ವಿಡಿಯೊಗಳು…: ಭೀಕರ ಬಿಸಿಗಾಳಿಗೆ ಕರಗಿದ ರಸ್ತೆಗಳು, ಬಾಗಿದ ರೈಲು ಹಳಿಗಳು ; ನೂರಾರು ಸಾವು : ತತ್ತರಿಸಿದ ಯುರೋಪ್

ಲಂಡನ್: ಯುರೋಪ್ ಖಂಡವು ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಮತ್ತು ಭೀಕರವಾದ ಬಿಸಿಗಾಳಿಗೆ (Heatwave ತತ್ತರಿಸಿದೆ. ಸೂರ್ಯನ ಪ್ರಖರ ಶಾಖಕ್ಕೆ ರಸ್ತೆಗಳು ಕರಗುತ್ತಿದ್ದು, ಟ್ರ್ಯಾಮ್ ರೈಲುಗಳ ಹಳಿಗಳು ಬಾಗುತ್ತಿವೆ. ವಿಪರೀತ ಶಾಖದ ಹಿನ್ನೆಲೆಯಲ್ಲಿ ಸಾವಿರಾರು ಜನ ಆಸ್ಪತ್ರೆ ಸೇರುತ್ತಿದ್ದಾರೆ. ಇತಿಹಾಸದ ಎಲ್ಲಾ ದಾಖಲೆಗಳನ್ನು ಮುರಿಯುತ್ತಿರುವ ತಾಪಮಾನವು ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಈಗಾಗಲೇ 40°C ಗಡಿಯನ್ನು ದಾಟಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿರುವ ಮಾಹಿತಿ ಪ್ರಕಾರ, ಜೂನ್ 21ರಿಂದ ಈಚೆಗೆ ಯುರೋಪ್‌ನಲ್ಲಿ ತೀವ್ರ ತಾಪಮಾನಕ್ಕೆ ಸಂಬಂಧಿಸಿದಂತೆ 1300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಲಾಕ್ ಆಗಿದ್ದ ಕಾರುಗಳ ಒಳಗೆ ಸಿಲುಕಿ ಮೃತಪಟ್ಟ ಹಲವಾರು ಮಕ್ಕಳು ಹಾಗೂ ಬಿಸಿಲಿನಿಂದ ಪಾರಾಗಲು ಯಾವುದೇ ಮೇಲ್ವಿಚಾರಣೆ ಇಲ್ಲದ ಈಜುಕೊಳ ಮತ್ತು ಜಲಮೂಲಗಳಲ್ಲಿ ಮುಳುಗಿ ಮೃತಪಟ್ಟ ಯುವಕರು ಇದರಲ್ಲಿ ಸೇರಿದ್ದಾರೆ.
ಪ್ಯಾರಿಸ್‌ನಲ್ಲಿ ಬಿಸಿಗಾಳಿ ಕಾರಣದಿಂದಾಗಿ ಮರಣ ಹೊಂದುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಫ್ರಾನ್ಸ್‌ನಲ್ಲಿ ಜೂನ್ 18 ರಿಂದ ಈವರೆಗೆ ಕನಿಷ್ಠ 74 ಜನರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸದ್ಯ ಫ್ರಾನ್ಸ್‌ನಲ್ಲಿ ತಾಪಮಾನ ಸ್ವಲ್ಪ ಮಟ್ಟಿಗೆ ತಂಪಾಗಿದೆಯಾದರೂ, ಜುಲೈ ತಿಂಗಳಿನಲ್ಲಿ ಮತ್ತೊಂದು ಭೀಕರ ಬಿಸಿಗಾಳಿ ಎದುರಾಗಲಿದೆ ಎಂದು ಅಲ್ಲಿನ ರಾಷ್ಟ್ರೀಯ ಹವಾಮಾನ ಸಂಸ್ಥೆ ಈಗಾಗಲೇ ಮುನ್ಸೂಚನೆ ನೀಡಿದೆ.
ದಾಖಲೆ ಮಟ್ಟಕ್ಕೆ ಏರಿದ ತಾಪಮಾನ
ಕಳೆದ ವಾರ ಪಶ್ಚಿಮ ಯುರೋಪ್ ಅನ್ನು ಹಿಂಡಿ ಹಿಪ್ಪೆ ಮಾಡಿದ್ದ ಈ ಸುಡುವ ಬಿಸಿಲು, ಪ್ರಸ್ತುತ ಪೂರ್ವ ಭಾಗದತ್ತ ಸಾಗಿದ್ದು, ಪೋಲೆಂಡ್, ಜೆಕ್ ಗಣರಾಜ್ಯ ಮತ್ತು ಜರ್ಮನಿಯಲ್ಲಿ ಹೊಸ ದಾಖಲೆ ಬರೆದಿದೆ. ಜರ್ಮನಿಯಲ್ಲಿ ತಾಪಮಾನವು 41°C ಗಿಂತಲೂ ಅಧಿಕವಾಗಿದ್ದರೆ, ಜೆಕ್ ಗಣರಾಜ್ಯದಲ್ಲಿ 40°C ಗಡಿಯನ್ನು ದಾಟಿದೆ.
ಸ್ವಿಟ್ಜರ್‌ಲ್ಯಾಂಡ್‌ನ ಬೇಸೆಲ್‌ನಲ್ಲಿ ತಾಪಮಾನವು ದಾಖಲೆಯ 38.8°C ದಾಟಿದೆ. ಡೆನ್ಮಾರ್ಕ್‌ನಲ್ಲಿ 1874 ರ ನಂತರ ಅತ್ಯಂತ ಗರಿಷ್ಠ ತಾಪಮಾನ ದಾಖಲಾಗಿದ್ದರೆ, ಬ್ರಿಟನ್ (UK) ತನ್ನ ಇತಿಹಾಸದಲ್ಲೇ ಅತ್ಯಂತ ಉಷ್ಣತೆಯ ಜೂನ್ ತಿಂಗಳನ್ನು ಎದುರಿಸಿದೆ. ಸೋಮವಾರ ಸ್ಲೋವಾಕಿಯಾದ ಆಗ್ನೇಯ ಭಾಗದ ತುರ್ನಾ ನಾಡ್ ಬೋಡ್ವೌನಲ್ಲಿ ತಾಪಮಾನವು 41°C ಗೆ ತಲುಪುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ ಎಂದು ಸ್ಲೋವಾಕ್ ಹೈಡ್ರೋಮೆಟಿಯರಾಲಜಿಕಲ್ ಇನ್‌ಸ್ಟಿಟ್ಯೂಟ್ (SHMU) ತಿಳಿಸಿದೆ.
ಅತ್ತ ಹಂಗೇರಿಯ ಕೇಂದ್ರ ಭಾಗದಲ್ಲಿರುವ ಆಸ್ಜೋಡ್‌ನಲ್ಲಿ ತಾಪಮಾನವು 41.8°C ತಲುಪಿದ್ದು, ಇದು 2007 ರಲ್ಲಿ ದಾಖಲಾಗಿದ್ದ ದೇಶದ ಸಾರ್ವಕಾಲಿಕ ಗರಿಷ್ಠ ತಾಪಮಾನವಾದ 41.9°C ಗಿಂತ ಸ್ವಲ್ಪವೇ ಕಡಿಮೆಯಾಗಿದೆ.
ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದಿಂದ ರಷ್ಯಾದ ನಿರಂತರ ದಾಳಿಗಳಿಂದ ಈಗಾಗಲೇ ಜರ್ಜರಿತವಾಗಿರುವ ಉಕ್ರೇನ್‌ನ ಇಂಧನ ನೆಟ್‌ವರ್ಕ್, ಈ ಅತಿಯಾದ ತಾಪಮಾನದಿಂದಾಗಿ ಮತ್ತಷ್ಟು ಹದಗೆಟ್ಟಿದೆ. ದೇಶದಲ್ಲಿ 35°C ನಿಂದ 38°C ವರೆಗೆ ತೀವ್ರ ಬಿಸಿಲು ಇರಲಿದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿರುವ ಬೆನ್ನಲ್ಲೇ, ಅಧಿಕಾರಿಗಳು ತುರ್ತು ವಿದ್ಯುತ್ ಕಡಿತವನ್ನು (Power Outages) ಜಾರಿಗೆ ತಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋಗಳು
ಯುರೋಪ್ ಖಂಡದಾದ್ಯಂತ ಜನರು ಅನುಭವಿಸುತ್ತಿರುವ ಈ ಬಿಸಿಲಿನ ತೀವ್ರತೆಗೆ ಸಾಕ್ಷಿಯಾಗಿ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ‘ನೆಕ್ಸ್ಟ್ರಾ ಟಿವಿ’ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ, ತೀವ್ರ ಬಿಸಿಲಿಗೆ ಹೊರಗೆ ಇಟ್ಟಿದ್ದ ಬಾಣಲೆಯಲ್ಲಿ ಕೇವಲ ಕೆಲವೇ ನಿಮಿಷಗಳಲ್ಲಿ ಮೊಟ್ಟೆ ಮತ್ತು ಬೇಗನ್ ಬೇಯುತ್ತಿರುವುದನ್ನು ಕಾಣಬಹುದು.
ನೆದರ್ಲ್ಯಾಂಡ್ಸ್‌ನದ್ದು ಎನ್ನಲಾದ ಮತ್ತೊಂದು ವಿಡಿಯೋದಲ್ಲಿ, ಕಾರುಗಳ ಮೇಲಿರುವ ಪ್ಲಾಸ್ಟಿಕ್ ಪೇಂಟ್ ಉಬ್ಬುತ್ತಿರುವುದು, ಸೂಪರ್ ಮಾರ್ಕೆಟ್‌ನ ಶಾಪಿಂಗ್ ಕಾರ್ಟ್ ಹಾಗೂ ಜನರ ಚಪ್ಪಲಿ/ಶೂಗಳು ಬಿಸಿಲಿಗೆ ಕರಗುತ್ತಿರುವುದು ದಾಖಲಾಗಿದೆ. ಇನ್ನು ಬರ್ಲಿನ್‌ನಲ್ಲಿ ಬಿಸಿಲಿನ ಬೇಗೆಯಿಂದ ಜನರನ್ನು ತಂಪಾಗಿಸಲು ಪೊಲೀಸರು ವಾಟರ್ ಕ್ಯಾನನ್‌ಗಳ (ನೀರಿನ ಫಿರಂಗಿ) ಮೂಲಕ ನೀರನ್ನು ಚಿಮುಕಿಸುತ್ತಿದ್ದು, ಸಾರ್ವಜನಿಕರು ಅದರಲ್ಲೇ ಸ್ನಾನ ಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಆದರೆ ಈ ದೃಶ್ಯಾವಳಿಗಳ ಸತ್ಯಾಸತ್ಯತೆಯನ್ನು  ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement