ಜೀವನ್ಮರಣ ಹೋರಾಟ: ಇರಿತಕ್ಕೊಳಗಾದ್ರೂ ವಿಮಾನದ ಕಾಕ್‌ಪಿಟ್ ಬಾಗಿಲು ತೆರೆದ ಭಾರತೀಯ ಪೈಲಟ್ ; ಇದ್ರಿಂದ 174 ಜನರ ಜೀವ ಉಳಿದದ್ದು ಹೇಗೆ ?

ದುಬೈಯಿಂದ ಇಸ್ರೇಲ್‌ನ ತೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ (Flydubai) ಸಂಸ್ಥೆಯ ಎಫ್‌ಜೆ1073 (FZ1073) ವಿಮಾನದಲ್ಲಿ ಬುಧವಾರ ನಡೆದ ಘಟನೆ ಜಗತ್ತಿನ ಗಮನ ಸೆಳೆದಿದೆ. ಸಹಜ ಹಾಗೂ ಸಾಮಾನ್ಯ ಪ್ರಯಾಣವಾಗಿ ಆರಂಭವಾದ ಈ ವಿಮಾನಯಾನ ಕೆಲವೇ ಕ್ಷಣಗಳಲ್ಲಿ ಭೀಕರ ದುರಂತದ ಅಂಚಿಗೆ ತಲುಪಿತ್ತು. ಆದರೆ ಗಾಯಗೊಂಡ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತೋರಿದ ಧೈರ್ಯ, ಪ್ರಯಾಣಿಕರ ಸಮಯೋಚಿತ ಕ್ರಮ ಹಾಗೂ ಕರ್ತವ್ಯದಲ್ಲಿರದ ಪೈಲಟ್‌ಗಳ ನೆರವಿನಿಂದ 174 ಪ್ರಯಾಣಿಕರ ಜೀವ ಉಳಿದಿದೆ.
ಇಸ್ರೇಲ್ ಅಧಿಕಾರಿಗಳು ಹಾಗೂ ಪ್ರಯಾಣಿಕರು ನೀಡಿರುವ ಮಾಹಿತಿಯ ಪ್ರಕಾರ, ವಿಮಾನದ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಸಹ ಪೈಲಟ್ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ಸ್ಮಿತ್ ಮಚ್ಚಾರ್ ಪ್ರತಿರೋಧ ಮುಂದುವರಿಸಿ ಕಾಕ್‌ಪಿಟ್‌ನ ಲಾಕ್ ಮಾಡಿದ್ದ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಅವರ ಈ ನಿರ್ಧಾರವೇ ವಿಮಾನದಲ್ಲಿದ್ದವರ ಜೀವ ಉಳಿಸಲು ಪ್ರಮುಖ ಕಾರಣವಾಯಿತು.
ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಕೊನೆಗೆ ಸೌದಿ ಅರೇಬಿಯಾದ ವಾಯವ್ಯ ಭಾಗದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಮಾಡಿತು. ಗಾಯಗೊಂಡ ಸ್ಮಿತ್ ಮಚ್ಚಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ರಿಯಾದ್‌ನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಸಹ ಪೈಲಟ್‌ನನ್ನು ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ದಾಳಿಯ ಹಿಂದಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ತನಿಖೆ ಪೂರ್ಣಗೊಳ್ಳುವ ಮುನ್ನ ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಫ್ಲೈದುಬೈ ಸಂಸ್ಥೆ ಮನವಿ ಮಾಡಿದೆ.
