ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಮಹತ್ವದ ಘೋಷಣೆ ಮಾಡಿದ್ದು, ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗುವ ಎಲ್ಲ ಸರಕು ಸಾಗಣೆಯ ಮೇಲೆ ಅಮೆರಿಕವು ಇನ್ನು ಮುಂದೆ 20 ಪ್ರತಿಶತ ಶುಲ್ಕ ವಿಧಿಸಲಿದೆ ಎಂದು ಪ್ರಕಟಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ (Truth Social) ನಲ್ಲಿ ಈ ಕುರಿತು ಪ್ರಕಟಣೆ ನೀಡಿರುವ ಟ್ರಂಪ್, “ಇಂದಿನಿಂದ ಅಮೆರಿಕವನ್ನು ‘ಹಾರ್ಮುಜ್ ಜಲಸಂಧಿಯ ರಕ್ಷಕ’ (The Guardian of the Hormuz Strait) ಎಂದು ಕರೆಯಲಾಗುವುದು. ಈ ಅತೀ ಸೂಕ್ಷ್ಮ ಮತ್ತು ಅಸ್ಥಿರ ಸಮುದ್ರ ಮಾರ್ಗದಲ್ಲಿ ಸುರಕ್ಷತೆ ಹಾಗೂ ಭದ್ರತೆ ಒದಗಿಸಲು ಆಗುವ ಎಲ್ಲ ಖರ್ಚು-ವೆಚ್ಚಗಳಿಗೆ ನ್ಯಾಯಯುತ ಪರಿಹಾರವಾಗಿ, ಈ ಜಲಸಂಧಿಯ ಮೂಲಕ ಸಾಗುವ ಪ್ರತಿಯೊಂದು ಸರಕು ಸಾಗಣೆಯ ಮೇಲೂ 20 ಪ್ರತಿಶತ ದರದಲ್ಲಿ ಶುಲ್ಕ ಪಡೆಯಲಾಗುವುದು. ಈ ವ್ಯವಸ್ಥೆ ತಕ್ಷಣದಿಂದಲೇ ಆರಂಭವಾಗಲಿದೆ” ಎಂದು ಹೇಳಿದ್ದಾರೆ.
ಇದೇ ವೇಳೆ, ಹಾರ್ಮುಜ್ ಜಲಸಂಧಿ ಮುಕ್ತವಾಗಿಯೇ ಇದೆ ಮತ್ತು ಮುಂದೆಯೂ ಮುಕ್ತವಾಗಿಯೇ ಇರಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಜೊತೆಗೆ, ಇರಾನ್ ಹಡಗುಗಳು ಅಥವಾ ಅವುಗಳ ಗ್ರಾಹಕರು ದೇಶವನ್ನು ಪ್ರವೇಶಿಸುವುದು ಅಥವಾ ತೊರೆಯುವುದನ್ನು ತಡೆಯುವ ಉದ್ದೇಶದಿಂದ ಇರಾನ್ ಮೇಲಿನ ನೌಕಾ ನಿರ್ಬಂಧವನ್ನು (Iranian Blockade) ಪುನಃ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.
“ಹಾರ್ಮುಜ್ ಜಲಸಂಧಿ ತೆರೆದಿದೆ ಮತ್ತು ಇರಾನ್ ಇದ್ದರೂ ಇಲ್ಲದಿದ್ದರೂ ಅದು ತೆರೆದೇ ಇರುತ್ತದೆ. ನಾವು ‘ಇರಾನಿಯನ್ ಬ್ಲಾಕೇಡ್’ ಅನ್ನು ಪುನಃ ಜಾರಿಗೆ ತರುತ್ತಿದ್ದೇವೆ. ಇದು ಕೇವಲ ಇರಾನ್ನ ಹಡಗುಗಳು ಅಥವಾ ಅವುಗಳ ಗ್ರಾಹಕರ ಸಂಚಾರವನ್ನು ಮಾತ್ರ ತಡೆಯಲಿದೆ. ಉಳಿದ ಎಲ್ಲ ದೇಶಗಳಿಗೆ ಜಲಸಂಧಿಯನ್ನು ನ್ಯಾಯಸಮ್ಮತವಾಗಿ ಹಾಗೂ ಮುಕ್ತವಾಗಿ ಬಳಸುವ ಅವಕಾಶ ಇರುತ್ತದೆ” ಎಂದು ಟ್ರಂಪ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಈ ಘೋಷಣೆಗೆ ಕೆಲವೇ ಗಂಟೆಗಳ ಮೊದಲು ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ್ದ ಟ್ರಂಪ್, ಅಮೆರಿಕವು ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ತಾನೇ ವಹಿಸಿಕೊಳ್ಳಲಿದೆ ಎಂದು ಹೇಳಿದ್ದರು.
“ನಾವು ಜಲಸಂಧಿಯನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತೇವೆ. ಬಹುಶಃ ಅದರ ನಿರ್ವಹಣೆಯನ್ನೂ ನಾವು ನಡೆಸುತ್ತೇವೆ. ನಾವು ಈ ಜಲಸಂಧಿಯ ರಕ್ಷಕರಾಗುತ್ತೇವೆ. ಇದನ್ನು ‘ಗಾರ್ಡಿಯನ್ ಏಂಜಲ್ ಆಫ್ ದ ಸ್ಟ್ರೈಟ್’ ಎಂದೂ ಕರೆಯಬಹುದು. ಅದಕ್ಕಾಗಿ ನಮಗೆ ವೆಚ್ಚದ ಮರುಪಾವತಿಯೂ ದೊರೆಯಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಟ್ರಂಪ್ ಅವರ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿದ ಇರಾನ್ನ ಖಾತಮ್ ಅಲ್-ಅನ್ಬಿಯಾ (Khatam Al-Anbiya) ಸೇನಾ ಕಮಾಂಡ್ ವಕ್ತಾರರು ವಿಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿ, “ಯಾವುದೇ ಸಂದರ್ಭದಲ್ಲೂ ಹಾರ್ಮುಜ್ ಜಲಸಂಧಿಯ ನಿರ್ವಹಣೆಯಲ್ಲಿ ಅಮೆರಿಕ ಮಧ್ಯಪ್ರವೇಶ ಮಾಡಲು ಇರಾನ್ ಅವಕಾಶ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಇದಲ್ಲದೆ, ಈ ಜಲಸಂಧಿಯ ವಿಚಾರದಲ್ಲಿ ಅಮೆರಿಕದ ಜೊತೆ ಸಹಕರಿಸುವ ಯಾವುದೇ ಗಲ್ಫ್ ರಾಷ್ಟ್ರದ ಕ್ರಮವನ್ನು ‘ಯುದ್ಧದ ಕೃತ್ಯ’ (Act of War) ಎಂದು ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಎಚ್ಚರಿಕೆಯು ಅಮೆರಿಕ ಮತ್ತು ಇರಾನ್ ಎರಡನೇ ದಿನವೂ ಪರಸ್ಪರ ದಾಳಿಗಳನ್ನು ಮುಂದುವರಿಸಿರುವ ಸಂದರ್ಭದಲ್ಲಿ ಬಂದಿದೆ. ಎರಡೂ ರಾಷ್ಟ್ರಗಳು ಹಾರ್ಮುಜ್ ಜಲಸಂಧಿಯ ಮೇಲಿನ ತಮ್ಮದೇ ನಿಯಂತ್ರಣವನ್ನು ಪ್ರತಿಪಾದಿಸುತ್ತಿವೆ.


ನಿಮ್ಮ ಕಾಮೆಂಟ್ ಬರೆಯಿರಿ