ನವದೆಹಲಿ: ಅಮೆರಿಕ ಮೂಲದ ಲಾಭರಹಿತ ನೀತಿ ಸಂಶೋಧನಾ ಸಂಸ್ಥೆಯಾದ ಫೆಡರೇಷನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ (FAS) ಪ್ರಕಟಿಸಿರುವ ಹೊಸ ಅಂದಾಜಿನ ಪ್ರಕಾರ, ಭಾರತವು ಪ್ರಸ್ತುತ ಸುಮಾರು 190 ಅಣ್ವಸ್ತ್ರಗಳನ್ನು ಹೊಂದಿದ್ದು, ಇದು ಪಾಕಿಸ್ತಾನದ ಬಳಿ ಇರುವ ಅಂದಾಜು 170 ಅಣ್ವಸ್ತ್ರಗಳಿಗಿಂತ 20 ಹೆಚ್ಚಾಗಿದೆ. ಇದೇ ವೇಗ ಮುಂದುವರಿದರೆ ಭಾರತವು ಶೀಘ್ರದಲ್ಲೇ ಯುನೈಟೆಡ್ ಕಿಂಗ್‌ಡಮ್‌ನ 225 ಅಣ್ವಸ್ತ್ರಗಳನ್ನೂ ಮೀರಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಫೆಡರೇಷನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ (FAS)ನ ನ್ಯೂಕ್ಲಿಯರ್ ಇನ್‌ಫರ್ಮೇಷನ್ ಪ್ರಾಜೆಕ್ಟ್ ನಿರ್ದೇಶಕ ಹ್ಯಾನ್ಸ್ ಕ್ರಿಸ್ಟೆನ್ಸನ್ ಅವರು ಬರೆದಿರುವ ಇಂಡಿಯಾʼಸ್ ನ್ಯೂಕ್ಲಿಯರ್ ವೆಪನ್- 2026 (India’s Nuclear Weapons – 2026) ಶೀರ್ಷಿಕೆಯ ಅಧ್ಯಯನದಲ್ಲಿ ಈ ಮಾಹಿತಿಯನ್ನು ಪ್ರಕಟಿಸಲಾಗಿದೆ.
ವರದಿ ಪ್ರಕಾರ, ಭಾರತವು ಪ್ರಸ್ತುತ ಒಂಬತ್ತು ಅಣ್ವಸ್ತ್ರ ಸಾಮರ್ಥ್ಯದ ವಿತರಣಾ ವ್ಯವಸ್ಥೆಗಳನ್ನು (nuclear-capable systems) ಕಾರ್ಯಾಚರಣೆಯಲ್ಲಿ ಇಟ್ಟಿದೆ. ಇವುಗಳಲ್ಲಿ ಎರಡು ವಿಮಾನಗಳು, ಆರು ಭೂಆಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಒಂದು ಸಮುದ್ರಾಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆ ಸೇರಿವೆ.
ಇದಿಷ್ಟೇ ಅಲ್ಲದೆ, ಇನ್ನೂ ಎರಡು ಹೊಸ ಅಣ್ವಸ್ತ್ರ ಸಾಮರ್ಥ್ಯದ ವ್ಯವಸ್ಥೆಗಳು ಅಭಿವೃದ್ಧಿಯ ಅಂತಿಮ ಹಂತದಲ್ಲಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಅವುಗಳನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳಿಸುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
“ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಪಡೆಗಳು 160ಕ್ಕೂ ಹೆಚ್ಚು ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ಉತ್ಪಾದನೆಯಲ್ಲಿರುವ ಕ್ಷಿಪಣಿಗಳಿಗಾಗಿ ಹೆಚ್ಚುವರಿ ಅಣ್ವಸ್ತ್ರಗಳನ್ನೂ ನಿರ್ಮಿಸಿರುವುದರಿಂದ ಭಾರತದ ಒಟ್ಟು ಅಣ್ವಸ್ತ್ರ ಸಂಗ್ರಹವು 190ರವರೆಗೆ ತಲುಪಿದೆ ಎಂದು ನಾವು ಅಂದಾಜಿಸಿದ್ದೇವೆ” ಎಂದು ವರದಿ ಹೇಳಿದೆ.
ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗಳು ಸೇರ್ಪಡೆಯಾಗುತ್ತಿದ್ದಂತೆ ಭಾರತದ ಅಣ್ವಸ್ತ್ರ ಸಂಗ್ರಹ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಫೆಡರೇಷನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ (FAS) ಅಭಿಪ್ರಾಯಪಟ್ಟಿದೆ.
ಬಾರತದ ಬಳಿ 730 ಕೆ.ಜಿ. ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ
ವರದಿಯ ಪ್ರಕಾರ, ಭಾರತವು ಇದುವರೆಗೆ ಸುಮಾರು 730 ಕಿಲೋಗ್ರಾಂ ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ಉತ್ಪಾದಿಸಿದೆ. ಈ ಅಂದಾಜಿನಲ್ಲಿ ಸುಮಾರು 170 ಕಿಲೋಗ್ರಾಂಗಳಷ್ಟು ವ್ಯತ್ಯಾಸದ ಸಾಧ್ಯತೆ ಇದೆ. ಈ ಲೆಕ್ಕಾಚಾರವನ್ನು ಇಂಟರ್‌ನ್ಯಾಷನಲ್ ಪ್ಯಾನೆಲ್ ಆನ್ ಫಿಸೈಲ್ ಮೆಟೀರಿಯಲ್ಸ್ (IPFM)ನ 2026ರ ಮೌಲ್ಯಮಾಪನದ ಆಧಾರದ ಮೇಲೆ ಮಾಡಲಾಗಿದೆ.
ಒಂದು ಅಣು ಬಾಂಬ್ ತಯಾರಿಸಲು ಸರಾಸರಿ 4 ಕಿಲೋಗ್ರಾಂ ಪ್ಲುಟೋನಿಯಂ ಅಗತ್ಯವಿದೆ ಎಂದು ಪರಿಗಣಿಸಿದರೆ, ಭಾರತದಲ್ಲಿರುವ ಪ್ಲುಟೋನಿಯಂ ಸಂಗ್ರಹದಿಂದ 140ರಿಂದ 225 ಅಣ್ವಸ್ತ್ರಗಳನ್ನು ನಿರ್ಮಿಸಲು ಸಾಕಾಗುವಷ್ಟು ವಸ್ತು ಲಭ್ಯವಿದೆ ಎಂದು ವರದಿ ಹೇಳಿದೆ.
‘ಮೊದಲು ಬಳಸುವುದಿಲ್ಲ’ ಎಂಬ ಭಾರತದ ನೀತಿ
ಭಾರತವು ದೀರ್ಘಕಾಲದಿಂದ ‘ನೋ ಫಸ್ಟ್ ಯೂಸ್’ (NFU) ಅಥವಾ ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂಬ ನೀತಿಯನ್ನು ಅನುಸರಿಸುತ್ತಿದೆ. ಈ ನೀತಿಯ ಕಾರಣದಿಂದ ಎದುರಾಳಿಯ ಮೇಲೆ ಮೊದಲೇ ನಿರ್ಣಾಯಕ ಅಣು ದಾಳಿ ನಡೆಸಲು ಅದನ್ನು ಸದಾ ಸಿದ್ಧವಾಗಿಡುವ ಅಗತ್ಯ ಭಾರತಕ್ಕೆ ಕಡಿಮೆಯಾಗಿದೆ.
ಇದೇ ವೇಳೆ, ಸಮುದ್ರಾಧಾರಿತ ಪ್ರತೀಕಾರಾತ್ಮಕ ಅಣು ದಾಳಿ ಸಾಮರ್ಥ್ಯ (sea-based retaliatory capability) ಮತ್ತಷ್ಟು ಬಲವಾಗುವುದರಿಂದ ಭೂಆಧಾರಿತ ಅಣುಪಡೆಗಳನ್ನು ನಿರಂತರ ಉನ್ನತ ಎಚ್ಚರಿಕೆಯ ಸ್ಥಿತಿಯಲ್ಲಿ ಇರಿಸಬೇಕಾದ ಒತ್ತಡವೂ ಕಡಿಮೆಯಾಗಬಹುದು ಎಂದು ವರದಿ ವಿಶ್ಲೇಷಿಸಿದೆ.
ಪಾಕಿಸ್ತಾನದ ನೀತಿ ವಿಭಿನ್ನ
ಭಾರತದ ಪ್ರಮುಖ ಪ್ರತಿಸ್ಪರ್ಧಿಯಾದ ಪಾಕಿಸ್ತಾನವು ‘ನೋ ಫಸ್ಟ್ ಯೂಸ್’ (NFU) ನೀತಿಯನ್ನು ಅನುಸರಿಸುವುದಿಲ್ಲ.
ಪಾಕಿಸ್ತಾನದ ಅಣು ಸಿದ್ಧಾಂತವು ಮುಖ್ಯವಾಗಿ ಭಾರತದ ಸಾಂಪ್ರದಾಯಿಕ ಸೇನಾ ಬಲವನ್ನು ಸಮತೋಲನಗೊಳಿಸುವ ಉದ್ದೇಶ ಹೊಂದಿದೆ. ದೊಡ್ಡ ಪ್ರಮಾಣದ ಸಾಂಪ್ರದಾಯಿಕ ಸೇನಾ ದಾಳಿಯಿಂದ ದೇಶಕ್ಕೆ ಅಸ್ತಿತ್ವದ ಸಂಕಷ್ಟ ಎದುರಾದರೆ ಅಥವಾ ತನ್ನ ರಕ್ಷಣಾ ವ್ಯವಸ್ಥೆಗಳು ಕುಸಿದರೆ ಅಣ್ವಸ್ತ್ರ ಬಳಕೆಯ ಆಯ್ಕೆಯನ್ನು ಬಳಸಿಕೊಳ್ಳಬಹುದು ಎಂದು ಪಾಕಿಸ್ತಾನ ನಿರಂತರವಾಗಿ ಹೇಳಿಕೊಂಡಿದೆ.
ಜಗತ್ತಿನ ಅಣ್ವಸ್ತ್ರ ಭಂಡಾರ: ಯಾರ ಬಳಿ ಎಷ್ಟು?
‘ನೋ ಫಸ್ಟ್ ಯೂಸ್’ (NFU) ಮತ್ತು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ಅಂಕಿ-ಅಂಶಗಳ ಪ್ರಕಾರ, ರಷ್ಯಾ ವಿಶ್ವದಲ್ಲೇ ಅತಿ ದೊಡ್ಡ ಅಣ್ವಸ್ತ್ರ ಭಂಡಾರ ಹೊಂದಿದ್ದು, ಅದರ ಬಳಿ ಅಂದಾಜು 5,420 ಅಣ್ವಸ್ತ್ರಗಳಿವೆ. ಅಮೆರಿಕ ಸುಮಾರು 5,042 ಅಣ್ವಸ್ತ್ರಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಎರಡು ರಾಷ್ಟ್ರಗಳೇ ಸೇರಿ ಜಗತ್ತಿನ ಒಟ್ಟು ಅಣ್ವಸ್ತ್ರಗಳಲ್ಲಿ ಸುಮಾರು 86 ಶೇಕಡಾವನ್ನು ಹೊಂದಿವೆ.
ಚೀನಾ ಸುಮಾರು 620 ಅಣ್ವಸ್ತ್ರಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಅಣ್ವಸ್ತ್ರ ಸಂಗ್ರಹವನ್ನು ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ರಾಷ್ಟ್ರವಾಗಿದೆ. ಫ್ರಾನ್ಸ್ ಸುಮಾರು 370 ಅಣ್ವಸ್ತ್ರಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಯುನೈಟೆಡ್ ಕಿಂಗ್‌ಡಮ್ ಬಳಿ ಅಂದಾಜು 225 ಅಣ್ವಸ್ತ್ರಗಳಿವೆ.
ದಕ್ಷಿಣ ಏಷ್ಯಾದಲ್ಲಿ ಭಾರತದ 190 ಅಣ್ವಸ್ತ್ರಗಳನ್ನು ಹೊಂದಿದ್ದು, ಪಾಕಿಸ್ತಾನದ ಬಳಿ 170 ಅಣ್ವಸ್ತ್ರಗಳಿವೆ ಎಂದು ವರದಿ ಹೇಳಿದೆ. ಇಸ್ರೇಲ್ ಬಳಿ ಸುಮಾರು 90 ಅಣ್ವಸ್ತ್ರಗಳಿವೆ ಎಂದು ಅಂದಾಜಿಸಲಾಗಿದ್ದರೂ, ಆ ದೇಶವು ತನ್ನ ಅಣು ಸಾಮರ್ಥ್ಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ನ್ಯೂಕ್ಲಿಯರ್ ಅಂಬಿಗ್ಯುಯಿಟಿ ನೀತಿಯನ್ನು ಮುಂದುವರಿಸಿದೆ. ಇನ್ನೊಂದೆಡೆ, ಉತ್ತರ ಕೊರಿಯಾ ಬಳಿ ಸುಮಾರು 60 ಅಣ್ವಸ್ತ್ರಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತದ ಅಣ್ವಸ್ತ್ರ ಸಾಮರ್ಥ್ಯವು ನಿರಂತರವಾಗಿ ವಿಸ್ತರಿಸುತ್ತಿರುವ ಹಿನ್ನೆಲೆ, ಹೊಸ ಕ್ಷಿಪಣಿ ಹಾಗೂ ವಿತರಣಾ ವ್ಯವಸ್ಥೆಗಳು ಸೇರ್ಪಡೆಯಾದರೆ ಮುಂದಿನ ವರ್ಷಗಳಲ್ಲಿ ದೇಶದ ಅಣ್ವಸ್ತ್ರ ಭಂಡಾರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಫೆಡರೇಷನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ (FAS) ವರದಿ ಅಭಿಪ್ರಾಯಪಟ್ಟಿದೆ.


ನಿಮ್ಮ ಕಾಮೆಂಟ್ ಬರೆಯಿರಿ