ಸೆಪ್ಟೆಂಬರ್ 30ರಂದು ಸ್ಥಳೀಯ ಕಾಲಮಾನ ಬೆಳಿಗ್ಗೆ ಸುಮಾರು 6:49ಕ್ಕೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್‌ಆಫ್ ಆಗಿತ್ತು. ಸುಮಾರು 34 ಸಾವಿರ ಅಡಿ ಎತ್ತರಕ್ಕೆ ಏರಿದ ವಿಮಾನವು ಸೌದಿ ಅರೇಬಿಯಾ ಮೇಲ್ಭಾಗದಲ್ಲಿ ಪಶ್ಚಿಮ ದಿಕ್ಕಿಗೆ ಸಾಗುತ್ತಿತ್ತು. ಮೊದಲ ಎರಡೂವರೆ ಗಂಟೆಗಳ ಕಾಲ ಎಲ್ಲವೂ ಸಾಮಾನ್ಯವಾಗಿಯೇ ಕಂಡುಬಂದಿತ್ತು. ಪ್ರಯಾಣಿಕರ ಪ್ರಕಾರ ಯಾವುದೇ ಅಸಹಜ ಘಟನೆ ನಡೆದಿರಲಿಲ್ಲ. ಆದರೆ ಬಳಿಕ ಕಾಕ್‌ಪಿಟ್‌ನಲ್ಲಿ ನಡೆದ ಘರ್ಷಣೆ ಇಡೀ ಪರಿಸ್ಥಿತಿಯನ್ನು ಬದಲಿಸಿತು.
ಏಕಾಏಕಿ ಸಾವಿರಾರು ಅಡಿ ಕೆಳಕ್ಕೆ ಕುಸಿದ ವಿಮಾನ
ಕಾಕ್‌ಪಿಟ್‌ನಲ್ಲಿ ಏನಾಗುತ್ತಿದೆ ಎಂಬುದು ಆರಂಭದಲ್ಲಿ ಪ್ರಯಾಣಿಕರಿಗೆ ತಿಳಿದಿರಲಿಲ್ಲ. ಆದರೆ ವಿಮಾನದ ಅಸಹಜ ಚಲನೆ ದೊಡ್ಡ ಅಪಾಯ ಸಂಭವಿಸಿರುವ ಸೂಚನೆ ನೀಡಿತು.
ವಿಮಾನದ ಹಾರಾಟದ ಮಾಹಿತಿಯ ಪ್ರಕಾರ, ಅದು ಕೆಲವೇ ಕ್ಷಣಗಳಲ್ಲಿ ಸಾವಿರಾರು ಅಡಿ ಎತ್ತರ ಕಳೆದುಕೊಂಡಿತ್ತು. ಕೆಲವು ವರದಿಗಳ ಪ್ರಕಾರ ಸುಮಾರು 30 ಸೆಕೆಂಡ್‌ಗಳಲ್ಲಿ 14 ಸಾವಿರ ಅಡಿಗಿಂತ ಹೆಚ್ಚು ಕೆಳಕ್ಕೆ ಕುಸಿದಿದ್ದರೆ, ಇನ್ನು ಕೆಲವು ವಿಶ್ಲೇಷಣೆಗಳು ಒಟ್ಟು 17 ಸಾವಿರದಿಂದ 18 ಸಾವಿರ ಅಡಿವರೆಗೆ ಕೆಳಕ್ಕೆ ಇಳಿದಿರಬಹುದು ಎಂದು ಹೇಳಿವೆ.
ಪ್ರಯಾಣಿಕ ಅಲ್ಮೋಗ್ ಇಟಾಲಿ ರಾಯಿಟರ್ಸ್‌ಗೆ ನೀಡಿದ ಹೇಳಿಕೆಯಲ್ಲಿ, ಮೊದಲಿಗೆ ಇದು ಭಾರೀ ಗಾಳಿಯ ಅಲೆಗಳ ಪರಿಣಾಮ ಎಂದು ಭಾವಿಸಿದ್ದೆವು. “ವಿಮಾನ ಸುಮಾರು 20ರಿಂದ 30 ಸೆಕೆಂಡ್‌ಗಳ ಕಾಲ ಕೆಳಕ್ಕೆ ಇಳಿಯುತ್ತಿತ್ತು. ಬಳಿಕ ಸ್ವಲ್ಪ ಸ್ಥಿರವಾಯಿತು. ನಂತರ ಮತ್ತೆ ಕೆಳಕ್ಕೆ ಇಳಿಯಲು ಆರಂಭಿಸಿತು” ಎಂದು ಹೇಳಿದ್ದಾರೆ.
ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಇದು ಸಾಮಾನ್ಯ ಗಾಳಿಯ ಅಲೆಗಳ ಪರಿಣಾಮವಲ್ಲ ಎಂಬುದು ಗೊತ್ತಾಗತೊಡಗಿತು. ಕಾಕ್‌ಪಿಟ್ ಬಳಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಮಾನವು ತುರ್ತು ಪರಿಸ್ಥಿತಿಯನ್ನು ಸೂಚಿಸುವ 7700 ಕೋಡ್ ಹಾಗೂ ಅಕ್ರಮ ಮಧ್ಯಪ್ರವೇಶ ಅಥವಾ ವಿಮಾನ ಅಪಹರಣದ ಸಾಧ್ಯತೆಯನ್ನು ಸೂಚಿಸುವ 7500 ಕೋಡ್‌ಗಳನ್ನು ಪ್ರಸಾರ ಮಾಡಿರುವುದೂ ದಾಖಲಾಗಿದೆ.
ಕಾಕ್‌ಪಿಟ್ ಒಳಗೆ ನಡೆದಿದ್ದೇನು?
ಘಟನೆಯ ಅತ್ಯಂತ ನಾಟಕೀಯ ಭಾಗ ಕಾಕ್‌ಪಿಟ್‌ನಲ್ಲೇ ನಡೆದಿತ್ತು. ನೆತನ್ಯಾಹು ಅವರ ವಕ್ತಾರ ಡೊರೊನ್ ಸ್ಪೀಲ್‌ಮನ್ ನೀಡಿದ ವಿವರಗಳ ಪ್ರಕಾರ, ಚಾಕು ದಾಳಿಯಿಂದ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ರಕ್ತಸಿಕ್ತ ಸ್ಥಿತಿಯಲ್ಲಿ ಕಾಕ್‌ಪಿಟ್ ನೆಲದ ಮೇಲೆ ಬಿದ್ದಿದ್ದರು. ಆದರೂ ಉಳಿದಿದ್ದ ಶಕ್ತಿಯನ್ನು ಬಳಸಿ ಅವರು ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಅಲ್ಲದೆ ಅವರು ಸಹಾಯ ಮಾಡುವಂತೆ ಕೂಗಿದರು.
ವಾಣಿಜ್ಯ ವಿಮಾನಗಳ ಕಾಕ್‌ಪಿಟ್‌ಗಳು ಸಾಮಾನ್ಯವಾಗಿ ಹಾರಾಟದ ವೇಳೆ ಬೀಗ ಹಾಕಿರುತ್ತವೆ. ಹೀಗಾಗಿ ಹೊರಗಿರುವವರು ಸುಲಭವಾಗಿ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ. ಆದರೆ ಬಾಗಿಲು ತೆರೆಯುತ್ತಿದ್ದಂತೆ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಒಳಗೆ ಏನಾಗುತ್ತಿದೆ ಎಂಬುದು ಗೊತ್ತಾಗಿ ಅವರು ಮಧ್ಯಪ್ರವೇಶಿಸಲು ಸಾಧ್ಯವಾಯಿತು.
ಸ್ಪೀಲ್‌ಮನ್ ಪ್ರಕಾರ, ಅಪಾಯ ಅರಿತ ಕೆಲ ಪ್ರಯಾಣಿಕರು ತಕ್ಷಣ ಕಾಕ್‌ಪಿಟ್ ಕಡೆಗೆ ಧಾವಿಸಿದರು. ಅಲ್ಲಿ ಗಾಯಗೊಂಡಿದ್ದ ಕ್ಯಾಪ್ಟನ್ ನೆಲದ ಮೇಲೆ ಬಿದ್ದಿದ್ದರೆ, ಮತ್ತೊಬ್ಬ ಪೈಲಟ್ ನಿಯಂತ್ರಣ ಸಾಧನಗಳ ಬಳಿ ನಿಂತಿದ್ದ ಎಂದು ಅವರು ಹೇಳಿದ್ದಾರೆ.
https://x.com/CineLabHQ/status/2105393575722971418
ಪ್ರಯಾಣಿಕನ ಧೈರ್ಯ
ಇಸ್ರೇಲ್‌ನ ಪ್ಲಂಬರ್ ಯಾನಿವ್ ಹಯೂನ್ ಬಳಿಕ ತಾನು ಕಂಡ ದೃಶ್ಯವನ್ನು ವಿವರಿಸಿದ್ದಾನೆ. ವಿಮಾನ ಏಕಾಏಕಿ ತೀವ್ರವಾಗಿ ಕೆಳಮುಖವಾಗಿ ಇಳಿಯತೊಡಗಿದಾಗ ತಾನು ಮುಂಭಾಗದತ್ತ ಎಸೆಯಲ್ಪಟ್ಟೆ ಎಂದು ಹೇಳಿರುವ ಹಯೂನ್, ನಂತರ ಕಾಕ್‌ಪಿಟ್‌ಗೆ ಪ್ರವೇಶಿಸಿ ದಾಳಿಕೋರನನ್ನು ಹಿಡಿದು ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ನಿಯಂತ್ರಣಕ್ಕೆ ತಂದೆ ಎಂದು ತಿಳಿಸಿದ್ದಾರೆ. ನಂತರ ಕೆಲ ಕ್ಷಣಗಳ ಕಾಲ ವಿಮಾನದ ನಿಯಂತ್ರಣ ಸಾಧನಗಳನ್ನು ತಾನೇ ಹಿಡಿದಿದ್ದೆ ಎಂದು ಹೇಳಿದ ಹಯೂನ್, “ಆ ನಂತರ ವಿಮಾನ ಸ್ವಲ್ಪ ಮಟ್ಟಿಗೆ ಸ್ಥಿರವಾಗತೊಡಗಿತು. ಬಳಿಕ ಮೂರನೇ ಪೈಲಟ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು” ಎಂದು ಹೇಳಿದ್ದಾರೆ.
ನೆತನ್ಯಾಹು ಅವರ ಪ್ರಕಾರ, ದಾಳಿಕೋರ ಪೈಲಟ್ ವಿಮಾನದ ಸಾಧನಗಳಲ್ಲಿ ತೊಂದರೆ ಉಂಟುಮಾಡಲು ಯತ್ನಿಸುತ್ತಿದ್ದುದನ್ನು ಹಯೂನ್ ಗಮನಿಸಿದ್ದರು. ಹಯೂನ್ ನಿಯಂತ್ರಣ ಸಾಧನಗಳನ್ನು ಹಿಂದಕ್ಕೆ ಎಳೆದರೆ, ಮತ್ತೊಬ್ಬ ಪ್ರಯಾಣಿಕ ಹಾಗೂ ಸಿಬ್ಬಂದಿ ಸೇರಿ ದಾಳಿಕೋರನನ್ನು ನಿಯಂತ್ರಣಕ್ಕೆ ತಂದರು ಎಂದು ಅವರು ಹೇಳಿದ್ದಾರೆ.
ಘಟನೆಯ ನಂತರ ಹಲವಾರು ಪ್ರಯಾಣಿಕರು ಹಾಗೂ ಸಿಬ್ಬಂದಿ ಕಾಕ್‌ಪಿಟ್ ಕಡೆಗೆ ತೆರಳಿ ದಾಳಿಕೋರನನ್ನು ಹಿಡಿದುಕೊಳ್ಳಲು ನೆರವಾದರು ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಇಬ್ಬರು ರಕ್ತಸಿಕ್ತ ವ್ಯಕ್ತಿಗಳು ನೆಲದ ಮೇಲೆ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ನಂತರ ಕಾಕ್‌ಪಿಟ್ ಬಳಿ ಪ್ರಯಾಣಿಕರು ಕಾವಲು ನಿಂತಿರುವ ದೃಶ್ಯಗಳೂ ಕಾಣಿಸಿಕೊಂಡಿವೆ.
ಪ್ರಯಾಣಿಕ ಡ್ಯಾನ್ ಸೋಲೆನ್ ಅವರ ಪ್ರಕಾರ, ಹಿಂಭಾಗದಲ್ಲಿ ಕುಳಿತಿದ್ದವರಿಗೆ ನೇರವಾಗಿ ಏನಾಗಿದೆ ಎಂಬುದು ಗೊತ್ತಾಗಲಿಲ್ಲ. ಆದರೆ ಮುಂಭಾಗದಿಂದ ಜನರು ಹೊರಬರಲು ಆರಂಭಿಸಿದಾಗ ಏನೋ ದೊಡ್ಡ ಸಮಸ್ಯೆ ನಡೆದಿದೆ ಎಂಬುದು ಅರಿವಾಯಿತು. “ಕಾಕ್‌ಪಿಟ್‌ನಿಂದ ಹೊರಬಂದವರ ಮೇಲೆ ರಕ್ತ ಕಾಣಿಸುತ್ತಿತ್ತು” ಎಂದು ಅವರು ಹೇಳಿದ್ದಾರೆ.
ಕರ್ತವ್ಯದಲ್ಲಿರದ ಪೈಲಟ್‌ಗಳ ಪಾತ್ರ
ಈ ವಿಮಾನದಲ್ಲಿ ಫ್ಲೈದುಬೈ ಸಂಸ್ಥೆಯ ಹೆಚ್ಚುವರಿ ಪೈಲಟ್‌ಗಳು ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದರು. ಘರ್ಷಣೆ ನಿಯಂತ್ರಣಕ್ಕೆ ಬಂದ ಬಳಿಕ ಅವರು ಕಾಕ್‌ಪಿಟ್ ಪ್ರವೇಶಿಸಿ ವಿಮಾನದ ನಿಯಂತ್ರಣವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಫ್ಲೈದುಬೈ ವಕ್ತಾರರ ಪ್ರಕಾರ, ವಿಮಾನದಲ್ಲಿದ್ದ ಕಾಯ್ದಿಟ್ಟ ಸಿಬ್ಬಂದಿ ತಂಡ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿತು.
ಸೌದಿ-ಜೋರ್ಡಾನ್ ಗಡಿ ಭಾಗದ ಸಮೀಪಕ್ಕೆ ತಲುಪಿದ್ದ ವಿಮಾನ ಬಳಿಕ ದಿಕ್ಕು ಬದಲಿಸಿ ತಬುಕ್ ಕಡೆಗೆ ಮರಳಿತ್ತು. ಸ್ಥಳೀಯ ಕಾಲಮಾನ ಬೆಳಿಗ್ಗೆ 8:44ಕ್ಕೆ ಸೌದಿ ಅಧಿಕಾರಿಗಳಿಗೆ ತುರ್ತು ಸಂದೇಶ ತಲುಪಿತ್ತು. ಕೊನೆಗೆ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು. ಇಬ್ಬರು ಪೈಲಟ್‌ಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮುಂದೇನಾಯಿತು?
ತುರ್ತು ಭೂಸ್ಪರ್ಶದ ಬಳಿಕ ಪ್ರಯಾಣಿಕರನ್ನು ತಬುಕ್‌ನಲ್ಲಿ ಇರಿಸಲಾಗಿತ್ತು. ಬಳಿಕ ಪರ್ಯಾಯ ವಿಮಾನದ ಮೂಲಕ ಅವರನ್ನು ಇಸ್ರೇಲ್‌ಗೆ ಕಳುಹಿಸಲಾಯಿತು.
ಸೌದಿ ಅರೇಬಿಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಕೇಂದ್ರ (National Transport Safety Center) ಈ ಘಟನೆಯ ತನಿಖೆ ಆರಂಭಿಸಿದೆ. ಕಾಕ್‌ಪಿಟ್‌ನಲ್ಲಿ ನಿಖರವಾಗಿ ಏನಾಯಿತು, ಘರ್ಷಣೆಗೆ ಕಾರಣವೇನು, ವಿಮಾನ ಸಾವಿರಾರು ಅಡಿ ಕೆಳಕ್ಕೆ ಕುಸಿಯಲು ಕಾರಣವಾದ ಅಂಶಗಳು ಯಾವುವು ಹಾಗೂ ಪ್ರಯಾಣಿಕರು ಮತ್ತು ಸಿಬ್ಬಂದಿ ಹೇಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸಲಿದ್ದಾರೆ.
ಸಹ ಪೈಲಟ್ ಉದ್ದೇಶಪೂರ್ವಕವಾಗಿ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ ಎಂಬ ಆರೋಪಗಳು ಕೇಳಿಬಂದಿದ್ದರೂ, ತನಿಖೆ ಪೂರ್ಣಗೊಳ್ಳುವ ಮುನ್ನ ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಫ್ಲೈದುಬೈ ತಿಳಿಸಿದೆ.
ಯಾರು ಈ ಸ್ಮಿತ್ ಮಚ್ಚಾರ್?
ಸ್ಮಿತ್ ಮಚ್ಚಾರ್ ಭಾರತೀಯ ಪ್ರಜೆ ಆಗಿದ್ದು, ಅವರಿಗೆ 13 ವರ್ಷಕ್ಕಿಂತ ಹೆಚ್ಚು ವಾಣಿಜ್ಯ ವಿಮಾನ ಚಾಲನಾ ಅನುಭವವಿದೆ. ಅವರು 11 ವರ್ಷಗಳಿಗೂ ಹೆಚ್ಚು ಕಾಲ ಸ್ಪೈಸ್‌ಜೆಟ್‌ನಲ್ಲಿ ಸೇವೆ ಸಲ್ಲಿಸಿದ್ದರು. 2022ರ ಜೂನ್‌ನಲ್ಲಿ ಫ್ಲೈದುಬೈ ಸಂಸ್ಥೆಗೆ ಕ್ಯಾಪ್ಟನ್ ಆಗಿ ಸೇರಿದ್ದರು.
ರಿಯಾದ್‌ನ ಭಾರತೀಯ ರಾಯಭಾರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ತಬುಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದೆ. ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು ಅಗತ್ಯ ನೆರವು ನೀಡಲಾಗುತ್ತಿದೆ ಎಂದು ರಾಯಭಾರ ಕಚೇರಿ ಹೇಳಿದೆ.
ನೆತನ್ಯಾಹು ಮತ್ತು ಮೋದಿಯಿಂದ ಪ್ರಶಂಸೆ
ಇಸ್ರೇಲ್‌ಗೆ ಮರಳಿದ ಪ್ರಯಾಣಿಕರ ಬಳಿಕ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾರ್ವಜನಿಕವಾಗಿ ಸ್ಮಿತ್ ಮಚ್ಚಾರ್ ಅವರನ್ನು ಶ್ಲಾಘಿಸಿದರು.”ಅಸಾಧಾರಣ ಧೈರ್ಯ ತೋರಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ನನ್ನ ವಂದನೆಗಳು” ಎಂದು ಅವರು ಹೇಳಿದರು.
ಗಂಭೀರವಾಗಿ ಗಾಯಗೊಂಡಿದ್ದರೂ ಅವರು ಪ್ರತಿರೋಧ ತೋರಿದರು, ಕಾಕ್‌ಪಿಟ್ ಬಾಗಿಲು ತೆರೆದರು ಹಾಗೂ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ದಾಳಿಕೋರನನ್ನು ನಿಯಂತ್ರಣಕ್ಕೆ ತರಲು ಅವಕಾಶ ಮಾಡಿಕೊಟ್ಟರು ಎಂದು ನೆತನ್ಯಾಹು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸ್ಮಿತ್ ಮಚ್ಚಾರ್ ಅವರನ್ನು “ಹೀರೋ” ಎಂದು ಕರೆದಿದ್ದಾರೆ. “ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲೂ, ಗಂಭೀರ ಗಾಯಗಳ ನಡುವೆಯೂ ಇತರರ ಜೀವ ರಕ್ಷಿಸಲು ಅವರು ಅಚಲ ಸಂಕಲ್ಪ ಮತ್ತು ಅಪಾರ ಧೈರ್ಯ ಪ್ರದರ್ಶಿಸಿದ್ದಾರೆ. ಅವರ ಸಾಹಸ ದೊಡ್ಡ ದುರಂತವನ್ನು ತಪ್ಪಿಸಿದೆ. ಭಾರತ ಅವರಿಗೆ ಹೆಮ್ಮೆಪಡುತ್ತದೆ” ಎಂದು ಮೋದಿ ಹೇಳಿದ್ದಾರೆ. ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುವುದಾಗಿ ಕೂಡ ತಿಳಿಸಿದ್ದಾರೆ.
ಟ್ರಂಪ್ ಏನು ಹೇಳಿದರು?
ಯುಎಇಯ ದುಬೈಯಿಂದ ಇಸ್ರೇಲ್‌ನ ತೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಘಟನೆಯ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಈ ಘಟನೆಯ ಬಗ್ಗೆ ನಾನು ನೆತನ್ಯಾಹು ಅವರೊಂದಿಗೆ ವಿವರವಾಗಿ ಮಾತನಾಡಿದ್ದೇನೆ. ಸಹ ಪೈಲಟ್ ಒಬ್ಬ ಭಯೋತ್ಪಾದಕನಾಗಿರಬಹುದು ಅಥವಾ ಮಾನಸಿಕ ಅಸ್ಥಿರತೆ ಹೊಂದಿದ್ದ ವ್ಯಕ್ತಿಯಾಗಿರಬಹುದು ಎಂದು ನನಗೆ ತಿಳಿಸಲಾಗಿದೆ” ಎಂದು ಹೇಳಿದರು.
ಗಾಯಗೊಂಡಿದ್ದರೂ ಸ್ಮಿತ್ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯಲು ಯಶಸ್ವಿಯಾದರು ಮತ್ತು ಸಹಾಯಕ್ಕಾಗಿ ಕೂಗಿದರು ಎಂದು ನೆತನ್ಯಾಹು ಅವರಿಂದ ಮಾಹಿತಿ ಪಡೆದಿರುವುದಾಗಿ ಟ್ರಂಪ್ ಹೇಳಿದರು.
ಈ ವೇಳೆ ಇಸ್ರೇಲ್ ಮೂಲದ ಪ್ರಯಾಣಿಕ ಯಾನಿವ್ ಹಯೂನ್ ಅವರ ಪಾತ್ರವನ್ನೂ ಟ್ರಂಪ್ ಉಲ್ಲೇಖಿಸಿದರು. ಕಾಕ್‌ಪಿಟ್‌ಗೆ ನುಗ್ಗಿ ಸಹ ಪೈಲಟ್‌ನನ್ನು ನಿಯಂತ್ರಿಸಲು ಅವರು ನೆರವಾದರು ಎಂದು ಟ್ರಂಪ್ ಹೇಳಿದ್ದಾರೆ. ಅದೇ ವೇಳೆ, ವಿಮಾನ ಹಾರಾಟದ ಬಗ್ಗೆ ಯಾವುದೇ ವೃತ್ತಿಪರ ತರಬೇತಿ ಇಲ್ಲದಿದ್ದರೂ, ಟಿವಿಯಲ್ಲಿ ಪ್ರಸಾರವಾಗುವ Air Disasters ಕಾರ್ಯಕ್ರಮವನ್ನು ನಿರಂತರವಾಗಿ ನೋಡುತ್ತಿದ್ದ ಕಾರಣ ವಿಮಾನ ನಿಯಂತ್ರಣದ ಕೆಲವು ಮೂಲಭೂತ ಅಂಶಗಳ ಬಗ್ಗೆ ತಿಳಿದಿದ್ದೇನೆ ಎಂದು ಆ ಪ್ರಯಾಣಿಕ ಹೇಳಿದ್ದಾನೆ ಎಂದು ಟ್ರಂಪ್ ತಿಳಿಸಿದರು. ನಂತರ ವಿಮಾನದ ಹಿಂಭಾಗದಲ್ಲಿ ಕುಳಿತಿದ್ದ ಹೆಚ್ಚುವರಿ ಪೈಲಟ್‌ಗಳು ಹಾಗೂ ಭದ್ರತಾ ಸಿಬ್ಬಂದಿ ಕಾಕ್‌ಪಿಟ್‌ಗೆ ಆಗಮಿಸಿ ವಿಮಾನದ ನಿಯಂತ್ರಣ ವಹಿಸಿಕೊಂಡರು ಎಂದು ಟ್ರಂಪ್ ಹೇಳಿದರು. “ಇದು ನಾನು ಕೇಳಿರುವ ಅತ್ಯಂತ ಅದ್ಭುತ ಘಟನೆಗಳಲ್ಲಿ ಒಂದು” ಎಂದು ಅವರು ಅಭಿಪ್ರಾಯಪಟ್ಟರು. ಆದರೆ ಈ ಎಲ್ಲ ವಿವರಗಳನ್ನು ತಾವು ಸ್ವತಂತ್ರವಾಗಿ ಪರಿಶೀಲಿಸಿಲ್ಲ ಎಂದೂ ಟ್ರಂಪ್ ಸ್ಪಷ್ಟಪಡಿಸಿದರು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement