ. 2007ರಿಂದೀಚೆಗೆ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ಬೇರೆ ಬೇರೆಯಾಗಿದ್ದರೂ ಸಹ, ಬಹುತೇಕ ಎಲ್ಲೆಡೆ ಜನನ ಪ್ರಮಾಣದಲ್ಲಿ ಒಂದೇ ರೀತಿಯ ತೀವ್ರ ಕುಸಿತ ಕಂಡುಬಂದಿದೆ. ಭಾರತ ಮತ್ತು ಬ್ರೆಜಿಲ್‌ನಂತಹ ಮಧ್ಯಮ ಆದಾಯದ ದೇಶಗಳಲ್ಲೂ ಜನನ ಪ್ರಮಾಣವು ಅತ್ಯಂತ ವೇಗವಾಗಿ ಕುಸಿಯುತ್ತಿರುವುದು ಕಂಡುಬಂದಿದೆ.
 ಈ ಜಾಗತಿಕ ಬದಲಾವಣೆಗೆ ಕಾರಣವೇನು ಎಂದು ಹುಡುಕ ಹೊರಟ ಇತ್ತೀಚಿನ ಎರಡು ಪ್ರಮುಖ ಅಧ್ಯಯನಗಳು, ನಾವೆಲ್ಲರೂ ಕೈಯಲ್ಲಿ ಹಿಡಿದುಕೊಂಡು ಓಡಾಡುವ ‘ಐಫೋನ್’ ಅಥವಾ ಸ್ಮಾರ್ಟ್‌ಫೋನ್‌ಗಳೇ ಇದಕ್ಕೆ ಮುಖ್ಯ ಕಾರಣ ಇರಬಹುದು ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿವೆ.
ಅಮೆರಿಕಾದ ‘ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್’ ಪ್ರಕಟಿಸಿರುವ ಇತ್ತೀಚಿನ ವರದಿಯ ಪ್ರಕಾರ, ಅಮೆರಿಕಾದಲ್ಲಿ 1980 ರಿಂದ 2007 ರವರೆಗೆ ಪ್ರತಿ 1,000 ಮಹಿಳೆಯರಿಗೆ ಸರಾಸರಿ 65 ರಿಂದ 70 ರಷ್ಟಿದ್ದ ಜನನ ಪ್ರಮಾಣವು ಸ್ಥಿರವಾಗಿತ್ತು. ಆದರೆ 2007ರ ನಂತರ ಇದು ದಿಢೀರನೆ ಕುಸಿಯಲಾರಂಭಿಸಿತು. 2024 ರ ಹೊತ್ತಿಗೆ ಈ ಪ್ರಮಾಣವು 54 ಕ್ಕೆ ತಲುಪಿದೆ. ಅಂದರೆ ಕಳೆದ 17 ವರ್ಷಗಳಲ್ಲಿ ಶೇಕಡಾ 22 ರಷ್ಟು ಭಾರಿ ಕುಸಿತ ದಾಖಲಾಗಿದೆ.
ಆದರೆ, ಜನನ ಪ್ರಮಾಣದ ಇಳಿಕೆಗೆ ಕೇವಲ ಐಫೋನ್ ಮಾತ್ರ ಕಾರಣ ಎಂದು ನೇರವಾಗಿ ಹೇಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಈ ಅವಧಿಯಲ್ಲಿ 2008 ರ ಜಾಗತಿಕ ಆರ್ಥಿಕ ಹಿಂಜರಿತದಂತಹ ದೊಡ್ಡ ವಿದ್ಯಮಾನಗಳೂ ಸಂಭವಿಸಿದ್ದವು. ಹೀಗಾಗಿ, ಸಂಶೋಧಕರು 2007 ಮತ್ತು 2011 ರ ನಡುವಿನ ಅವಧಿಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಅಧ್ಯಯನ ನಡೆಸಿದರು. ಅದಕ್ಕೆ ಕಾರಣ, ಆ ಸಮಯದಲ್ಲಿ ಅಮೆರಿಕಾದಲ್ಲಿ ಐಫೋನ್ ಕೇವಲ ‘AT&T’ ಮೊಬೈಲ್ ನೆಟ್‌ವರ್ಕ್ ಮೂಲಕ ಮಾತ್ರ ಲಭ್ಯವಿತ್ತು.
