ಗುವಾಹತಿ : ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ನುಮಾಲಿಗಢ ಸಮೀಪದ ಬೋಕಿಯಾಲ್ ಪ್ರದೇಶದ ಚಹಾ ತೋಟದಲ್ಲಿ ಕುತ್ತಿಗೆಯ ಸುತ್ತ ಟ್ರ್ಯಾಕ್ಟರ್ ಟೈರ್ ಸಿಲುಕಿಕೊಂಡಿರುವ ಕಾಡಾನೆಯೊಂದು ಸಂಚರಿಸುತ್ತಿರುವುದು ಕಂಡುಬಂದಿದ್ದು, ಈ ಅಪರೂಪದ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದವು.
ಗುರುವಾರ ಮೊರೊಂಗಿ ಅರಣ್ಯ ಪ್ರದೇಶದಲ್ಲಿ ಈ ಆನೆ ಆಹಾರ ಅರಸುತ್ತಾ ಚಹಾ ತೋಟದ ಮೂಲಕ ಸಾಗುತ್ತಿರುವುದು ಗಮನಕ್ಕೆ ಬಂದಿದೆ. ಕುತ್ತಿಗೆಯ ಸುತ್ತ ಟೈರ್ ಸಿಲುಕಿಕೊಂಡಿರುವ ಆನೆಯ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ಸಾರ್ವಜನಿಕರ ಗಮನ ಸೆಳೆದವು. ಆದರೆ ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆ ತ್ವರಿತ ಕಾರ್ಯಾಚರಣೆ ನಡೆಸಿ ಆನೆಯನ್ನು ಅಪಾಯದಿಂದ ಪಾರು ಮಾಡಿದೆ. ಅರಣ್ಯ ಇಲಾಖೆ ಹಾಗೂ ಸೆಂಟರ್ ಫಾರ್ ವೈಲ್ಡ್ಲೈಫ್ ರಿಹ್ಯಾಬಿಲಿಟೇಷನ್ ಆ್ಯಂಡ್ ಕನ್ಸರ್ವೇಷನ್ (CWRC) ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆನೆಯ ಕುತ್ತಿಗೆಯಲ್ಲಿ ಸಿಲುಕಿದ್ದ ಬೃಹತ್ ಟೈರ್ನ್ನು ಯಶಸ್ವಿಯಾಗಿ ಹೊರತೆಗೆದಿವೆ. ಇದರಿಂದ ಆನೆ ಮುಕ್ತವಾಗಿ ಸಂಚರಿಸುವಂತಾಗಿದ್ದು, ಬಳಿಕ ತನ್ನ ಹಿಂಡನ್ನು ಸೇರಿಕೊಂಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಅರಣ್ಯ ಪ್ರದೇಶದಲ್ಲಿ ಯಾರೋ ಬಿಸಾಡಿದ್ದ ಈ ಟೈರ್ನ್ನು ಆನೆ ಕುತೂಹಲದಿಂದ ತನ್ನ ಸೊಂಡಿಲಿನ ಮೂಲಕ ಎತ್ತಿಕೊಂಡಿರಬಹುದು. ಈ ವೇಳೆ ಅದು ಜಾರಿ ಆನೆಯ ಕುತ್ತಿಗೆಯ ಸುತ್ತ ಸಿಲುಕಿಕೊಂಡಿರಬಹುದೆಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಖುಮ್ತಾಯಿ ಕ್ಷೇತ್ರದ ಶಾಸಕ ಮೃಣಾಲ್ ಸೈಕಿಯಾ ಅವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವಿಷಯವನ್ನು ತಿಳಿಸಿದ್ದರು. ಬಳಿಕ ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿತ್ತು.
ಅರಣ್ಯ ಇಲಾಖೆ ತಂಡವು ಆನೆಯ ಚಲನವಲನಗಳ ಮೇಲೆ ನಿಗಾ ಇರಿಸತ್ತು. , ಅದರ ಆರೋಗ್ಯ ಮತ್ತು ಸ್ಥಿತಿಗತಿಯನ್ನು ಸಮಗ್ರವಾಗಿ ಪರಿಶೀಲಿಸಿತ್ತು. ನಂತರ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ(CWRC)ದ ಸಮನ್ವಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಕೆಲವೇ ಗಂಟೆಗಳಲ್ಲಿ ಆನೆಗೆ ಯಾವುದೇ ಅಪಾಯವಾಗದಂತೆ ಸುರಕ್ಷಿತ ರೀತಿಯಲ್ಲಿ ಕುತ್ತಿಗೆಯಲ್ಲಿರುವ ಟೈರ್ ತೆಗೆದುಹಾಕಿತು.
ಈ ಘಟನೆ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ನುಮಾಲಿಗಢದಲ್ಲಿ ಆನೆಯ ಕುತ್ತಿಗೆಯ ಸುತ್ತ ಟೈರ್ ಸಿಲುಕಿಕೊಂಡಿದ್ದು, ಅದರ ಜೀವಕ್ಕೆ ಭಾರಿ ಅಪಾಯ ತಂದೊಡ್ಡಿತ್ತು. ನಾವು ತಕ್ಷಣ ಕ್ರಮ ಕೈಗೊಂಡು ಟೈರ್ನ್ನು ಕುತ್ತಿಗೆಯಿಂದ ತೆರವುಗೊಳಿಸಿದ್ದೇವೆ. ಇದರಿಂದ ಆನೆಯ ಜೀವ ಉಳಿದಿದ್ದು, ಅದು ಮತ್ತೆ ತನ್ನ ಹಿಂಡನ್ನು ಸೇರಲು ಸಾಧ್ಯವಾಗಿದೆ” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಆನೆಯ ಕುತ್ತಿಗೆಯಿಂದ ಟೈರ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಅದು ಯಾವುದೇ ಅಡ್ಡಿಯಿಲ್ಲದೆ ತನ್ನ ಹಿಂಡಿನೊಂದಿಗೆ ಸೇರಿಕೊಂಡಿರುವ ದೃಶ್ಯವೇ ನೆಮ್ಮದಿ ಮೂಡಿಸುವ ಬೆಳವಣಿಗೆಯಾಗಿದೆ.
ಗೋಲಾಘಾಟ್ ಜಿಲ್ಲೆಯ ಈ ಭಾಗದಲ್ಲಿ ಮಾನವ–ಆನೆ ಸಂಘರ್ಷದ ಘಟನೆಗಳು ಆಗಾಗ್ಗೆ ವರದಿಯಾಗುತ್ತಿದ್ದು, ಈ ಬಾರಿ ಕುತ್ತಿಗೆಯಲ್ಲಿ ಟ್ರ್ಯಾಕ್ಟರ್ ಟೈರ್ ಸಿಲುಕಿಕೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡಿರುವ ಆನೆಯ ಸ್ಥಿತಿ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಕಳವಳಕ್ಕೆ ಕಾರಣವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