
ಜೈಪುರ : ರಾಜಸ್ಥಾನದ ಖೈರ್ತಾಲ್ ಜಿಲ್ಲೆಯಲ್ಲಿ ಬೆಚ್ಚಿಬೀಳುವ ಘಟನೆ ನಡೆದಿದ್ದು, ಜಿಲ್ಲೆಯ ಮುಂಡಾವರ್ ಪೊಲೀಸ್ ಠಾಣಾ ವ್ಯಾಪ್ತಿಯ ಸರೈ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಕೊಲೆಯಾಗಿದ್ದ ಐದು ವರ್ಷದ ಮಗುವನ್ನು ಮಾಟಮಂತ್ರಕ್ಕಾಗಿ “ಬಲಿ” ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ವರ್ಷದ ಬಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಗುವನ್ನು ಆತನ ಮಾವ ಮನೋಜ ಪ್ರಜಾಪತ್ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಆತ ಅಪರಾಧ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರುಕುಳ ತಾಳಲಾರದೆ ಈತನ ಪತ್ನಿ ಕೆಲವು ದಿನಗಳ ಹಿಂದೆ ತವರು ಮನೆಗೆ ಹೋಗಿದ್ದಳು. ತನ್ನನ್ನು ಬಿಟ್ಟುಹೋದ ಪತ್ನಿಯನ್ನು ಆಕೆಯ ತವರು ಮನೆಯಿಂದ ಮರಳಿ ಕರೆತರುವ ಪ್ರಯತ್ನದಲ್ಲಿ ಈತ ತಾಂತ್ರಿಕನೊಬ್ಬನನ್ನು ಭೇಟಿಯಾಗಿದ್ದಾನೆ. ಆ ತಾಂತ್ರಿಕ ನೀಡಿದ ಸಲಹೆಯ ಮೇರೆಗೆ ಬಾಲಕನನ್ನು ಬಲಿ ನೀಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ” ಎಂದು ಮುಂಡಾವರ್ ಎಸ್‌ಎಚ್‌ಒ ಹೇಳಿದ್ದಾರೆ.

ಲೋಕೇಶ ಎಂಬ ಐದು ವರ್ಷದ ಬಾಲಕನನ್ನು ಮೂರು ದಿನಗಳ ಹಿಂದೆ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ನಂತರ ಆತನ ಶವವನ್ನು ಪಾಳುಬಿದ್ದ ಮನೆಯೊಳಗೆ ಹುಲ್ಲಿನ ಬಣವೆಯಲ್ಲಿ ಮುಚ್ಚಿಡಲಾಗಿತ್ತು. ಸೋಮವಾರ ಆರೋಪಿ ಮನೋಜ ಪ್ರಜಾಪತ್ ಎಂಬಾತನನ್ನು ಬಂಧಿಸಲಾಗಿದೆ ಪೊಲೀಸರು ಬಂಧಿಸಿದ್ದಾರೆ.
ಕಿರುಕುಳ ತಾಳಲಾರದೆ ಮನೋಜನ ಪತ್ನಿ ಮನೆ ಬಿಟ್ಟು ಹೋಗಿದ್ದಳು ಮತ್ತು ಹಿಂತಿರುಗಿ ಬರಲು ನಿರಾಕರಿಸಿದ್ದಳು. ಇದರಿಂದ ಹತಾಶೆಗೊಂಡ ಮನೋಜ ಸಹಾಯಕ್ಕಾಗಿ ಸ್ಥಳೀಯ ತಾಂತ್ರಿಕ ಸುನೀಲಕುಮಾರ ಎಂಬವನನ್ನು ಸಂಪರ್ಕಿಸಿದ್ದಾನೆ. ಪತ್ನಿಯನ್ನು ಮರಳಿ ಕರೆತರಲು ಮಾಡಬೇಕಾದ ಆಚರಣೆಯ ಭಾಗವಾಗಿ ಈ ತಾಂತ್ರಿಕ ಮಗುವಿನ ರಕ್ತ ಮತ್ತು ಯಕೃತ್ತಿನ ಜೊತೆಗೆ 12,000 ರೂ.ಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಮನೋಜ ತನ್ನ ಸೋದರಳಿಯನನ್ನು ಬಲಿ ಕೊಡಲು ನಿರ್ಧರಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ, ಮಿಠಾಯಿ ಆಸೆ ತೋರಸಿ ಮನೋಜ ಬಾಲಕ ಲೋಕೇಶನನ್ನು ಶಿಥಿಲಗೊಂಡ ಕಟ್ಟಡಕ್ಕೆ ಕರೆದೊಯ್ದು ಅಲ್ಲಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಮುಚ್ಚಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕನ ದೇಹದ ಮೇಲಿನ ಗಾಯಗಳು ಬಾಲಕನ ದೇಹಕ್ಕೆ ಹಲವಾರು ಸಲ ಸಿರಿಂಜ್ ನಿಂದ ಚುಚ್ಚಲಾಗಿದೆ ಎಂದು ತೋರಿಸಿವೆ, ಇದು ರಕ್ತವನ್ನು ಹೊರತೆಗೆಯಲು ಮಾಡಿದ ಪ್ರಯತ್ನ ಎಂದು ಸೂಚಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ, ಮನೋಜ ಕೊಲೆ ಮಾಡಿದ ಸ್ಥಳದಲ್ಲಿಯೇ ಇದ್ದು ತನಗೂ ಬಾಲಕನ ಬಗ್ಗೆ ಕಳಕಳಿ ಇರುವಂತೆ ನಟಿಸುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ, ಆದಾಗ್ಯೂ, ಹೆಚ್ಚುತ್ತಿರುವ ಅನುಮಾನ ಮತ್ತು ವಿವರವಾದ ತನಿಖೆಯು ಆತನ ಬಂಧನಕ್ಕೆ ಕಾರಣವಾಯಿತು. ವಿಚಾರಣೆಯ ಸಮಯದಲ್ಲಿ, ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ತಾನು ತಾಂತ್ರಿಕನ ಸಲಹೆಯ ಮೇರೆಗೆ ಈ ಕೃತ್ಯ ಎಸಗಿದ್ದಾಗಿ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮಾಟಮಂತ್ರ ಮಾಡುವ ತಾಂತ್ರಿಕನನ್ನು ಸಹ ಬಂಧಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