ಮೊಬೈಲ್ ಸಂಪರ್ಕ ಹೆಚ್ಚಿದಂತೆ ಕಡಿಮೆಯಾಯಿತು ಮಕ್ಕಳ ಹೆರುವಿಕೆ !
bimba pratibimba2007 ರ ಜೂನ್‌ನಿಂದ 2011 ರ ಫೆಬ್ರವರಿವರೆಗೆ ಐಫೋನ್ ಕೇವಲ AT&T ಗ್ರಾಹಕರಿಗೆ ಮಾತ್ರ ಸೀಮಿತವಾಗಿದ್ದರಿಂದ, ಸಂಶೋಧಕರು ಇದನ್ನು ಒಂದು ಅತ್ಯುತ್ತಮ ಪ್ರಯೋಗವಾಗಿ ಬಳಸಿಕೊಂಡರು. ಅಮೆರಿಕಾದಲ್ಲಿ AT&T ನೆಟ್‌ವರ್ಕ್ ಸಂಪೂರ್ಣವಾಗಿ ಲಭ್ಯವಿದ್ದ ಕೌಂಟಿಗಳು (ಜಿಲ್ಲೆಗಳು) ಮತ್ತು ಈ ನೆಟ್‌ವರ್ಕ್ ಇಲ್ಲದ ಅಥವಾ ಅತ್ಯಲ್ಪ ಪ್ರಮಾಣದಲ್ಲಿದ್ದ ಕೌಂಟಿಗಳನ್ನು ಅವರು ಪರಸ್ಪರ ಹೋಲಿಕೆ ಮಾಡಿ ನೋಡಿದರು.
ಈ ವೇಳೆ ಸಿಕ್ಕಿದ ಫಲಿತಾಂಶಗಳು ಬೆರಗುಗೊಳಿಸುವಂತಿದ್ದವು. ಐಫೋನ್ ಮತ್ತು ನೆಟ್‌ವರ್ಕ್ ಲಭ್ಯತೆಯು 15 ರಿಂದ 19 ವರ್ಷದೊಳಗಿನ ಹದಿಹರೆಯದ ಯುವತಿಯರಲ್ಲಿ ಜನನ ಪ್ರಮಾಣವನ್ನು ಶೇಕಡಾ 4.5 ರಿಂದ 8 ರಷ್ಟು ಮತ್ತು 20 ರಿಂದ 24 ವರ್ಷದೊಳಗಿನ ಮಹಿಳೆಯರಲ್ಲಿ ಶೇಕಡಾ 3.2 ರಿಂದ 6.6 ರಷ್ಟು ಕಡಿಮೆ ಮಾಡಿದೆ ಎಂಬುದು ಪತ್ತೆಯಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, 2007-2011ರ ಅವಧಿಯಲ್ಲಿ 15 ರಿಂದ 44 ವರ್ಷದ ಮಹಿಳೆಯರಲ್ಲಿ ಕಂಡುಬಂದ ಒಟ್ಟು ಜನನ ಪ್ರಮಾಣದ ಕುಸಿತಕ್ಕೆ ಶೇಕಡಾ 33 ರಿಂದ 52 ರಷ್ಟು ಈ ಐಫೋನ್ ಬಳಕೆಯೇ ಕಾರಣ ಎಂದು ಅಂದಾಜಿಸಲಾಗಿದೆ.
ವಿವಿಧ ವಯೋಮಾನದವರಲ್ಲಿನ ವ್ಯತ್ಯಾಸಗಳು
2007 ರಿಂದ 2024 ರ ನಡುವಿನ ದೀರ್ಘಾವಧಿಯನ್ನು ನೋಡಿದರೆ, 15 ರಿಂದ 19 ವರ್ಷದವರಲ್ಲಿ ಜನನ ಪ್ರಮಾಣವು ಶೇಕಡಾ 70 ರಷ್ಟು ಮತ್ತು 20 ರಿಂದ 24 ವರ್ಷದವರಲ್ಲಿ ಶೇಕಡಾ 47 ರಷ್ಟು ಭಾರಿ ಕುಸಿತ ಕಂಡಿದೆ. ಅದೇ ರೀತಿ 30 ರಿಂದ 34 ವರ್ಷದವರಲ್ಲಿ ಶೇಕಡಾ 7 ರಷ್ಟು ಮಾತ್ರ ಇಳಿಕೆಯಾಗಿದ್ದರೆ, ಅಚ್ಚರಿಯ ಎಂಬಂತೆ 35 ರಿಂದ 39 ವರ್ಷದ ಮಹಿಳೆಯರಲ್ಲಿ ಜನನ ಪ್ರಮಾಣವು ಶೇಕಡಾ 14 ರಷ್ಟು ಹೆಚ್ಚಾಗಿದೆ…!
ನೆಟ್‌ವರ್ಕ್ ಇಲ್ಲದ ಕೌಂಟಿಗಳಲ್ಲಿ ಹದಿಹರೆಯದವರ (ಟೀನೇಜ್) ಜನನ ಪ್ರಮಾಣ ಶೇಕಡಾ 13.8 ರಷ್ಟು ಮಾತ್ರ ಕಡಿಮೆಯಾಗಿದ್ದರೆ, ಭಾಗಶಃ ನೆಟ್‌ವರ್ಕ್ ಇದ್ದ ಕಡೆ ಶೇಕಡಾ 18.9 ರಷ್ಟು ಮತ್ತು ಸಂಪೂರ್ಣ ನೆಟ್‌ವರ್ಕ್ ಸೌಲಭ್ಯವಿದ್ದ ಕೌಂಟಿಗಳಲ್ಲಿ ಶೇಕಡಾ 26 ರಷ್ಟು ಭಾರಿ ಕುಸಿತ ಕಂಡುಬಂದಿದೆ. ಇದು ತಂತ್ರಜ್ಞಾನದ ಪ್ರಭಾವವನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.
ಜನನ ಪ್ರಮಾಣದ ಇಳಿಕೆಗೆ ಸ್ಮಾರ್ಟ್‌ಫೋನ್‌ಗಳು ಹೇಗೆ ಕಾರಣವಾದವು..?
ಜನನ ಪ್ರಮಾಣದ ಇಳಿಕೆಗೆ ಸ್ಮಾರ್ಟ್‌ಫೋನ್‌ಗಳು ಹೇಗೆ ಕಾರಣವಾದವು ಎಂಬ ಪ್ರಶ್ನೆಗೆ ಸಂಶೋಧಕರು ಕೆಲವು ಆಸಕ್ತಿದಾಯಕ ವಿವರಣೆಗಳನ್ನು ನೀಡಿದ್ದಾರೆ. ಸ್ಮಾರ್ಟ್‌ಫೋನ್‌ಗಳ ಜನಪ್ರಿಯತೆ ಹೆಚ್ಚಾದಂತೆ, ಯುವ ಸಮೂಹ ನೈಜ ಜಗತ್ತಿನಲ್ಲಿ ಸ್ನೇಹಿತರನ್ನು ಭೇಟಿಯಾಗುವುದು ಮತ್ತು ಒಟ್ಟಿಗೆ ಸಮಯ ಕಳೆಯುವುದನ್ನು ಗಣನೀಯವಾಗಿ ಕಡಿಮೆ ಮಾಡಿತು. ಇದರೊಂದಿಗೆ ದೈಹಿಕ ಅಥವಾ ಲೈಂಗಿಕ ಸಂಪರ್ಕದ ಆಸಕ್ತಿಯೂ ಕಡಿಮೆಯಾಗುತ್ತಾ ಬಂತು. ಇದೇ ವೇಳೆ ಅಶ್ಲೀಲ ಚಿತ್ರಗಳ (ಪೋರ್ನೋಗ್ರಫಿ) ವೀಕ್ಷಣೆ ಹೆಚ್ಚಾಗಿದ್ದು, ಇದು