ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಟಿಕ್‌ಟಾಕ್ ವಿಡಿಯೊ ಚಿತ್ರೀಕರಣಕ್ಕೆ ಪಂಜರದಿಂದ ಹುಲಿ ಹೊರತಂದು ಹುಚ್ಚಾಟ ; ದಾಳಿಗೆ 19 ವರ್ಷದ ಯುವಕ ಸಾವು ; ಇಬ್ಬರ ಬಂಧನ

ಟಿಕ್‌ಟಾಕ್‌ ವಿಡಿಯೊಗಾಗಿ ನಡೆಸಿದ ಸಾಹಸ ದುರಂತದಲ್ಲಿ ಅಂತ್ಯಗೊಂಡಿದ್ದು, ಹೆಣ್ಣುಹುಲಿ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಟಿಕ್‌ಟಾಕ್‌ ವಿಡಿಯೊ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಹೆಣ್ಣುಹುಲಿ ದಾಳಿ ನಡೆಸಿ 19 ವರ್ಷದ ಯುವಕನನ್ನು ಕೊಂದು ಹಾಕಿದ್ದು, ಈ ಘಟನೆ ಪಾಕಿಸ್ತಾನದ ಲಾಹೋರ್ ಸಮೀಪದ ಕಹ್ನಾ ಪ್ರದೇಶದಲ್ಲಿರುವ ಖಾಸಗಿ ಫಾರ್ಮ್‌ಹೌಸ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಫಾರ್ಮ್‌ಹೌಸ್ ಮಾಲೀಕ ಹಾಗೂ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನೌಮನ್ ಹಸನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮ್ಯಾಂಚೆಸ್ಟರ್ ಈವ್ನಿಂಗ್ ನ್ಯೂಸ್ ವರದಿ ಮಾಡಿದೆ.
ವರದಿಯ ಪ್ರಕಾರ, ಕಂಟೆಂಟ್ ಕ್ರಿಯೇಟರ್ ನೌಮನ್ ಹಸನ್ ಅವರ ಮನವಿಯ ಮೇರೆಗೆ ಟಿಕ್‌ಟಾಕ್ ವಿಡಿಯೊ ಚಿತ್ರೀಕರಣಕ್ಕಾಗಿ ಹೆಣ್ಣುಹುಲಿಯನ್ನು ಅದರ ಪಂಜರದಿಂದ ಹೊರಗೆ ಬಿಡಲಾಗಿತ್ತು. ಈ ಸಂದರ್ಭದಲ್ಲಿ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ತಲ್ಹಾನನ್ನೂ ವಿಡಿಯೊ ಚಿತ್ರೀಕರಣದಲ್ಲಿ ಭಾಗವಹಿಸುವಂತೆ ನೌಮನ್ ಹಸನ್ ಕರೆದಿದ್ದ ಎನ್ನಲಾಗಿದೆ. ಚಿತ್ರೀಕರಣ ನಡೆಯುತ್ತಿದ್ದ ವೇಳೆ ಹುಲಿ ಏಕಾಏಕಿ ತಲ್ಹಾ ಮೇಲೆ ದಾಳಿ ನಡೆಸಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ತಲ್ಹಾ ಅವರ ತಂದೆ ಮುನೀರ್ ಅಹ್ಮದ್, ಸಹೋದರ ಹಾಶಿಮ್ ಹಾಗೂ ಚಿಕ್ಕಪ್ಪ ಅಬ್ದುಲ್ ಖಯೂಮ್ ಸಹ ಇದೇ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತಾರೆ ಎನ್ನಲಾಗಿದ್ದು, ಈ ಘಟನೆಯ ಸಮಯದಲ್ಲಿ ಅವರು ಅಲ್ಲಿಯೇ ಇದ್ದರು ಎಂದು ಕೆಲ ವರದಿಗಳು ಹೇಳುತ್ತವೆ.
ಫಾರ್ಮ್‌ಹೌಸ್ ಆವರಣದಲ್ಲೇ ಹುಲಿಗಳ ಸಂತಾನೋತ್ಪತ್ತಿ ಕೇಂದ್ರವೊಂದನ್ನು ನಿರ್ವಹಿಸಲಾಗುತ್ತಿತ್ತು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಫಾರ್ಮ್‌ಹೌಸ್ ಮಾಲೀಕ ಫಯಾಜ್ ಹಾಗೂ ಟಿಕ್‌ಟಾಕ್ ಇನ್‌ಫ್ಲುಯೆನ್ಸರ್ ನೌಮನ್ ಹಸನ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ನೌಮನ್ ಹಸನ್ ಆರಂಭದಲ್ಲಿ ತಲ್ಹಾ ಮೇಲೆ ನಾಯಿಯೊಂದು ದಾಳಿ ನಡೆಸಿದೆ ಎಂದು ಹೇಳಿದ್ದ ಎನ್ನಲಾಗಿದೆ. ಆದರೆ, ಪೊಲೀಸರು ನಡೆಸಿದ ಮುಂದಿನ ತನಿಖೆಯಲ್ಲಿ ಯುವಕನ ಸಾವಿಗೆ ಹೆಣ್ಣುಹುಲಿಯ ದಾಳಿಯೇ ಕಾರಣ ಎಂಬುದು ತಿಳಿದುಬಂದಿದೆ.
ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಲಾಹೋರ್ ಪೊಲೀಸರು, ವಿಡಿಯೊ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆ ಹಾಗೂ ಸುರಕ್ಷತಾ ಕ್ರಮಗಳಲ್ಲಿನ ನಿರ್ಲಕ್ಷ್ಯದ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
“ಟಿಕ್‌ಟಾಕ್ ಮೇಲಿನ ಆಸಕ್ತಿ ಮನುಷ್ಯನ ಜೀವಕ್ಕಿಂತ ಮುಖ್ಯವಾಗಲು ಸಾಧ್ಯವಿಲ್ಲ. ಹವ್ಯಾಸ ಅಥವಾ ಮನರಂಜನೆಯ ಹೆಸರಿನಲ್ಲಿ ಯಾರೊಬ್ಬರ ಜೀವವನ್ನೂ ಅಪಾಯಕ್ಕೆ ಸಿಲುಕಿಸಲು ಅವಕಾಶ ನೀಡಲಾಗುವುದಿಲ್ಲ. ಘಟನೆಯ ನೈಜ ಸಂಗತಿಗಳನ್ನು ಮರೆಮಾಚಲು ನಡೆದ ಪ್ರಯತ್ನ ಹಾಗೂ ನಿರ್ಲಕ್ಷ್ಯದ ಪ್ರತಿಯೊಂದು ಅಂಶವನ್ನೂ ತನಿಖೆಗೆ ಒಳಪಡಿಸಲಾಗುವುದು” ಎಂದು ಪೊಲೀಸರು ಹೇಳಿದ್ದಾರೆ.
https://x.com/indyurdu/status/2120830005215170893
https://x.com/Lahorepoliceops/status/2120791393224593756?ref_src=twsrc%5Etfw%7Ctwcamp%5Etweetembed%7Ctwterm%5E2120791393224593756%7Ctwgr%5E9cd64afdf20f350b066d1bd19c95f4555ca20c09%7Ctwcon%5Es1_&ref_url=https%3A%2F%2Fwww.ndtv.com%2Foffbeat%2Ftigress-mauls-pak-teen-to-death-at-tiktok-video-shoot-influencer-arrested-12321948
ಫಾರ್ಮ್‌ಹೌಸ್‌ನಲ್ಲಿ ಹುಲಿ ಸಾಕಲು ಅಗತ್ಯವಾದ ಅಧಿಕೃತ ಅನುಮತಿ ಪಡೆಯಲಾಗಿತ್ತೇ, ಪ್ರಾಣಿಯನ್ನು ನಿರ್ವಹಿಸಲು ಸೂಕ್ತ ಸುರಕ್ಷತಾ ವ್ಯವಸ್ಥೆಗಳನ್ನು ಮಾಡಲಾಗಿತ್ತೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಹುಲಿಯನ್ನು ಅದರ ಆವರಣದಿಂದ ಹೊರಗೆ ತಂದ ಸಂದರ್ಭ ಹಾಗೂ ಈ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬುದನ್ನೂ ತನಿಖೆ ಮಾಡಲಾಗುತ್ತಿದೆ.
ನೌಮನ್ ಹಸನ್ ಸಾಮಾಜಿಕ ಜಾಲತಾಣಗಳಲ್ಲಿ ಹುಲಿ ಸೇರಿದಂತೆ ವಿವಿಧ ದೊಡ್ಡ ಕಾಡುಪ್ರಾಣಿಗಳೊಂದಿಗಿನ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಗುರುತಿಸಿಕೊಂಡಿದ್ದಾನೆ. ಈ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ವಿಡಿಯೊವೊಂದರಲ್ಲಿ ಸರಪಳಿಯಿಂದ ಕಟ್ಟಿಹಾಕಲಾಗಿದ್ದ ಹುಲಿಯೊಂದಕ್ಕೆ ಮುತ್ತು ನೀಡಲು ಆತ ಪ್ರಯತ್ನಿಸುತ್ತಿರುವುದು ಕಂಡುಬಂದಿತ್ತು.
ಮತ್ತೊಂದು ವಿಡಿಯೊದಲ್ಲಿ ಚಿರತೆಯೊಂದನ್ನು ಮುದ್ದಿಸುತ್ತಿದ್ದಾಗ, ಆ ಪ್ರಾಣಿ ಏಕಾಏಕಿ ಆತನತ್ತ ಜಿಗಿದು ಮೈಯನ್ನು ಪರಚಿರುವ ದೃಶ್ಯ ಸೆರೆಯಾಗಿತ್ತು. ಇದೀಗ ಟಿಕ್‌ಟಾಕ್ ವಿಡಿಯೊ ಚಿತ್ರೀಕರಣದ ವೇಳೆ ನಡೆದ ಹುಲಿಹೆಣ್ಣಿನ ದಾಳಿಗೆ ಯುವಕನೊಬ್ಬ ಬಲಿಯಾಗಿರುವ ಘಟನೆ, ಕಾಡುಪ್ರಾಣಿಗಳೊಂದಿಗೆ ಅಸುರಕ್ಷಿತವಾಗಿ ವರ್ತಿಸುವುದರ ಅಪಾಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement