ಅಮೆರಿಕ-ಇರಾನ್ ಶಾಂತಿ ಮಾತುಕತೆ ವಿಫಲ : ಇಸ್ಲಾಮಾಬಾದ್ ಶೃಂಗಸಭೆಯಲ್ಲಿ ಮೂಡದ ಒಮ್ಮತ

ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಪ್ರಯತ್ನಗಳು ವಿಫಲವಾಗಿವೆ. ಅಮೆರಿಕ ಹಾಗೂ ಇರಾನ್‌ ನಡುವಿನ 21 ಗಂಟೆಗಳ ಸುದೀರ್ಘ ಚರ್ಚೆಯು ಯಾವುದೇ ತಾರ್ಕಿಕ ಅಂತ್ಯ ಕಾಣದೆ ಸ್ಥಗಿತಗೊಂಡಿದೆ.
ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗವು ಇರಾನ್ ಪ್ರತಿನಿಧಿಗಳೊಂದಿಗೆ ಸತತ 21 ಗಂಟೆಗಳ ಕಾಲ ಗಹನವಾದ ಚರ್ಚೆ ನಡೆಸಿತು. ಆದರೆ, ಪ್ರಮುಖವಾಗಿ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಪುನಃ ತೆರೆಯುವ ವಿಷಯ ಸೇರಿದಂತೆ ಹಲವು ನಿರ್ಣಾಯಕ ವಿಚಾರಗಳಲ್ಲಿ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಮಾತುಕತೆ ಹಳಿ ತಪ್ಪಿದೆ. ಹೀಗಾಗಿ ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ-ಇರಾನ್ ನಡುವಿನ ಶಾಂತಿ ಮಾತುಕತೆ ವಿಫಲವಾಗಿದ್ದು, ಅಮೆರಿಕದ ನಿಯೋಗವು ಪಾಕಿಸ್ತಾನವನ್ನು ತೊರೆಯಲು ನಿರ್ಧರಿಸಿದೆ.

ಮಾತುಕತೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್, “ನಾವು ಇರಾನ್ ಮುಂದೆ ಅತ್ಯುತ್ತಮ ಪ್ರಸ್ತಾಪವನ್ನು ಇಟ್ಟಿದ್ದೆವು. ನಮ್ಮ ಮಿತಿಗಳು (Red lines) ಮತ್ತು ನಾವು ಯಾವುದಕ್ಕೆ ಒಪ್ಪಬಹುದು ಎಂಬ ಬಗ್ಗೆ ಸ್ಪಷ್ಟಪಡಿಸಿದ್ದೆವು. ಆದರೆ ಇರಾನ್ ನಮ್ಮ ಪ್ರಸ್ತಾಪಗಳನ್ನು ಒಪ್ಪದಿರಲು ನಿರ್ಧರಿಸಿದೆ,” ಎಂದು ತಿಳಿಸಿದರು.
ಅಣ್ವಸ್ತ್ರ ತಡೆಗೆ ಬದ್ಧತೆಯ ಕೊರತೆ
ಈ ಮಾತುಕತೆಯಲ್ಲಿ ಅಮೆರಿಕದ ಪ್ರಮುಖ ಬೇಡಿಕೆ ಇರಾನ್‌ನ ಅಣ್ವಸ್ತ್ರ ಯೋಜನೆಯನ್ನು ತಡೆಯುವುದಾಗಿತ್ತು. ಈ ಬಗ್ಗೆ ಮಾತನಾಡಿದ ವ್ಯಾನ್ಸ್, “ಇರಾನ್ ಭವಿಷ್ಯದಲ್ಲಿ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂಬ ದೃಢವಾದ ಬದ್ಧತೆಯನ್ನು ನಾವು ನಿರೀಕ್ಷಿಸಿದ್ದೆವು. ಅವರ ಹಳೆಯ ಅಣ್ವಸ್ತ್ರ ಸಂವರ್ಧನಾ ಕೇಂದ್ರಗಳು ಈಗಾಗಲೇ ನಾಶವಾಗಿರಬಹುದು, ಆದರೆ ದೀರ್ಘಾವಧಿಯಲ್ಲಿ ಅಣ್ವಸ್ತ್ರ ತಯಾರಿಸುವುದಿಲ್ಲ ಎಂಬ ಅವರ ಇಚ್ಛಾಶಕ್ತಿ ನಮಗೆ ಕಂಡುಬರುತ್ತಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು. “ಮಾತುಕತೆ ವಿಫಲವಾಗಿರುವುದು ಅಮೆರಿಕಕ್ಕಿಂತ ಇರಾನ್‌ಗೆ ಹೆಚ್ಚು ನಷ್ಟ ತರಲಿದೆ” ಎಂದು ಜೆ.ಡಿ. ವ್ಯಾನ್ಸ್, ಹೇಳಿದರು.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಯುದ್ಧದಲ್ಲಿ ಗೆಲ್ಲಲಾಗದ್ದನ್ನು ಮಾತುಕತೆಯಲ್ಲಿ ಕೇಳುತ್ತಿದೆ ಅಮೆರಿಕ : ಇರಾನ್ ಆರೋಪ
ಇನ್ನೊಂದೆಡೆ, ಇರಾನ್‌ನ ಸ್ಥಳೀಯ ಮಾಧ್ಯಮವಾದ ‘ಫಾರ್ಸ್ ನ್ಯೂಸ್’ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದೆ. ಅಮೆರಿಕವು ಅತಿರೇಕದ ಪ್ರಸ್ತಾಪಗಳನ್ನು ವಿಧಿಸಿದ್ದರಿಂದಲೇ ಮಾತುಕತೆ ಮುರಿದುಬಿದ್ದಿದೆ ಎಂದು ವರದಿ ಮಾಡಿದೆ.
ಇರಾನ್ ನಿಯೋಗದ ಮೂಲಗಳನ್ನು ಉಲ್ಲೇಖಿಸಿರುವ ವರದಿಯು, “ಅಮೆರಿಕವು ಯುದ್ಧದ ಸಮಯದಲ್ಲಿ ಏನನ್ನು ಪಡೆಯಲು ಸಾಧ್ಯವಾಗಲಿಲ್ಲವೋ, ಅದನ್ನು ಈಗ ಮಾತುಕತೆಯ ವೇಳೆ ಪಡೆಯಲು ಪ್ರಯತ್ನಿಸುತ್ತಿದೆ. ಹಾರ್ಮುಜ್ ಜಲಸಂಧಿ ಮತ್ತು ಶಾಂತಿಯುತ ಪರಮಾಣು ಶಕ್ತಿಯ ವಿಚಾರದಲ್ಲಿ ಅಮೆರಿಕ ವಿಧಿಸಿದ ಕಠಿಣ ನಿಬಂಧನೆಗಳನ್ನು ಒಪ್ಪಲು ಸಾಧ್ಯವಿಲ್ಲ,” ಎಂದು ಸ್ಪಷ್ಟಪಡಿಸಿದೆ.
ಮುಂದೇನು?
ತಾತ್ಕಾಲಿಕ ಕದನ ವಿರಾಮದ ಅವಧಿ ಮುಗಿಯುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಈ ಮಾತುಕತೆ ವಿಫಲವಾಗಿರುವುದು ಗಲ್ಫ್ ಪ್ರಾಂತ್ಯದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಿಸಿದೆ. ಶಾಶ್ವತ ಶಾಂತಿಯ ಭರವಸೆ ನೀಡಿದ್ದ ಪಾಕಿಸ್ತಾನದ ಇಸ್ಲಾಮಾಬಾದ್ ಶೃಂಗಸಭೆಯು ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿರುವುದು ಜಾಗತಿಕ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement