ಬೆರಗುಗೊಳಿಸುವ ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಟರ್ಕಿಯಲ್ಲಿ ಹೆಣ್ಣು ನಾಯಿಯೊಂದು ತನ್ನ ಪ್ರಜ್ಞಾಹೀನ ಮರಿಯನ್ನು ಹತ್ತಿರದ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಕೊಂಡೊಯ್ದ ಅಪರೂಪದ ವಿದ್ಯಮಾನ ನಡೆದಿದೆ. ಜನವರಿ 13 ರಂದು ಟರ್ಕಿಯ ಬೇಲಿಕ್ಡುಜು ಆಲ್ಫಾ ವೆಟರ್ನರಿ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದ್ದು, ತಾಯಿ ನಾಯಿ ತನ್ನ ನಿರ್ಜೀವವಾದ ನಾಯಿಮರಿಯನ್ನು ಬಾಯಿಯಲ್ಲಿ ಕಚ್ಚಿಹಿಡಿದುಕೊಂಡು ಸಹಾಯಕ್ಕಾಗಿ ನೇರವಾಗಿ ಪಶು ಚಿಕಿತ್ಸಾಲಯಕ್ಕೆ ಧಾವಿಸುತ್ತಿರುವುದು ಕಂಡುಬಂದಿದೆ.
ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ತಾಯಿ ನಾಯಿ ತನ್ನ ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಕ್ಲಿನಿಕ್‌ಗೆ ಧಾವಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಅದು ಮಾನವನ ಸಹಾಯಕ್ಕಾಗಿ ಕಾಯದೆ, ತನ್ನ ಚಿಕ್ಕ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಸಮಯಕ್ಕೆ ಸರಿಯಾಗಿ ಪಶು ಚಿಕಿತ್ಸಾಲಯವನ್ನು ತಲುಪಿದೆ. ಹೆಣ್ಣು ನಾಯಿಯ ಈ ತ್ವರಿತ ಸ್ಪಂದನೆಯು ಅದರ ಅಸಾಧಾರಣ ತಿಳಿವಳಿಕೆಯನ್ನು ತೋರಿಸಿದೆ ಮತ್ತು ತನ್ನ ಮರಿಯನ್ನು ಉಳಿಸುವ ಹತಾಶ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.
ಅದೃಷ್ಟವಶಾತ್, ಹೆಣ್ಣು ನಾಯಿಯ ಪ್ರಯತ್ನವು ಫಲ ನೀಡಿತು. ಪ್ರಜ್ಞಾಹೀನ ಸ್ಥಿತಿಯಲ್ಲಿ ಮತ್ತು ಹೈಪೋಥರ್ಮಿಕ್ ಸ್ಥಿತಿಯಲ್ಲಿ ಬಂದ ನಾಯಿಮರಿಯನ್ನು ಪಶುವೈದ್ಯ ತಂಡ ಯಶಸ್ವಿಯಾಗಿ ಪುನರುಜ್ಜೀವನಗೊಳಿಸಿತು. ಆರು ಮರಿಗಳಲ್ಲಿ ಬದುಕಿರುವ ಎರಡು ಮರಿಗಳಲ್ಲಿ ಈ ನಾಯಿಮರಿಯೂ ಒಂದು ಎಂದು ವರದಿಗಳು ಸೂಚಿಸುತ್ತವೆ. ಅನಾರೋಗ್ಯ ಹೊಂದಿದ್ದ ನಾಯಿಮರಿ ಮತ್ತು ಮತ್ತೊಂದು ಮರಿ ಎರಡೂ ಈಗ ತಮ್ಮ ನಿಷ್ಠಾವಂತ ತಾಯಿಯೊಂದಿಗೆ ಕ್ಲಿನಿಕ್‌ನಲ್ಲಿ ಆರೈಕೆಯಲ್ಲಿವೆ.
ಪಶುವೈದ್ಯ ಬಟುರಾಲ್ಪ್ ಡೋಗನ್ ಅವರು ಈ ಹೃದಯಸ್ಪರ್ಶಿ ವಿದ್ಯಮಾನವನ್ನು ಹಂಚಿಕೊಂಡಿದ್ದಾರೆ, ತಾಯಿ ನಾಯಿ ಮರಿಯನ್ನು ಕಚ್ಚಿಕೊಂಡು ಬಂದ ಬಂದ ನಂತರ ತ್ವರಿತವಾಗಿ ಸ್ಪಂದಿಸಿದ್ದಕ್ಕಾಗಿ ಅವರು ತಮ್ಮ ಸಹೋದ್ಯೋಗಿ ಎಮಿರ್ ಅವರನ್ನು ಶ್ಲಾಘಿಸಿದ್ದಾರೆ. “ಮೊದಲಿಗೆ, ಏನಾಗುತ್ತಿದೆ ಎಂಬುದನ್ನು ಗ್ರಹಿಸಲು ಎಮಿರ್ ಅವರಿಗೆ ಸಾಧ್ಯವಾಗಲಿಲ್ಲ” ಎಂದು ಡೋಗನ್ ಹೇಳಿದರು.
“ನಾಯಿಯು ತನ್ನ ಬಾಯಲ್ಲಿ ನಾಯಿಮರಿಯನ್ನು ಕಚ್ಚಿಕೊಂಡು ನಡೆದುಕೊಂಡು ಬಂದು ನಿಮ್ಮ ಪಾದಗಳಿಗೆ ಬೀಳುವುದನ್ನು ನೀವು ಪ್ರತಿದಿನ ನೋಡುವುದಿಲ್ಲ ಎಂದು ಅಪರೂಪದ ಘಟನೆ ಬಗ್ಗೆ ಹೇಳಿದರು.
ಪಶುವೈದ್ಯಕೀಯ ತಂಡವು ಆರಂಭದಲ್ಲಿ ಮರಿಯ ಬಗ್ಗೆ ಹೆದರಿತ್ತು. ಎಮಿರ್ ನಾಯಿಮರಿಯನ್ನು “ಮಂಜುಗಡ್ಡೆಯಂತೆ ತಂಪಾಗಿತ್ತು” ಮತ್ತು ಚಲನರಹಿತವಾಗಿತ್ತು ಎಂದು ವಿವರಿಸಿದರು, ಅದು ಸತ್ತಿರಬಹುದು ಎಂದು ನಂಬಿಕೆ ಬರುವಂತೆ ಇತ್ತು, ಆದರೆ ಹತ್ತಿರದಿಂದ ಪರೀಕ್ಷಿಸಿದಾಗ, ಅದರ ದುರ್ಬಲ ಹೃದಯ ಬಡಿತಯುತ್ತಿರುವುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.
“ಹೃದಯವು ತುಂಬಾ ನಿಧಾನವಾಗಿ ಬಡಿಯುತ್ತಿತ್ತು, ನನ್ನ ಸ್ಟೆತೊಸ್ಕೋಪ್‌ನಿಂದ ನಾನು ಅದನ್ನು ಕೇಳಲು ಸಾಧ್ಯವಾಗಲಿಲ್ಲ” ಎಂದು ಡೋಗನ್ ವಿವರಿಸಿದರು. “ನಾನು ಸೂಜಿಯೊಂದಿಗೆ ಪರೀಕ್ಷಿಸಿದಾಗ, ನಮಗೆ ತುಂಬಾ ನಿಧಾನವಾದ ನಾಡಿ ಮಿಡಿತ ಇರುವುದು ಗೊತ್ತಾಯಿತು. ಆಗ ನಾವು ನಾಯಿಮರಿಯನ್ನು ಪುನರುಜ್ಜೀವನಗೊಳಿಸುವ ಸಣ್ಣ ಭರವಸೆಯಿಂದ ನಮ್ಮ ಚಿಕಿತ್ಸೆ ಆರಂಭಿಸಿದೆವು ಎಂದು ಅವರು ಹೇಳಿದ್ದಾರೆ.
ತನ್ನ ಮರಿಗಳನ್ನು ಸುರಕ್ಷಿತವಾಗಿ ಕೊಂಡೊಯ್ಯುವ ತಾಯಿ ನಾಯಿಯ ಅಸಾಧಾರಣ ಕಾರ್ಯವು ಜನರ ಮನಗೆದ್ದಿದೆ. ಪ್ರಾಣಿಗಳು ಹಂಚಿಕೊಳ್ಳುವ ಬಲವಾದ ಬಂಧ ಮತ್ತು ತಾಯ್ತನದ ಪ್ರವೃತ್ತಿಯನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಗಮನ ಸೆಳೆಯುತ್ತಿದೆ, ಅನೇಕರು ತಾಯಿಯ ನಿರ್ಣಯ ಮತ್ತು ವೆಟ್ಸ್ ತಂಡದ ತ್ವರಿತ ಸ್ಪಂದನೆಗೆ ಶ್ಲಾಘಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