ನೈಜ ದೈಹಿಕ ಸಂಪರ್ಕಕ್ಕೆ ಪರ್ಯಾಯವಾಗಿ ಬಳಕೆಯಾಗತೊಡಗಿತು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ವರದಿಗಳ ಪ್ರಕಾರ, ಅಧ್ಯಯನದ ಅವಧಿಯಲ್ಲಿ ಗೂಗಲ್‌ನಲ್ಲಿ ‘Porn’ ಎಂಬ ಪದದ ಹುಡುಕಾಟ ದುಪ್ಪಟ್ಟಾಗಿದೆ. ಚಿಕಾಗೋ ವಿಶ್ವವಿದ್ಯಾಲಯದ ಸಾಮಾನ್ಯ ಸಾಮಾಜಿಕ ಸಮೀಕ್ಷೆಯ ಪ್ರಕಾರ, 25 ರಿಂದ 44 ವರ್ಷದೊಳಗಿನವರಲ್ಲಿ ತಾವು ಕಳೆದ ವರ್ಷ ಎಕ್ಸ್-ರೇಟೆಡ್ (ಅಶ್ಲೀಲ) ಚಲನಚಿತ್ರ ವೀಕ್ಷಿಸಿದ್ದಾಗಿ ಒಪ್ಪಿಕೊಂಡವರ ಸಂಖ್ಯೆ 2000 ದಿಂದ 2018 ರ ನಡುವೆ ಪ್ರತಿ ವಯೋಮಾನದವರಲ್ಲೂ ತೀವ್ರವಾಗಿ ಏರಿಕೆಯಾಗಿದೆ. ಇದಲ್ಲದೆ, ಐಫೋನ್‌ಗಳ ಮೂಲಕ ಯುವಕ-ಯುವತಿಯರಿಗೆ ಗರ್ಭಧಾರಣೆಯನ್ನು ತಡೆಯುವ ವಿಧಾನಗಳು, ಗರ್ಭನಿರೋಧಕಗಳು ಮತ್ತು ಗರ್ಭಪಾತದಂತಹ ವಿಷಯಗಳ ಬಗ್ಗೆ ಸುಲಭವಾಗಿ ಮಾಹಿತಿ ಲಭ್ಯವಾಗಿದ್ದೂ ಸಹ ಜನನ ಪ್ರಮಾಣ ಇಳಿಕೆಗೆ ಮತ್ತೊಂದು ಕಾರಣವಾಗಿದೆ.
ಜಾಗತಿಕ ಮಟ್ಟದಲ್ಲೂ ಇದೇ ಪರಿಸ್ಥಿತಿ: ಮತ್ತೊಂದು ಅಧ್ಯಯನ
ಕೇವಲ ಅಮೆರಿಕ ಮಾತ್ರವಲ್ಲದೆ, ಜಗತ್ತಿನಾದ್ಯಂತ ಇದೇ ಟ್ರೆಂಡ್ ಮುಂದುವರಿದಿದೆ ಎಂಬುದನ್ನು ‘ಯುನಿವರ್ಸಿಟಿ ಆಫ್ ಸಿನ್ಸಿನಾಟಿ’ಯ ಅರ್ಥಶಾಸ್ತ್ರಜ್ಞರು ನಡೆಸಿದ ಮತ್ತೊಂದು ಸಂಶೋಧನೆ ದೃಢಪಡಿಸಿದೆ. ಅವರು ವಿಶ್ವಬ್ಯಾಂಕ್‌ನ ದತ್ತಾಂಶಗಳನ್ನು ಬಳಸಿ 128 ದೇಶಗಳ ಸ್ಮಾರ್ಟ್‌ಫೋನ್ ಬಳಕೆ ಮತ್ತು ಹದಿಹರೆಯದವರ ಜನನ ಪ್ರಮಾಣವನ್ನು ವಿಶ್ಲೇಷಿಸಿದ್ದಾರೆ. ವಿಭಿನ್ನ ಆರೋಗ್ಯ ವ್ಯವಸ್ಥೆ, ವಿಭಿನ್ನ ಕಾನೂನುಗಳು, ಧಾರ್ಮಿಕ ಸಂಪ್ರದಾಯಗಳು ಮತ್ತು ಆರ್ಥಿಕ ಏರುಪೇರುಗಳನ್ನು ಹೊಂದಿದ್ದ ವಿವಿಧ ದೇಶಗಳಲ್ಲೆಲ್ಲಾ ಒಂದೇ ಅವಧಿಯಲ್ಲಿ ಜನನ ಪ್ರಮಾಣ ಕುಸಿದಿರುವುದು ಕಂಡುಬಂದಿದೆ.
“ಇದಕ್ಕೆ ಕಾರಣವಾದದ್ದು ಜಾಗತಿಕ ಮಟ್ಟದ ಒಂದು ಅಂಶ. ಅದು ಒಂದೇ ಸಮಯದಲ್ಲಿ, ಒಂದೇ ರೂಪದಲ್ಲಿ ಜಗತ್ತಿನ ಎಲ್ಲಾ ಭಾಗಗಳಿಗೂ ತಲುಪಿದೆ” ಎಂದು ಸಂಶೋಧಕರು ಬರೆದಿದ್ದಾರೆ. ಇದನ್ನು ಅವರು “ಸಾಮಾನ್ಯ ಜಾಗತಿಕ ತಂತ್ರಜ್ಞಾನದ ಆಘಾತ” (Common global technology shock) ಎಂದು ಕರೆದಿದ್ದಾರೆ.
ಇರಾನ್, ಕೋಸ್ಟರಿಕಾ, ಗ್ವಾಟೆಮಾಲಾ, ಚಿಲಿ, ಮೆಕ್ಸಿಕೋ ಮತ್ತು ಟರ್ಕಿಯಂತಹ ದೇಶಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಜನರ ಕೈಸೇರುತ್ತಿದ್ದಂತೆ ಹದಿಹರೆಯದವರ ಜನನ ಪ್ರಮಾಣದ ಇಳಿಕೆ ವೇಗ ಪಡೆದುಕೊಂಡಿತು. ಅಮೆರಿಕದಲ್ಲೂ ವೈರ್ಡ್ ಬ್ರಾಡ್‌ಬ್ಯಾಂಡ್ ಮತ್ತು 4G ಮೊಬೈಲ್ ನೆಟ್‌ವರ್ಕ್ ಹೆಚ್ಚಿದ್ದ ಕಡೆಗಳಲ್ಲಿ ಹದಿಹರೆಯದವರ ಹೆರಿಗೆ ಪ್ರಮಾಣ ಅತಿ ವೇಗವಾಗಿ ಕುಸಿತ ಕಂಡಿರುವುದು ಸಾಬೀತಾಗಿದೆ.
ನೈಜ ಸಂವಹನ ಕುಸಿತ, ಕಂಪ್ಯೂಟರ್ ಕಾಲಹರಣ ಹೆಚ್ಚಳ
ಸಂಶೋಧನೆಯ ಪ್ರಕಾರ, ಜನರು ಮುಖಾಮುಖಿಯಾಗಿ ಕುಳಿತು ಸಾಮಾಜಿಕವಾಗಿ ಸಂವಹನ ನಡೆಸುವ ಸಮಯವು 2003 ರಲ್ಲಿ ದಿನಕ್ಕೆ 68 ನಿಮಿಷಗಳಷ್ಟಿತ್ತು. ಆದರೆ 2019 ರ ಹೊತ್ತಿಗೆ ಇದು ಕೇವಲ 38 ನಿಮಿಷಗಳಿಗೆ ಕುಸಿದಿದೆ (ಶೇಕಡಾ 44 ರಷ್ಟು ಇಳಿಕೆ). ಮತ್ತೊಂದೆಡೆ, ಜನರು ಕಂಪ್ಯೂಟರ್ ಅಥವಾ ಡಿಜಿಟಲ್ ಪರದೆಯ ಮುಂದೆ ಕಳೆಯುವ ಸಮಯವು ದಿನಕ್ಕೆ 22 ನಿಮಿಷಗಳಿಂದ 96 ನಿಮಿಷಗಳಿಗೆ ಏರಿಕೆಯಾಗಿದೆ (ಶೇಕಡಾ 336 ರಷ್ಟು ಭಾರಿ ಹೆಚ್ಚಳ).
ಆತಂಕದಲ್ಲಿ ವಿಶ್ವದ ಪ್ರಮುಖ ದೇಶಗಳು
ಜನನ ಪ್ರಮಾಣದ ಇಳಿಕೆಗೆ ಕೇವಲ ಐಫೋನ್ ಒಂದೇ ಕಾರಣವಲ್ಲದಿದ್ದರೂ, ಅದು ಪ್ರಸ್ತುತ ಜಗತ್ತಿನ ಶ್ರೀಮಂತ ಮತ್ತು ಬಡ ರಾಷ್ಟ್ರಗಳೆರಡರಲ್ಲೂ ಜನಸಂಖ್ಯೆಯ ಸಮತೋಲನವನ್ನು ಏರುಪೇರು ಮಾಡುತ್ತಿರುವುದಂತೂ ನಿಜ. ಸದ್ಯ ಅಮೆರಿಕಾದಲ್ಲಿ ಜನನ ಪ್ರಮಾಣ ಸಾರ್ವಕಾಲಿಕ ಕುಸಿತ ಕಂಡಿದ್ದರೆ, ಕೆನಡಾದಲ್ಲಿ 2024 ರ ವೇಳೆಗೆ ಪ್ರತಿ ಮಹಿಳೆಗೆ ಸರಾಸರಿ ಮಕ್ಕಳ ಪ್ರಮಾಣ 1.25 ಕ್ಕೆ ಇಳಿದಿದೆ. ಇದು ಜಪಾನ್, ಸಿಂಗಾಪುರ ಮತ್ತು ಸ್ಪೇನ್ ದೇಶಗಳ ಮಾದರಿಯಲ್ಲೇ ಕೆನಡಾವನ್ನೂ ಸಹ ಆತಂಕಕಾರಿ ಮಟ್ಟಕ್ಕೆ (1.30 ಕ್ಕಿಂತ ಕೆಳಗೆ) ತಂದು ನಿಲ್ಲಿಸಿದೆ.
ಏಷ್ಯಾದ ಪ್ರಮುಖ ಆರ್ಥಿಕತೆಗಳೂ ಸಹ ಜನಸಂಖ್ಯೆ ಕುಗ್ಗುವ ಭೀತಿಯನ್ನು ಎದುರಿಸುತ್ತಿವೆ. ಚೀನಾ ತನ್ನ ‘ಒಂದು ಮಗು’ ನೀತಿಯನ್ನು 2016 ರಲ್ಲೇ ಕೊನೆಗೊಳಿಸಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಜನರು ಹೆಚ್ಚು ಮಕ್ಕಳನ್ನು ಹೆರುವಂತೆ ಉತ್ತೇಜಿಸಲು ಭಾರಿ ಪ್ರಮಾಣದ ಹಣವನ್ನು ಪ್ರೋತ್ಸಾಹ ಧನವಾಗಿ ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸದ್ಯ ಆಫ್ರಿಕಾದ ಕೆಲವು ಅತ್ಯಂತ ಬಡ ರಾಷ್ಟ್ರಗಳಲ್ಲಿ ಮಾತ್ರ ಜನನ ಪ್ರಮಾಣ ಹೆಚ್ಚಾಗಿದ್ದು, ಭಾರತ ಮತ್ತು ಬ್ರೆಜಿಲ್‌ನಂತಹ ಮಧ್ಯಮ ಆದಾಯದ ದೇಶಗಳಲ್ಲೂ ಜನನ ಪ್ರಮಾಣವು ಅತ್ಯಂತ ವೇಗವಾಗಿ ಕುಸಿಯುತ್ತಿರುವುದು ಕಂಡುಬಂದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement