ಪೈಲಟ್‌ ಮಚ್ಚಾರ್‌ಗೆ ಚಾಕು ಇರಿದ ಸಹ ಪೈಲಟ್ ಗುರುತು ಬಹಿರಂಗ; ಉಗ್ರವಾದಿ ವಿಚಾರದಿಂದ ಪ್ರಭಾವಿತ ; ಈತ ವಿಮಾನ ಹಾರಿಸುವುದಕ್ಕೆ ನಿರ್ಬಂಧಿಸಿದ್ದ ಒಮಾನ್‌ !

ದುಬೈ/ಟೆಲ್ ಅವೀವ್: ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಓಮಾನಿ ಸಹ ಪೈಲಟ್‌ನನ್ನು 29 ವರ್ಷದ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ, ಆತನಿಗೆ ಸಿರಿಯಾ ಸಂಪರ್ಕವಿದ್ದು, ಉಗ್ರವಾದಿ ವಿಚಾರಗಳಿಂದ ಪ್ರಭಾವಿತನಾಗಿದ್ದ ಎಂಬ ಹೊಸ ಆರೋಪಗಳೂ ಹೊರಬಿದ್ದಿವೆ.
ಅರಬ್ ಸುದ್ದಿ ವಾಹಿನಿ ಅಲ್ ಅರೇಬಿಯಾ ಉಲ್ಲೇಖಿಸಿದ ಮೂಲಗಳ ಪ್ರಕಾರ, ಅಲ್-ಹಮ್ಮಾಮಿ ತನ್ನ ಸಮಯದ ಬಹುಭಾಗವನ್ನು ಓಮನ್‌ನ ಹೊರಗೆ, ವಿಶೇಷವಾಗಿ ಸಿರಿಯಾದಲ್ಲಿ ಕಳೆದಿದ್ದ. ಅಲ್ಲಿ ಆತ ಉಗ್ರವಾದಿ ಸಿದ್ಧಾಂತಗಳ ಪ್ರಭಾವಕ್ಕೆ ಒಳಗಾಗಿದ್ದಾನೆ ಎಂದು ಹೇಳಲಾಗಿದೆ. ಈ ಕಾರಣದಿಂದಲೇ ಆತನ ಉಗ್ರವಾದಿ ವಿಚಾರಧಾರೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಓಮನ್ ಅಧಿಕಾರಿಗಳು ಆತನಿಗೆ ವಿಮಾನ ಹಾರಾಟ ನಡೆಸದಂತೆ ನಿಷೇಧ ಹೇರಿದ್ದರು ಎಂದು ವರದಿಯಾಗಿದೆ.

ಹಾರಾಟ ನಿಷೇಧದ ಬಳಿಕ ಅಲ್-ಹಮ್ಮಾಮಿ ಓಮನ್ ತೊರೆದು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ಗೆ ತೆರಳಿದ್ದ. ಬಳಿಕ ಆತ ಫ್ಲೈದುಬೈ ಸಂಸ್ಥೆಯಲ್ಲಿ ಸಹ ಪೈಲಟ್ ಆಗಿ ಕೆಲಸಕ್ಕೆ ಸೇರಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಅಲ್-ಹಮ್ಮಾಮಿ ಉಗ್ರವಾದಿ ಚಿಂತನೆಗಳತ್ತ ವಾಲಿದ್ದಾನೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಇನ್ನೂ ಕೆಲವು ಮಾಧ್ಯಮಗಳ ವರದಿಗಳೂ ಬೆಳಕಿಗೆ ಬಂದಿವೆ. ಇಸ್ರೇಲ್‌ನ ಚಾನೆಲ್ 12 ವರದಿ ಪ್ರಕಾರ, ತನಿಖಾಧಿಕಾರಿಗಳು ಆತ ಅಲ್-ಖೈದಾ ಸಿದ್ಧಾಂತಗಳಿಂದ ಪ್ರಭಾವಿತನಾಗಿದ್ದಾನೆ ಎಂದು ಶಂಕಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಆತ ಕೆಲವು ಧಾರ್ಮಿಕ ನಾಯಕರನ್ನು ಭೇಟಿಯಾಗಿದ್ದಾನೆ ಎಂಬ ಮಾಹಿತಿಯನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಇಸ್ರೇಲಿ ಅಧಿಕಾರಿಗಳ ಪ್ರಕಾರ, ಉಗ್ರ ಜಾಲಗಳ ಪ್ರಭಾವ ಆತನ ಮೇಲೆ ಬೀರಿದೆಯೇ ಎಂಬ ವಿಚಾರವೂ ತನಿಖೆಯ ಭಾಗವಾಗಿದೆ.
ಇಸ್ರೇಲ್‌ನ ಐ24 ನ್ಯೂಸ್ ವಾಹಿನಿ ತನಿಖೆಗೆ ಸಂಬಂಧಿಸಿದ ಮೂಲಗಳನ್ನು ಉಲ್ಲೇಖಿಸಿ ನೀಡಿರುವ ವರದಿಯಲ್ಲಿ, ಅಲ್-ಹಮ್ಮಾಮಿ ತನಿಖಾಧಿಕಾರಿಗಳಿಗೆ ತಾನು ವಿಮಾನವನ್ನು ಇಸ್ರೇಲ್‌ನಲ್ಲಿ ಪತನಗೊಳಿಸುವ ಉದ್ದೇಶ ಹೊಂದಿದ್ದೆ ಎಂದು ಹೇಳಿದ್ದಾನೆ ಎಂದು ತಿಳಿಸಿದೆ. ಈ ಯೋಜನೆ ಯಶಸ್ವಿಯಾಗಿದ್ದರೆ, ಅದು “9/11 ಮಾದರಿಯ ದುರಂತ”ಕ್ಕೆ ಕಾರಣವಾಗಬಹುದಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   ಫ್ಲೈದುಬೈ ವಿಮಾನ ಘಟನೆ ‘ಭಯೋತ್ಪಾದಕ ಕೃತ್ಯ’ : ಯುಎಇ ಘೋಷಣೆ ; ಪೈಲಟ್ ಸ್ಮಿತ್‌ ಮಚ್ಚರ್‌ ʼಹೀರೋʼ ಎಂದು ಬಣ್ಣನೆ

ಅಲ್-ಹಮ್ಮಾಮಿಯ ಹಿಂದಿನ ವಾಯುಯಾನ ವೃತ್ತಿಜೀವನದ ಬಗ್ಗೆಯೂ ಹಲವು ಪ್ರಶ್ನೆಗಳು ಎದ್ದಿವೆ. ಸಿಎನ್‌ಎನ್ ವರದಿ ಪ್ರಕಾರ, ಆತನ ವಿಚಾರಧಾರೆಯ ಬಗ್ಗೆ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಓಮನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಲ್ಲಿ ನೀಡಲಾಗುತ್ತಿದ್ದ ತರಬೇತಿಯಿಂದ ಆತನನ್ನು ತೆಗೆದುಹಾಕಲಾಗಿತ್ತು. ಫಾಕ್ಸ್ ನ್ಯೂಸ್ ವರದಿ ಪ್ರಕಾರ, ಉಗ್ರ ಇಸ್ಲಾಮಿಕ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ 2024ರಲ್ಲಿ ವಿಮಾನ ಹಾರಾಟ ನಡೆಸದಂತೆ ಅತನನ್ನು ನಿರ್ಬಂಧಿಸಲಾಗಿತ್ತು.
ಈ ಎಲ್ಲ ವರದಿಗಳ ಬಳಿಕ, ಇಂತಹ ಹಿನ್ನೆಲೆಯ ವ್ಯಕ್ತಿಗೆ ಯುಎಇಯಲ್ಲಿ ವಾಣಿಜ್ಯ ವಿಮಾನ ಪೈಲಟ್ ಆಗಿ ಕೆಲಸ ಮಾಡಲು ಹೇಗೆ ಅವಕಾಶ ದೊರೆಯಿತು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಸೆಪ್ಟೆಂಬರ್ 30ರಂದು ನಡೆದ ಘಟನೆಯಲ್ಲಿ ಅಲ್-ಹಮ್ಮಾಮಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಈ ದಾಳಿಯ ಪರಿಣಾಮವಾಗಿ ಬೋಯಿಂಗ್ 737 ವಿಮಾನವು ಒಮ್ಮೆಲೇ ಕೆಳಮುಖವಾಗಿ ಇಳಿಯತೊಡಗಿತ್ತು ಎಂದು ವರದಿಗಳು ಹೇಳಿವೆ.

ಗಂಭೀರ ಗಾಯಗಳಾಗಿದ್ದರೂ ಕ್ಯಾಪ್ಟನ್ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಗೆ ಪ್ರವೇಶಿಸಲು ಸಾಧ್ಯವಾಯಿತು. ನಂತರ ವಿಮಾನದಲ್ಲಿದ್ದ ಕರ್ತವ್ಯದಲ್ಲಿರದ ಇಬ್ಬರು ಪೈಲಟ್‌ಗಳೂ ನಿಯಂತ್ರಣ ಮರಳಿ ಪಡೆಯುವಲ್ಲಿ ನೆರವಾದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ನಗರದಲ್ಲಿ ತುರ್ತು ಭೂಸ್ಪರ್ಶಗೊಳಿಸಲಾಯಿತು.
ಘಟನೆಯ ಬಳಿಕ ಅಲ್-ಹಮ್ಮಾಮಿಯನ್ನು ಯುಎಇಗೆ ವರ್ಗಾಯಿಸಲಾಗಿದ್ದು, ಅಲ್ಲಿ ತನಿಖೆ ಮುಂದುವರಿದಿದೆ.
ಆದರೆ, ಈ ಎಲ್ಲ ವರದಿಗಳ ನಡುವೆಯೂ ಯುಎಇ ಅಧಿಕಾರಿಗಳು ಇದುವರೆಗೆ ಸಹ ಪೈಲಟ್‌ನ ಗುರುತು ಅಥವಾ ಹಿನ್ನೆಲೆಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಯುಎಇ ನೇತೃತ್ವದ ತನಿಖೆ ಇನ್ನೂ ಮುಂದುವರಿದಿದ್ದು, ಆತನ ಹೆಸರು ಹಾಗೂ ಹಿಂದಿನ ಚಟುವಟಿಕೆಗಳ ಕುರಿತು ಅಧಿಕಾರಿಗಳು ಸಾರ್ವಜನಿಕವಾಗಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಪ್ರಮುಖ ಸುದ್ದಿ :-   ಫ್ಲೈದುಬೈ ವಿಮಾನ ಘಟನೆ ‘ಭಯೋತ್ಪಾದಕ ಕೃತ್ಯ’ : ಯುಎಇ ಘೋಷಣೆ ; ಪೈಲಟ್ ಸ್ಮಿತ್‌ ಮಚ್ಚರ್‌ ʼಹೀರೋʼ ಎಂದು ಬಣ್ಣನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement